ದುಬಾರಿ ದುನಿಯಾ | ಗಗನಕ್ಕೇರಿದ ತರಕಾರಿ ಬೆಲೆ; ಮತ್ತೆ ಹೈರಾಣಾದ ನಾಗರಿಕರು!

ಹವಾಮಾನ ವೈಪರೀತ್ಯ, ಕಳೆದ ಕೆಲ ವಾರಗಳಿಂದ ಸುರಿದ ಮಳೆಯ ಕಾರಣಕ್ಕೆ ಕೃಷಿ ಕ್ಷೇತ್ರದ ಮೇಲೆ ಹೊಡೆತ ಬಿದ್ದಿದೆ. ಇದೀಗ ಸಾಲು ಸಾಲು ಹಬ್ಬಗಳು ಬರುತ್ತಿರುವ ಮಧ್ಯೆಯೇ ಮಾರುಕಟ್ಟೆಗೆ ರಫ್ತಾಗುವ ತರಕಾರಿಗಳ ಬೆಲೆಗಳು ಏರಿಕೆಯಾಗತೊಡಗಿದೆ. ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟತೊಡಗಿದೆ.

ಹವಾಮಾನ ವೈಪರೀತ್ಯ ಹಾಗೂ ಕಳೆದ ಕೆಲವು ವಾರಗಳ ಹಿಂದೆ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಹಾಗೂ ತರಕಾರಿ ಉತ್ಪಾದನೆಗಳ ಮೇಲೆ ಹೊಡೆತ ಬಿದ್ದಿದ್ದು, ಮಾರುಕಟ್ಟೆಗೆ ರಫ್ತಾಗುವ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಗ್ರಾಹಕರ ಜೀವನ ಅಸ್ತವ್ಯಸ್ತವಾಗಿದೆ.

ಆಗಸ್ಟ್ ತಿಂಗಳ 19ರಂದು ಕೃಷ್ಣ ಜನ್ಮಾಷ್ಠಮಿ ಹಾಗೂ ಕೊನೆಯ ವಾರದಲ್ಲಿ ಗಣೇಶ ಚತುರ್ಥಿ ಇರುವುದರಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಜನರು ಆಗಮಿಸುತ್ತಿದ್ದು, ಹೆಚ್ಚಾದ ಬೆಲೆಗಳಿಂದ ಕಂಗಾಲಾಗಿದ್ದಾರೆ. 

ಟೊಮ್ಯಾಟೊ, ಬೀನ್ಸ್ , ಮೂಲಂಗಿ, ಹಸಿ ಮೆಣಸಿನಕಾಯಿ ಮುಂತಾದವುಗಳನ್ನು ಮಳೆಗಾಲದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಆದರೆ, ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಈ ಬೆಳೆಗಳ ಇಳುವರಿ ಕುಸಿತಗೊಂಡಿದೆ. ಹೀಗಾಗಿ ತರಕಾರಿಗಳು ಮಾರುಕಟ್ಟೆಗೆ ಸಮಯಕ್ಕೆ ಸರಿಯಾಗಿ ತಲುಪಿಲ್ಲ. ಇನ್ನೊಂದೆಡೆ ಮಳೆಯಿಂದಾಗಿ ಟೊಮ್ಯಾಟೊ ಬೆಲೆ ಕುಸಿದಿದ್ದು, ಹಲವು ರೈತರು ರಸ್ತೆಗೆ ಚೆಲ್ಲುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಗ್ರಾಹಕರ ಮೇಲೆ ಬೆಲೆ ಏರಿಕೆಯ ಬಿಸಿ ಉಂಟಾಗಿದೆ.

ಕೆಲ ದಿನಗಳ ಹಿಂದೆ ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿರಲಿಲ್ಲ. ಸ್ಥಿರವಾಗಿ ಮುಂದುವರೆದಿರುವ ಬೆಲೆಯಿಂದಾಗಿ ಸಾರ್ವಜನಿಕರು ಕೊಂಚ ನೆಮ್ಮದಿಯಿಂದಲೇ ಇದ್ದರು. ಆದರೆ ಇದೀಗ ಸಾಲು ಸಾಲು ಹಬ್ಬಗಳು ಬರುತ್ತಿರುವ ಜೊತೆಗೆ ತರಕಾರಿ ಬೆಲೆಯಲ್ಲಿ ಏರಿಕೆ ಕಂಡಿರುವ ಪರಿಣಾಮ ಗ್ರಾಹಕರು ಸಂಕಟಕ್ಕೀಡಾಗಿದ್ದಾರೆ. 

