
- ನವೆಂಬರ್ 1ರಂದು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆ ಜಾರಿ
- ನಿತ್ಯ ಸರಾಸರಿ 5 ಲಕ್ಷ ಜನರು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ
ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೋ’ ಪ್ರಯಾಣಕ್ಕೆ ಟಿಕೆಟ್ ಖರೀದಿಗಾಗಿ ಎರಡು ವಾರಗಳ ಹಿಂದೆ ಪ್ರಾರಂಭವಾದ 'ವಾಟ್ಸಾಪ್ ಕ್ಯೂಆರ್ ಕೋಡ್' ಆಧಾರಿತ ಟಿಕೆಟ್ ವ್ಯವಸ್ಥೆಗೆ ನಾಗರಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ದಿನನಿತ್ಯ 10,000ಕ್ಕೂ ಹೆಚ್ಚು ಪ್ರಯಾಣಿಕರು ಹೊಸ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ತಿಳಿಸಿದೆ.
ನವೆಂಬರ್ 1ರಂದು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಬಿಎಂಆರ್ಸಿಎಲ್ ಪ್ರಾರಂಭಿಸಿತು. ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ಅಥವಾ ವಾಟ್ಸ್ಆ್ಯಪ್ ಮೂಲಕ ಕ್ಯೂಆರ್ ಟಿಕೆಟ್ ಖರೀದಿಸಲು ಅನುಕೂಲ ಕಲ್ಪಿಸಿದೆ.
ಅಕ್ಟೋಬರ್ 2011ರಲ್ಲಿ ನಗರದಲ್ಲಿ ಮೆಟ್ರೋ ಪ್ರಾರಂಭವಾದಾಗ ಟಿಕೆಟ್ ಖರೀದಿ ವ್ಯವಸ್ಥೆಯಲ್ಲಿ ಎರಡು ಆಯ್ಕೆಗಳಿದ್ದವು. ಒಂದು ಸ್ಮಾರ್ಟ್ ಕಾರ್ಡ್ಗಳು, ಮತ್ತೊಂದು ಟೋಕನ್ಗಳು. ಇದೀಗ, ಮೆಟ್ರೋ ಅಪ್ಲಿಕೇಶ್ನ್ ಮತ್ತು ವಾಟ್ಸಾಪ್ ಮೂಲಕವೂ ಟಿಕೆಟ್ ಖರೀದಿಸಹುದಾಗಿದೆ. ಮೆಟ್ರೋ ಪ್ರಯಾಣಿಕರಲ್ಲಿ 70% ಜನರು ವಾಟ್ಸ್ಆ್ಯಪ್ ಮೂಲಕ ಕ್ಯೂಆರ್ ಟಿಕೆಟ್ಗಳನ್ನು ಖರೀದಿಸುತ್ತಿದ್ದಾರೆ ಮತ್ತು ಉಳಿದವರು ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ನಲ್ಲಿ ಖರೀದಿಸುತ್ತಿದ್ದಾರೆ ಎಂದು ಬಿಎಂಆರ್ಸಿಎಲ್ ಹೇಳಿದೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾತನಾಡಿ, “ಕ್ಯೂಆರ್ ಟಿಕೆಟ್ ಆಧಾರಿತ ವ್ಯವಸ್ಥೆಯ ಬಳಕೆ ಜೊತೆಗೆ, ಮೆಟ್ರೋ ಸ್ಮಾರ್ಟ್ ಕಾರ್ಡ್ಗಳ ರೀಚಾರ್ಜ್, ಪ್ರಯಾಣದ ಯೋಜನೆ, ಹತ್ತಿರದ ಮೆಟ್ರೋ ನಿಲ್ದಾಣಗಳ ಗುರುತಿಸುವಿಕೆ, ದರದ ಮಾಹಿತಿ ಪಡೆಯುವುದು ಸೇರಿದಂತೆ ನಾನಾ ಉದ್ದೇಶಗಳಿಗಾಗಿ ಪ್ರತಿದಿನ 30,000ಕ್ಕೂ ಹೆಚ್ಚು ಪ್ರಯಾಣಿಕರು ವಾಟ್ಸ್ಆ್ಯಪ್ ಚಾಟ್ಬಾಟ್ ಬಳಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.
“ಮೊದಲಿಗೆ 1,000 ಜನರು ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಖರೀದಿಸುವ ಮೂಲಕ ಈ ವ್ಯವಸ್ಥೆಯನ್ನು ಪ್ರಾರಂಭಿಸಲಾಯಿತು. ಈಗ 10,000ಕ್ಕೂ ಹೆಚ್ಚು ಜನ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ವ್ಯವಸ್ಥೆಯೂ ಯಶಸ್ವಿಯಾಗುತ್ತಿರುವುದು ಸಂತೋಷವಾಗಿದೆ" ಎಂದು ಪರ್ವೇಜ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೊಬೈಲ್ ಟು ಮೆಟ್ರೋ ! ಕನ್ನಡ ರಾಜ್ಯೋತ್ಸವದ ದಿನವೇ ಮೊಬೈಲ್ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿ
“ಸಾಲಿನಲ್ಲಿ ನಿಂತು ಟೋಕನ್ ಪಡೆಯುವುದಕ್ಕಿಂತ ವಾಟ್ಸ್ಆಪ್ ಮೂಲಕ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಬಳಸುವುದು ಉತ್ತಮವಾಗಿದೆ” ಎಂದು ಮೆಟ್ರೋ ಪ್ರಯಾಣಿಕ ಭರತ್ ಈ ದಿನ.ಕಾಮ್ಗೆ ತಿಳಿಸಿದರು.
ಮತ್ತೋರ್ವ ಮೆಟ್ರೋ ಪ್ರಯಾಣಿಕ ಆದಿತ್ಯ ಈ ದಿನ.ಕಾಮ್ ಜೊತೆಗೆ ಮಾತನಾಡಿ, "ಮೊದಲಿಗೆ ಈ ವಾಟ್ಸ್ಆ್ಯಪ್ ಕುರಿತಂತೆ ತಿಳಿದಿರಲಿಲ್ಲ. ಸಾಲಿನಲ್ಲಿ ನಿಂತು ಸಮಯ ವ್ಯರ್ಥಮಾಡಿಕೊಳ್ಳುತ್ತಿದ್ದೆ, ಬಳಿಕ ವಾಟ್ಸ್ಆ್ಯಪ್ ಮೂಲಕ ಟಿಕೆಟ್ ಖರೀದಿಸಬಹುದು ಎಂಬುದು ತಿಳಿದ ಮೇಲೆ ಮನೆಯಿಂದ ಹೊರಡುವಾಗಲೇ ಟಿಕೆಟ್ ಬುಕ್ ಮಾಡುತ್ತಿದ್ದೇನೆ. ಈ ವ್ಯವಸ್ಥೆಯೂ ಸಮಯ ಉಳಿತಾಯ ಮಾಡುತ್ತದೆ. ಆನ್ಲೈನ್ ಪಾವತ ಇರುವುದು ಕೂಡಾ ಸಹಕಾರಿಯಾಗಿದೆ" ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಸರಾಸರಿ 5 ಲಕ್ಷ ಜನರು ಮತ್ತು ವಾರಾಂತ್ಯದಲ್ಲಿ 3.5 ಲಕ್ಷದಿಂದ 4 ಲಕ್ಷ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ.