ಬಿಬಿಎಂಪಿ: ಬಯೋಮೆಟ್ರಿಕ್ ಹಾಜರಾತಿ ಮರು ಜಾರಿಗೆ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

  • ಕೋವಿಡ್ ಕಾರಣದಿಂದಾಗಿ 2020ರಿಂದ ಸ್ಥಗಿತಗೊಂಡಿದ್ದ ವ್ಯವಸ್ಥೆ
  • ವಿಜಯ್ ಭಾಸ್ಕರ್ ಆಡಳಿತದ ಸಂದರ್ಭದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತವನ್ನು ಮತ್ತಷ್ಟು ಬಿಗಿ ಮಾಡುವ ಉದ್ದೇಶದಿಂದ ಜಾರಿಗೆ ತಂದಿದ್ದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಮರು ಜಾರಿ ಮಾಡುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಬಯೋಮೆಟ್ರಿಕ್ ಹಾಜರಾತಿಗೆ ಬೆರಳಚ್ಚು ನೀಡಿದರೆ ಕೋವಿಡ್ ಹರಡಬಹುದು ಎಂಬ ಕಾರಣಕ್ಕೆ 2020ರಿಂದಲೇ ರದ್ದು ಮಾಡಲಾಗಿತ್ತು. ಈಗ ಕೋವಿಡ್ ಸಂಖ್ಯೆ ಸಂಪೂರ್ಣ ಕಡಿಮೆ ಇದ್ದು ಪುನಃ ಬಯೋಮೆಟ್ರಿಕ್ ಹಾಜರಾತಿ ಜಾರಿಗೆ ತರುವಂತೆ ಪಾಲಿಕೆಯ ಆಡಳಿತ ವಿಭಾಗದ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸೂಚನೆ ನೀಡಲಾಗಿದೆ.

ಕೇಂದ್ರ ಕಚೇರಿ, ವಲಯ ಕಚೇರಿ, ವಿಭಾಗೀಯ ಹಾಗೂ ಉಪವಿಭಾಗೀಯ ಕಚೇರಿಗಳಲ್ಲಿ ಕಟ್ಟುನಿಟ್ಟಾಗಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮುಖ್ಯ ಆಯುಕ್ತರ ಸೂಚಿಸಿದ್ದು, ಪಾಲಿಕೆ ಆಡಳಿತ ವಿಭಾಗ ಈ ಸಂಬಂಧ ಸುತ್ತೋಲೆ ಹೊರಡಿಸಿದೆ.

ಹಿಂದೆ ವಿಜಯ್ ಭಾಸ್ಕರ್ ಆಡಳಿತಗಾರರಾಗಿದ್ದ ಸಂದರ್ಭದಲ್ಲಿ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ನೀಡುವ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಿದ್ದರು. ಬಳಿಕ ಪಾಲಿಕೆ ಕೇಂದ್ರ ಕಚೇರಿ, ವಲಯ ಕಚೇರಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿ ಮಾಡಿದ್ದರು.

ವಿಭಾಗೀಯ ಮತ್ತು ಉಪವಿಭಾಗೀಯ ಕಚೇರಿಗಳಲ್ಲಿ ಬಯೋಮೆಟ್ರಿಕ್ ಯಂತ್ರ ಅಳವಡಿಸಿದ್ದರೂ ಅವುಗಳನ್ನು ಜಾರಿಗೆ ತರಲು ಮತ್ತು ಅದನ್ನು ಅನುಸರಿಸಲು ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿತ್ತು. ಬಯೋಮೆಟ್ರಿಕ್ ಅಳವಡಿಸಿದ್ದ ಕಡೆ ಕಚೇರಿಗೆ ಸರಿಯಾದ ವೇಳೆಗೆ ಆಗಮಿಸಿ, ಕೆಲಸದ ಅವಧಿ ಮುಗಿದ ಬಳಿಕವೇ ಮನೆಗೆ ತೆರಳಬೇಕಿತ್ತು. ಇದರಿಂದ ಕಚೇರಿಗೆ ಬಂದು ಹೋಗುವ ಸಮಯ ದಾಖಲಾಗುತ್ತಿತ್ತು. ಹಾಗಾಗಿ ಬಯೋಮೆಟ್ರಿಕ್‌ಗೆ ಯಂತ್ರಕ್ಕೆ ಹಾನಿ ಮಾಡಿರುವ ಪ್ರಕರಣಗಳು ಅಲ್ಲಲ್ಲಿ ಕಂಡು ಬಂದಿದ್ದವು.