ಸಂಬಳ ಕಮ್ಮಿ, ಖರ್ಚು ಜಾಸ್ತಿ

ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಬೆಂಗಳೂರಿನ ಶಿವಗಾಮಿ, "ಮೋದಿ ಸರ್ಕಾರ ಬಂದ ಮೇಲೆ ತಿನ್ನೋಕು ಹಿಂದೆ ಮುಂದೆ ಯೋಚನೆ ಮಾಡಬೇಕು. ಯಾವ ತರಕಾರಿ ತಗೊಳೋದು ಬಿಡೋದು ತಿಳಿಯುತ್ತಿಲ್ಲ. ಬೆಲೆ ಎಷ್ಟೇ ಜಾಸ್ತಿ ಆದರೂ ಬದುಕಬೇಕಾದರೆ ತಿನ್ನಲೇ ಬೇಕು. ಈ ಹಿಂದೆ ದುಡಿಯೋದು ಕಮ್ಮಿ ಇತ್ತು. ಹಾಗಾಗಿ ಅಷ್ಟೇನು ಖರ್ಚಾಗುತ್ತಿರಲಿಲ್ಲ. ಈಗ ಸಂಬಳವೂ ಕಮ್ಮಿ, ದುಡಿಯೋದು ಜಾಸ್ತಿ. ಖರ್ಚು ಕೂಡ ಹೆಚ್ಚಾಗಿದೆ." ಎಂದು ನೋವು ತೋಡಿಕೊಂಡರು.

"35 ವರ್ಷದ ಹಿಂದೆ ನಾನು ಬೆಂಗಳೂರಿಗೆ ಬಂದಾಗ ಸಕ್ಕರೆ ಕೆಜಿಗೆ 3 ರೂ ಇತ್ತು. ಈಗ ಕೆಜಿ ಸಕ್ಕರೆ 42 ರೂ. ಆಗಿದೆ. ಗ್ಯಾಸ್ ಆಗ 320 ರೂ ಇತ್ತು. ಈಗ 1150 ಆಗಿದೆ. ಏನ್ ಸರ್ಕಾರನೋ ಎನೋ ತಿನ್ನೋ ಊಟ, ಬಟ್ಟೆ, ಇರೋಕ್ ಜಾಗ, ಓಡಾಟಕ್ಕೆ ಖರ್ಚು ಎಲ್ಲವನ್ನು ಜಾಸ್ತಿ ಮಾಡಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಒಬ್ಬೊಬ್ಬರಿಗೆ ಒಂದು ತರ ಸಂಬಳ ಆಗುತ್ತೆ. ಜಾಸ್ತಿ ದುಡ್ಡಿರೋರಿಗೆ ಬೆಲೆ ಏರಿಕೆ ಆಗಿರೋದು ಯಾವುದೇ ತೊಂದರೆ ಆಗುವುದಿಲ್ಲ. ಆದರೆ ನಮ್ಮಂಥ ಮಧ್ಯಮ ಹಾಗೂ ಬಡ ಜನರು ಯಾವ ತರಕಾರಿ ತಗೋಬೇಕು ಅನ್ನುವುದನ್ನು ಯೋಚನೆ ಮಾಡಬೇಕು. ಒಂದು ವಾರದ ಹಿಂದೆ ಕಮ್ಮಿ ಆಗಿದ್ದ ತರಕಾರಿ ಬೆಲೆ. ಈಗ ಮತ್ತೆ ಎರಡರಷ್ಟು ಹೆಚ್ಚಾಗಿದೆ. ಬೀನ್ಸ್  ಕೆಜಿಗೆ 105 ರೂ ಆಗಿದೆ. ತಿನ್ನೋಕೆ ದುಡ್ಡೆಲ್ಲ ಖರ್ಚಾದರೆ ಮಕ್ಕಳ ವಿದ್ಯಾಭ್ಯಾಸ ಮತ್ತು ಮನೆ ಮಂದಿಯ ಆರೋಗ್ಯಕ್ಕಾಗಿ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಗೃಹಿಣಿ ವಿಶಾಲಾಕ್ಷಿ ಅಭಿಪ್ರಾಯ ಹಂಚಿಕೊಂಡರು.

