ಬೆಂಗಳೂರು| ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟ ಶೇ.99ರಷ್ಟು ಹಾಸಿಗೆಗಳು ಖಾಲಿ ಖಾಲಿ!

  • ತಗ್ಗಿದ ಕೋವಿಡ್‌ ತೀವ್ರತೆ– ಹೋಮ್ ಐಸೋಲೇಷನ್‌ ಆರೈಕೆಗೆ ಒಲವು
  • ಹತ್ತು ದಿನದಲ್ಲಿ 1,785 ಪ್ರಕರಣ ಪತ್ತೆಯಾದರೂ ಮರಣ ಕಂಡುಬಂದಿಲ್ಲ

ಬೆಂಗಳೂರು ನಗರದಲ್ಲಿ 2,107 ಕೋವಿಡ್‌ ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆ ತೀರಾ ಕಡಿಮೆ. ಕೋವಿಡ್‌ ತೀವ್ರವಾಗಿ ಪರಿಣಾಮ ಬೀರದ ಕಾರಣ ಬಹುತೇಕರು ಹೋಮ್‌ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಸರ್ಕಾರ ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟಿರುವ ಶೇ.99.79ರಷ್ಟು ಹಾಸಿಗೆಗಳು ಖಾಲಿ ಇವೆ.

ವಾರದಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಲೇ ಇವೆ. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಕೋಟಾ ಅದಡಿ ಎರಡು ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಿಕೊಳ್ಳಲಾಗಿದೆ.

10 ದಿನಗಳಲ್ಲಿ 1,785 ಮಂದಿಗೆ ಕೋವಿಡ್ ಪತ್ತೆಯಾಗಿದ್ದು, ಈ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 1,346 ಮಂದಿ ಗುಣಮುಖರಾಗಾಗಿದ್ದಾರೆ. ಹೊಸ ಪ್ರಕರಣಗಳ ಸಂಖ್ಯೆ 200ರ ಗಡಿಯ ಆಸುಪಾಸಿಗೆ ಏರಿಕೆಯಾಗಿದ್ದರೂ ಸೋಂಕಿತರಲ್ಲಿ ನಿತ್ಯ ಎರಡರಿಂದ ಐದು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕ ಸೋಂಕಿತರು ಹೋಮ್‌ ಐಸೋಲೇಷನ್‌ ನಲ್ಲಿಯೇ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ 2,107 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟಿರುವ 2,395 ಹಾಸಿಗೆಗಳಲ್ಲಿ 2,390 ಹಾಸಿಗೆಗಳು ಖಾಲಿ ಉಳಿದಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ (ಟ್ರಯಾಜ್ ಸೆಂಟರ್) ಸೋಂಕಿತರನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ನಗರದಲ್ಲಿ 48 ಟ್ರಯಾಜ್ ಸೆಂಟರ್‌ಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಕೋವಿಡ್ ಅಂಕಿಅಂಶ

ದಿನಾಂಕ ಹೊಸ ಪ್ರಕರಣ ಗುಣಮುಖ ಮರಣ  ಸಕ್ರಿಯ
ಜೂನ್ 1 158 200  0 1,895 
ಜೂನ್ 2 276 173 0 2,091
ಜೂನ್ 3 243 227 0 2,107

ಕೋವಿಡ್ ಮೊದಲ ಮತ್ತು ಎರಡನೇ ಸಂದರ್ಭದಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾದಾಗ ಜನ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ನೂಕುನುಗ್ಗಲು ಉಂಟಾಗಿತ್ತು. ಆ ವೇಳೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಪರದಾಡಿದ್ದರು. ತೀವ್ರ ನಿಗಾ ಘಟಕ (ಐಸಿಯು), ಅಮ್ಲಜನಕ ಸಹಿತ ಹಾಸಿಗೆಗಳಿಗೆ ವಿಪರೀತ ಬೇಡಿಕೆ ಇತ್ತು. ಬೇಡಿಕೆಗೆ ಅನುಗುಣವಾಗಿ ಆರೋಗ್ಯ ಸೇವೆ ಲಭ್ಯವಾಗದೆ ಸಮಸ್ಯೆ ಗಂಭೀರ ಸ್ವರೂಪ ಪಡೆದಿತ್ತು. 

