
- ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚನೆ
- ನಿರ್ಭಯ ಯೋಜನೆಯಡಿ ಟ್ರಾಫಿಕ್ ಜಂಕ್ಷನ್ಗಳಲ್ಲಿ ಕ್ಯಾಮೆರಾ ಅಳವಡಿಸಿ
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡಿದ ನಂತರ ರಾಜ್ಯ ಸರ್ಕಾರ ದಟ್ಟಣೆ ಕಡಿಮೆ ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರದಂದು ಬೆಂಗಳೂರಿನ ಪ್ರಮುಖ ಹತ್ತು ಸ್ಥಳಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಿಲ್ಕ್ ಬೋರ್ಡ್ ಜಂಕ್ಷನ್, ವೈಟ್ಫೀಲ್ಡ್ ರಸ್ತೆ, ಭಟ್ಟರಹಳ್ಳಿ ಜಂಕ್ಷನ್, ಹೆಬ್ಬಾಳ ಮೇಲ್ಸೇತುವೆ, ಮಹದೇವಪುರ ಹೊರವರ್ತುಲ ರಸ್ತೆ, ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆ ಮತ್ತು ಗೊರಗುಂಟೆಪಾಳ್ಯದಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದ್ದು, ಈ ರಸ್ತೆಗಳ ಕಡೆ ಗಮನಹರಿಸುವಂತೆ ಅವರು ಸಲಹೆ ನೀಡಿದ್ದಾರೆ.
ಟ್ರಾಫಿಕ್ ಜಾಮ್ನ ಕುರಿತು ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ, ನಗರಾಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಈ ಕೆಲಸದ ಜವಾಬ್ದಾರಿಯನ್ನು ಖುದ್ದು ಡಿಸಿಪಿಗಳೇ ವಹಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.
ಕಾಮಗಾರಿ ಕೈಗೆತ್ತಿಕೊಳ್ಳುವಾಗ ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿ, ಬಿಎಂಆರ್ಸಿಎಲ್ ಮತ್ತು ಬೆಸ್ಕಾಂ ಅಧಿಕಾರಿಗಳ ನಡುವೆ ಸಮನ್ವಯತೆಯ ಅಗತ್ಯವನ್ನು ಮುಖ್ಯಮಂತ್ರಿ ಒತ್ತಿ ಹೇಳಿದರು. ಸಂಚಾರ ದಟ್ಟಣೆ ತಗ್ಗಿಸಲು ಕ್ರಮಗಳನ್ನು ರೂಪಿಸುವಂತೆ ನಗರಾಭಿವೃದ್ಧಿ ಮತ್ತು ಗೃಹ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಅವರು ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಮತ್ತು ಮಳೆ ಬಂದಾಗ ಜಲಾವೃತವಾಗುವ ಸುಮಾರು 50 ಸ್ಥಳಗಳಲ್ಲಿ ತಕ್ಷಣ ರಸ್ತೆ ದುರಸ್ತಿ ಪ್ರಾರಂಭಿಸಲು ಬೊಮ್ಮಾಯಿ ಆದೇಶಿಸಿದರು. ವಿವಿಧ ಯೋಜನೆಗಳಿಗಾಗಿ ಅಗೆದಿರುವ ರಸ್ತೆಗಳ ಪುನರ್ ನಿರ್ಮಾಣ ಹಾಗೂ ಅವಶೇಷಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿ, ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ನಿರ್ದೇಶಿಸಲಾಯಿತು
ನಿರ್ಭಯ ಯೋಜನೆಯಡಿ ಟ್ರಾಫಿಕ್ ಜಂಕ್ಷನ್ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಅಗತ್ಯವನ್ನು ಸಹ ಒತ್ತಿಹೇಳಲಾಯಿತು. ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಮತ್ತು ಹೈಡೆನ್ಸಿಟಿ ರಸ್ತೆಗಳ ಒತ್ತುವರಿಯನ್ನು ಯಾವುದೇ ನಿರ್ಲಕ್ಷ ತೋರದೆ ತೆರವುಗೊಳಿಸಿ; ಕ್ರಮ ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಚುನಾವಣೆ ಕುರಿತ 'ಜನಾಗ್ರಹ' ಸಮೀಕ್ಷೆ : ಅಭಿವೃದ್ಧಿಗೇ ಮತ ಎಂದ ಬೆಂಗಳೂರಿಗರು
ಸಿಬಿಡಿ, ಹೈಡೆನ್ಸಿಟಿ ಕಾರಿಡಾರ್ನಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಸಿಗ್ನಲ್ಗಳ ಸಿಂಕ್ರೊನೈಸೇಷನ್ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲು ಸಿಎಂ ಸೂಚಿಸಿದರು. ಇದರಿಂದ ಜನರಿಗೆ ಅನುಕೂಲ ಆಗುತ್ತದೆ. ರಸ್ತೆ ಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚಲು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು.