ಬಿಬಿಎಂಪಿ | ಆಮೆವೇಗದಲ್ಲಿ 'ವೈಟ್‌ ಟಾಪಿಂಗ್' ಕಾಮಗಾರಿ; ರಸ್ತೆಗುಂಡಿಗಳಿಂದ ಹೆಚ್ಚಿದ ಅಪಘಾತ

  • ಕಾಮಗಾರಿ ಆರಂಭಿಸಿದ ಸ್ಥಳಗಳಲ್ಲಿ ಸಂಚಾರ ನಿರ್ಬಂಧವಿಲ್ಲ
  • ಸೆ.15ರಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭ ಎಂದಿದ್ದ ಪಾಲಿಕೆ

ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳು ತೀರಾ ಹದಗೆಟ್ಟಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವೈಟ್ ಟಾಪಿಂಗ್ ಕಾಮಗಾರಿಯನ್ನು ಆಮೆವೇಗದಲ್ಲಿ ನಡೆಸುತ್ತಿದೆ ಎಂದು ವಾಹನ ಸವಾರರು ಪಾಲಿಕೆ ವಿರುದ್ಧ ಕಿಡಿಕಾರಿದ್ದಾರೆ. 

1.9 ಕಿ.ಮೀನ ಹಳೆ ಮದ್ರಾಸ್ ರಸ್ತೆಯಿಂದ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ರಸ್ತೆ, ರಾಮಕೃಷ್ಣ ಮಠದವರೆಗೂ, ಸೆ.15ರಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸುವುದಾಗಿ ಬಿಬಿಎಂಪಿ ಘೋಷಿಸಿತ್ತು. ಆದರೆ, ಕಾಮಗಾರಿ ಇನ್ನೂ ಆರಂಭವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

Eedina App

ಹಳೆ ಮದ್ರಾಸ್ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೆ ಆರ್ ಪುರ ಮಾರ್ಗವಾಗಿ ಹೊಸಕೋಟೆ, ಕೋಲಾರ, ತಿರುಪತಿ ಹಾಗೂ ಚೆನ್ನೈ ಸೇರಿದಂತೆ ಇತರ ಸ್ಥಳಗಳಿಗೆ ತೆರಳುತ್ತಾರೆ. ಈ ಹಿಂದೆ ರಸ್ತೆಗಳಿಗೆ ತೇಪೆ ಹಾಕಿದ್ದರಿಂದ ಜೆಲ್ಲಿಕಲ್ಲು ಮೇಲೆಳುತ್ತಿದೆ; ಅಲ್ಲಲ್ಲಿ ಗುಂಡಿಗಳು ಕಾಣುತ್ತಿವೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಪ್ರಯಾಣಿಕನ ದುಬಾರಿ 'ಏರ್ ಪಾಡ್' ಹಿಂತಿರುಗಿಸಿದ ಆಟೋ ಚಾಲಕ

AV Eye Hospital ad

'ಹಳೆ ಮದ್ರಾಸ್ ರಸ್ತೆಯಲ್ಲಿ ಕಾಮಗಾರಿ ಆರಂಭಿಸಲು ಟೆಂಡರ್ ಕರೆದು, ರಸ್ತೆ ಅಗೆಯಲಾಗಿದೆ. ರಸ್ತೆ ಬಂದ್ ಮಾಡುವಂತೆ ಅನುಮತಿ ಕೋರಿ ಬೆಂಗಳೂರು ಸಂಚಾರ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದೇವೆ. ಈ ಕುರಿತು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ; ಅವರ ಅನುಮತಿಗಾಗಿ ಪಾಲಿಕೆ ಕಾಯುತ್ತಿದೆ' ಎಂದು ಬಿಬಿಎಂಪಿ ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

'ಕೆನ್ಸಿಂಗ್ಟನ್ ಓವಲ್ ರೋಡ್ ಜಂಕ್ಷನ್, ಗುರುದ್ವಾರ ರೋಡ್, ಆಂಜನೇಯ ದೇವಸ್ಥಾನ ರಸ್ತೆಯ ಒಂದು ಭಾಗದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೊರಡಿಸಲಾಗಿದೆ. ಈ ರಸ್ತೆಗಳಲ್ಲೇ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ' ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. 

ಈ ರಸ್ತೆಗಳಲ್ಲಿ ಕಾಮಗಾರಿ ಸಂಪೂರ್ಣ ಮುಗಿದ ನಂತರ. ಇನ್ನೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗುತ್ತದೆಯೋ ಅಲ್ಲಿ ಸಂಚಾರ ನಿರ್ಬಂಧ ಮತ್ತು ಪರ್ಯಾಯ ಮಾರ್ಗದ ಮಾಹಿತಿ ನೀಡಲಾಗುತ್ತದೆ. ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಿಗೆಲ್ಲ ಸಂಚಾರ ನಿರ್ಬಂಧ ಹೊರಡಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. 

ಕಳೆದ ಕೆಲ ದಿನಗಳ ಹಿಂದೆ ಪ್ರಯಾಣಿಕರೊಬ್ಬರು ತನ್ನ ಹೆಂಡತಿ ಮತ್ತು ಮಗುವಿನೊಂದಿಗೆ, ಬೈಕ್‌ನಲ್ಲಿ ಮನೆಗೆ ತೆರಳುವಾಗ ರಸ್ತೆಗುಂಡಿಗೆ ಬಿದ್ದು ಗಾಯಗೊಂಡಿದ್ದರು. ಅದಾದ ನಂತರ ಅಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಬಂದು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡ ನಂತರ ಅವರು ಅಲ್ಲಿಂದ ತೆರಳಿದ್ದರು ಎಂದು ಹಲವರು ಟ್ವೀಟ್ ಮಾಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app