- 40 ಮೀಟರ್ ತನಕ ಕಸದ ರಾಶಿ ಇರಬಹುದು ಎಂದು ಸಿಬ್ಬಂದಿ ಅಂದಾಜು
- 20 ವರ್ಷಗಳ ಹಿಂದೆ ಕಸ ಸುರಿಯುವ ತಾಣವಾಗಿದ್ದ ಲಕ್ಕಸಂದ್ರ ಪ್ರದೇಶ
ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದ್ದು, ಸುರಂಗ ಕೊರೆಯುವ ರುದ್ರ ಹೆಸರಿನ ಯಂತ್ರ ಕಸದ ರಾಶಿಯಲ್ಲಿ ಸಿಲುಕಿಕೊಂಡಿದೆ.
ಡೈರಿ ವೃತ್ತದಿಂದ ನಾಗವಾರ ತನಕ 14 ಕಿ.ಮೀ. ಸುರಂಗ ಮಾರ್ಗ ಕೊರೆಯಲಾಗುತ್ತಿದೆ. ಬನ್ನೇರುಘಟ್ಟ ರಸ್ತೆಯಲ್ಲಿ ಡೈರಿ ವೃತ್ತದಿಂದ ಲಕ್ಕಸಂದ್ರ ಕಡೆಗೆ 33 ಅಡಿ ಆಳದಲ್ಲಿ ಸುರಂಗ ಕೊರೆಯುತ್ತಿರುವ ‘ರುದ್ರ’ ಯಂತ್ರಕ್ಕೆ ಬೃಹತ್ ಕಸದ ಗುಡ್ಡೆ ಎದುರಾಗಿದ್ದು, ಅದರಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಯಂತ್ರಕ್ಕೆ ಸಿಲುಕಿ ಮುಂದೆ ಕೊರೆಯಲಾಗದಂತೆ ಮಾಡಿದೆ.
ಯಂತ್ರದ ಕಾರ್ಯನಿರ್ವಹಣೆಗೆ ತೊಡಕಾದಾಗ ಕಟ್ಟರ್ ಹೆಡ್ಗಳ ಮೂಲಕ ನೋಡಿದ ಸಿಬ್ಬಂದಿಗೆ ಕಸದ ರಾಶಿ ಇರುವುದು ಗೊತ್ತಾಗಿದೆ. ಬಂಡೆ ಅಥವಾ ಮಣ್ಣನ್ನು ಸರಾಗವಾಗಿ ಕೊರೆಯುವ ಯಂತ್ರಕ್ಕೆ ರಬ್ಬರ್ ಟೈರ್, ಹಳೇ ಚಪ್ಪಲಿಗಳು, ಪ್ಲಾಸ್ಟಿಕ್ ಖಾಲಿ ಚೀಲಗಳು, ಬಕೆಟ್ ಚೂರುಗಳು, ರಬ್ಬರ್ ಟೈರ್ಗಳು ಯಂತ್ರಕ್ಕೆ ಸಿಲುಕಿಕೊಂಡಿವೆ.
ಮೆಟ್ರೋ ಸುರಂಗ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಕಸದ ರಾಶಿ ಎದುರಾಗಿದ್ದು, ಯಂತ್ರ ಸಾಗುವ ವೇಗಕ್ಕೂ ಅಡ್ಡಿಯಾಗಿದೆ. ಇದನ್ನು ಸರಿಪಡಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
20 ವರ್ಷಗಳ ಹಿಂದೆ ಕಸ ಸುರಿಯುವ ತಾಣ
"ಡೈರಿ ವೃತ್ತದಿಂದ ಲಕ್ಕಸಂದ್ರ ಪ್ರದೇಶವು 20 ವರ್ಷಗಳ ಹಿಂದೆ ಈ ಜಾಗ ಕಲ್ಲುಗಣಿಗಾರಿಕೆ ಪ್ರದೇಶವಾಗಿದ್ದು, ಆ ಜಾಗವನ್ನು ಅಂದಿನ ಬೆಂಗಳೂರು ನಗರ ಪಾಲಿಕೆ ಕಸ ಸುರಿಯುವ ತಾಣವನ್ನಾಗಿ ಮಾಡಿಕೊಂಡಿತ್ತು. ನಗರಗಳು ಅಭಿವೃದ್ಧಿಯಾದಂತೆ ಕ್ರಮೇಣವಾಗಿ ಕಸವನ್ನು ಈ ಜಾಗಕ್ಕೆ ತಂದು ಸುರಿಯುವ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಇದಾದ ನಂತರ ಆ ಕಸದ ಮೇಲೆ ಮರಳು ಮತ್ತು ಮಣ್ಣು ಸುರಿದು ತಾತ್ಕಾಲಿಕ ಕಟ್ಟಡಗಳನ್ನು ಜನ ನಿರ್ಮಿಸಿಕೊಂಡಿದ್ದಾರೆ" ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು ಕೃಷಿ ವಿವಿ | ನ.3ರಿಂದ ನಾಲ್ಕು ದಿನ ಕೃಷಿ ಮೇಳ; ಆನ್ಲೈನ್ನಲ್ಲೂ ವೀಕ್ಷಣೆ ಲಭ್ಯ
ಯಂತ್ರ ಸಿಲುಕಿರುವ ಸ್ಥಳದಿಂದ ಸುಮಾರು 40 ಮೀಟರ್ ತನಕ ಕಸದ ರಾಶಿ ಇರಬಹುದು ಎಂದು ಸಿಬ್ಬಂದಿ ಅಂದಾಜಿಸಿದ್ದಾರೆ. ಸುರಂಗ ಕೊರೆಯುವಾಗ ಕಸ ಕುಸಿದು ಮೇಲ್ಭಾಗದಲ್ಲಿ ತಾತ್ಕಾಲಿಕವಾಗಿ ನಿರ್ಮಾಣವಾಗಿರುವ ಕಟ್ಟಡಗಳಿಗೂ ಹಾನಿಯಾಗುವ ಸಾಧ್ಯತೆ ಇರುವ ಕಾರಣ ಸುರಕ್ಷತೆ ದೃಷ್ಟಿಯಿಂದ ಈ ಜಾಗದಲ್ಲಿ ವಾಸವಾಗಿರುವ ನಿವಾಸಿಗಳ ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಗೆ ಸ್ಥಳೀಯರು ಒಪ್ಪಿಗೆ ನೀಡಿದ್ದಾರೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಧ್ಯಮಗಳಿಗೆ ವಿವರಿಸಿದ್ದಾರೆ.