ದಕ್ಷಿಣ ಕನ್ನಡ | ಅಡಿಕೆ ಮಾರಾಟದ ಹಣದಲ್ಲಿ ಶಾಲಾ ಬಸ್ ಖರೀದಿ; ಸರ್ಕಾರಿ ಶಾಲೆಯ ಕಾರ್ಯವೈಖರಿಗೆ ಮೆಚ್ಚುಗೆ

Dakshina kannada
  • ಶಾಲಾ ಜಮೀನಿನಲ್ಲಿ ಬೆಳೆದ ಅಡಿಕೆ ಮಾರಿ ಬಸ್ ಖರೀದಿ
  • ಜಮೀನಿನಲ್ಲಿ ಬೆಳೆದ ಆರು ಕ್ವಿಂಟಾಲ್ ಅಡಿಕೆ ಮಾರಾಟ

ಶಾಲೆಯ ಜಮೀನಿನಲ್ಲಿ ಬೆಳೆದ ಅಡಿಕೆಯನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಶಾಲಾ ಮಕ್ಕಳನ್ನು ಕರೆತರಲು ಬಸ್ ಖರೀದಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ರಾಜ್ಯದ ಇತರ ಶಾಲೆಗಳಿಗೆ ಮಾದರಿಯಾಗಿದೆ.

ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತೂರು ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿಯಾಗಿದ್ದು, ಖಾಸಗಿ ಶಾಲೆಗಳ ಮಕ್ಕಳಂತೆ ತಮ್ಮ ಮಕ್ಕಳಿಗೂ ಬಸ್‌ ವ್ಯವಸ್ಥೆ ಕಲ್ಪಿಸಿದ ಶಾಲೆಯ ಆಡಳಿತಕ್ಕೆ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. 

ಶಾಲೆಗೆ ಸೇರಿದ ಸುಮಾರು 4.15 ಎಕರೆ ಜಮೀನಿನಲ್ಲಿ, ಒಂದು ಎಕರೆ ಜಾಗವನ್ನು ಕೃಷಿಗೆ ವಿನಿಯೋಗಿಸಲಾಗಿದೆ. 2017ರಲ್ಲಿ ಸುಮಾರು 628 ಅಡಿಕೆ ಸಸಿಗಳನ್ನು ನಾಟಿ ಮಾಡಲಾಗಿತ್ತು. ಅಡಿಕೆ ಸಸಿಗಳು ಬೆಳೆದು ಫಸಲಿಗೆ ಬಂದಿದ್ದು, ಇದರಿಂದ ಸುಮಾರು 2.65 ಲಕ್ಷ ರೂಪಾಯಿ ಆದಾಯ ಬಂದಿತ್ತು. ಸೆಕೆಂಡ್ ಹ್ಯಾಂಡ್ ಬಸ್ ಖರೀದಿಗೆ ಸುಮಾರು 5.20 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಬಸ್ ಖರೀದಿಯ ಅರ್ಧ ಖರ್ಚನ್ನು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರೊಬ್ಬರು ನೀಡಿದ್ದಾರೆ. ಕಳೆದ ವಾರವೇ ಬಸ್ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.

ಈ ಸುದ್ದಿ ಓದಿದ್ದೀರಾ?: ಉಡುಪಿ| ಗುಂಡು ಹಾರಿಸಿಕೊಂಡು ರೈತ ಆತ್ಮಹತ್ಯೆ

ಮಿತ್ತೂರು ಸರ್ಕಾರಿ ಶಾಲೆಯಲ್ಲಿ ಸುಮಾರು 118 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸುಮಾರು 50ರಿಂದ 60 ಮಕ್ಕಳು ಶಾಲೆಗೆ ಬರಲು ಆಟೋ ರಿಕ್ಷಾವನ್ನು ಆಶ್ರಯಿಸುತ್ತಿದ್ದಾರೆ. ಶಾಲೆಯು ತಾಲೂಕಿನ ಗಡಿಭಾಗದ ಗುಡ್ಡಗಾಡು ಪ್ರದೇಶದಲ್ಲಿರುವುದರಿಂದ ಶಾಲಾ ವಾಹನದ ಅವಶ್ಯಕತೆಯಿತ್ತು. ದಾನಿಯೊಬ್ಬರ ಸಹಾಯದಿಂದ ಎರಡು ಆಟೋಗಳಲ್ಲಿ ಮಕ್ಕಳನ್ನು ಶಾಲೆಗೆ ಕರೆತರಲಾಗುತ್ತಿತ್ತು. ಆದರೆ, ಮಳೆಗಾಲದಲ್ಲಿ ರಿಕ್ಷಾದ ಚಕ್ರಗಳು ಮಣ್ಣಿನಲ್ಲಿ ಹೂತುಕೊಳ್ಳುವುದರಿಂದ ತುಂಬಾ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲೆಯ ಆಡಳಿತ ಮಂಡಳಿ ಸೇರಿ ಅಡಿಕೆ ಮಾರಾಟದ ಹಣದಲ್ಲಿ ಬಸ್ ಖರೀದಿ ಮಾಡಲು ನಿರ್ಧಿಸಿದ್ದರು.

Image
Dakshina kannada

ಶಾಲಾ ಬಸ್‌ನಲ್ಲಿ 26 ಸೀಟುಗಳಿದ್ದು, ಹಿಂದೆ ಆಟೋ ಓಡಿಸುತ್ತಿದ್ದ ಚಾಲಕನನ್ನೇ ಬಸ್ ಚಾಲಕನಾಗಿ ನೇಮಿಸಲಾಗಿದೆ. ಬಸ್ ಇಂಧನ ಖರೀದಿ ಹಾಗೂ ಚಾಲಕನ ವೇತನವನ್ನು ಎಸ್‌ಎಂಸಿ ಸದಸ್ಯರು ಹಾಗೂ ಪೋಷಕರು ವಹಿಸಿಕೊಂಡಿದ್ದಾರೆ. ಶಾಲಾ ಬಸ್ ನೋಡಿ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180