ಕೋಲಾರ | ಎಲ್ಲ ಸಮುದಾಯ ಒಗ್ಗೂಡಿದರೆ ಮಾತ್ರ ಅಸ್ಪೃಶ್ಯತೆ ನಿವಾರಣೆ: ಅಂಜಲಿದೇವಿ

  • ಅಸ್ಪೃಷ್ಯತೆ ನಿರ್ಮೂಲನೆಗಾಗಿ ವಿಚಾರಗೋಷ್ಠಿ
  • ಡಾ. ಬಿ.ಆರ್‌ ಅಂಬೇಡ್ಕರ್‌ ಬದುಕು ನಮಗೆ ಆದರ್ಶವಾಗಲಿ

ಜಾತಿ, ವರ್ಗ ಮರೆತು ಪ್ರತಿಯೊಬ್ಬರು ಒಗ್ಗೂಡಿದರೆ ಮಾತ್ರ ದೇಶದಲ್ಲಿ ಬೇರು ಬಿಟ್ಟಿರುವ ಅಸ್ಪೃಶ್ಯತೆಯನ್ನು ಕಿತ್ತೊಗೆಯಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅಂಜಲಿದೇವಿ ಅಭಿಪ್ರಾಯಿಸಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಸರ್ವೋದಯ ಗ್ರಾಮೀಣಾಭಿವೃದ್ಧಿ ಶೈಕ್ಷಣಿಕ ಮತ್ತು ಸಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ 'ಅಸ್ಪೃಷ್ಯತೆ ನಿರ್ಮೂಲನೆ' ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. 

"ನಮ್ಮ ಸಂವಿಧಾನದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಕಠಿಣ ಕಾನೂನುಗಳು ಜಾರಿಗೆ ಬಂದಿದೆ. ಆದರೂ, ಹಲವು ಕಡೆ ಅಸ್ಪೃಶ್ಯತೆ ಜೀವಂತವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೋಲಾರ | ಸಿವಿಲ್‌ ನ್ಯಾಯಾಧೀಶೆ ಹುದ್ದೆಗೆ ತಳವರ್ಗದ ಗಾಯತ್ರಿ ಆಯ್ಕೆ

"ಅಸ್ಪೃಷ್ಯತೆಯ ಪಿಡುಗನ್ನು ಹೋಗಲಾಡಿಸಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಪಟ್ಟಷ್ಟು ಶ್ರಮ ಬೇರಾರೂ ಪಟ್ಟಿಲ್ಲ. ದೇಶದಲ್ಲಿ ಹಸಿವು ಬಾಯಾರಿಕೆಗಿಂತಲೂ ಕ್ರೂರವಾಗಿದ್ದ ಅಸ್ಪೃಷ್ಯತೆಯನ್ನು ಹೋಗಲಾಡಿಸುವ ಸಲುವಾಗಿ ಡಾ. ಬಿ.ಆರ್‌ ಅಂಬೇಡ್ಕರ್‌ ತಮ್ಮ ಜೀವನ ಪೂರ್ತಿ ಅಧ್ಯಯನದಲ್ಲಿ ತೊಡಗಿದ್ದರು" ಎಂದು ಅವರು ಸ್ಮರಿಸಿದ್ದಾರೆ.

"ಡಾ. ಬಿ.ಆರ್ ಅಂಬೇಡ್ಕರ್ ಭಾರತಕ್ಕೆ ಸಂವಿಧಾನ ಮಾತ್ರ ರಚನೆ ಮಾಡಿಕೊಟ್ಟಿಲ್ಲ. ದೇಶದ ನೀರಾವರಿ, ಆರ್ಥಿಕ, ವಿದೇಶಾಂಗ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಅಗಾಧವಾದ ಸೇವೆಯನ್ನು ಮಾಡಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಓದಿದವರೆಂಬ ಕೀರ್ತಿಗೂ ಪಾತ್ರರಾಗಿದ್ದಾರೆ. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ" ಎಂದು ಅವರು ತಿಳಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಸರ್ವೋದಯ ಸಂಸ್ಥೆಯ ಕಲಾತಂಡದವರು ಅಸ್ಪೃಶ್ಯತೆ ನಿರ್ಮೂಲನೆ ಕುರಿತು ಜಾಗೃತಿ ಗೀತೆಗಳನ್ನು ಹಾಡಿದರು. ಬೂದಿಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಂಜುನಾಥ್, ಪಿಡಿಓ ಜವರೇಗೌಡ, ಪ್ರಾಂಶುಪಾಲರಾದ ಮಾಲಿನಿ, ಉಪನ್ಯಾಸಕರಾದ ಕೋದಂಡಗೌಡ, ವಾಣಿ ಮಂಜುಳಾ, ಸರ್ವೋದಯ ಸಂಸ್ಥೆಯ ಕಲಾವಿದ ವಿ.ಯಲ್ಲಪ್ಪ, ಸಿ.ಬಸಪ್ಪ, ಗಾಯಿತ್ರಿಬಾಯಿ, ವಾಣಿ, ಗಾಯಿತ್ರಿ, ವಿ.ನಾಗಪ್ಪ ಮೊದಲಾದವರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app