ಕಬ್ಬು ಬೆಳೆಗೆ ದರ ನಿಗದಿ |ಶುಗರ್ ಮಾಫಿಯಾಕ್ಕೆ ಮಣಿದ ಸರ್ಕಾರ: ಪೊರಕೆ ಚಳವಳಿ ಆಕ್ರೋಶ

sugarcaneissue-Framers protest
  • ಕೃಷಿ ಬಿಕ್ಕಟ್ಟು, ರೈತರ ಸಮಸ್ಯೆ, ಸಾವುಗಳಿಗೆ ಸರ್ಕಾರವೇ ನೇರ ಹೊಣೆ
  • ಸಿಬಿಲ್‌ ಸ್ಕೋರ್‌ ಇಲ್ಲವೆಂದು ಸಾಲ ನಿರಾಕರಣೆ; ಬೆಳೆಗಾರ ಆತ್ಮಹತ್ಯೆ ಯತ್ನ

ರಾಜ್ಯದಲ್ಲಿ ಸಕ್ಕರೆ ಅಕ್ರಮ ತಡೆಯದೆ ಸರ್ಕಾರ, ಕಬ್ಬು ಬೆಳೆಗಾರರನ್ನು ಶೋಷಿಸುತ್ತಿದೆ ಎಂದು ರೈತರು ಬುಧವಾರ ಪೊರಕೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಕಬ್ಬಿಗೆ ಲಾಭದಾಯಕ (ಎಫ್‌ಆರ್‌ಪಿ) ಬೆಲೆ ನಿಗದಿ ಮಾಡಿ ರೈತರಿಗೆ ನ್ಯಾಯ ದೊರಕಿಸಿ ಎಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.

"ರಾಜ್ಯದಲ್ಲಿ ನಡೆಯುತ್ತಿರುವ ಶುಗರ್ ಮಾಫಿಯಾ ತಡೆಯಲು ಸರ್ಕಾರ, ಜನಪ್ರತಿನಿಧಿಗಳು ವಿಫಲರಾಗಿದ್ದು, ಕಾರ್ಖಾನೆಗಳು ನಿರಂತರವಾಗಿ ಬೆಳೆಗಾರರನ್ನು ವಂಚಿಸಲು ಸರ್ಕಾರವೇ ಅವಕಾಶ ನೀಡುತ್ತಿದೆ. ಸರ್ಕಾರ ಶುಗರ್‌ ಮಾಫಿಯಾಕ್ಕೆ ಮಣಿದು ರೈತರ ಹಿತ ಬಲಿಕೊಡುತ್ತಿದೆ" ಎಂದು ಈ ಸಂದರ್ಭದಲ್ಲಿ ರೈತರು ಆರೋಪಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, "ರೈತರು ಬೆಳೆಯುವ ಕಬ್ಬಿಗೆ ಲಾಭದಾಯಕ ಬೆಲೆ ನೀಡುವಲ್ಲಿ ರಾಜ್ಯದಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ವಂಚಿಸುತ್ತಿವೆ. ಹಾಗಾಗಿ ಸರ್ಕಾರ ಮಧ್ಯಪ್ರವೇಶ ಮಾಡಿ ರಾಜ್ಯ ಎಫ್‌ಆರ್‌ಪಿ ಬೆಲೆ ನಿಗದಿ ಮಾಡಬೇಕು. ಆದರೆ ಸರ್ಕಾರ ತನ್ನ ಹೊಣೆಯಿಂದ ನುಣಿಚಿಕೊಂಡು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದೆ. ರೈತರ ಆದಾಯವನ್ನು ಅನಾಯಾಸವಾಗಿ ತಿಂದು ತೇಗಲು ಬಿಟ್ಟು ಭ್ರಷ್ಟಾಚಾರಕ್ಕೆ ಅವಕಾಶ ನೀಡಿದೆ. ಹಾಗಾಗಿ ಇಡೀ ಸರ್ಕಾರಕ್ಕೆ ಚಳಿ ಬಿಡಿಸಲು ಪೊರಕೆ ಚಳವಳಿ ನಡೆಸಿದ್ದೇವೆ" ಎಂದರು.

