ಬೆಂಗಳೂರು | ಸ್ವಾತಂತ್ರ್ಯ ದಿನಾಚರಣೆ: ಈದ್ಗಾ ಮೈದಾನದಲ್ಲಿ ಪೊಲೀಸರಿಂದ ಬಿಗಿ ಭದ್ರತೆ

  • 600ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ
  • ಧ್ವಜಾರೋಹಣಕ್ಕೆ ಆಹ್ವಾನ ನೀಡಿದವರಿಗೆ ಮಾತ್ರ ಮೈದಾನಕ್ಕೆ ಪ್ರವೇಶ

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಧ್ವಜಾರೋಹಣಕ್ಕೆ ಕಂದಾಯ ಇಲಾಖೆ ಸಿದ್ಧತೆ ನಡೆಸಿದ್ದು, ಮೈದಾನದ ಸುತ್ತಮುತ್ತಲ ಪ್ರದೇಶದಲ್ಲಿ ಪೊಲೀಸರು ಆಗಸ್ಟ್‌ 12 ರಿಂದ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ. 

ಕಳೆದ ಕೆಲ ತಿಂಗಳುಗಳಿಂದ ಈದ್ಗಾ ಮೈದಾನದ ಬಳಕೆ ವಿವಾದವೂ ಹೆಚ್ಚಾಗಿದ್ದು, ಪರ-ವಿರೋಧಕ್ಕೆ ಅಂತ್ಯ ಹಾಡಲು ಪೊಲೀಸರು ಈಗಾಗಲೇ ಹಿಂದು-ಮುಸ್ಲಿಂ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದ್ದಾರೆ. ಇದಾದ ನಂತರವು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರಬಹುದು ಎಂದು ಗುಪ್ತಚರ ಅಧಿಕಾರಿಗಳು ಎಚ್ಚರವಹಿಸಿದ್ದಾರೆ.

ಸಿಎಆರ್, ಕೆಎಸ್ಆರ್‍‌ಪಿ ಹಾಗೂ ಸ್ಥಳೀಯ ಪೊಲೀಸರನ್ನೊಳಗೊಂಡ ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಟಿಪ್ಪು ನಗರ, ವಾಲ್ಮಿಕಿನಗರ, ಚಾಮರಾಜಪೇಟೆ ಸೇರಿದಂತೆ ವಿವಿಧೆಡೆ ಪಥ ಸಂಚಲನ ನಡೆಸಿದ್ದಾರೆ.

“ಚಾಮರಾಜಪೇಟೆಯನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದ್ದು, ಇದೇ ಕಾರಣಕ್ಕೆ ಮೈದಾನ ಹಾಗೂ ಸುತ್ತಮುತ್ತ 600ಕ್ಕೂ ಹೆಚ್ಚು  ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ" ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸಂದೀಪ್‌ ಪಾಟೀಲ್ ವಿವರಿಸಿದರು.

"ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯೋತ್ಸವನ್ನು ಅದ್ಧೂರಿಯಾಗಿ ನಡೆಸಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಇಲ್ಲಿ ಭದ್ರತೆ ಕಲ್ಪಿಸುವುದು ದೊಡ್ಡ ಸವಾಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಧ್ವಜಾರೋಹಣ ನೆರವೇರಿಸಲು ಕ್ರಮ ಕೈಗೊಳ್ಳಲಾಗಿದ್ದು, ಆಗಸ್ಟ್‌ 15 ರಂದು ಕಾರ್ಯಕ್ರಮಕ್ಕೆ ಆಗಮಿಸಲು ಆಹ್ವಾನ ಇದ್ದವರಿಗೆ ಮಾತ್ರ ಮೈದಾನದಲ್ಲಿ ಪ್ರವೇಶವಿರಲಿದೆ” ಎಂದು ಸಂದೀಪ್ ಪಾಟೀಲ ಹೇಳಿದರು. 

ಈ ಸುದ್ದಿ ಓದಿದ್ದೀರಾ?:ಅಮೃತ ಮಹೋತ್ಸವ| ಬೆಂಗಳೂರಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು: ತುಷಾರ್ ಗಿರಿನಾಥ್

ಸರ್ಕಾರ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದು, ಧ್ವಜಾರೋಹಣಕ್ಕೆ ಅಧಿಕೃತ ಆದೇಶ ಹೊರಡಿಸಿದೆ. ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಶಿವಣ್ಣ ಧ್ವಜಾರೋಹಣ ನೆರವೇರಿಸಲಿದ್ದು, ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಪ್ರಪ್ರಥಮ ಬಾರಿಗೆ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜರೋಹಣ ನಡೆಯುವುದು ಬಾರಿ ಕುತೂಹಲ ಕೆರಳಿಸಿದೆ. ಮೈದಾನದಲ್ಲಿ ಧ್ವಜಾರೋಹಣ ಮಾಡಲು ಸರ್ಕಾರವೇ ಎಲ್ಲಾ ವ್ಯವಸ್ಥೆ ಮಾಡಿರುವುದರಿಂದ ಯಾವುದೇ ರೀತಿಯಲ್ಲೂ ಭದ್ರತೆಗೆ ಲೋಪವಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ. 

ಶಾಲಾ ಮಕ್ಕಳು, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿನಿಧಿಗಳು ಹಾಗೂ ಪೊಲೀಸರು ಮೈದಾನದಲ್ಲಿ ಪಥಸಂಚಲನದ ತಾಲೀಮು ನಡೆಸಿದರು. ಮೈದಾನದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೊಲೀಸರು ಸನ್ನದ್ಧರಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್