ರಾಜ್ಯದ ಖಾಸಗಿ ಐಟಿಐ ಸಿಬ್ಬಂದಿಗೆ ಸರ್ಕಾರಿ ವೇತನ ಮರಳಿ ಮುಂದುವರಿಸಲು ಒತ್ತಾಯ

ITI
  • ಸೆಪ್ಟೆಂಬರ್ 21ರಂದು ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ
  • 2010ರಲ್ಲಿ ಪ್ರಕೃತಿ ವಿಕೋಪದ ನೆಪದಲ್ಲಿ ವೇತನ ಅನುದಾನಕ್ಕೆ ತಡೆ

ರಾಜ್ಯದ ಖಾಸಗಿ ಐಟಿಐ ಸಂಸ್ಥೆಯ ಸಿಬ್ಬಂದಿಗೆ ನೀಡುತ್ತಿದ್ದ ಸರ್ಕಾರಿ ವೇತನ ಮರಳಿ ನೀಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 21ರಂದು ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘದ ಅಧ್ಯಕ್ಷ ಎಸ್ ಎಂ ನರಬೆಂಚಿ ಹೇಳಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ 1997ರ ವೇತನ ಆಯೋಗದ ಪ್ರಕಾರ ಏಳು ವರ್ಷ ಪೂರೈಸಿದ ಖಾಸಗಿ ಐಟಿಐ ಸಂಸ್ಥೆಗಳ ಸಿಬ್ಬಂದಿಗೆ ಸರ್ಕಾರ ವೇತನ ಅನುದಾನ ನೀಡುತ್ತಿತ್ತು. ಆದರೆ, 2010ರಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಸರ್ಕಾರ ಅನುದಾನ ತಡೆ ಹಿಡಿದಿದೆ" ಎಂದು ತಿಳಿಸಿದರು.

"ಖಾಸಗಿ ಐಟಿಐ ಕಾಲೇಜುಗಳಿಗೆ ಸರ್ಕಾರವು 1997ರಲ್ಲಿ ವೇತನ ಆಯೋಗ ರಚನೆ ಮಾಡಿದೆ. ಸಂಸ್ಥೆ ಸ್ಥಾಪಿತಗೊಂಡು ಏಳು ವರ್ಷ ಪೂರೈಸಿದರೆ ಆ ಕಾಲೇಜಿಗೆ ಸರ್ಕಾರವೇ ವೇತನ ನೀಡಲಿದೆ. ಈ ಹಿನ್ನೆಲೆಯಲ್ಲಿಯೇ ಸರ್ಕಾರದಿಂದ ವೇತನ ಸಿಗುತ್ತದೆ ಎಂದು ಬಹಳಷ್ಟು ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಬೋಧಕ ಸಿಬ್ಬಂದಿ ಕೆಲಸ ಮಾಡುತ್ತಿದೆ" ಎಂದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | 2ಎ ಮೀಸಲಾತಿಗೆ ಒತ್ತಾಯ: ಸಿಎಂ ಮನೆ ಮುಂದೆ ಪಂಚಮಸಾಲಿ ಸಮುದಾಯದ ಬೃಹತ್ ಧರಣಿ

"2000ದಿಂದ 2010ರವರೆಗೆ ಸುಮಾರು 800 ಕಾಲೇಜು ಸ್ಥಾಪನೆಯಾಗಿದ್ದು, ಕೇವಲ 196 ಕಾಲೇಜುಗಳು ಅನುದಾನಕ್ಕೆ ಒಳಪಟ್ಟಿವೆ. 2010ರ ನಂತರ ಸ್ಥಾಪಿತವಾದ ಮತ್ತು ಪೂರ್ವದ ಏಳು ವರ್ಷ ಪೂರೈಸಿದ ಕಾಲೇಜುಗಳ ಸಿಬ್ಬಂದಿಗೆ ಮೊದಲಿಗೆ ನೀಡುತ್ತಿದ್ದ ಅನುದಾನ ನೀತಿ ಮರಳಿ ಮುಂದುವರಿಸಬೇಕು. ಇದಕ್ಕಾಗಿ ಆಗ್ರಹಿಸಿ ಈಗಾಗಲೇ ರಾಜ್ಯಾದ್ಯಂತ ನಾನಾ ಕಡೆ ಹೋರಾಟ ಮಾಡಲಾಗಿದೆ. ಆದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಬೇಡಿಕೆ ಈಡೇರುವವರೆಗೆ 300ಕ್ಕೂ ಹೆಚ್ಚು ಸಿಬ್ಬಂದಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದೆ" ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಂಘದ ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್