
- ನವೆಂಬರ್ 11ರಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ 'ಪ್ರಗತಿ ಪ್ರತಿಮೆ' ಉದ್ಘಾಟನೆ
- ಕೆಂಪೇಗೌಡರ ಪ್ರತಿಮೆ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರು
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಅನಾವರಣಕ್ಕೆ ಸಿದ್ದವಾಗುತ್ತಿರುವ ಕೆಂಪೇಗೌಡ ಥೀಮ್ ಪಾರ್ಕ್ ಮತ್ತು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಉದ್ಘಾಟನೆಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದಾರೆ.
“ಏಕತಾ ಪ್ರತಿಮೆ ಕಾರ್ಯಕ್ಕೆ ರೈತರಿಂದ ಕಬ್ಬಿಣ ಸಂಗ್ರಹಿಸಿದಂತೆ, ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಮಣ್ಣು ಸಂಗ್ರಹ ಮಾಡಲಾಗುತ್ತಿದೆ. ಇದನ್ನು ಕೆಂಪೇಗೌಡ ಸ್ಮಾರಕ ಸ್ಥಳದ ಕಾರ್ಯಕ್ಕೆ ಬಳಸಲಾಗುತ್ತದೆ” ಎಂದು ಸಚಿವ ಅಶ್ವತ್ಥನಾರಾಯಣ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನಾಡಿನ ಜನರ ಸಮಗ್ರತೆಯಲ್ಲಿ ಮೂಡಿ ಬರುತ್ತಿರುವ ಕಾರಣ ಕೆಂಪೇಗೌಡರ ಪ್ರತಿಮೆಗೆ ʼಪ್ರಗತಿ ಪ್ರತಿಮೆʼ ಎಂದು ನಾಮಕರಣ ಮಾಡಲಾಗುವುದು” ಎಂದು ಅವರು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆಂಪೇಗೌಡ ಕಂಚಿನ ಪ್ರತಿಮೆ ಸ್ಥಾಪನೆ | ಬೆಂಗಳೂರಿಗೆ ಬಂತು 4 ಸಾವಿರ ಕೆಜಿ ತೂಕದ ಖಡ್ಗ
ಮಣ್ಣು ಸಂಗ್ರಹಕ್ಕೆ ಶುಕ್ರವಾರ ಚಾಲನೆ
“ಕೆಂಪೇಗೌಡ ಥೀಮ್ ಪಾರ್ಕ್ಗೆ ಬಳಕೆ ಮಾಡಲು ಮಣ್ಣು ಸಂಗ್ರಹ ಕಾರ್ಯಕ್ಕೆ ಅಕ್ಟೋಬರ್ 21 ರಂದು ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮಣ್ಣು ಸಂಗ್ರಹಣಾ ಲಾರಿಗಳು ಇಲ್ಲಿಂದ ರಾಜ್ಯದಾದ್ಯಂತ ಸಂಚಾರ ಮಾಡಿ ನವೆಂಬರ್ 7ಕ್ಕೆ ಅಭಿಯಾನ ಮುಗಿಸಿಕೊಂಡು ವಾಪಸ್ ಆಗಲಿವೆ” ಎಂದಿದ್ದಾರೆ.
ನವೆಂಬರ್ 11ರಂದು 'ಪ್ರಗತಿ ಪ್ರತಿಮೆ' ಉದ್ಘಾಟನೆ ಕಾರ್ಯ ನೆರವೇರಲಿದೆ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು ಎಂದು ಅಶ್ವತ್ಥನಾರಾಯಣ ಕರೆ ನೀಡಿದರು.