
- ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಮೂರು ದಿನ ಪಾದಯಾತ್ರೆ
- ಬೆಂಗಳೂರಿನಲ್ಲಿ 15 ದಿನ ಪಾದಯಾತ್ರೆ ನಡೆಯಲಿದೆ: ಕೆಆರ್ಎಸ್ ಮುಖಂಡರು
ಮುಂಬರುವ 2023ರ ವಿಧಾನಸಭೆ ಚುನಾವಣಾ ವೆಚ್ಚಕ್ಕಾಗಿ ಹಣ ಸಂಗ್ರಹಿಸಲು ನ. 21ರಿಂದ ‘ಮಹಾಭಿಕ್ಷಾ’ ಹೆಸರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (ಕೆಆರ್ಎಸ್) ಪಾದಯಾತ್ರೆ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ, "ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದರು. ತಲಾ ಮೂರು ದಿನ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದೆ ಹಾಗೂ 15 ದಿನಗಳು ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಯಲಿದೆ" ಎಂದು ಮಾಹಿತಿ ನೀಡಿದರು.
"ಈಗ ನಡೆಯುತ್ತಿರುವ ಚುನಾವಣೆಗಳಿಗೆ ಹಣದ ಬಲ ಮತ್ತು ಜಾತಿ ಬಲ ಅವಶ್ಯಕತೆ ಇದೆ ಎಂದು ಹಲವರು ನಂಬಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಾಮಾಣಿಕರು ಮತ್ತು ಸಾಮಾನ್ಯರು ಯೋಚಿಸುವಂತಹ ವಾತಾವರಣವಿದೆ. ಹಾಗಾಗಿ, ಒಂದಷ್ಟು ಹಣದ ಅವಶ್ಯಕತೆ ಇದೆ. ಉತ್ತಮ ರೀತಿಯಲ್ಲಿ ಚುನಾವಣೆ ಎದುರಿಸಲು ₹100 ಕೋಟಿ ಅವಶ್ಯಕತೆ ಇದೆ" ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನ. 25 ರೊಳಗೆ ಓಲಾ, ಉಬರ್ ಆಟೋ ದರ ನಿಗದಿ: ಹೈಕೋರ್ಟ್ಗೆ ಮಾಹಿತಿ ನೀಡಿದ ಸರ್ಕಾರ
"ರಾಜ್ಯಾದ್ಯಂತ ಈ ಪಾದಯಾತ್ರೆಯನ್ನು ನಡೆಸಲಾಗುವುದು. ರೈತರು, ಕಾರ್ಮಿಕರು, ಕೈಗಾರಿಕೋದ್ಯಮಿಗಳು ಸೇರಿ ಎಲ್ಲ ಕ್ಷೇತ್ರದವರಿಂದಲೂ ಚುನಾವಣೆಗಾಗಿ ದೇಣಿಗೆ ಕೇಳಲಾಗುತ್ತದೆ. 224 ವಿಧಾನಸಭೆ ಕ್ಷೇತ್ರಗಳಿಗೆ ಖರ್ಚು ಮಾಡಲು ಹಣ ಸಂಗ್ರಹಿಸುತ್ತಿದ್ದೇವೆ. ಆದರೆ, ಪ್ರಮುಖ ಪಕ್ಷಗಳು ಇಷ್ಟು ಮೊತ್ತದ ಹಣವನ್ನು ಒಂದೇ ಕ್ಷೇತ್ರಕ್ಕೆ ಉಪಯೋಗಿಸುತ್ತವೆ" ಎಂದು ಅವರು ಹೇಳಿದರು.