
- ಎರಡನೇ ಹಂತದ ಸುರಂಗ ಮಾರ್ಗ ಕಾಮಗಾರಿ ಚಾಲ್ತಿಯಲ್ಲಿದೆ
- ಮೂರನೇ ಹಂತದಲ್ಲಿ ಎರಡು ಕಾರಿಡಾರ್ ನಿರ್ಮಾಣವಾಗಲಿವೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುವ ನಮ್ಮ ಮೆಟ್ರೋ ಮತ್ತೊಂದು ಹೆಜ್ಜೆ ಇಡುತ್ತಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್ಸಿಎಲ್) ಮೂರನೇ ಹಂತದ ಡೀಟೆಲ್ ಪ್ರಾಜೆಕ್ಟ್ ರಿಪೋರ್ಟ್(ಡಿಪಿಆರ್) ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬಿಎಂಆರ್ಸಿಎಲ್ ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ನಡೆಸುತ್ತಿದ್ದು, ಪ್ರಸ್ತುತವಾಗಿ ಎರಡನೇ ಹಂತದ ಸುರಂಗ ಮಾರ್ಗ ಮತ್ತು ಎಲಿವೆಟೆಡ್ ಕಾಮಗಾರಿ ಚಾಲ್ತಿಯಲ್ಲಿದೆ.
ಈಗ ಮೂರನೇ ಹಂತದ ಡಿಪಿಆರ್ ಸಿದ್ಧಪಡಿಸಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಮೂರನೇ ಹಂತದ ಮೆಟ್ರೋ ಕಾಮಗಾರಿಗೆ ಸರ್ಕಾರದಿಂದ ಒಪ್ಪಿಗೆ ದೊರೆತರೆ, ಇದನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ, ಬಿಎಂಆರ್ಸಿಎಲ್ ಮೂರನೇ ಹಂತದ ಮೆಟ್ರೋ ಕಾಮಗಾರಿ ಕೈಗೆತ್ತಿಗೊಳ್ಳಲಿದೆ.
‘ನಮ್ಮ ಮೆಟ್ರೋ’ ಮೂರನೇ ಹಂತದಲ್ಲಿ ಎರಡು ಕಾರಿಡಾರ್ ನಿರ್ಮಾಣವಾಗಲಿದ್ದು, ಮೊದಲನೆಯದು ಜೆಪಿ ನಗರದ ನಾಲ್ಕನೇ ಫೇಸ್ನಿಂದ ಹೆಬ್ಬಾಳದವರೆಗೆ ಇರಲಿದೆ. ಈ ಮಾರ್ಗದಲ್ಲಿ ಒಟ್ಟು 22 ನಿಲ್ದಾಣಗಳು ಇವೆ. ಮೈಸೂರು ರಸ್ತೆಯಲ್ಲಿ ಇಂಟರ್ಚೇಂಜ್ ನಿಲ್ದಾಣ ಬರಲಿದೆ.
ಎರಡನೇ ಕಾರಿಡಾರ್ ಮಾಗಡಿ ರಸ್ತೆಯ ಹೊಸಹಳ್ಳಿ ನಿಲ್ದಾಣದಿಂದ ಕಡಬಗೆರೆಯವರೆ ಮೆಟ್ರೋ ಬರಲಿದೆ. ಈ ಮಾರ್ಗ 12 ಕಿ.ಮೀ ಉದ್ದವಾಗಿರಲಿದೆ. ಈ ಮಾರ್ಗದಲ್ಲಿ ಒಟ್ಟು 9 ನಿಲ್ದಾಣ ಇರಲಿವೆ.
ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಸುಮನಹಳ್ಳಿ ಫ್ಲೈಓವರ್ ದುರಸ್ತಿಯ ಫಲ; ರಿಂಗ್ ರಸ್ತೆ ಸುತ್ತಮುತ್ತ ವಾಹನ ದಟ್ಟಣೆ ಹೆಚ್ಚಳ
ಮೆಟ್ರೋ ಕಾಮಗಾರಿ ವೆಚ್ಚ
ನಮ್ಮ ಮೆಟ್ರೋ 44.65 ಕಿ.ಮೀ ಮಾರ್ಗದ ಯೋಜನೆಗೆ ₹13,000 ಕೋಟಿ ಖರ್ಚಾಗಬಹುದು ಎಂದು ರೈಲ್ವೆ ಸಚಿವಾಲಯದ ಸಲಹಾ ಸಂಸ್ಥೆಯಾದ ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಸರ್ವಿಸ್ ಲಿಮಿಟೆಡ್ ಈ ಕುರಿತು ವರದಿ ಸಲ್ಲಿಸಿದೆ. ಈ ಮಾರ್ಗದಲ್ಲಿ ನಿತ್ಯ 6.35 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ.
ಎರಡನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಿದ ಬಳಿಕ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಯನ್ನು ಆರಂಭಿಸಲಿದೆ. 2028ರೊಳಗೆ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.