ಬೆಂಗಳೂರು | ಕೆ ಆರ್ ಮಾರುಕಟ್ಟೆ ಸುರಂಗ ಮಾರ್ಗದಲ್ಲಿ ಮಹಿಳಾ ವ್ಯಾಪಾರಿಗಳಿಗೆ ಸ್ಥಳಾವಕಾಶ

  • ಸುರಂಗ ಮಾರ್ಗ ಅಭಿವೃದ್ಧಿಪಡಿಸಿದ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್
  • ಸುರಂಗ ಮಾರ್ಗ ಮರು-ಅಭಿವೃದ್ಧಿಪಡಿಸಲು ₹17 ಕೋಟಿ ಮೊತ್ತದ ಯೋಜನೆ

ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯಲ್ಲಿ (ಕೆ ಆರ್ ಮಾರ್ಕೆಟ್) ಹೊಸದಾಗಿ ನವೀಕರಿಸಲಾಗಿರುವ ಪಾದಚಾರಿ ಸುರಂಗ ಮಾರ್ಗವು ಕೆಲವೇ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಸಾಧ್ಯತೆ ಇದೆ. ಬೀದಿ ಬದಿ ವ್ಯಾಪಾರಿಗಳಿಗೆ, ವಿಶೇಷವಾಗಿ ಮಹಿಳಾ ವ್ಯಾಪಾರಿಗಳಿಗೆ ಈ ಸುರಂಗ ಮಾರ್ಗದಲ್ಲಿ ವ್ಯಾಪಾರಕ್ಕೆ ಸ್ಥಳಾವಕಾಶ ಮೀಸಲಿಡಲು ಚಿಂತನೆ ನಡೆಸಲಾಗುತ್ತಿದೆ. 

“ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಅಭಿವೃದ್ಧಿಪಡಿಸಿದ ಸುರಂಗ ಮಾರ್ಗವು ಕೆ ಆರ್ ಮಾರ್ಕೆಟ್ ಮೆಟ್ರೋ ನಿಲ್ದಾಣ ಮತ್ತು ಬಸ್ ಟರ್ಮಿನಲ್ ನಡುವೆ ಸುರಕ್ಷಿತ ಪಾದಚಾರಿ ಸಂಚಾರಕ್ಕೆ ಸಹಕರಿಸುತ್ತದೆ” ಎಂದು ಸ್ಮಾರ್ಟ್ ಸಿಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಸುರಂಗ ಮಾರ್ಗಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು, “ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ಬಳಿ ಸುರಂಗ ಮಾರ್ಗದ ಪ್ರವೇಶ ದ್ವಾರದಲ್ಲಿ ಎಸ್ಕಲೇಟರ್ ಒದಗಿಸಲಾಗುತ್ತಿದೆ. ಸುರಂಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜಿಸಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಪಾದಚಾರಿಗಳ ಸಂಚಾರಕ್ಕೆ ಅವಕಾಶ ನೀಡುತ್ತೇವೆ" ಎಂದು ಹೇಳಿದ್ದಾರೆ.

“ಕೆ ಆರ್ ಮಾರ್ಕೆಟ್‌ನಲ್ಲಿ ಪಾದಚಾರಿ ಸುರಂಗ ಮಾರ್ಗವು ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ, ಅದು ಕೊಳಕಿನಿಂದ ತುಂಬಿತ್ತು. ಅಲ್ಲದೆ, ಮಳೆಗಾಲದಲ್ಲಿ ನೀರು ತುಂಬಿ, ಕೊಚ್ಚೆಯಾಗಿ ಸಾರ್ವಜನಿಕರ ಉಪಯೋಗಕ್ಕೆ ಯೋಗ್ಯವಲ್ಲದ ರೀತಿಯಲ್ಲಿತ್ತು. ಇದೀಗ, ಸ್ಮಾರ್ಟ್ ಸಿಟಿ ಎಂಜಿನಿಯರ್‍‌ಗಳು ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ ಮತ್ತು ಸುರಂಗ ಮಾರ್ಗವು ಸಂಪೂರ್ಣವಾಗಿ ಸ್ವಚ್ಛವಾಗಿದೆ ಮತ್ತು ಬಳಕೆಗೆ ಯೋಗ್ಯವಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ; ಸಿಎಂ ಜೊತೆ ಚರ್ಚಿಸಿ ಮುಂದಿನ ಕ್ರಮ: ಸಚಿವ ಆರ್‌ ಅಶೋಕ್‌

"ಸುರಂಗ ಮಾರ್ಗವನ್ನು ಮರು-ಅಭಿವೃದ್ಧಿಪಡಿಸಲು ₹17 ಕೋಟಿ ಮೊತ್ತದ ಯೋಜನೆಯನ್ನು ರೂಪಿಸಲಾಗಿತ್ತು. ಕೆ ಆರ್ ಮಾರುಕಟ್ಟೆಯ ಸುತ್ತ ಪಾದಚಾರಿ ಸೌಲಭ್ಯ, ಬಸ್ ತಂಗುದಾಣ, ವಾಕ್‌ ವೇಗಳನ್ನು ಮರು ವಿನ್ಯಾಸಗೊಳಿಸುವುದು, ಜಂಕ್ಷನ್‌ಗಳ ರಿಪೇರಿ ಮಾಡುವುದನ್ನೂ ಯೋಜನೆ ಒಳಗೊಂಡಿದೆ" ಎಂದು ಅವರು ಹೇಳಿದ್ದಾರೆ.

“’ಸುರಂಗ ಮಾರ್ಗದ ಒಂದು ಭಾಗದಲ್ಲಿ ಮಹಿಳಾ ವ್ಯಾಪಾರಿಗಳು ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಇತ್ತೀಚೆಗೆ ನಡೆದ ಸಮನ್ವಯ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ಸೂಚನೆ ನೀಡಿದ್ದಾರೆ. ಆ ಕುರಿತು ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಮೂಲ: ಡೆಕ್ಕನ್ ಹೆರಾಲ್ಡ್
ನಿಮಗೆ ಏನು ಅನ್ನಿಸ್ತು?
0 ವೋಟ್