ತುಮಕೂರು | ವಿದ್ಯಾರ್ಥಿವೇತನ ವಂಚನೆ ಪ್ರಕರಣ; ಕಾರ್ಮಿಕ ಮಂಡಳಿ ನೌಕರ ಸೇರಿ ಐವರ ಬಂಧನ

ಕಾರ್ಮಿಕ ಮಂಡಳಿ ನೌಕರ ಬಂಧನ
  • ಕಾರ್ಮಿಕರ ಕಲ್ಯಾಣ ಮಂಡಳಿ ನೀಡುತ್ತಿದ್ದ ವಿದ್ಯಾರ್ಥಿ ವೇತನಕ್ಕೇ ಕನ್ನ
  • 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ

ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನದಲ್ಲಿ ಅಕ್ರಮ ಎಸಗಿರುವ ಐವರು ಆರೋಪಿಗಳನ್ನು ತುಮಕೂರಿನ ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ.

ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ವಂಚನೆ ಪ್ರಕರಣ ಕುರಿತು ದೂರು ದಾಖಲಿಸಿರುವ ಪೊಲೀಸರು, ಕಾರ್ಮಿಕರ ಕಲ್ಯಾಣ ಮಂಡಳಿ ಗುತ್ತಿಗೆ ನೌಕರ ಮುಜಾಹಿದ್ ಪಾಷಾ ಎಂಬಾತನನ್ನು ಬಂಧಿಸಿದ್ದಾರೆ.

ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕನಿಷ್ಟ ₹3,000ದಿಂದ ಸುಮಾರು ₹30,000ವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಹಾಗಾಗಿ, "ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (ಎಸ್‌ಎಸ್‌ಪಿ) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮುಜಾಹಿದ್ ಪಾಷಾ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ವಿದ್ಯಾರ್ಥಿವೇತನ ಮಂಜೂರು ಮಾಡಿಸಿ ವಂಚನೆ ನಡೆಸಿದ್ದಾನೆ" ಎಂದು ದೂರು ದಾಖಲಿಸಲಾಗಿದೆ.

"ತುಮಕೂರಿನ ಜಿಲ್ಲೆಯಲ್ಲಿನ ಎಚ್‌ಎಂಎಸ್‌ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಚ್‌ಎಂಎಸ್‌ಐಟಿ) ಹಾಗೂ ಇತರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ (ಎಸ್‌ಎಸ್‌ಪಿ) ಅರ್ಜಿ ಸಲ್ಲಿಸಲಾಗುತ್ತಿತ್ತು. ಮಂಡಳಿ ನೌಕರನಾಗಿದ್ದ ಆರೋಪಿ ಪಾಷಾ, ಅರ್ಜಿಗಳ ದಾಖಲೆ ಪರಿಶೀಲಿಸದೆ ವಿಲೇವಾರಿ ಮಾಡುತ್ತಿದ್ದ. ನಂತರ ಖಾತೆಗಳಿಗೆ ಹಣ ಬಂದಾಗ ಕಮಿಷನ್‌ ರೂಪದಲ್ಲಿ ಹಣ ಸಂಗ್ರಹಿಸಿ ವಂಚನೆ ನಡೆಸಿದ್ದಾನೆ" ಎಂದು ಆರೋಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಚಿಲುಮೆ ವೋಟರ್‌ ಗೇಟ್‌ ಹಗರಣ | ಬಿಬಿಎಂಪಿ ವಿಶೇಷ ಆಯುಕ್ತ, ಬೆಂಗಳೂರು ಜಿಲ್ಲಾಧಿಕಾರಿ ಅಮಾನತು

ಈ ಬಗ್ಗೆ ಎಚ್‌ಎಂಎಸ್‌ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್‌ ಗೌಡ, ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿ, "ನಮ್ಮ ಕಾಲೇಜಿನ ಸುಮಾರು 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ವಿದ್ಯಾರ್ಥಿವೇತನವನ್ನು ಕಬಳಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಕಾಲೇಜಿನ ವಿದ್ಯಾರ್ಥಿಯೊಬ್ಬರು ಮತ್ತು ಸಂಸ್ಥೆಯ ವತಿಯಿಂದಲೂ ದೂರು ನೀಡಿದ್ದೇವೆ" ಎಂದರು.

ಈ ಬಗ್ಗೆ ತುಮಕೂರಿನ ಕ್ಯಾತಸಂದ್ರ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿ, "ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app