ದೈಹಿಕ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಗುರುವಾರ ಪ್ರತಿಭಟನೆ

Physical
  • 15 ವರ್ಷದಿಂದ ರಾಜ್ಯದಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ನಡೆದಿಲ್ಲ
  • ರಾಜ್ಯದ ಪಿಯು ಕಾಲೇಜುಗಳಲ್ಲಿ ದೈಹಿಕ ಉಪನ್ಯಾಸಕರೇ ಇಲ್ಲ

ರಾಜ್ಯ ಶಿಕ್ಷಕರ ನೇಮಕಾತಿಯಲ್ಲಿ ದೈಹಿಕ ಶಿಕ್ಷಣ ಪದವೀಧರರನ್ನು ಕಡೆಗಣಿಸಿರುವುದನ್ನು ಖಂಡಿಸಿ, ಖೇಲ್ ಕರ್ನಾಟಕ ದೈಹಿಕ ಶಿಕ್ಷಣ ಮತ್ತು ಕ್ರೀಡಾ ಸಂಘವು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಾಳೆ(ಸೆಪ್ಟೆಂಬರ್ 15) ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ ಸುಕ್ಷಾಂತ್ ಪಾಟೀಲ, "ಕಳೆದ 15 ವರ್ಷದಲ್ಲಿ ರಾಜ್ಯದಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿ ಯಾವುದೇ ನೇಮಕಾತಿ ಕರೆದಿಲ್ಲ. 2007ರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗಕ್ಕೆ ಮಾತ್ರ ದೈಹಿಕ ಶಿಕ್ಷಕರ ನೇಮಕ ಮಾಡಿದ್ದು ಬಿಟ್ಟರೆ, ಇಲ್ಲಿಯವರೆಗೆ ಶಿಕ್ಷಕರನ್ನೇ ನೇಮಕ ಮಾಡಿಲ್ಲ" ಎಂದರು.

"ಕೇಂದ್ರ ಸರ್ಕಾರವು ಫಿಟ್ ಇಂಡಿಯಾ ಮತ್ತು ಖೇಲೋ ಇಂಡಿಯಾ ಕ್ರೀಡಾ, ಯೋಗ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಇವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ದೈಹಿಕ ಶಿಕ್ಷಣ ಶಿಕ್ಷಕರು ಅಗತ್ಯ. ಆದರೆ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 5 ಸಾವಿರ, ಪ್ರೌಢ ಶಾಲೆಗಳಲ್ಲಿ 3 ಸಾವಿರ, ಪದವಿ ಕಾಲೇಜುಗಳಲ್ಲಿ ಸಹ 250 ಕ್ಕೂ ಹುದ್ದೆಗಳು ಖಾಲಿಯಿದ್ದು, ಪಿಯುಸಿ ವಿಭಾಗದಲ್ಲಿ ಇದುವರೆಗೂ ಯಾವುದೇ ನೇಮಕಾತಿ ನಡೆದಿಲ್ಲ" ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?; ಮಳೆಗಾಲ ಅಧಿವೇಶನ | ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ: ಸಚಿವೆ ಶಶಿಕಲಾ ಜೊಲ್ಲೆ ಎಚ್ಚರಿಕೆ

"ದೈಹಿಕ ಶಿಕ್ಷಣ ಶಿಕ್ಷಕನಾಗಬೇಕೆಂದು ಆಕಾಂಕ್ಷೆ ಹೊಂದಿರುವ ಅಪಾರ ಸಂಖ್ಯೆಯ ನಿರುದ್ಯೋಗಿ ಸಿಪಿಎಡ್, ಬಿಪಿಎಡ್‌ ಹಾಗೂ ಎಮ್‌ಪಿಎಡ್‌ ಪದವಿ ಪಡೆದಿರುವ ಅನೇಕ ಅಭ್ಯರ್ಥಿಗಳು ನೇಮಕಾತಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇದರ ನಡುವೆ ಅವರ ವಯೋಮಿತಿ ಸಹ ಮೀರುತ್ತಿದೆ" ಎಂದು ಆತಂಕ ವ್ಯಕ್ತಪಡಿಸಿದರು. 

ದೈಹಿಕ ಶಿಕ್ಷಕ ಉದ್ಯೋಗಾಕಾಂಕ್ಷಿ ಡಾ ವೆಂಕಟೇಶ ಮಾತನಾಡಿ, "ಸರ್ಕಾರವು ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಲ್ಲಿ ನಿರಾಸಕ್ತಿ ತೋರಿಸಿದ್ದು, ಯೋಗ ಮತ್ತು ದೈಹಿಕ ಶಿಕ್ಷಣದ ಪಠ್ಯದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹಲವಾರು ವರ್ಷಗಳಿಂದ ನೇಮಕಾತಿಯಾಗದೆ ನೆನಗುದಿಗೆ ಬಿದ್ದಿರುವ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯ ಮಟ್ಟದವರೆಗೆ ದೈಹಿಕ ಶಿಕ್ಷಕರು, ಉಪನ್ಯಾಸಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕವಾಗಬೇಕು" ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದೈಹಿಕ ಶಿಕ್ಷಕ ಉದ್ಯೋಗಾಕಾಂಕ್ಷಿಗಳಾದ ಗೀತಾ ಜಿ, ಡಾ ರವೀಂದ್ರ ಬಿ ಸಿ ಹಾಗೂ ನಾಗಮಲ್ಲ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180