ಸರ್ಕಾರವು ಕೋವಿಡ್ ಮೂರನೇ ಅಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ರೂಪಿಸಿತ್ತು. ಸರ್ಕಾರಿ ಕೋಟಾದಡಿ ಶಿಫಾರಸು ಆಧಾರದಲ್ಲಿ ಚಿಕಿತ್ಸೆ ನೀಡಲು ಶೇ 75ರಷ್ಟು ಹಾಸಿಗೆಗಳನ್ನು ಮೀಸಲಿಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಿ, ಆದೇಶ ಹೊರಡಿಸಿತ್ತು. ಇದರಿಂದಾಗಿ ಕೋವಿಡ್ ಚಿಕಿತ್ಸೆಗೆ ನಗರದಲ್ಲಿ 6 ಸಾವಿರಕ್ಕೂ ಅಧಿಕ ಹಾಸಿಗೆಗಳು ಲಭ್ಯವಿದ್ದವು.

ಈ ಸುದ್ದಿ ಓದಿದ್ದೀರಾ? ಪಠ್ಯಪರಿಷ್ಕರಣಾ ಸಮಿತಿ ವಿಸರ್ಜನೆ| ಸರ್ಕಾರದ ಜಾಣ ನಡೆ ವಿರುದ್ಧ ತಜ್ಞರು-ಸಾಹಿತಿಗಳ ಆಕ್ರೋಶ

ಮೂರನೇ ಅಲೆಯ ಸಂದರ್ಭದಲ್ಲಿ ದಿನವೊಂದಕ್ಕೆ ವರದಿಯಾಗುತ್ತಿದ್ದ ಹೊಸ ಪ್ರಕರಣಗಳ ಸಂಖ್ಯೆಯು ನಗರದಲ್ಲಿ 30 ಸಾವಿರದವರೆಗೆ ಹೆಚ್ಚಳ ಕಂಡಿದ್ದರೂ ಸೋಂಕಿತರಲ್ಲಿ ಶೇ.98ರಷ್ಟು ಮಂದಿ ಹೋಮ್‌ ಐಸೋಲೇಷನ್‌ಗೆ ಒಳಗಾಗಿದ್ದರು. ಆದರೂ ಮೀಸಲು ಹಾಸಿಗೆಗಳನ್ನು ಚಿಕಿತ್ಸೆಗೆ ಉಳಿಸಿಕೊಳ್ಳಲಾಗಿದೆ.

ಕೋವಿಡ್‌ ಚಿಕಿತ್ಸೆಗೆ ಮೀಸಲಿಟ್ಟ ಹಾಸಿಗೆಗಳ ಸಂಖ್ಯೆ
ಸರ್ಕಾರಿ ವೈದ್ಯಕೀಯ ಕಾಲೇಜು  -    435
ಖಾಸಗಿ ಆಸ್ಪತ್ರೆ                      -    333
ಸರ್ಕಾರಿ ಆಸ್ಪತ್ರೆ                     -    1,098
ಖಾಸಗಿ ವೈದ್ಯಕೀಯ ಕಾಲೇಜು    -   479
ಒಟ್ಟು                                   -   2354

"ಪ್ರತಿನಿತ್ಯ 14,000 ಸಾವಿರ ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದ್ದು, ಗುರಿ ತಲುಪಲಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶೇ. 100ರಷ್ಟು ಕೋವಿಡ್‌ ಲಸಿಕೆ ನೀಡಲಾಗಿದೆ. ಈ ಕಾರಣದಿಂದ ಇತ್ತೀಚೆಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಳ್ಳುತ್ತಿರುವರಲ್ಲಿ ಶೀತ ಕೆಮ್ಮು ಮುಂತಾದ ಯಾವುದೇ ಲಕ್ಷಣಗಳು ಇಲ್ಲ. ಜತೆಗೆ ತೀವ್ರತೆಯೂ ಕಡಿಮೆ ಇದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲಾ ರೀತಿಯ ಸಿದ್ಧತೆಯನ್ನು ಬಿಬಿಎಂಪಿ ವತಿಯಿಂದ ಕೈಗೊಳ್ಳಲಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ಹಾಸಿಕೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಕಾಯ್ದಿರಿಸಲಾಗಿದೆ" ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ತ್ರಿಲೋಕ್‌ ಚಂದ್ರ 'ಈದಿನ.ಕಾಂ' ಗೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app