ಸಂಪಿಗೆ ರಸ್ತೆ ವೈಟ್ ಟಾಪಿಂಗ್| ತಿಂಗಳು ಕಳೆದರೂ ಮುಗಿಯದ ಗೋಳು, ವ್ಯಾಪಾರಿ-ಗ್ರಾಹಕರಿಗೆ ಸಂಕಷ್ಟ

ಸಂಪಿಗೆ ರಸ್ತೆ ಬಳಕೆದಾರ ಗ್ರಾಹಕರು, ವಾಹನ ಸವಾರರ ಜೊತೆಗೆ, ಅಲ್ಲಿನ ವ್ಯಾಪಾರದ ಮೇಲೆ ಜೀವನ ನಡೆಸುತ್ತಿರುವ ವ್ಯಾಪಾರಿಗಳು ಕೂಡ ಇನ್ನೂ ಕನಿಷ್ಟ 20 ದಿನ ಕಾಯುವುದು ಅನಿವಾರ್ಯ!.
  • ಪ್ರಮುಖ ಜನನಿಬಿಡ ರಸ್ತೆಯ ವ್ಯಾಪಾರ ವಹಿವಾಟು ಬಂದ್ 
  • ವ್ಯಾಪಾರಿಗಳ ಪಾಲಿಗೆ ಕೊರೋನ ಬಳಿಕ ಮತ್ತೊಂದು ಲಾಕ್‌ ಡೌನ್!

ಬೆಂಗಳೂರಿನ ಪ್ರಮುಖ ವ್ಯಾಪಾರ ಕೇಂದ್ರವಾದ ಮಲ್ಲೇಶ್ವರದ ಸಂಪಿಗೆ ರಸ್ತೆಯ ವೈಟ್‌ ಟಾಪಿಂಗ್ ಕೆಲಸ ಪ್ರಾರಂಭವಾಗಿ ತಿಂಗಳುಗಳೇ ಕಳೆಯುತ್ತಾ ಬಂದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.

ಪ್ರಮುಖ ಮಾರುಕಟ್ಟೆ ಪ್ರದೇಶದ ರಸ್ತೆಯನ್ನು ಕಾಮಗಾರಿಗಾಗಿ ತಿಂಗಳುಗಟ್ಟಲೆ ಬಂದ್‌ ಮಾಡಿರುವುದರಿಂದ ಆ ಭಾಗದ ನಾಗರಿಕರಿಗೆ ಮಾತ್ರವಲ್ಲದೆ, ಅಂಗಡಿಯ ಮಾಲಕರೂ ಸೇರಿ ಬೀದಿಬದಿಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 

'ನಗರದ ಜನಜಂಗುಳಿಯ ರಸ್ತೆ' ಎಂದೇ ಹೆಸರಾಗಿರುವ ಸಂಪಿಗೆ ರಸ್ತೆ ಹಬ್ಬಹರಿದಿನ ಖರೀದಿಗೆ ಜನಪ್ರಿಯ. ಬಟ್ಟೆ, ದಿನ ಬಳಕೆ ವಸ್ತುಗಳು, ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಪೂಜಾ ಸಾಮಗ್ರಿ, ಹಣ್ಣು ತರಕಾರಿ, ಹೋಟೆಲ್‌ ಮತ್ತು ಬೇಕರಿಗಳು.. ಹೀಗೆ ನಾನಾ ಬಗೆಯ ಅಂಗಡಿಮುಂಗಟ್ಟುಗಳು ಈ ರಸ್ತೆಯನ್ನು ನಗರದ ಮಧ್ಯಮವರ್ಗದ ಪಾಲಿಗೆ ಬಹಳ ಅಚ್ಚುಮೆಚ್ಚಿನ ವ್ಯಾಪಾರ ವಹಿವಾಟಿನ ಕೇಂದ್ರವಾಗಿದೆ.