 ಈ ಸುದ್ದಿ ಓದಿದ್ದೀರಾ? 40% ಕಮಿಷನ್ | ಪ್ರಧಾನಿಗೆ ಪತ್ರ ಬರೆದಿದ್ದ ಗುತ್ತಿಗೆದಾರನ ವಿರುದ್ದ ಪ್ರಕರಣ ದಾಖಲು

ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಯಾದಾಗಿನಿಂದಲೂ ಬಹಳಷ್ಟು ಅಧಿಕಾರಿಗಳು, ನೌಕರರು ಅಸಮಧಾನ ಹೊರಹಾಕಿದ್ದರು. ಹಲವು ಬಾರಿ ಬಯೋಮೆಟ್ರಿಕ್ ಹಾಜರಾತಿ ಹಾಕಲು ಸಿಬ್ಬಂದಿ ಹಿಂದೇಟು ಹಾಕುತ್ತಿದ್ದರು. ಹಲವು ಬಾರಿ ಈ ವಿಚಾರದ ಬಗ್ಗೆ ಕೌನ್ಸಿಲ್ ಸಭೆಗಳಲ್ಲಿಯೂ ಚರ್ಚೆ ನಡೆದಿತ್ತು. ಬಯೋಮೆಟ್ರಿಕ್ ಯಂತ್ರಗಳನ್ನು ಪೂರೈಸಿ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆ ಜೊತೆಗಿನ ವಾರ್ಷಿಕ ಒಪ್ಪಂದವನ್ನು ಸರಿಯಾದ ಅವಧಿಗೆ ನವೀಕರಣ ಮಾಡದೆ, ಹಣ ಪಾವತಿಸದೇ ಇದ್ದ ಕಾರಣಕ್ಕೆ ಈ ವ್ಯವಸ್ಥೆಯೇ ನಿಷ್ಕ್ರಿಯವಾಯಿತು.

“ಕೋವಿಡ್ ಮೊದಲು ಮತ್ತು ಎರಡನೇ ಅಲೆಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿದ್ದವು. ಬೆಳಚ್ಚು ನೀಡುವುದರಿಂದ ಒಬ್ಬರಿಂದೊಬ್ಬರಿಗೆ ಕೋವಿಡ್ ಹರಡಬಹುದು ಎಂಬ ಕಾರಣಕ್ಕೆ ಬಯೋಮೆಟ್ರಿಕ್ ಹಾಜರಾತಿಯನ್ನು ಸ್ಥಗಿತ ಮಾಡಲಾಗಿತ್ತು. ಪುನಃ ಜಾರಿಗೊಳಿಸುವಂತೆ ನೂತನ ಮುಖ್ಯು ಆಯುಕ್ತರು ಸೂಚನೆ ಮೇರೆಗೆ ಕೇಂದ್ರ ಕಚೇರಿ, 8 ವಲಯ ಕಚೇರಿ, ವಿಭಾಗ ಹಾಗೂ ಉಪವಿಭಾಗೀಯ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರುವಂತೆ ಸುತ್ತೋಲೆ ಹೊರಡಿಸಲಾಗಿದೆ. ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ”
- ಯೋಗೇಶ್, ಉಪ ಆಯುಕ್ತ, ಆಡಳಿತ ವಿಭಾಗ, ಬಿಬಿಎಂಪಿ.

2019ರಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪ್ರಯೋಗಿಕವಾಗಿ ಫೇಷಿಯಲ್ ರೆಕಗ್ನಿಷನ್ ಸಿಸ್ಟಮ್ (ಮುಖ ಗುರುತಿಸುವ ವ್ಯವಸ್ಥೆ) ಆಧರಿಸಿ ಹಾಜರಾತಿ ಯಂತ್ರವನ್ನು ಅಳವಡಿಸಲಾಗಿತ್ತು. ಅದಕ್ಕೂ ಸೂಕ್ತ ರೀತಿಯ ಸ್ಪಂದನೆ ಸಿಗದೆ ಯೋಜನೆ ವೈಫಲ್ಯ ಕಂಡಿತ್ತು.

ಹೊಸದಾಗಿ ಮುಖ್ಯ ಆಯುಕ್ತರಾಗಿ ಬಂದಿರುವ ತುಷಾರ್ ಗಿರಿನಾಥ್, ಪಾಲಿಕೆ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ, ಬಿಗಿಕ್ರಮವನ್ನು ಕೈಗೊಂಡಿರುವ ಹಿನ್ನೆಲೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಲು ಮುಂದಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180