ಧಾರಾಕಾರ ಮಳೆ| ನಲುಗಿದ ರಾಜಧಾನಿಯ ನಾಗರಿಕರು

rain in banglore
  • ಐದು ದಿನಗಳವರೆಗೂ ಮಳೆಯಾಗುವ ಸಾಧ್ಯತೆ  
  • ಬೆಂಗಳೂರಿನ 201 ಕೆರೆಗಳು ಸಂಪೂರ್ಣ ಭರ್ತಿ 

ಕಳೆದ ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಲೇ ಇದೆ. ಇನ್ನೂ ಐದು ದಿನಗಳೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೆಲವೊಂದು ಕರಾವಳಿ ಪ್ರದೇಶಗಳಿಗೆ ಹವಮಾನ ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ.

ನಗರದಲ್ಲಿ ಇಂದು ಶುಕ್ರವಾರ (ಆಗಸ್ಟ್‌ 5) ಸಹ ಮೋಡ ಕವಿದ ವಾತಾವರಣ ಆವರಿಸಿದ್ದು, ಮಳೆಯಾಗುವ ಸಾಧ್ಯತೆಗಳ ಸೂಚನೆ ನೀಡಿದೆ. ನಿರಂತರ ಮಳೆಯಿಂದಾಗಿ, ನಗರದ ಬಹುತೇಕ ಪ್ರದೇಶಗಳ ಕಾಲುವೆ ಹಾಗೂ ರಸ್ತೆಗಳೆಗೆ ನೀರು ಹರಿದು, ರಸ್ತೆಗಳು ಜಲಾವೃತಗೊಂಡಿವೆ.

ಯಶವಂತಪುರ, ಮಲ್ಲೇಶ್ವರ, ಹೆಬ್ಬಾಳ, ಆರ್.ಟಿ.ನಗರ, ಸಂಜಯನಗರ, ವಸಂತನಗರ, ಶಿವಾಜಿ ನಗರ, ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ.ರಸ್ತೆ, ಅಶೋಕನಗರ, ಎಚ್.ಎ.ಎಲ್‌, ವಿವೇಕನಗರ, ಕೋರಮಂಗಲ, ಮಡಿವಾಳ, ಎಚ್.ಎಸ್‌.ಆರ್. ಲೇಔಟ್, ಗಾಂಧಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಮಲ್ಲೇಶ್ವರ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಗುರುವಾರ (ಆಗಸ್ಟ್‌ 4)  ಭಾರಿ ಮಳೆ ಸುರಿದಿದೆ. ಮೈಸೂರು ರಸ್ತೆ, ತುಮಕೂರು ರಸ್ತೆ, ಓಕಳಿಪುರ, ಮೆಜೆಸ್ಟಿಕ್ ಹಾಗೂ ಇತರೆ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಾಗಿದ್ದವು.

ರಾಜಧಾನಿಯ ಕೆಲವು ಪ್ರಮುಖ ಪ್ರದೇಶಗಳಾದ ಕೆಂಗೇರಿ, ರಾಜರಾಜೇಶ್ವರಿನಗರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಗಿರಿನಗರ, ಬಸವನಗುಡಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಹನುಮಂತನಗರ, ಜಯನಗರ, ಜೆ.ಪಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯಾಯಿತು.

ಭಾರಿ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳಲ್ಲಿ  ನೀರು ನಿಂತುಕೊಂಡಿತ್ತು. ಅದೇ ನೀರಿನಲ್ಲಿ  ವಾಹನಗಳು ಸಂಚರಿಸಿದವು. ನಗರದಲ್ಲಿ ಸುರಿಯುತ್ತಿರುವ ಮಳೆ ಸಂಚಾರ ದಟ್ಟಣೆಗೆ ಸಹ ಕಾರಣವಾಗಿತ್ತು. ನಿರಂತರ ಮಳೆ ಮತ್ತು ಹದಗೆಟ್ಟ ರಸ್ತೆಗಳಿಂದಾಗಿ  ವಾಹನಗಳು ಮಂದಗತಿಯಲ್ಲಿ ಚಲಿಸಿದ್ದರಿಂದ, ಮನೆಗೆ ತೆರಳುವ ಸಮಯದಲ್ಲಿ ಸಾರ್ವಜನಿಕರಿಗೆ ವಿಳಂಬವಾಗಿತ್ತು. ಕೆಲ ವಾಹನಗಳು ಕೆಟ್ಟು ನಿಂತಿದ್ದು, ಜನರು ಕೊಳಚೆ ನೀರಿನಲ್ಲೇ ವಾಹನ ತಳ್ಳುತ್ತಾ ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.  

