ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೂ ಬಂದು ರಸ್ತೆಗುಂಡಿ ಸೊಬಗು ನೋಡಲಿ: ಆಪ್‌ ಆಗ್ರಹ

AAP Press Meet
  • ಆಮ್‌ ಆದ್ಮಿ ಪಾರ್ಟಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಸುದ್ದಿಗೋಷ್ಠಿ
  • ʻಪ್ರಧಾನಿಗಳೇ ಬೆಂಗಳೂರಿನ ರಸ್ತೆ ಗುಂಡಿಗಳ ಸೊಬಗು ನೋಡಬನ್ನಿʼ ಪತ್ರ ಚಳವಳಿ

ಯೋಗ ದಿನಾಚರಣೆಗೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೂ ಆಗಮಿಸಿ, ರಸ್ತೆ ಗುಂಡಿಗಳನ್ನು ವೀಕ್ಷಿಸಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ(ಎಎಪಿ) ಯಿಂದ ಪೋಸ್ಟ್‌ಕಾರ್ಡ್‌ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಹೇಳಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ರಸ್ತೆ ಗುಂಡಿಗಳ ದರ್ಶನ ಪಡೆಯಬೇಕೆಂದು ಆಗ್ರಹಿಸಿ ಪೋಸ್ಟ್‌ ಕಾರ್ಡ್‌ ಚಳವಳಿ ಹಮ್ಮಿಕೊಂಡಿದ್ದೇವೆ. ಜೂ.17ರ ಶುಕ್ರವಾರ ಪಕ್ಷದ ಕಾರ್ಯಕರ್ತರು ರಸ್ತೆಗುಂಡಿಗಳ ಬಳಿ ವಾಹನ ಸವಾರರೊಂದಿಗೆ ಮಾತನಾಡಿ, ʻಪ್ರಧಾನಿಗಳೇ ಬೆಂಗಳೂರಿನ ರಸ್ತೆ ಗುಂಡಿಗಳ ಸೊಬಗನ್ನು ನೋಡಬನ್ನಿʼ ಎಂದು ಬರೆದಿರುವ ಪೋಸ್ಟ್‌ಕಾರ್ಡ್‌ಗಳನ್ನು ನೀಡಲಿದ್ದಾರೆ. ಇದನ್ನು ವಾಹನ ಸವಾರರು ಪ್ರಧಾನಿಗೆ ಕಳುಹಿಸಲಿದ್ದಾರೆ” ಎಂದು ವಿವರಿಸಿದರು.

“ಬೆಂಗಳೂರಿನ ರಸ್ತೆಗಳಿಗಾಗಿ ರಾಜ್ಯ ಸರ್ಕಾರದ ಬೊಕ್ಕಸದಿಂದ ಕಳೆದ ಐದು ವರ್ಷಗಳಲ್ಲಿ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಬಿಡುಗಡೆಯಾಗಿದೆ. ಬಿಜೆಪಿಯ ಭ್ರಷ್ಟಾಚಾರದಿಂದಾಗಿ ಆ ಹಣವು ಜನಪ್ರತಿನಿಧಿಗಳ ಜೇಬು ಸೇರಿ, ರಸ್ತೆಗಳ ತುಂಬಾ ಗುಂಡಿಗಳಾಗಿವೆ. ಇದರ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು ನಿರಂತರವಾಗಿ ಪ್ರತಿಭಟನೆ, ಅಭಿಯಾನ ಮಾಡಿ, ಸುಮಾರು 70ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿದೆ. ಆದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಗುಂಡಿಗಳಿಂದ ಅಪಘಾತ ಸಾಮಾನ್ಯವಾಗಿದ್ದು, ಮೃತಪಟ್ಟವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಸೌಜನ್ಯವೂ ಈ ಸರ್ಕಾರಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ನ್ಯಾಷನಲ್ ಹೆರಾಲ್ಡ್ ಪ್ರಕರಣ | 2ನೇ ದಿನವೂ ರಾಹುಲ್ ಗಾಂಧಿ ವಿಚಾರಣೆಯ ಕಸರತ್ತು

ಎಎಪಿಯ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಸುರೇಶ್‌ ರಾಥೋಡ್‌ ಮಾತನಾಡಿ, “ಬೆಂಗಳೂರು ರಾಜ್ಯ ರಾಜಧಾನಿ ಮಾತ್ರವಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ನಗರವಾಗಿದೆ. ದೇಶದಲ್ಲೇ ಅತಿಹೆಚ್ಚು ತೆರಿಗೆ ಸಂಗ್ರಹವಾಗುವ ಎರಡನೇ ದೊಡ್ಡ ನಗರವಿದು. ಆದರೆ ಡಬಲ್‌ ಎಂಜಿನ್‌ ಸರ್ಕಾರವೆಂದು ಕರೆದುಕೊಳ್ಳುವ ಬಿಜೆಪಿ ಸರ್ಕಾರವು ನಗರದ ಹೆಸರನ್ನು ಉದ್ಧಾರ ಮಾಡುವ ಬದಲು ಹಾಳು ಮಾಡುತ್ತಿದೆ. ರಸ್ತೆ ಗುಂಡಿಗಳು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಬಿಜೆಪಿ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಇಲ್ಲಿರುವ ಬೃಹತ್‌ ಉದ್ದಿಮೆಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್