ರಾಷ್ಟ್ರಪತಿ ಬೆಂಗಳೂರು ಭೇಟಿ | ರಸ್ತೆ ಸಂಚಾರ ನಿರ್ಬಂಧದಿಂದ ಮಳೆಯಲ್ಲಿ ನಾಗರಿಕರ ಪರದಾಟ!

  • ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಷ್ಟ್ರಪತಿ
  • ಒಂದು ಗಂಟೆ ಕಾಲ ಸುರಿದ ಮಳೆಯಲ್ಲಿ ವಾಹನ ಸವಾರರ ಪರದಾಟ

ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರಪತಿಯವರ ಸಂಚಾರಕ್ಕಾಗಿ ಸಾರ್ವಜನಿಕರ ವಾಹನ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಲಾಗಿದ್ದು, ಇದರಿಂದಾಗಿ ವಾಹನ ಸವಾರರು ಸಂಚಾರ ದಟ್ಟಣೆ ಮತ್ತು ಮಳೆಯಿಂದ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬೆಂಗಳೂರಿನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಸ್ತೆ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಜನಸಾಮಾನ್ಯರ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.

ಐದು ನಿಮಿಷದ ರಸ್ತೆ ಬಂದ್ ಮಾಡುವ ಕೆಲಸಕ್ಕೆ ಬೆಂಗಳೂರು ಸಂಚಾರ ಪೊಲೀಸರು ಗಂಟೆಗಟ್ಟಲೇ ರಸ್ತೆಗಳನ್ನು ಬಂದ್‌ ಮಾಡಿದ್ದು, ಇದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ನಗರದಲ್ಲಿ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆಯಲ್ಲಿ ವಾಹನ ಸವಾರರು ಪರದಾಡಿದ್ದಾರೆ.

ಈ ಕುರಿತಂತೆ ಹಲವು ಬೆಂಗಳೂರಿಗರು ಟ್ವೀಟ್‌ ಮಾಡುತ್ತಿದ್ದು, "ಬೆಂಗಳೂರಿನಲ್ಲಿ ಒಂದು ಗಂಟೆಯಿಂದ ಟ್ರಾಫಿಕ್‌ನಲ್ಲಿ ಸಿಲುಕಿರುವೆ. ಅದ್ಭುತ ಅನುಭವ" ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರಾಷ್ಟ್ರಪತಿ ಭೇಟಿ: ಪರ್ಯಾಯ ಮಾರ್ಗ ಬಳಕೆಗೆ ಸೂಚನೆ

ನಾಡಹಬ್ಬ ದಸರಾ ಉದ್ಘಾಟನೆ ಮತ್ತು ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ಸೆ.26ರಂದು ಮೈಸೂರಿಗೆ ಆಗಮಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಗಳೂರಿಗೂ ಭೇಟಿ ನೀಡಲಿದ್ದಾರೆ. ಹೀಗಾಗಿ, ಸುಗಮ ಸಂಚಾರ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕೆಲ ರಸ್ತೆಗಳನ್ನು ಸಾರ್ವಜನಿಕರು ಬಳಸುವಂತಿಲ್ಲ ಎಂದಿರುವ ಸಂಚಾರಿ ಪೊಲೀಸರು, ಪರ್ಯಾಯ ರಸ್ತೆಗಳನ್ನು ಬಳಸಲು ತಿಳಿಸಿದ್ದಾರೆ.

ಹಳೇ ವಿಮಾನ ನಿಲ್ದಾಣ ರಸ್ತೆ, ಎಂಜಿ ರಸ್ತೆ, ಡಿಕನ್ಸನ್ ರಸ್ತೆ, ಕೆಆರ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆಗಳು ಸೇರಿದಂತೆ ರಾಷ್ಟ್ರಪತಿಗಳು ಸಂಚರಿಸುವ ಮಾರ್ಗಗಳನ್ನು ಸಾರ್ವಜನಿಕರು ಬಳಸುವಂತಿಲ್ಲ ಎಂದು ಪೊಲೀಸರು ಸೂಚಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್