ಇದನ್ನು ಓದಿದ್ದೀರಾ ? ರಾಜಕಾರಣದ ತಿಳಿ ಜಲ ಜಿ ವಿ ಶ್ರೀರಾಮ ರೆಡ್ಡಿಯವರ ಅಗತ್ಯ ಈಗ ಹೆಚ್ಚಿತ್ತು

ವೈಟ್ ಟಾಪಿಂಗ್ ಕಾಮಗಾರಿಗಾಗಿ ಇಡೀ ಎರಡು ಕಿ.ಮೀ ರಸ್ತೆಯನ್ನು ಏಕಾಏಕಿ ಅಗೆದು ಹಾಕಿರುವುದು ಮತ್ತು ಕಾಮಗಾರಿಗಾಗಿ ಉದ್ದಕ್ಕೂ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿ, ವಾಹನ ಓಡಾಟಕ್ಕೆ ನಿಷೇಧ ಹೇರಿರುವುದರಿಂದ ಸಂಪಿಗೆ ರಸ್ತೆ ಮಾತ್ರವಲ್ಲದೆ, ಅದರ ಆಸುಪಾಸಿನ ರಸ್ತೆಗಳಲ್ಲಿ ಕೂಡ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.

ರಸ್ತೆಯುದ್ದಕ್ಕೂ ಒಂದು ಕಡೆ ಮಣ್ಣು ರಾಶಿ ಬಿದ್ದಿದ್ದರೆ, ಮತ್ತೊಂದು ಕಡೆ ಜಲ್ಲಿ ರಾಶಿ ಹಾಕಿದ್ದಾರೆ. ದಿನನಿತ್ಯ ಓಡಾಡುವ ಜನ ಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆಗಳನ್ನು ಆದಷ್ಟೂ ಬೇಗ ಪೂರ್ತಿಗೊಳಿಸಲು ಜನರು ಬಿಬಿಎಂಪಿ ಬಳಿ ಮನವಿ ಮಾಡಿದ್ದಾರೆ.

Image
ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳಿಂದ 'ಅಭಿವೃದ್ಧಿ ಸಾಕು' ಅಭಿಯಾನ.
ಸ್ಥಳೀಯ ನಿವಾಸಿಗಳು ಮತ್ತು ವ್ಯಾಪಾರಿಗಳಿಂದ 'ಅಭಿವೃದ್ಧಿ ಸಾಕು' ಅಭಿಯಾನ.

ಹೋರಾಟ ಮಾಡಿದರೂ ಕಿವಿಗೊಡಲಿಲ್ಲ

ವೈಟ್ ಟಾಪಿಂಗ್ ಕುರಿತು ಈ ದಿನ.ಕಾಮ್ ಆಡಳಿತ ಸಂಶೋಧನಾ ವಿದ್ಯಾರ್ಥಿ ರಿಷಿ ರಾಘವನ್ ಸಂಪರ್ಕಿಸಿದಾಗ "ಅಭಿವೃದ್ಧಿ ಬೇಕು, ಆದರೆ ಜನರಿಗೆ ಸಮಸ್ಯೆ ಮಾಡುತ್ತಾ ಅಭಿವೃದ್ಧಿ ಮಾಡೋದು ನಿಲ್ಲಿಸಿ. ನಾವು ಅಭಿವೃದ್ಧಿ ಸಾಕು ಎಂದು ಸಂಪಿಗೆ ರಸ್ತೆ ಬಳಿ ಎರಡು ಬಾರಿ ಪ್ರತಿಭಟನೆ ಮಾಡುವ ಮೂಲಕ ನಮ್ಮ ಕಷ್ಟಗಳನ್ನು ಬಿಬಿಎಂಪಿ ಗಮನಕ್ಕೆ ತಂದಿದ್ದೆವು. ಆದರೆ ಇದುವರೆಗೂ ಯಾವುದೇ ಫಲ ಕೊಟ್ಟಿಲ್ಲ" ಎಂದು ಅಸಹಾಯಕತೆ ತೋಡಿಕೊಂಡರು.

