ಹಿಂದಿ ಹೇರಿಕೆ ಸಾಂಸ್ಕೃತಿಕ ಭಯೋತ್ಪಾದನೆ: ಸಿದ್ದರಾಮಯ್ಯ

siddaramaiah
  • ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯ ಭಾಷೆ ದಮನ
  • ಅಮಿತ್‌ ಶಾ ಹಿಂದಿ ಗುಲಾಮಗಿರಿ‌ ಮಾಡುತ್ತಿರುವುದು ವಿಷಾದಕರ
  • ಹಿಂದಿಯಲ್ಲೇ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆ

ಹಿಂದಿ ಹೇರಿಕೆ ವಿರೋಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದು, ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬದಲು ಹಿಂದಿ ಬಳಸಬೇಕು ಎಂಬ ಅಮಿತ್ ಶಾ ಹೇಳಿಕೆಗೆ ತೀವ್ರ ಆಕ್ಷೇಪ ಎತ್ತಿದ್ದಾರೆ.

#IndiaAgainstHindiImposition (ಹಿಂದಿ ಹೇರಿಕೆಗೆ ವಿರುದ್ಧ ಭಾರತ) ಎಂದು ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ತಮ್ಮ ಸರಣಿ ಟ್ವೀಟ್‌ಗಳಲ್ಲಿ "ಸ್ವಾಭಿಮಾನಿ ಕನ್ನಡಿಗನಾಗಿ ಹಿಂದಿ ಹೇರಿಕೆಯನ್ನು ಖಂಡಿಸುತ್ತೇನೆ" ಎಂದು ಹೇಳಿದ್ದಾರೆ.

“ಹಿಂದಿ, ಇಂಗ್ಲೀಷ್, ತಮಿಳು, ಮಲೆಯಾಳಿ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ, ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿಯನ್ನು‌ ಬಳಸಬೇಕೆಂದು ಕೇಂದ್ರ ಗೃಹಸಚಿವ  ಅಮಿತ್‌ ಶಾ ಅವರು ಫರ್ಮಾನು ಹೊರಡಿಸಿರುವುದು ಅತ್ಯಂತ‌ ಆಕ್ಷೇಪಾರ್ಹ ನಡವಳಿಕೆಯಾಗಿದೆ. ಒಬ್ಬ ಸ್ವಾಭಿಮಾನಿ‌ ಕನ್ನಡಿಗನಾಗಿ‌ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ” ಎಂದು ತಮ್ಮ ಮೊದಲ ಟ್ವೀಟ್‌ನಲ್ಲಿ ಹೇಳಿದ್ದಾರೆ.

ನಂತರ, “ಹಿಂದಿ, ಇಂಗ್ಲಿಷ್, ತಮಿಳು, ಮಲೆಯಾಳಿ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ” ಎಂದು ಟ್ವೀಟ್‌ ಮಾಡಿದ್ದಾರೆ.

ನಮ್ಮ ಭಾಷಾ ನಿಲುವು ಮತ್ತು ದೇಶ-ರಾಜ್ಯಗಳ ಸಂಬಂಧವನ್ನು ರಾಷ್ಟ್ರಕವಿ‌ ಕುವೆಂಪು ಅವರು ದಶಕಗಳ ಹಿಂದೆಯೇ ಸ್ಪಷ್ಟವಾಗಿ ವ್ಯಾಖ್ಯಾನಿಸಿದ್ದಾರೆ. "ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ” ಎನ್ನುವ ಕವಿ ನುಡಿಯೇ ನಮ್ಮ ಭಾಷಾ ಸಿದ್ಧಾಂತ ಎಂದಿದ್ದಾರೆ.

“ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವ ರೀತಿಯಲ್ಲಿ ಬಿಂಬಿಸುವ ಜೊತೆಯಲ್ಲಿ, ರಾಜ್ಯ ಭಾಷೆಗಳನ್ನು ದಮನಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದನ್ನು ಹಿಂದಿಯೇತರ ಭಾಷೆಗಳನ್ನಾಡುವ ರಾಜ್ಯಗಳು ಕೂಡಿ ಪ್ರತಿಭಟಿಸುವ ಕಾಲ ಸನ್ನಿಹಿತವಾಗಿದೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ?: ಜೀವ ಬೆದರಿಕೆ| ಗೃಹ ಸಚಿವರೇ ಬೇಜವಾಬ್ದಾರಿ ಹೇಳಿಕೆ ನೀಡುವಾಗ ಬೆದರಿಕೆ ಸಹಜ ಎಂದ ಕುಂವೀ

“ಗುಜರಾತಿನಿಂದ ಬಂದಿರುವ ಅಮಿತ್‌ ಶಾ ಅವರ ಮಾತೃಭಾಷೆ ಗುಜರಾತಿ. ಅವರು ತಮ್ಮ ಮಾತೃಭಾಷೆಯನ್ನೇ ಕಡೆಗಣಿಸಿ ಹಿಂದಿಯ ಗುಲಾಮಗಿರಿ‌ ಮಾಡುತ್ತಿರುವುದು ವಿಷಾದನೀಯ. ಅಮಿತ್ ಶಾ ಅವರ ತವರು ಗುಜರಾತ್ ರಾಜ್ಯದ ಮಣ್ಣಿನ‌ಮಗನಾದ ಮಹಾತ್ಮ ಗಾಂಧೀಜಿ ಬಹುಸಂಸ್ಕೃತಿ, ಬಹುಭಾಷೆಗಳ ಪ್ರತಿಪಾದಕರಾಗಿದ್ದರು. ಆದರೆ ಅಮಿತ್‌ ಶಾ ಅವರಿಗೆ ಗಾಂಧೀಜಿಯವರಿಗಿಂತ ಏಕ ಸಂಸ್ಕೃತಿ, ಏಕಭಾಷೆಯ ಪ್ರತಿಪಾದಕರಾದ ಸೂಡೋ-ರಾಷ್ಟ್ರೀಯವಾದಿ ಸಾವರ್ಕರ್ ಪ್ರಿಯರಾಗಿರುವುದು ದುರಂತ” ಎಂದಿದ್ದಾರೆ.

“ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಒಡಿಸ್ಸಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಬಹುತೇಕ ರಾಜ್ಯಗಳು ಹಿಂದಿಯನ್ನು ಅಧಿಕೃತ ಸಂಪರ್ಕ ಭಾಷೆಯಾಗಿ ಬಳಸುವುದಿಲ್ಲ. ಅವುಗಳ ಜೊತೆಯಲ್ಲಿ ಹಿಂದಿಯಲ್ಲಿ ವ್ಯವಹರಿಸಬೇಕೆನ್ನುವುದು ಸಾಂಸ್ಕೃತಿಕ ಭಯೋತ್ಪಾದನೆಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಮಾತೃಭಾಷೆಗಳಿಗೆ ಮಾಡಿರುವ ಅವಮಾನವಾಗಿದೆ. ಅನಗತ್ಯ ಘರ್ಷಣೆಗೆ ಎಡೆಮಾಡಿಕೊಡುವ ಈ ಬೇಜವಾಬ್ದಾರಿ ಹೇಳಿಕೆಯನ್ನು ಅಮಿತ್ ಶಾ ಅವರು ತಕ್ಷಣ ಹಿಂತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್