ಬೆಂಗಳೂರು | ಫಲಪುಷ್ಪ ಪ್ರದರ್ಶನ, ಜಾಥಾಗಳಿಂದ ವಾಹನ ದಟ್ಟಣೆ: ಹೈರಾಣಾದ ಜನತೆ

  • ಸಮಯಕ್ಕೆ ಬಾರದ ಬಿಎಂಟಿಸಿ ಉಚಿತ ಬಸ್ ಸೇವೆ
  • 80 ಸಾವಿರ ಮೆಟ್ರೊ ಪೇಪರ್ ಟಿಕೆಟ್‌ ಖರೀದಿಸಿದ ಕಾಂಗ್ರೆಸ್‌

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಹಲವು ಕಾರ್ಯಕ್ರಮ ಮತ್ತು ಜಾಥಾ ಹಮ್ಮಿಕೊಂಡ ಕಾರಣ ಇಂದು (ಸೋಮವಾರ) ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿತ್ತು.

ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪಷ್ಪ ಪ್ರದರ್ಶನ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಎಂಟಿಸಿ ಬಸ್‌ ಮೂಲಕ ತೆರಳುತ್ತಿದ್ದಾರೆ. ಕಾಂಗ್ರೆಸ್‌ ಏರ್ಪಡಿಸಿರುವ ಜಾಥಾನಲ್ಲಿ ಪಾಲ್ಗೊಳ್ಳಲು ನಾನಾ ಊರು ಪಟ್ಟಣಗಳಿಂದ ಜನರು ಆಗಮಿಸಿದ್ದು, ಮೆಟ್ರೊ ನಿಲ್ದಾಣದಲ್ಲಿ ಜನದಟ್ಟಣೆಯಾಗಿತ್ತು. ಮೆಜೆಸ್ಟಿಕ್ ಬಸ್ ನಿಲ್ದಾಣ, ವಿಜಯನಗರ, ಮಲ್ಲೇಶ್ವರಂ, ಆನಂದ ರಾವ್ ಸರ್ಕಲ್‌ ಸೇರಿದಂತೆ ಕೆಲವೆಡೆ ವಾಹನ ಸಂಚಾರ ದಟ್ಟಣೆ ಉಂಟಾಗಿದೆ. 

ಬಿಎಂಟಿಸಿ ಉಚಿತ ಪ್ರಯಾಣ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ನಾಗರಿಕರಿಗೆ ಇಡೀ ದಿನ ಉಚಿತ ಪ್ರಯಾಣ ವ್ಯವಸ್ಥೆ ಮಾಡಿದೆ. ಹೆಚ್ಚು ಪ್ರಯಾಣಿಕರು ಲಾಲ್‌ಬಾಗ್ ಹಾಗೂ ಕಂಠೀರವ ಸ್ಟುಡಿಯೋ ಕಡೆ ಹೋಗಿಬರುತ್ತಿದ್ದಾರೆ. 

ಸರ್ಕಾರ ನೆಪ ಮಾತ್ರಕ್ಕೆ ಬಿಎಂಟಿಸಿ ಉಚಿತ ಬಸ್ ಸೇವೆ ಲಭ್ಯ ಎಂದು ಹೇಳಿದೆ. ಆದರೆ, ಗಂಟೆಗಟ್ಟಲೇ ಕಾದರೂ ಕೆಲವೊಂದು ಮಾರ್ಗಗಳಲ್ಲಿ ಬಸ್‌ ವ್ಯವಸ್ಥೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪೊಸ್ಟ್‌ ಹಾಕಿದ್ದಾರೆ. ಬಂದ ದಾರಿಗೆ ಸುಂಕವಿಲ್ಲದಂತೆ ಇಡೀ ದಿನ ವ್ಯರ್ಥವಾಗಿ ಹೋಯಿತು ಎಂದು ಹಲವರು ಬಿಎಂಟಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬಿಎಂಟಿಸಿ ನಿರ್ದೇಶಕ ಸೂರ್ಯ ಸೇನ್, ”ಪ್ರತಿದಿನದಂತೆ ಈ ದಿನವೂ ಕೂಡಾ 5700 ಬಿಎಂಟಿಸಿ ಬಸ್‌ಗಳು ರಸ್ತೆಗಿಳಿದಿವೆ. ನನಗೆ ಸೂಚನೆ ನೀಡದೇ ಯಾವುದೇ ಬಸ್‌ಗಳನ್ನು ನಿಲ್ಲಿಸುವ ಹಾಗಿಲ್ಲ ಎಂದು ನಿರ್ದೆಶನ ನೀಡಿದ್ದೇನೆ. ಮಧ್ಯಾಹ್ನದ ವೇಳೆಗೆ 38 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಪೊಲೀಸ್ ಕಣ್ಗಾವಲಿನೊಂದಿಗೆ ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮೆಟ್ರೋದಲ್ಲಿ ಜನಜಂಗುಳಿ

ಕಾಂಗ್ರೆಸ್ ಪಕ್ಷ ಆಗಸ್ಟ್ 15ರಂದು ‘ಸ್ವಾತಂತ್ರ್ಯ ನಡಿಗೆ’ ಪಾದಯಾತ್ರೆ ನಡೆಸುತ್ತಿದೆ. ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪಾದಯಾತ್ರೆಯಲ್ಲಿ ಸಂಚರಿಸುವ ಮಂದಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‍‌ಸಿಎಲ್) 'ನಮ್ಮ ಮೆಟ್ರೊ'ದಲ್ಲಿ ಸಂಚರಿಸಲು 80 ಸಾವಿರ ಪೇಪರ್ ಟಿಕೆಟ್ ಕಾಂಗ್ರೆಸ್ ಖರೀದಿಸಿದೆ.