"ಸ್ವಾತಂತ್ರ್ಯ ದಿನಾಚರಣೆ ಅಂತ ಫ್ರೀ ಬಸ್ ಬಿಟ್ರು. ಬೇಕಿತ್ತಾ ಅದು. ಎಲ್ಲ ಫ್ರೀ ಅಂತ ಮಾಡಿದ ಮೇಲೆ ನಮ್ಮತ್ರಾನೇ ದುಡ್ಡು ಕಿತ್ಕೋತಾರೆ. ಅದರ ಬದಲು ತಿನ್ನೋ ತರಕಾರಿ ಬೆಲೆನಾದ್ರು ಕಮ್ಮಿ ಮಾಡ್ಲಿ ಸಾಕು. ಬದುಕ್ತೀವಿ. ಸರ್ಕಾರದವರು ಜನರ ಕಷ್ಟ ನೋಡಿ ಅಗತ್ಯ ವಸ್ತುಗಳ ಬೆಲೆ ಕಮ್ಮಿ ಮಾಡಬೇಕು" ಎಂದು ಅಲವತ್ತುಕೊಂಡರು.

ಈ ಸುದ್ದಿ ಓದಿದ್ದೀರಾ?: ಹತಾಶೆಯಿಂದ ಸಾವಿಗೆ ಶರಣಾಗುತ್ತಿರುವ ಈ ರೈತನಿಗೆಲ್ಲಿದೆ ಸ್ವಾತಂತ್ರ್ಯ?

ಪೊಲೀಸರಿಗೆ ಲಂಚ ನೀಡಬೇಕು

ತರಕಾರಿ ಬೆಲೆ ಏರಿಕೆಯ ಕುರಿತಾಗಿ ಈ ದಿನ.ಕಾಮ್ ನೊಂದಿಗೆ ಮಾತನಾಡಿದ ತರಕಾರಿ ಅಂಗಡಿಯ ಮಾಲೀಕ ಇರ್ಫಾನ್, "ಮಳೆ ಬಿದ್ದು ಬೆಳೆ ಎಲ್ಲ ಹಾಳಾಗಿವೆ. ಕೋಲಾರ, ತಮಿಳುನಾಡು, ಕೆ.ಆರ್ ಮಾರುಕಟ್ಟೆಯಿಂದ ಅಂಗಡಿಗೆ ತರಕಾರಿ ತರುತ್ತೇವೆ. ಬಂಡವಾಳ ಹಾಕಿದ್ದಕ್ಕಿಂತ ಜಾಸ್ತಿ ಲಾಭ ಏನೂ ಸಿಗ್ತಿಲ್ಲ. ಒಟ್ಟಾಗಿ ಮಳೆ ಮತ್ತು ಜಿಎಸ್‌ಟಿಯಿಂದಾಗಿ ತರಕಾರಿ ಬೆಲೆ ಜಾಸ್ತಿಯಾಗಿದೆ" ಎಂದರು.

"ರೈತನಿಂದ ದಲ್ಲಾಳಿಗಳು ಕೊಂಡುಕೊಂಡ ತರಕಾರಿ ಹೀಗೆ ಒಬ್ಬರಿಂದ ಒಬ್ಬರಿಗೆ ತಲುಪಿ ಕೊನೆಗೆ ನಮ್ಮ ಹತ್ತಿರ ಸೇರುತ್ತದೆ. 1ರೂ ಟೊಮ್ಯಾಟೊ 10 ರೂಪಾಯಿಗೆ ಮಾರೋ ಪರಿಸ್ಥಿತಿಯಿಂದಾಗಿ, ರೈತನಿಗೆ ಯಾವುದೇ ಲಾಭ ಇಲ್ಲ. ಅದಲ್ಲದೇ, ನಾವು ಬೇರೆ ಊರುಗಳಿಂದ ಸರಕುಗಳನ್ನು ತರುವ ಸಮಯದಲ್ಲಿ ಪೊಲೀಸರಿಗೆ ಲಂಚ ನೀಡಬೇಕು" ಎಂದು ಅಳಲು ತೋಡಿಕೊಂಡರು.

