
- 11.5 ಮೀಟರ್ ಅಗಲದ ನೆಲಸುರಂಗ ಮಾರ್ಗ ನಿರ್ಮಾಣ
- ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ತಲುಪಬಹುದು
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಚಲ್ಲಘಟ್ಟ ಡಿಪೋದಿಂದ ಇನ್ನಿತರ ರಸ್ತೆಗಳನ್ನು ಸಂಪರ್ಕಿಸುವಂತೆ ಸುರಂಗ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಿದೆ.
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಯ ಬಳಿ ಇರುವ ಚಲ್ಲಘಟ್ಟ ಡಿಪೋ ಬಳಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)-275ರಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ನಾಡಪ್ರಭು ಕೆಂಪೇಗೌಡ ಲೇಔಟ್ನ ಪ್ರಮುಖ ಆರ್ಟಿರಿಯಲ್ ರಸ್ತೆಗಳೊಂದಿಗೆ (ಎಂಎಆರ್) ಸುರಂಗ ಮಾರ್ಗವನ್ನು ಸಂಯೋಜಿಸಲಾಗುವುದು ಎಂದು ಬಿಎಂಆರ್ಸಿಎಲ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಮೈಸೂರು ರಸ್ತೆಯ ಬಳಿ ನೆಲಸುರಂಗ ಮಾರ್ಗ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದ್ದು, ಅದಕ್ಕಾಗಿ ₹65.08 ಕೋಟಿಯನ್ನು ಬಿಎಂಆರ್ಸಿಎಲ್ಗೆ ಠೇವಣಿ ಮಾಡಲಾಗಿದೆ. ಅದರೊಂದಿಗೆ ಹೂಡಿಕೆ ಮಾಡಿರುವ ಹಣವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಬಿಡಿಎ ಯೋಜಿಸಿದೆ.
ನೆಲಸುರಂಗ ಮಾರ್ಗವನ್ನು ಮೂರು-ಲೇನ್ಗಳಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು 11.5 ಮೀಟರ್ ಅಗಲ ಸುರಂಗದ ಕಾಮಗಾರಿ ನವೆಂಬರ್ನಿಂದ ಪ್ರಾರಂಭಿಸಲಾಗುವುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ರೈಲು ಮಾರ್ಗ ಮತ್ತು ಮೈಸೂರು ರಸ್ತೆ ನಡುವೆ ನೆಲಸುರಂಗ ಮಾರ್ಗ ನಿರ್ಮಿಸಲು ಬಿಎಂಆರ್ಸಿಎಲ್ ಭೂಮಿ ಸ್ವಾಧೀನ ಪಡಿಸಿಕೊಂಡಿದೆ. ಸ್ವಾಧೀನಪಡಿಸಿಕೊಂಡ ಭೂಮಿಯ ಮಾಲೀಕರಿಗೆ ಇನ್ನೂ ₹35 ಕೋಟಿ ಹಣ ಪಾವತಿಸಬೇಕಿದೆ ಎಂದು ಬಿಡಿಎ ತಿಳಿಸಿದೆ.
ಎನ್ಎಚ್ಎಐ ನಿರ್ಮಿಸುತ್ತಿರುವ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಮೂಲಕ ಹಾದು ಹೋಗುವ ಈ ಹೆದ್ದಾರಿಗೆ ಇನ್ನೂ ₹30 ಕೋಟಿ ಬೇಕಾಗಬಹುದು ಎಂದು ಬಿಡಿಎ ತಿಳಿಸಿದೆ. ಹೀಗಾಗಿ ಒಟ್ಟು ಮೊತ್ತವನ್ನು ಎನ್ಎಚ್ಎಐಗೆ ಠೇವಣಿ ಮಾಡುವಂತೆ ಬಿಡಿಎ ಮನವಿ ಮಾಡಿಕೊಂಡಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಬಿನ್ನಿ ಪಾಠಶಾಲೆ ನಿವೇಶನ ಕಬಳಿಕೆ ಆರೋಪ: ಆಮ್ ಆದ್ಮಿ ಪಾರ್ಟಿಯಿಂದ ಪ್ರತಿಭಟನೆ
ಕುಂಬಳಗೋಡು ಮತ್ತು ಹೆಜ್ಜಾಲ ಸೇರಿದಂತೆ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ತಲುಪಲು ಈ ನೆಲಸುರಂಗ ಮಾರ್ಗ ಸಹಾಯ ಮಾಡುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.