ಈ ದಿನ ವಿಶೇಷ| ಅದಲು ಬದಲು ಸೂತ್ರದ ಮೂಲಕ ವಾರ್ಡ್ ಮೀಸಲಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ ತಂತ್ರ

  • ಬಿಜೆಪಿ ಮೀಸಲು ಲೆಕ್ಕಾಚಾರಕ್ಕೆ ಪತ್ರಿತಂತ್ರ ರೂಪಿಸಿದ ಕಾಂಗ್ರೆಸ್
  • ರಾಜಕೀಯ ಅಸ್ತಿತ್ವಕ್ಕಾಗಿ ಹೊಂದಾಣಿಕೆ ರಾಜಕಾರಣದ ಸೂತ್ರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಮೀಸಲಾತಿ ಬದಲಾವಣೆ ಮಾಡುವ ಮೂಲಕ ತಮ್ಮ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಅಲ್ಲದೆ, ಬಿಜೆಪಿಗೆ ತಿರುಗೇಟು ನೀಡಲು ರಾಜಕೀಯ ತಂತ್ರ ರೂಪಿಸುತ್ತಿದೆ. 

ನ್ಯಾಯ ಪಡೆಯಲು ಕೋರ್ಟ್ ಮೆಟ್ಟಿಲೇರಲು ಮುಂದಾಗಿರುವ ಕೈ ನಾಯಕರು, ಅದಕ್ಕೂ ಮುನ್ನವೇ ಚುನಾವಣೆ ನಡೆದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಅನುಕೂಲ ಸಿಂಧು ರಾಜಕಾರಣದ ಮೊರೆ ಹೋಗುತ್ತಿರುವ ಕಾಂಗ್ರೆಸ್ ಮುಖಂಡರು, ತ್ರಿಸೂತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಅದರ ಪ್ರಕಾರ, ಮೀಸಲು ಹೊರತಾಗಿ ತಮಗೆ ಅನುಕೂಲವಾಗುವ ಅಕ್ಕಪಕ್ಕದ ಕ್ಷೇತ್ರಗಳಿಗೆ ವಲಸೆ ಹೋಗುವುದು ಮೊದಲ ಭಾಗವಾದರೆ, ಮಹಿಳಾ ಮೀಸಲು ಕ್ಷೇತ್ರಗಳಿಗೆ ಪತ್ನಿ ಅಥವಾ ಕುಟುಂಬದ ಇತರ ಮಹಿಳಾ ಸದಸ್ಯರನ್ನು ಕಣಕ್ಕಿಳಿಸುವುದು, ಅಂತಿಮ ಮತ್ತು ಕಡೆ ಸೂತ್ರದಂತೆ ಮೇಲಿನವು ಎರಡೂ ಸಾಧ್ಯವಾಗದಿದ್ದಲ್ಲಿ, ಮೀಸಲು ನಿಯಮಕ್ಕೆ ಹೊಂದಿಕೆಯಾಗುವ ಆಪ್ತರು ಅಥವಾ ಬೆಂಬಲಿಗರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜ್ಯಾದಂತ ಮುಂದುವರೆದ ಮಳೆ: ಕೆಲವು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಇದಕ್ಕಾಗಿ ವಿಶ್ವಾಸದ ಲೆಕ್ಕಾಚಾರದ ಮೇಲೆ ಪಕ್ಷದ ಪರಿಧಿಯ ಹೊರತಾಗಿ ಕೆಲ ರಾಜಕೀಯ ಮುಖಂಡರ ಜೊತೆ ಕಾಂಗ್ರೆಸ್ ಮುಖಂಡರು ಸಮಾಲೋಚನೆ ನಡೆಸಿಕೊಂಡಿದ್ದಾರೆ.

ಈದಿನ.ಕಾಮ್ ಜೊತೆ ಮಾತನಾಡಿದ ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ ಮುಖಂಡರೋರ್ವರು, "ರಾಜಕೀಯದಲ್ಲಿ ಬದಲಾವಣೆ ಸಹಜ. ಆದರೆ, ರಾಜಕೀಯ ಜೀವನವನ್ನೇ ಮುಗಿಸುವ ಹಂತದ ರಾಜಕೀಯ ದಾಳ ಪ್ರಯೋಗಗಳಾದಾಗ ನಾವೂ ಅದಕ್ಕೆ ಪ್ರತಿತಂತ್ರ ರೂಪಿಸಲೇ ಬೇಕಾಗುತ್ತದೆ. ಏಕೆಂದರೆ, ನಾವೂ ರಾಜಕೀಯ ಮಾಡಲೆಂದೇ ಬಂದವರಲ್ಲವೇ..! ನಮ್ಮ ಉಳಿವಿಗಾಗಿ ಈ ತರಹದ ಪ್ರಯೋಗಗಳು ಅನಿವಾರ್ಯ" ಎಂದಿದ್ದಾರೆ.

ಬಿಬಿಎಂಪಿ ಗೆಲುವಿನ ಸಲುವಾಗಿ ಬಿಜೆಪಿ ಚಾಪೆ‌ ಕೆಳಗೆ ನುಸುಳುವ ತಂತ್ರದ ಮೊರೆ ಹೋದರೆ, ಇತ್ತ ಕಾಂಗ್ರೆಸ್ ಅದಲು ಬದಲು ಸೂತ್ರ ಪ್ರಯೋಗಕ್ಕೆ ಮುಂದಾಗಿ ನೆಲದೊಳಗೆ ನುಸುಳಿ ಅದಕ್ಕೆ ಪ್ರತಿ ಏಟು ಕೊಡಲು ಹೊರಟಿದೆ. ಗೆಲುವಿನ ಲೆಕ್ಕಾಚಾರಕ್ಕಾಗಿ ಎರಡೂ ಪಕ್ಷಗಳು ಮಾಡ ಹೊರಟಿರುವ ಪ್ರಯೋಗಕ್ಕೆ ಬಿಬಿಎಂಪಿ ಮತದಾರರೇ ಸೂಕ್ತ ಉತ್ತರ ಕೊಡಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್