ಬೆಂಗಳೂರು | ಶಿವರಾಮ ಕಾರಂತ ಬಡಾವಣೆಯ 355 ಕಟ್ಟಡಗಳನ್ನು ಸಕ್ರಮಗೊಳಿಸಲು ಬಿಡಿಎಗೆ ಸುಪ್ರೀಂ ಸೂಚನೆ

  • ಭೂಸ್ವಾಧೀನ ಪ್ರಕ್ರಿಯೆಯಿಂದ ನಿರ್ದಿಷ್ಟ ಜಾಗ ಕೈಬಿಡಬಹುದು
  • 2018ರಲ್ಲಿ ನೀಡಿದ ಆದೇಶ ಪಾಲನಾ ವರದಿ ಪರಿಶೀಲನೆ

ಶ್ರೀರಾಮಚಂದ್ರ ಮಿಷನ್ ಆಶ್ರಮದ ವಲಯ ಕೇಂದ್ರದ ಐದು ಎಕರೆ ಜಾಗವನ್ನು ಬೆಂಗಳೂರಿನ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂಸ್ವಾಧೀನ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಯ 18ನೇ ವರದಿಯಲ್ಲಿ ಉಲ್ಲೇಖಿಸಲಾಗಿರುವ 355 ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಬಿಡಿಎಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಶ್ರೀರಾಮಚಂದ್ರ ಮಿಷನ್ ಆಶ್ರಮದ ವಲಯ ಕೇಂದ್ರದಲ್ಲಿ ಧ್ಯಾನ, ವಿಜ್ಞಾನ ಶಿಬಿರಗಳು, ಆರೋಗ್ಯ ಶಿಬಿರಗಳು ಹಾಗೂ ವಿಚಾರ ಸಂಕಿರಣಗಳು, ಮಕ್ಕಳ ಕಾರ್ಯಕ್ರಮ, ಯೋಗ ಶಿಬಿರಗಳು, ವೈದ್ಯಕೀಯ ಶಿಬಿರಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹಾಗೂ 2.5 ಲಕ್ಷ  ಗಿಡಗಳನ್ನು ವಿತರಿಸಲಾಗಿದೆ ಎಂದು ಕೇಂದ್ರದ ಪ್ರಮುಖರು ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಗೆ ಮಾಹಿತಿ ನೀಡಿದ್ದರು.

ಭೂಸ್ವಾಧೀನ ಪ್ರಕ್ರಿಯೆಯಿಂದ ಈ ಕೇಂದ್ರದ ಜಾಗವನ್ನು ಕೈಬಿಡಬಹುದು ಎಂದು ಸಮಿತಿ ತಿಳಿಸಿತ್ತು. ಈ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.

2008ರಲ್ಲಿ 650 ಎಕರೆ ಜಾಗದಲ್ಲಿ ಡಾ. ಶಿವರಾಮ ಕಾರಂತ ಬಡಾವಣೆಯನ್ನು ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಸುಪ್ರೀಂ ಕೋರ್ಟ್ 2018ರ ಆಗಸ್ಟ್ 3ರಂದು ಉದ್ದೇಶಿತ ಬಡಾವಣೆ ನಿರ್ಮಾಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಒಂದಿಂಚೂ ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬಾರದು ಎಂದು ಬಿಡಿಎಗೆ ನಿರ್ದೇಶನ ನೀಡಿತ್ತು.

ಬಡಾವಣೆ ನಿರ್ಮಾಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಹಲವಾರು ಮಂದಿ ಮನೆಗಳನ್ನು ಕಟ್ಟಿಕೊಂಡಿದ್ದರು. 2018ರಲ್ಲಿ ನೀಡಿದ ಆದೇಶದ ಪಾಲನಾ ವರದಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ; ಜನರ ಪರದಾಟ

ನಿವೃತ್ತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಸಮಿತಿಯ 18ನೇ ವರದಿಯನ್ನು ವಕೀಲ ಸಂಜಯ್ ಎಂ ನುಲಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ನ್ಯಾಯ ಪೀಠ ವರದಿ ಪರಿಶೀಲಿಸಿ, ‘ಯಾವ ಉದ್ದೇಶಕ್ಕಾಗಿ ಭೂಮಿಯನ್ನು ಬಳಸಲಾಗುತ್ತಿದೆಯೋ ಆ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಕಟ್ಟಡಗಳ ನವೀಕರಣ ಹಾಗೂ ಹೊಸ ಕಟ್ಟಡಗಳ ನಿರ್ಮಾಣ ಬಿಡಿಎ ಅನುಮೋದನೆ ಪಡೆದ ಬಳಿಕವಷ್ಟೇ ಮಾಡಬಹುದು ಎಂದು ಸೂಚಿಸಿದೆ.

355 ಕಟ್ಟಡಗಳ ಜಾಗವನ್ನು ಷರತ್ತಿಗೆ ಒಳಪಟ್ಟು ಸ್ವಾಧೀನಪಡಿಸಿಕೊಳ್ಳದಂತೆ ಬಿಡಿಎಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಶುಲ್ಕ ವಿಧಿಸಬಹುದು ಎಂದೂ ನ್ಯಾಯಪೀಠ ಹೇಳಿದೆ.

ದಾಖಲೆ ಉದ್ದೇಶಕ್ಕಾಗಿ ವರದಿ ಪ್ರತಿಯನ್ನು ಬಿಡಿಎ ಆಯುಕ್ತರಿಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಸಮಿತಿಗೆ ಸೂಚಿಸಿದೆ.

ಸಂಬಂಧಪಟ್ಟ ಅರ್ಜಿದಾರರಿಗೆ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯ ಮೇಲ್ವಿಚಾರಣೆಯಲ್ಲಿ ಬಿಡಿಎ ಆಯುಕ್ತರು ಪಾರದರ್ಶಕ ರೀತಿಯಲ್ಲಿ ನಾಲ್ಕು ವಾರದೊಳಗೆ ಸಕ್ರಮ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದೂ ನ್ಯಾಯಾಲಯ ನಿರ್ದೇಶನ ನೀಡಿದೆ.

ಬಡಾವಣೆಯೊಳಗೆ ಸಂಪರ್ಕಕ್ಕಾಗಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಬಡಾವಣೆಯೊಳಗಿನ ಅಧಿಸೂಚಿತವಲ್ಲದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್