ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ಕ್ಯಾನ್ಸರ್‌ಗಿಂತಲೂ ಗಂಭೀರ: ನ್ಯಾಯಮೂರ್ತಿ ಕೆ ನಟರಾಜನ್

  • ಅಧಿಕೃತ ಸರ್ಕಾರಿ ಕೆಲಸಗಳಿಗೆ ಲಂಚ ಪಡೆಯುವುದು ಅಪರಾಧ
  • ಜೆ ಮಂಜುನಾಥ್ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಮೂರ್ತಿ ಕೆ ನಟರಾಜನ್ 

ಅಧಿಕೃತ ಕೆಲಸಕ್ಕೆ ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ನಿಯಮದಂತಾಗಿದೆ. ಇದು ಕ್ಯಾನ್ಸರ್‌ ರೋಗಕ್ಕಿಂತಲೂ ಗಂಭೀರ ಎಂದು ರಾಜ್ಯ ಉಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. 

ಲಂಚ ಸ್ವೀಕಾರದ ಆರೋಪದ ಮೇಲೆ ಜೈಲು ಸೇರಿರುವ ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್ ಅವರ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಅಭಿಪ್ರಾಯ ಪ್ರಕಟಿಸಿದೆ.

ಮಂಜುನಾಥ್‌ ಪ್ರಕರಣದ ಬಗ್ಗೆ ದಾಖಲಿಸಲಾಗಿರುವ ಲಿಖಿತ ಆದೇಶದಲ್ಲಿ ಈ ವಿಚಾರ ಉಲ್ಲೇಖವಾಗಿದೆ. 
"ಕಂದಾಯ ಇಲಾಖೆಯೊಳಗೆ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಮೇಲಿನವರಿಂದ ಹಿಡಿದು ಕೆಳಮಟ್ಟದವರೆಗೆ ಲಂಚ ನೀಡದೆ ಕೆಲಸವಾಗುವುದಿಲ್ಲ. ಹಣ ಕೊಡದಿದ್ದರೆ ಯಾವುದೇ ಕಡತವು ಸಾಮಾನ್ಯವಾಗಿ ವರ್ಗಾವಣೆಯಾಗುವುದಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ಅಧಿಕೃತ ಕರ್ತವ್ಯದಂತಾಗಿದೆ. ಇದು ಕ್ಯಾನ್ಸರ್‌ಗಿಂತ ಅತ್ಯಂತ ಗಂಭೀರವಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ತಿಳಿದಿದ್ದರೂ ಅರ್ಜಿದಾರರಾದ ಮಂಜುನಾಥ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವು ಅವರನ್ನು ಬೇರೆ ಇಲಾಖೆಗೆ ವರ್ಗಾಯಿಸಿದೆ" ಎಂದು ಪೀಠವು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮುಂಜುನಾಥ್‌ ವಿಚಾರದಲ್ಲಿ ಕೆಲವು ಗೊಂದಲಗಳಿವೆ. ಸಾಕ್ಷಿಗಳ ಮೇಲೆ ಅವರು ಪರಿಣಾಮ ಬೀರುವ ಸಾಧ್ಯತೆ ಇದೆ. ಜೊತೆಗೆ ತನಿಖೆಯೂ ಇನ್ನೂ ಬಾಕಿ ಇದೆ. ಹಾಗಾಗಿ ಅವರಿಗೆ ಜಾಮೀನು ಮಂಜೂರು ಮಾಡದಿರಲು ಪೀಠ ನಿರ್ಧರಿಸಿದ್ದಾಗಿ ತಿಳಿಸಿದೆ. 

ಮಂಜುನಾಥ್ ಮತ್ತು ಅಜಂ ಪಾಷಾ ಅವರ ನಡುವಿನ ಸಂಭಾಷಣೆಯನ್ನು ಪೊಲೀಸರು ಪಂಚನಾಮೆಯಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಅಜಂ ಪಾಷಾ ಮತ್ತು ಆರೋಪಿಗಳು ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ ಎಂಬುದು ಬಹಿರಂಗವಾಗಿದೆ. ಅಲ್ಲಿ ಕೇಳಿರುವಷ್ಟು ಹಣಕ್ಕೆ ಉಪತಹಶೀಲ್ದಾರ್ ಪಿ ಎಸ್ ಮಹೇಶ್ ಬೇಡಿಕೆ ಇಟ್ಟಿದ್ದಾರೆ. ಆ ಬಳಿಕ ಉಳಿದ ಪ್ರಕ್ರಿಯೆ ನಡೆದಿದೆ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ನೀಡಿರುವ ಡಿವಿಡಿ ದಾಖಲೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವುದಾಗಿ ಅವರು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಖಾಸಗಿ ವಿವಿಗೆ ₹50 ಕೋಟಿಗೆ 116 ಎಕರೆ ಭೂಮಿ ಮಂಜೂರು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಆಜಂ ಪಾಷಾ ಪರ ಆದೇಶ ನೀಡಲು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಉಪ ತಹಶೀಲ್ದಾರ್ ಪಿ ಎಸ್ ಮಹೇಶ್ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚಂದ್ರ ಅವರನ್ನು ಎಸಿಬಿ ದಾಳಿ ನೆಡೆಸಿ ಮೇ 21ರಂದು ಬಂಧಿಸಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಎಸಿಬಿ ಪೊಲೀಸರು ನಿಗದಿತ 60 ದಿನಗಳೋಳಗಾಗಿ ಆರೋಪ ಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಮಹೇಶ್‌ಗೆ ವಿಚಾರಣಾಧೀನ ನ್ಯಾಯಾಲಯದಿಂದ ಡೀಫಾಲ್ಟ್ ಜಾಮೀನು ಸಿಕ್ಕಿದೆ. ಚಂದ್ರುವಿಗೆ ಕೂಡ ಈ ಪ್ರಕರಣದಲ್ಲಿ ಜಾಮೀನು ದೊರಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್