"ಎಲ್ಲ ದೂರಕ್ಕೂ ಸಾಗಾಣಿಕೆ ವೆಚ್ಚವಾಗಿ ಒಂದೆ ದರ ನಿಗದಿ ಮಾಡಿ ಶುಲ್ಕ ವಸೂಲಿ ಮಾಡುತ್ತಿದ್ದು, ಇದರಿಂದ ರೈತರಿಗೆ ನೂರಾರು ಕೋಟಿ ಮೋಸವಾಗುತ್ತಿದೆ. ಕಬ್ಬು ಪೂರೈಕೆ ಮಾಡಿದ 14 ದಿನದಲ್ಲಿ ರೈತರಿಗೆ ಹಣ ಪಾವತಿಸಬೇಕೆಂಬ ಕಾನೂನು ಜಾರಿಯಲ್ಲಿದ್ದರೂ ಪ್ರಯೋಜನವಿಲ್ಲ. ನಿಯಮ ಉಲ್ಲಂಘನೆ ಕುರಿತು ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ರೈತರು ದೂರು ನೀಡಿದರೆ, ದೂರುಗಳು ಕಸದ ಬುಟ್ಟಿ ಸೇರುತಿವೆ. ಬೆಳಗಾವಿ ಜಿಲ್ಲೆಯಲ್ಲಿ 189 ರೈತರು ಕಬ್ಬಿನ ಹಣ ಬಂದಿಲ್ಲ ಎಂದು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆದು ಸತ್ಯ ತಿಳಿದಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಮಸ್ಯೆಗಳ ಬಗ್ಗೆ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರ ಸ್ವರೂಪದಲ್ಲಿ ಸಂಘಟಿಸಲಾಗುವುದು" ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು

ಸಿಬಿಲ್‌ ಸ್ಕೋರ್‌ ಇಲ್ಲದ್ದಕ್ಕೆ ಸಾಲ ನಿರಾಕರಣೆ; ರೈತ ಆತ್ಮಹತ್ಯೆ

ಸಾಲ ಕೊಡಲು ಸಿಬಿಲ್‌ ಸ್ಕೋರ್‌ ಇಲ್ಲ ಎಂಬ ಕಾರಣಕ್ಕೆ ಬ್ಯಾಂಕ್‌ನಲ್ಲಿ ಕಬ್ಬು ಬೆಳೆಗೆ ಸಾಲ ನಿರಾಕರಿಸಿದ್ದಕ್ಕೆ ರೈತರೊಬ್ಬರು ಬ್ಯಾಂಕ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಎಚ್‌ ಡಿ ಕೋಟೆ ತಾಲೂಕಿನ ಹೊಸಹೂಳಲು ಗ್ರಾಮದ ನಿಂಗೇಗೌಡ ಎಂಬುವವರು ಆತ್ಮಹತ್ಯೆ ಯತ್ನಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಈ ವಿಚಾರವನ್ನು ಪ್ರಸ್ತಾಪಿಸಿದ ಪ್ರತಿಭಟನಾನಿರತ ರೈತರು, "ಬ್ಯಾಂಕುಗಳು ರೈತರಿಗೆ ಸಾಲ ನೀಡುವಾಗ ಸಿಬಿಲ್‌ ಸ್ಕೋರನ್ನು ಕಡ್ಡಾಯ ಮಾನದಂಡವಾಗಿ ಪರಿಗಣಿಸಬಾರದು ಎಂದು ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಮಾಡಲಾಗಿದೆ. ಈ ಕುರಿತು ಸಮಸ್ಯೆ ಬಗೆಹರಿಸಲು ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆಯುವ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಆ ಸಭೆ ನಡೆಯದೇ ಇರುವುದರಿಂದ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದಕ್ಕೆಲ್ಲ ಸರ್ಕಾರವೇ ನೇರ ಹೊಣೆ" ಎಂದು ದೂರಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180