
- ಏ.23ರಂದು ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ಸ್ಥಗಿತ
- ಭಾನುವಾರದಿಂದ ಎಂದಿನಂತೆ ಮೆಟ್ರೋ ಸೇವೆ ಆರಂಭ
ಇಂದಿರಾ ನಗರ ಹಾಗೂ ಸ್ವಾಮಿ ವಿವೇಕಾನಂದ ಮೆಟ್ರೋ ನೇರಳೆ ಮಾರ್ಗ ಮಧ್ಯೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಏ.23ರಂದು ಮೆಟ್ರೋ ಸಂಚಾರ ಸ್ಥಗಿತವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ಮಾಧ್ಯಮ ಪ್ರಕಟಣೆ ತಿಳಿಸಿದೆ.
ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಇರುವ ಮೆಟ್ರೋ ಸಂಚಾರ ಏ.23ರ ರಾತ್ರಿ 9.30ರಿಂದ ಸಂಚಾರ ಸ್ಥಗಿತಗೊಳ್ಳಲಿದೆ. ಭಾನುವಾರ ಆ ಮಾರ್ಗದಲ್ಲಿ ಎಂದಿನಂತೆ ಬೆಳಗ್ಗೆಯಿಂದ ಮೆಟ್ರೋ ಸೇವೆ ಇರಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇದನ್ನು ಓದಿದ್ದೀರಾ? ದ್ವಿತೀಯ ಪಿಯು ಪರೀಕ್ಷೆ| ಮೊದಲ ದಿನ 11,379 ವಿದ್ಯಾರ್ಥಿಗಳು ಗೈರು
ಈ ಸಮಯದಲ್ಲಿ ಎಂ.ಜಿ ರೋಡ್ ಹಾಗೂ ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಹಸಿರು ಮಾರ್ಗ ಸಂಚಾರ ಇರಲಿದೆ ಎಂದು ತಿಳಿಸಲಾಗಿದೆ.
ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೈಯ್ಯಪ್ಪನಹಳ್ಳಿ-ಎಂಜಿ ರಸ್ತೆ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ನೇರಳೆ ಮಾರ್ಗದ ರೈಲುಗಳ ಕಾರ್ಯಾಚರಣೆ ಆರಂಭವಾಗುವ ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಮೆಟ್ರೋ ಸಂಚಾರ ವ್ಯತ್ಯಯವಾಗಿದೆ.
ಇದೇ ಮಾದರಿಯ ಕಾಮಗಾರಿಗಳು ವಿವಿಧ ಭಾಗಗಳಲ್ಲಿ ನಡೆಯುತ್ತಿರುವುದರಿಂದ ಮಾರ್ಚ್ 2ರಿಂದ ಆರಂಭಿಸಿ ಮುಂದಿನ 6 ತಿಂಗಳ ಕಾಲ ಅಲ್ಲಲ್ಲಿ ಸಂಚಾರ ವ್ಯತ್ಯಯವಾಗಲಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆ ನೀಡಿದೆ.
ಜನರ ಅಹವಾಲಿಗೆ ಸ್ಪಂದಿಸಿದ ಮೆಟ್ರೊ
ಬೆಂಗಳೂರಿನ ಹಲವೆಡೆ ಮೆಟ್ರೋ ವಿಸ್ತರಣೆ ಕಾಮಗಾರಿಗಳು ಭರದಿಂದ ಸಾಗಿವೆ. ರಾತ್ರಿ ವೇಳೆ ನಡೆಯುತ್ತಿರುವ ಕಾಮಗಾರಿಗಳಿಂದ ಮಾರ್ಗದ ಆಸುಪಾಸಿನ ಜನವಸತಿ ಪ್ರದೇಶಗಳ ವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಬೆಂಗಳೂರಿನ ವಿವಿಧೆಡೆ ಜನರು ದೂರು ಸಲ್ಲಿಸಿದ್ದರು. ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂಬ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ನಿಗಮವು ರಾತ್ರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.