ಒಂದು ನಿಮಿಷದ ಓದು | ದಾಖಲೆ ಸೃಷ್ಟಿಸಿದ ಮೆಟ್ರೋ; ಆಗಸ್ಟ್ 15ರಂದು 5.74 ಲಕ್ಷ ಪ್ರಯಾಣಿಕರ ಸಂಚಾರ

'ನಮ್ಮ ಮೆಟ್ರೋ'ದಲ್ಲಿ ದಿನಕ್ಕೆ ಸುಮಾರು ಮೂರು ಲಕ್ಷ ಮಂದಿ ಪ್ರಯಾಣ ಮಾಡುತ್ತಿದ್ದರು. ಆದರೆ, ಆಗಸ್ಟ್ 15ರ ಒಂದೇ ದಿನ 5.74 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿರುವುದು ದಾಖಲೆ ಸೃಷ್ಟಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ವೀಕ್ಷಿಸಲು, ವಿಧಾನಸೌದ ಮತ್ತು ಮಾಣಿಕ್ ಷಾ ಪರೇಡ್ ಮೈದಾನ, ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜನರು ಮುಗಿಬಿದ್ದಿದ್ದರು.

ಇನ್ನೊಂದೆಡೆ ಬೆಂಗಳೂರು ಮಹಾಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ರಜತ ಮಹೋತ್ಸವದ ಪ್ರಯುಕ್ತ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದರಿಂದರಿಂದಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಬಿಎಂಟಿಸಿಯಲ್ಲಿ ಪ್ರತಿದಿನ ಸರಾಸರಿ 27 ಲಕ್ಷ ಜನ ಪ್ರಯಾಣಿಸುತ್ತಿದ್ದರೆ ಸೋಮವಾರ ಮಾತ್ರ ಪ್ರಯಾಣಿಕರ ಸಂಖ್ಯೆ 35 ಲಕ್ಷಕ್ಕೆ ಏರಿಕೆಯಾಗಿತ್ತು.

ಕಾಂಗ್ರೆಸ್ ಪಕ್ಷ ಆಗಸ್ಟ್ 15ರಂದು ‘ಸ್ವಾತಂತ್ರ್ಯ ನಡಿಗೆ’ ಪಾದಯಾತ್ರೆ ನಡೆಸಿತು. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸುವವರು 'ನಮ್ಮ ಮೆಟ್ರೊ'ದಲ್ಲಿ ಸಂಚರಿಸಲು ಅನುಕೂಲವಾಗಲಿ ಎಂದು ಕಾಂಗ್ರೆಸ್ 80 ಸಾವಿರ ಪೇಪರ್ ಟಿಕೆಟ್ ಖರೀದಿಸಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್