ಮೆಟ್ರೊ ನಿಲ್ದಾಣಗಳಲ್ಲಿ ಇ-ಚಾರ್ಜಿಂಗ್ ಕೇಂದ್ರ: ಬಿಎಂಆರ್‌ಸಿಎಲ್‌ ಹೊಸ ಕ್ರಮ

  • ಒಂದು ಬಾರಿ ಚಾರ್ಜ್ ಮಾಡಿದರೆ 60ರಿಂದ 70 ಕಿ.ಮೀ. ಚಲಿಸಬಹುದು
  • ಆರು ಮೆಟ್ರೊ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗಿದೆ

ಇ-ವಾಹನ ಚಾಲಕರಿಗೆ ಅನುಕೂಲವಾಗುವಂತೆ, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ತನ್ನ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಹೋಂಡಾ ಇ-ಟೆಕ್ನಾಲಜಿಯ 'ಇ ಚಾರ್ಜಿಂಗ್' ಕೇಂದ್ರʼಗಳನ್ನು ಆರಂಭಿಸಲು ಮುಂದಾಗಿದೆ.

ವಾಯು ಮಾಲಿನ್ಯ ಮತ್ತು ಡಿಸೇಲ್ ದರ ಹೆಚ್ಚಿರುವ ಕಾರಣ ಇತ್ತೀಚಿನ ದಿನಗಳಲ್ಲಿ ವಾಹನ ಕೊಳ್ಳುವವರು ಇ-ವಾಹನಗಳ ಮೊರೆ ಹೋಗುತ್ತಿದ್ದಾರೆ.

ಈಗಾಗಲೇ ನಗರದ ಕೆಲವು ಪ್ರದೇಶಗಳಾದ ನ್ಯಾಷನಲ್ ಕಾಲೇಜು, ಕೆ.ಆರ್ ಮಾರುಕಟ್ಟೆ ಹಾಗೂ ಬನಶಂಕರಿ ಸೇರಿದಂತೆ 6 ಮೆಟ್ರೊ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ಚಾರ್ಜಿಂಗ್ ಮಾಡಿಕೊಳ್ಳಬಹುದಾದ ವ್ಯವಸ್ಥೆ ಕಲ್ಪಿಸಿದೆ. 

ಹೋಂಡಾ ಕಂಪನಿಯ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಬ್ಯಾಟರಿಯನ್ನು ಮಾತ್ರ ಇಲ್ಲಿ ಚಾರ್ಜ್ ಮಾಡಬಹುದಾಗಿದೆ. ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಖರೀದಿಸುವ ಸಂದರ್ಭದಲ್ಲಿ ನಾಲ್ಕು ಬ್ಯಾಟರಿಯನ್ನು ನೀಡಲಾಗುತ್ತದೆ. ಜೊತೆಗೆ ಒಂದು ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.

ಸ್ಮಾರ್ಟ್ ಕಾರ್ಡ್‌ನಲ್ಲಿ ಇ-ವಾಹನದ ಬ್ಯಾಟರಿ ಮತ್ತು ಅದರ ಸಂಪೂರ್ಣ ಮಾಹಿತಿ ಹೊಂದಿದ್ದು, ಕಾರ್ಡ್‌ನ್ನು ಚಾರ್ಜರ್ ಯಂತ್ರಕ್ಕೆ ತೋರಿಸಿದ ನಂತರ ಬ್ಯಾಟರಿ ಚಾರ್ಚ್ ಮಾಡಿಕೊಳ್ಳಬಹುದು. ಇದರಿಂದಾಗಿ, ಎಲೆಕ್ಟ್ರಿಕಲ್ ತ್ರಿಚಕ್ರವಾಹನ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಚಾರ್ಜಿಂಗ್ ಕೇಂದ್ರಗಳ ಬಳಿ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ.

ಈ ಸುದ್ದಿ ಓದಿದ್ದೀರಾ?:ಬೆಂಗಳೂರು ಸಂತೆ | 'ಖಾದಿ ಪ್ರದರ್ಶನ' ಕ್ಕೆ ಕರೆ ನೀಡಿದ ಬಿಎಮ್‌ಆರ್‌ಸಿಎಲ್‌

ಒಂದು ಬಾರಿ ಚಾರ್ಜ್ ಮಾಡಿದರೆ 60ರಿಂದ 70 ಕಿ.ಮೀ. ದೂರ ಸಂಚಾರ ಮಾಡಬಹುದು. ಹೋಂಡಾ ಬ್ಯಾಟರಿ ಆಧಾರಿತ ಆಟೋವನ್ನು ನಾಲ್ಕು ವರ್ಷ ಬಾಡಿಗೆ ರೂಪದಲ್ಲಿ ನೀಡಿ ನಂತರದ ದಿನಗಳಲ್ಲಿ ಮಾಲೀಕತ್ವ ಪಡೆಯಬಹುದಾಗಿದೆ.

ಮೆಟ್ರೊ ನಿಲ್ದಾಣದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪನೆ ಮಾಡುವುದರಿಂದ ಬಿಎಂಆರ್‌ಸಿಎಲ್‌ಗೂ ಆದಾಯ ಬರುವ ಕಾರಣ, ಈಗಾಗಲೇ ಕೆಲ ಮೆಟ್ರೊ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಈ ಯೋಜನೆ ಯಶಸ್ವಿಯಾದರೆ ಎಲ್ಲಾ ಮೆಟ್ರೊ ನಿಲ್ದಾಣದಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸುವ ಯೋಜನೆಯನ್ನು ಹೋಂಡಾ ಕಂಪನಿ ಹಮ್ಮಿಕೊಂಡಿದೆ.

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಸರ್ಕಾರ ಉತ್ತೇಜನ ನೀಡುವ ಉದ್ದೇಶದಿಂದ ಇಂಧನ ಇಲಾಖೆ ರಾಜ್ಯಾದ್ಯಂತ 1000ಕ್ಕೂ ಹೆಚ್ಚು ವಿದ್ಯುತ್ಚಾಲಿತ ವಾಹನಗಳ (ಇವಿ) ಚಾರ್ಜಿಂಗ್ ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಿದೆ. ಈ ಸಂಖ್ಯೆಯನ್ನು ಮೂರು ಸಾವಿರಕ್ಕೆ ಹೆಚ್ಚಳ ಮಾಡುವ ಗುರಿಯನ್ನು ಇಂಧನ ಇಲಾಖೆ ಹೊಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್