Image

"ಒಂದೆರಡು ವಾರಗಳಿಂದ ತರಕಾರಿ ಬೆಲೆ ಹೆಚ್ಚಾಗುತ್ತಲೇ ಇದೆ. ಮುಂದಿನ ದಿನಗಳಲ್ಲೂ ತರಕಾರಿ ಬೆಲೆ ಏರಿಕೆಯಾಗುತ್ತದೆ. ಕೋಲಾರ, ಯಶವಂತಪುರ ಮಾರ್ಕೆರ್ಟ್‌ನಿಂದ ಮೊದಲು 50ಕೆಜಿ ಈರುಳ್ಳಿಗೆ 680 ರೂ. ಆಗಿತ್ತು. ಈಗ 50 ಕೆಜಿ ಈರುಳ್ಳಿಗೆ 1000 ರೂ ಕೊಡಬೇಕು. ಯಾವ ಲಾಭ ಸಿಗುತ್ತಿಲ್ಲ. ತಂದಿರೂ 50ಕೆಜಿ ಈರುಳ್ಳಿಯಲ್ಲಿ ಕೆಟ್ಟೋಗಿರೋ ಈರುಳ್ಳಿ ಇದ್ರೆ ಅಷ್ಟೇ ಮುಗಿತು ಕತೆ ಎಲ್ಲಾನು ನಷ್ಟಾನೇ" ಎಂದು ತಳ್ಳೋ ಗಾಡಿ ಮಾಲೀಕ ಶಿವಪ್ರಸಾದ್ ನೋವನ್ನು ವ್ಯಕ್ತಪಡಿಸಿದರು.

ಹಿಂದಿನ ಮತ್ತು ಪ್ರಸ್ತುತ ತರಕಾರಿ ಬೆಲೆಯ ಪಟ್ಟಿ ಹೀಗಿದೆ

ಕ್ರ.ಸಂ ತರಕಾರಿ ವಾರದ ಹಿಂದಿನ ಬೆಲೆ ಪ್ರಸ್ತುತ ತರಕಾರಿ ಬೆಲೆ
1 ಪುದೀನ 10₹ 15₹
2 ಕೊತ್ತಂಬರಿ 15₹ 20₹
3 ಬದನೆಕಾಯಿ 45₹ 72₹
4 ಬೀನ್ಸ್‌ 120₹ 105₹
5 ಜವಳಿಕಾಯಿ 65₹ 82₹
6 ಬೆಂಡೆಕಾಯಿ 50₹ 48₹
7 ಸೋರೆಕಾಯಿ 55₹ 65₹
8 ನುಗ್ಗೆಕಾಯಿ 10₹ ರೂ.ಗೆ 3 ಕಾಯಿ 5₹ ರೂ.ಗೆ 1ಮಾತ್ರ
9 ಮೂಲಂಗಿ 35₹ 45₹
10 ಹಾಗಲಕಾಯಿ 72₹ 68₹
12 ನಾಟಿ ಬೀನ್ಸ್  80₹ 95₹
13 ನಿಂಬೆಹಣ್ಣು  3 ನಿಂಬೆಹಣ್ಣಿಗೆ 10ರೂ.₹  5ರೂ.ಗೆ 1 ನಿಂಬೆಹಣ್ಣು 
14 ಕ್ಯಾಬೇಜ್ 38₹ 48₹
15 ಅಣಬೆ 55₹ 64₹
16 ಕ್ಯಾರೆಟ್ 75₹ 85₹
17 ನೂಕೋಲ್ 25₹ 45₹
18 ಈರುಳ್ಳಿ 20₹ 26₹
19 ಟೊಮ್ಯಾಟೊ 70₹ 10₹
20 ಕ್ಯಾಪ್‌ಸಿಕಂ 50₹ ರಿಂದ 40₹ 90₹
ನಿಮಗೆ ಏನು ಅನ್ನಿಸ್ತು?
4 ವೋಟ್