ಜನರಿಲ್ಲದೇ ಬಿಕೋ ಎನ್ನುತ್ತಿರುವ ರಸ್ತೆಗಳು

ಮಲ್ಲೇಶ್ವರಂ ಸಂಪಿಗೆ ರಸ್ತೆಯು ಜನರಿಲ್ಲದೇ ಬಿಕೋ ಎನ್ನುತ್ತಿದೆ. ಎರಡು ಕಿ.ಮೀ ಉದ್ದಕ್ಕೂ 20 ದಿನಗಳಾದರೂ ಕೆಲಸ ಪೂರ್ತಿಯಾಗದ ಕಾರಣ ಜನರು ತನ್ನ ದಿನನಿತ್ಯದ ಓಡಾಟಗಳನ್ನು ಬದಲಾಯಿಸಿದ್ದಾರೆ. ಇದರಿಂದ ಜನರು ಇಲ್ಲದೇ ರಸ್ತೆಗಳು ಖಾಲಿಯಾಗಿವೆ ಎಂಬುದು ಅವರ ಅಳಲು.

ಇದನ್ನು ಓದಿದ್ದೀರಾ ? ಡಿ ಕೆಂಪಣ್ಣ ಸಂದರ್ಶನ | ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರದ್ದು ಸರ್ಕಾರ ಮಾಡಿದ ಕೊಲೆ

ಖಾಲಿ ಆಟೋ ಓಡಿಸಬೇಕು

ಸಂಪಿಗೆ ರಸ್ತೆಯಲ್ಲಿ ಸಿಕ್ಕ ಆಟೋ ಚಾಲಕರ ಬಳಿ ಕಾಮಗಾರಿ ಬಗ್ಗೆ ಕೇಳಿದಾಗ ತಮ್ಮದೇ ಸಮಸ್ಯೆ ಹೇಳಿಕೊಂಡರು. "ಮಲ್ಲೇಶ್ವರಂ ಕಡೆ ಬಂದರೆ ಜನರೇ ಆಟೋ ಹತ್ತಲ್ಲ, ಜನ ಹತ್ತಿದ್ರೂ ಆ ರೋಡಿನಲ್ಲಿ ಹೋಗಿ, ಈ ರೋಡಿಗೆ ಹೋಗಿ ಎಂದು ಗೋಳಿಡುತ್ತಾರೆ. ಗ್ಯಾಸ್ ಬೆಲೆ ಜಾಸ್ತಿಯಾಗಿದೆ. ಹೆಚ್ಚುವರಿ 5 ರೂಪಾಯಿ ಕೊಡಲಿಕ್ಕೂ ಜನ ಹಿಂದೆ ಮುಂದೆ ನೋಡುತ್ತಾರೆ. ವೈಟ್ ಟಾಪಿಂಗ್ ಹಾಕೋದು ಒಳ್ಳೆಯ ವಿಚಾರ. ಆದರೆ ಇಷ್ಟೊಂದು ಸಮಯ ಯಾಕಾಗಿ ತಗೊಬೇಕಿತ್ತು. 50 ಜನ ಕೆಲಸ ಮಾಡೊ ಜಾಗದಲ್ಲಿ 100 ಜನ ಕೆಲಸ ಮಾಡಿಸಲಿ. ಎರಡು ಶಿಫ್ಟ್ ನಲ್ಲಿ ಕೆಲಸ ಮಾಡಲಿ" ಎಂದು ಆಟೋಚಾಲಕ ರಮೇಶ್ ಹೇಳಿದರು.

