
ಖಾಸಗಿ ಹಾಲು ಮಾರಾಟಗಾರರಿಗಿಂತಲೂ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮಾರಾಟ ಮಾಡುವ ಹಾಲಿನ ದರ ಕಡಿಮೆಯಿರುವ ಕಾರಣ ಪ್ರತಿ ಲೀಟರ್ಗೆ ₹3 ರಂತೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಪ್ರಸ್ತುತ ಕೆಎಂಎಫ್ ಲೀಟರ್ಗೆ 37 ರೂ.ಗಳಂತೆ ಹಾಲು ಮಾರಾಟ ಮಾಡುತ್ತಿದೆ. ಆದರೆ, ಖಾಸಗಿ ಮಾರಾಟಗಾರರು ಒಂದು ಲೀಟರ್ಗೆ 40 ರೂ.ವರೆಗೂ ಹಾಲಿನ ದರ ವಿಧಿಸುತ್ತಾರೆ. ರೈತರ ಆದಾಯ ಹೆಚ್ಚಿಸುವ ಸಲುವಾಗಿ ಕೆಎಂಎಫ್ ಈ ವಿಷಯವನ್ನು ಪ್ರಸ್ತಾಪಿಸಿದೆ.
"ರೈತರ ಪ್ರೋತ್ಸಾಹ ಧನದ ಎರಡನೇ ಕಂತು ₹1,250 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಮೂರನೇ ಕಂತು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು" ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
“ಹಾಲಿನ ದರ ಏರಿಕೆಯ ಬಗ್ಗೆ, ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಈ ಕುರಿತು ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ಹಾಲಿನ ದರ ಏರಿಕೆ ಮಾಡಿದರೆ ಅದರಿಂದ ಬಂದ ಹಣವನ್ನು ರೈತರಿಗೆ ನೀಡಲಾಗುವುದು” ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಕೆಎಂಎಫ್ ಹಾಲಿನ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ಸಹ, ದರ ಏರಿಕೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು. ಈ ಬಾರಿಯಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದರ ಏರಿಕೆ ಪ್ರಸ್ತಾವನೆಗೆ ಹಸಿರು ನಿಶಾನೆ ತೋರುವರೆಂಬ ನಿರೀಕ್ಷೆಯನ್ನು ಕೆಎಂಎಫ್ ಹೊಂದಿದೆ.