ಗುರುವಾರ ಸಂಜೆಯವರೆಗೂ ಮಳೆ ನಿಲ್ಲದೇ ಮೋಡ ಕವಿದ ವಾತಾವರಣವಿದ್ದುದರಿಂದ ಜನರು ರೇನ್‌ ಕೋಟ್‌, ಜರ್ಕಿನ್, ಸ್ವೆಟರ್‍‌, ಕಿವಿಗೆ ಹತ್ತಿ, ಮಫ್ಲರ್, ಕೊಡೆ ಇವುಗಳ ಮೊರೆ ಹೋಗಿದ್ದರು. ಕೆಲವೆಡೆ ಒಳಚರಂಡಿ ವ್ಯವಸ್ಥಿತವಾಗಿ ನಿರ್ಮಾಣವಾಗದೇ ಇದ್ದ ಕಾರಣ ಚರಂಡಿಯ ಮೇಲ್ಮೈನ ಮುಚ್ಚಳ ಕುಸಿದಿತ್ತು. ಇದರಿಂದ ಜನರು ವಾಹನದೊಂದಿಗೆ ಸಂಚರಿಸಲು ಭಯದ ಪರಿಸ್ಥಿತಿ ನಿರ್ಮಾಣವಾಗಿತ್ತು.  

ಸರ್ಜಾಪುರ ಮುಖ್ಯರಸ್ತೆಯ ವಿಪ್ರೊ ಗೇಟ್ ಬಳಿ ಇರುವ ರೈನ್ ಬೋ ಅಪಾರ್ಟ್‌ಮೆಂಟ್‌ ಸಮುಚ್ಚಯದ ಆವರಣಕ್ಕೆ ನೀರು ನುಗ್ಗಿದ್ದು, ಶಾಲಾ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಲಾಗದೇ ಟ್ರ್ಯಾಕ್ಟರ್ ಬಳಸಿ ಶಾಲೆಗೆ ತೆರಳುತ್ತಿರುವ ದೃಶ್ಯ ಕಂಡು ಬಂತು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮಳೆಗೆ ಹೈರಾಣಾದ ರಾಜಧಾನಿ ಜನತೆ: ಇನ್ನೂ ಎರಡು ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ

"ರೈನ್ ಬೋ ಅಪಾರ್ಟ್‌ಮೆಂಟ್‌ನ  ಮೇಲ್ಭಾಗದಲ್ಲಿ ಮಾಲನಾಯಕನಹಳ್ಳಿ ಕೆರೆ ಮತ್ತು ಜುನ್ನಾಲಸಂದ್ರ ಕೆರೆಗಳಿರುವ ಕಾರಣ ಮಳೆ ಬಂದರೆ  ಕೆರೆ ಪೂರ್ಣ ಭರ್ತಿಯಾಗುವುದರಿಂದ ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗುತ್ತದೆ. ನೀರಿನ ಕಾಲುವೆ ಮುಚ್ಚಿಹೋಗಿದ್ದು, ಅದರಿಂದ ನೀರು ನುಗ್ಗುವಂತಾಗಿದೆ. ಕಾಲುವೆ ತೆರವುಗೊಳಿಸಿ  ನೀರು ಹೋಗುವಂತೆ ಮಾಡಿದರೆ ಮಳೆ ಬಂದಾಗ ಸಂಭವಿಸುವ ಅವಘಡಗಳಿಂದ ಪರಿಹಾರ ಸಿಗಬಹುದು" ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ಯಿಯಲ್ಲಿರುವ ಬಹುತೇಕ ಎಲ್ಲ 201 ಕೆರೆಗಳು ತುಂಬಿ ಹರಿದಿವೆ. ಹೆಚ್ಚುವರಿಯಾಗಿ ಸುರಿದ ಮಳೆ ನೀರನ್ನು ಹೊರಹಾಕಲು ನಗರದ ಚರಂಡಿಗಳು ಅಸಮರ್ಪಕವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ರಸ್ತೆಗಳು ಹೊಳೆಗಳಾಗಿ ಪರಿವರ್ತನೆಗೊಂಡಿವೆ. ದೀರ್ಘವಾಗಿ ಸುರಿದ ಮಳೆಗೆ ಹಲವಾರು ಮರದ ರೆಂಬೆ, ಕೊಂಬೆಗಳು ಮುರಿದು ಬಿದ್ದಿದ್ದು ಸಂಚಾರಕ್ಕೆ ಅಡಚಣೆ ಉಂಟು ಮಾಡಿವೆ.  

"ಸಾಯಿ ಲೇಔಟ್ ನಿವಾಸಿಗಳಿಗೆ, ಪ್ರತಿ ಬಾರಿ ಮನೆಗೆ ನೀರು ನುಗ್ಗಿದಾಗ ಬಿಬಿಎಂಪಿ ₹ 10,000  ಪರಿಹಾರ ನೀಡುವುದನ್ನು ಮುಂದುವರಿಸಲಿದೆ. ನಾವು ಚರಂಡಿಗಳ ದುರಸ್ಥಿಗೆ ಎಂಜಿನಿಯರ್‍‌ಗಳಿಗೆ ಸೂಚನೆ ನೀಡಿದ್ದೇವೆ. ನಿತ್ಯವೂ ಪ್ರಮುಖ ಚರಂಡಿಗಳ ಹೂಳು ತೆಗೆಯುವ ಕೆಲಸ ಮುಂದುವರಿದಿದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್