ಕೊರೋನ ಸಮಯಕ್ಕಿಂತ ಈಗ ಕಷ್ಟ

ಸಂಪಿಗೆ ರಸ್ತೆಯ 4ನೇ ಕ್ರಾಸ್‌ನಲ್ಲಿರುವ ಚಪ್ಪಲಿ ಅಂಗಡಿ ಮಾಲೀಕ ಮಹರೂಫ್ ಮಾತಾನಾಡುತ್ತಾ "ಇಲ್ಲಿ ಕಾಮಗಾರಿ ತುಂಬಾ ವಿಳಂಬವಾಗುತ್ತಿದೆ. ವಿದೇಶಗಳಲ್ಲಿ 3-4 ದಿವಸದಲ್ಲಿ ಆಹೋರಾತ್ರಿ ಕೆಲಸಮಾಡಿ ಮುಗಿಸುತ್ತಾರೆ. ಇಲ್ಲಿ ಮಾತ್ರ ತಿಂಗಳಾದರೂ ಕೆಲಸ ಮುಗಿಯಲಿಲ್ಲ. ಕಳೆದೆರಡು ವರ್ಷಗಳಲ್ಲಿ ಕೊರೋನಾ ನೆಪವಿಟ್ಟು ಅಂಗಡಿ ಮುಚ್ಚಲು ಹೇಳಿದ್ದರು. ಇದೀಗ ಕೊರೋನಾಗಿಂತ ತುಂಬಾ ಕಷ್ಟ ಆಗುತ್ತಿದೆ. ಈ ತಿಂಗಳ ಅಂಗಡಿ ಬಾಡಿಗೆ ಕಟ್ಟೋದಕ್ಕೂ ವ್ಯಾಪಾರವಾಗಿಲ್ಲ" ಎಂದರು.

Image
ಗ್ರಾಹಕರಿಲ್ಲದೆ ಬಣಗುಡುತ್ತಿರುವ ಅಂಗಡಿಗಳು 
ಗ್ರಾಹಕರಿಲ್ಲದೆ ಬಣಗುಡುತ್ತಿರುವ ಅಂಗಡಿಗಳು 

ಮುಚ್ಚಿರುವ ಹತ್ತಾರು ಅಂಗಡಿಗಳು

ಸಂಪಿಗೆ ರಸ್ತೆ ಎಂಬುದು ನೂರಾರು ಅಂಗಡಿಗಳು ಇರುವ ಮಾರುಕಟ್ಟೆ ಪ್ರದೇಶ. ಆದರೆ ಬಿಬಿಎಂಪಿ ಈ ರಸ್ತೆಯ ವೈಟ್ ಟಾಪಿಂಗ್ ಕೆಲಸವನ್ನು ಇಡೀ ರಸ್ತೆಯ ಉದ್ದಕ್ಕೂ ಒಮ್ಮೆಲೇ ಪ್ರಾರಂಭ ಮಾಡಿದ ಪರಿಣಾಮವಾಗಿ ರಸ್ತೆ ಸಂಪೂರ್ಣ ಮುಚ್ಚಿದ್ದು, ಜನರು ಓಡಾಡುವಂತೆಯೇ ಇಲ್ಲ. ಹಾಗಾಗಿ ಜನ ಸಹಜವಾಗೇ ಅಕ್ಕಪಕ್ಕದ ರಸ್ತೆಗಳನ್ನು ಸಂಚಾರಕ್ಕೆ ಬಳಸುತ್ತಿದ್ದು, ಸಂಪಿಗೆ ರಸ್ತೆಯತ್ತ ತಲೆ ಹಾಕುತ್ತಲೇ ಇಲ್ಲ.

ಜನರೇ ಇಲ್ಲದೆ ವ್ಯಾಪಾರ-ವಹಿವಾಟು ಕುಂಠಿತವಾಗಿದೆ. ಇದರಿಂದ ರಸ್ತೆಯ ಉದ್ದಗಲಕ್ಕೂ ಅಂಗಡಿಗಳನ್ನು ಮಾಲೀಕರು ಮುಚ್ಚಿದ್ದಾರೆ.

ಸಂಪಿಗೆ ರಸ್ತೆ 1ನೇ ಕ್ರಾಸ್ ಬಳಿ ಇರುವ ಹೋಟೆಲ್ ಮಾಲಿಕ ಮಹೇಶ್ ಮಾತಾಡಿ "ಜನರಿಲ್ಲದೆ ವ್ಯವಹಾರ ಏನೂ ಇಲ್ಲ, ಮೊದಲಿಗೆ ಹೋಲಿಸಿದರೆ ಈಗ 30% ಗ್ರಾಹಕರು ಕೂಡ ಬರುತ್ತಿಲ್ಲ. ಆದಷ್ಟೂ ಬೇಗ ಕೆಲಸ ಮುಗಿಸಲಿ. ಇಲ್ಲವಾದರೆ, ಇದು ಮತ್ತೊಂದು ಥರದ ಲಾಕ್‌ ಡೌನ್‌ ಆಗಿ ನಮ್ಮ ಬದುಕು ಕಿತ್ತುಕೊಳ್ಳಲಿದೆ" ಎಂದು ಹೇಳಿದರು.

