
- ಕರವೇ ಮುಖಂಡ ಧರ್ಮೇಗೌಡ ನೇತೃತ್ವದಲ್ಲಿ ಬ್ಯಾನರ್ಗಳಿಗೆ ಮಸಿ
- ಸೋಮವಾರ ನಗರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ವೇಳೆಯೇ ಹಿಂದಿ ಹೇರಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ನರೇಂದ್ರ ಮೋದಿಯವರಿಗೆ ಹಿಂದಿಯಲ್ಲಿ ಸ್ವಾಗತ ಕೋರುವ ಬ್ಯಾನರ್ಗಳನ್ನು ಹಾಕಿದ್ದ ಬಿಜೆಪಿ ಮೇಲೆ ಆಕ್ರೋಶಗೊಂಡಿರುವ ಕನ್ನಡ ಪರ ಸಂಘಟನೆಗಳು, ಭಾನುವಾರ ಮಸಿ ಬಳಿದು ಪ್ರತಿಭಟಿಸಿವೆ.
ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕದ ಅಧ್ಯಕ್ಷ ಧರ್ಮೇಗೌಡ ನೇತೃತ್ವದಲ್ಲಿ ಹಿಂದಿ ಹೇರಿಕೆ ವಿಚಾರ ಖಂಡಿಸಿ ಮಸಿ ಬಳಿಯಲಾಗಿದೆ.
ಸೋಮವಾರ ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಶಾಸಕ, ತೋಟಗಾರಿಕಾ ಸಚಿವ ಮುನಿರತ್ನ ಪ್ರಧಾನಿಗಳಿಗೆ ಶುಭಕೋರುವ ಸಲುವಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದಿಯಲ್ಲಿ ಇರುವ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಇದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈ ಸುದ್ದಿ ಓದಿದ್ದೀರಾ ? ಬೆಂಗಳೂರು | ಲಾಲ್ಬಾಗ್ನಲ್ಲಿ ಮತ್ತೆ ತೆರೆದುಕೊಳ್ಳಲಿರುವ ಪುಷ್ಪಲೋಕ
"ಕನ್ನಡ ನೆಲದಲ್ಲೇ ಕನ್ನಡಕ್ಕೆ ಅಪಮಾನ ಮಾಡುವ ಕಾರ್ಯವನ್ನು ಸಚಿವ ಮುನಿರತ್ನ ಮಾಡಿದ್ದಾರೆ. ಅದಕ್ಕಾಗಿ ನಾವು ಅಂತಹ ಫ್ಲೆಕ್ಸ್ಗಳಿಗೆ ಮಸಿ ಬಳಿದು ಕನ್ನಡೀಕರಣಕ್ಕೆ ಒತ್ತಾಯ ಮಾಡುತ್ತಿದ್ದೇವೆ" ಎಂದು ಕರವೇ ಯುವ ಮುಖಂಡ ಮನುಗೌಡ ಈ ದಿನ. ಕಾಮ್ಗೆ ತಿಳಿಸಿದರು.
ಸಾಂಕೇತಿಕವಾಗಿ ಹಿಂದಿ ಹೇರಿಕೆ ಪ್ರತಿಭಟಿಸುವ ಸಲುವಾಗಿ ಮೈಸೂರು ರಸ್ತೆಯ ಮೆಟ್ರೋ ಪಿಲ್ಲರ್ ಬಳಿ ನಿಲ್ಲಿಸಿದ್ದ ಪ್ರಧಾನಿಗಳ ಸ್ವಾಗತದ ಫ್ಲೆಕ್ಸ್ಗಳಿಗೆ ಪೊಲೀಸರ ವಿರೋಧದ ನಡುವೆಯೂ ಮಸಿ ಬಳಿದು ಸಚಿವರ ಕನ್ನಡ ವಿರೋಧಿ ನಿಲುವಿಗೆ ಎಚ್ಚರಿಕೆ ನೀಡಿದ್ದಾರೆ.