ಲೈಂಗಿಕ ವಿಕೃತಿ: ಪೊಲೀಸ್ ಇನ್ಸ್‌ಪೆಕ್ಟರ್‌ ವಿರುದ್ಧ ಪತ್ನಿ ಕೋರ್ಟಿಗೆ ಮೊರೆ, ನೋಟಿಸ್ ಜಾರಿ

Highcourt
  • ಪತ್ನಿ, ಪತ್ನಿಯ ತಂಗಿ, ವಯಸ್ಕ ಹೆಣ್ಣುಮಕ್ಕಳನ್ನೂ ಬಿಡದ ಪೊಲೀಸ್‌ ಇನ್ಸ್‌ಪೆಕ್ಟರ್
  • ಪತಿ ಶ್ರೀನಿವಾಸ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಪತ್ನಿ 

"‌ವಿಕೃತ ಕಾಮಕ್ಕೆ ಸ್ಪಂದಿಸುವಂತೆ ನನ್ನನ್ನು, ನನ್ನ ತಂಗಿಯನ್ನು ಹಾಗೂ ನನ್ನ ಮೊದಲ ಗಂಡನಿಗೆ ಜನಿಸಿದ ವಯಸ್ಕ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸುತ್ತಿರುವ, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿರುವ ನನ್ನ ಪತಿ ವಿರುದ್ಧ ಕ್ರಮಕ್ಕೆ ನಿರ್ದೇಶಿಸಬೇಕು" ಎಂದು ಮುಸ್ಲಿಂ ಮಹಿಳೆಯೊಬ್ಬರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಗೃಹ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು ನಗರದ 36 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಪ್ರತಿವಾದಿಗಳಾದ ಪೊಲೀಸ್ ಮಹಾ ನಿರ್ದೇಶಕರು, ನಗರ ಪೊಲೀಸ್ ಆಯುಕ್ತರು, ಸಿಬಿಐ, ಜೆ ಸಿ ನಗರ ಠಾಣಾ ಇನ್‌ಸ್ಪೆಕ್ಟರ್ ಹಾಗೂ ಟಿ ಆರ್ ಶ್ರೀನಿವಾಸ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಈ ಸುದ್ದಿ ಓದಿದ್ದೀರಾ? : ಬೆಳಗಾವಿ | ಕಬ್ಬು ನಿರ್ದೇಶನಾಲಯದ ಕಚೇರಿ ಸ್ಥಳಾಂತರದ ವಿರುದ್ಧ ಸಲ್ಲಿಸಿದ್ದ ಪಿಐಎಲ್‌ ವಜಾ

ಅರ್ಜಿದಾರ ಮಹಿಳೆಯ ಪರ ವಕೀಲರಾದ ನವೀದ್‌ ಅಹಮದ್‌ ಮತ್ತು ಎಚ್‌ ಸುನಿಲ್‌ ಕುಮಾರ್ ಜಂಟಿ ವಕಾಲತ್ತು ಸಲ್ಲಿಸಿದ್ದಾರೆ. ಆರೋಪಿ ಟಿ ಆರ್ ಶ್ರೀನಿವಾಸ್ ವಸಂತನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಏನಿದು ಪ್ರಕರಣ? 

‘ಕಷ್ಟದ ಸಮಯದಲ್ಲಿ ಪೊಲೀಸ್‌ ಠಾಣೆಗೆ ದೂರು ಕೊಡಲು ಹೋದಾಗ ಪರಿಚಯವಾಗಿದ್ದ ಶ್ರೀನಿವಾಸ್‌ ನನ್ನನ್ನು ಮದುವೆಯಾದರು. ಕೆಲ ವರ್ಷಗಳ ನಂತರ ಅಮಾನವೀಯವಾಗಿ ನಡೆಸಿಕೊಳ್ಳಲು ಆರಂಭಿಸಿದರು. ಈಗ ನನ್ನ ತಂಗಿಯ ಜತೆಗೂ ಅನೈತಿಕ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣರಾಗಿದ್ದಾರೆ. ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮೊದಲ ಗಂಡನಿಗೆ ಜನಿಸಿದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಮಹಿಳೆ ರಿಟ್‌ ಅರ್ಜಿಯಲ್ಲಿ ದೂರಿದ್ದಾರೆ.

‘ಈ ಸಂಬಂಧ 2022ರ ಜೂನ್ 1ರಂದು ಜೆ ಸಿ ನಗರ ಠಾಣೆ ಇನ್ಸ್‌ಪೆಕ್ಟರ್‌ಗೆ ದೂರು ನೀಡಿದರೂ ತನಿಖೆ ನಡೆಸಿಲ್ಲ. ಬದಲಾಗಿ ಶ್ರೀನಿವಾಸ್ ಜೊತೆ ಸೇರಿ ನನ್ನನ್ನೇ ಠಾಣೆಗೆ ಕರೆಯಿಸಿ ದೂರು ಹಿಂಪಡೆಯುವಂತೆ ಬೆದರಿಸಿದ್ದಾರೆ. ಹಣದ ಆಮಿಷವೊಡ್ಡಿ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ನನಗೆ ನ್ಯಾಯಬೇಕು, ಆದ್ದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರ್ದೇಶಿಸಬೇಕು‘ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್