ರಾತ್ರಿ ವೇಳೆಯಲ್ಲೂ ಕೆಲಸ ಮಾಡುತ್ತಿದ್ದೇವೆ

ಸಂಪಿಗೆ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ವಿಳಂಬ ಮತ್ತು ಅದರಿಂದಾಗಿ ಆ ಭಾಗದ ಜನ ಮತ್ತು ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆಗಳ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಬಿಬಿಎಂಪಿ ಸಂಪಿಗೆ ರಸ್ತೆ ಅಭಿವೃದ್ಧಿ ಯೋಜನೆಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರನ್ನು ಸಂಪರ್ಕಿಸಿದಾಗ "ಸಂಪಿಗೆ ರಸ್ತೆ ಯೋಜನೆಯು ಬಹಳ ವೆಚ್ಚದ್ದಾಗಿದೆ. ಬೆಳಗ್ಗಿನ ಸಮಯದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ, ವೈಟ್ ಟಾಪಿಂಗ್ ಸಮರ್ಪಕವಾಗಿ ಆಗಕಾದರೆ 30° ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ಇರಬೇಕು. ನಾವು ಕೆಲಸ ನಿಲ್ಲಿಸಿಲ್ಲ. ರಾತ್ರಿ ವೇಳೆ ಕೂಡ ಕೆಲಸ ಮಾಡುತ್ತಿದ್ದೇವೆ. ನಮಗೆ 30 ದಿನದ ಅವಕಾಶ ನೀಡಿದ್ದಾರೆ. ನಾವು 25 ದಿವಸದಲ್ಲಿ ಮುಗಿಸಲಿದ್ದೇವೆ" ಎಂದು ತಿಳಿಸಿದರು.

"ಈಗಾಗಲೇ ಒಂದೂವರೆ ತಿಂಗಳು ಗತಿಸಿದ್ದು, ಇನ್ನೂ ಕನಿಷ್ಟ 20 ದಿನವಾದರೂ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿದೆ. ಸದ್ಯ ರಸ್ತೆ ವೈಟ್‌ ಟಾಪಿಂಗ್‌ ಮುಗಿದಿದ್ದರೂ, ಫುಟ್‌ ಪಾತ್‌ ಮತ್ತಿತರ ಕೆಲಸಗಳು ಬಾಕಿ ಇವೆ. ಹಾಗಾಗಿ ಈಗಲೇ ರಸ್ತೆ ಸಂಚಾರಮುಕ್ತಗೊಳಿಸಲಾಗದು" ಎಂದು ಕಾಮಗಾರಿ ನಿರ್ವಹಿಸುತ್ತಿರುವ ಎಂಜಿನಿಯರ್‌ ಶಿವಕುಮಾರ್‌ ಈ ದಿನ.ಕಾಮ್ ಜೊತೆ  ಹೇಳಿದ್ದಾರೆ.

ಹಾಗಾಗಿ ಸಂಪಿಗೆ ರಸ್ತೆ ಬಳಕೆದಾರ ಗ್ರಾಹಕರು, ವಾಹನ ಸವಾರರ ಜೊತೆಗೆ, ಅಲ್ಲಿನ ವ್ಯಾಪಾರದ ಮೇಲೆ ಜೀವನ ನಡೆಸುತ್ತಿರುವ ವ್ಯಾಪಾರಿಗಳು ಕೂಡ ಇನ್ನೂ ಕನಿಷ್ಟ 20 ದಿನ ಕಾಯುವುದು ಅನಿವಾರ್ಯ!

ನಿಮಗೆ ಏನು ಅನ್ನಿಸ್ತು?
2 ವೋಟ್