'ಸ್ವಾತಂತ್ರ್ಯ ನಡಿಗೆ' ಪಾದಯಾತ್ರೆಯಲ್ಲಿ ಭಾಗವಹಿಸಲು ರಾಜ್ಯದ ನಾನಾ ಜಿಲ್ಲೆಗಳಿಂದ ಬರುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳು ಬೆಂಗಳೂರು ನಗರ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.

ತುಮಕೂರುನಿಂದ ಬರುವವರು ಗೊರಗುಂಟೆ ಪಾಳ್ಯ, ನಾಗಸಂದ್ರ ಬಳಿ ಇಳಿದು ಮೆಟ್ರೋ ಸಂಚಾರ ಮಾಡಲು ಸೂಚನೆ ನೀಡಲಾಗಿತ್ತು. ಕೋಲಾರದಿಂದ ಬರುವ ವಾಹನಗಳನ್ನು ಬೈಯಪ್ಪನಹಳ್ಳಿಯಲ್ಲಿಯೇ ತಡೆಯಲಾಗಿದೆ. ಚಿಕ್ಕಬಳ್ಳಾಪುರ ಮಾರ್ಗದಿಂದ ಬರುವವರು ಪ್ಯಾಲೇಸ್ ಮೈದಾನದ ಬಳಿ ತಡೆಯಲಾಗಿದೆ. ಮೈಸೂರು ಭಾಗದಿಂದ ಬರುವವರನ್ನು ಕೆಂಗೇರಿ ಮೆಟ್ರೊ ನಿಲ್ದಾಣದ ಬಳಿ ತಡೆಯಲಾಗಿದೆ ಎಂದು ತಿಳಿದುಬಂದಿದೆ.

ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬಿಎಂಆರ್‍‌ಸಿಎಲ್‌ ಸಂಪರ್ಕಾಧಿಕಾರಿ ಬಿ ಎಲ್‌ ಯಶವಂತ ಚವ್ಹಾಣ್‌, ”ಮೆಟ್ರೊ ಹೊರಡುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಈಗಾಗಲೇ ಕಾಂಗ್ರೆಸ್‌ನವರು 80 ಸಾವಿರ ಪೇಪರ್ ಟಿಕೆಟ್‌ ಪಡೆದಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಹೆಚ್ಚಿನ ಜನಸಂದಣಿ ಇದೆ” ಎಂದು ಹೇಳಿದರು.

ನಗರದ ಎಲ್ಲೆಲ್ಲಿ ವಾಹನ ಸಂಚಾರ ದಟ್ಟಣೆ?

ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗಿದೆ. ಕೆ ಆರ್ ವೃತ್ತ, ಹಡ್ಸನ್ ಸರ್ಕಲ್, ಜೆ ಸಿ ರಸ್ತೆ, ಮಿನರ್ವ ವೃತ್ತ, ವಿ ವಿ ಪುರಂ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದ ಮೂಲಕ ಫ್ರೀಡಂ ಮಾರ್ಚ್ ತಲುಪಲಿದೆ. ನಗರದ ಹಲವೆಡೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. 

ಸಾರ್ವಜನಿಕರ ಟ್ವೀಟ್

ಇಂದು ಟ್ರಾಫಿಕ್‌ನಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ನಮ್ಮ ಚುನಾಯಿತ ಪ್ರತಿನಿಧಿಗಳು ಮತ್ತು ಅವರ ಅಹಂಕಾರಕ್ಕೆ ಧನ್ಯವಾದಗಳು, ಜನಸಾಮಾನ್ಯರು ಇಂದು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಉಭಯ ಪಕ್ಷಗಳ ಶಕ್ತಿ ಪ್ರದರ್ಶನ ಮತ್ತು ಅವರ ರ್‍ಯಾಲಿಗಳಿಂದಾಗಿ ಇಡೀ ನಗರವೇ ಕಿಕ್ಕಿರಿದಿದೆ! ಮೂರ್ಖತನ!' ಎಂದು ಶ್ರೀನಿವಾಸ್ ಶ್ರೀಕಂಠ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

'ನನ್ನ ನಿಜವಾದ ಗಮ್ಯಸ್ಥಾನಕ್ಕಿಂತ ಹೆಚ್ಚು ಸಮಯವನ್ನು ಬೆಂಗಳೂರು ಟ್ರಾಫಿಕ್‌ನಲ್ಲಿ ಕಳೆದಿದ್ದೇನೆ. ಇದು ಸಾಮಾನ್ಯವೇ' ಎಂದು ಮತ್ತೋರ್ವರು ಟ್ವೀಟ್‌ ಮಾಡಿದ್ದಾರೆ.     

ನಿಮಗೆ ಏನು ಅನ್ನಿಸ್ತು?
0 ವೋಟ್
eedina app