
- ಗಡಿ ವಿವಾದದಿಂದಾಗಿ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತ
- ಹೊರನಾಡ ಕನ್ನಡಿಗರ ಮಕ್ಕಳು ಮತ್ತೆ ರಾಜ್ಯದತ್ತಲೇ ತಿರುಗುವಂತಾಗಿದೆ
ಕರ್ನಾಟಕದಲ್ಲಿ ಕನ್ನಡದ ಜೊತೆ ಮರಾಠಿ ಮಾಧ್ಯಮ ಶಾಲೆಗಳಿಗೂ ಸರ್ಕಾರ ಸಮಾನ ಸೌಲಭ್ಯ ಕಲ್ಪಿಸುತ್ತಿದೆ. ಆದರೆ, ಮಹಾರಾಷ್ಟ್ರ ಸರ್ಕಾರ ಅಲ್ಲಿರುವ ಕನ್ನಡ ಮಾಧ್ಯಮ ಮಕ್ಕಳನ್ನು ನಿರ್ಲಕ್ಷ್ಯಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಅಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ರಾಜ್ಯದತ್ತ ಮುಖಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಗಡಿಯಿಂದ ಕೇವಲ 5 ಕಿ.ಮೀ ದೂರದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣವಿದೆ. ಇಚಲಕರಂಜಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ತೆರೆಯಲಾಗಿದೆ. ಆದರೆ, ಪ್ರೌಢಶಿಕ್ಷಣಕ್ಕಾಗಿ ಹೊರನಾಡ ಕನ್ನಡಿಗರ ಮಕ್ಕಳು ಮತ್ತೆ ರಾಜ್ಯದತ್ತಲೇ ಮುಖಮಾಡುವುದು ಅನಿವಾರ್ಯವಾಗಿದೆ.
ವಿದ್ಯಾರ್ಥಿಗಳ ಅಳಲು
“ನಾವು 1ರಿಂದ 7ನೇ ತರಗತಿಯವರೆಗೆ ಇಚಲಕರಂಜಿಯಲ್ಲೇ ಓದುತ್ತೇವೆ. ಮುಂದೆ 8ರಿಂದ 10ನೇ ತರಗತಿಗಾಗಿ ನಿತ್ಯ 13 ಕಿ.ಮೀ. ಕ್ರಮಿಸಿ, ನಿಪ್ಪಾಣಿ ತಾಲೂಕಿನ ಬೋರಗಾಂವಕ್ಕೆ ಹೋಗುತ್ತಿದ್ದೇವೆ. ಗಡಿ ವಿವಾದದಿಂದಾಗಿ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಂಡು ತರಗತಿಗೆ ಹೋಗಲಾಗಲಿಲ್ಲ. ಇಂಥ ಸಮಸ್ಯೆ ಆಗಾಗ ತಲೆದೋರುತ್ತಲೇ ಇವೆ” ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
“ವಿವಾದದಿಂದ ಬಸ್ ಸಂಚಾರ ಸ್ಥಗಿತವಾಗಿರುವುದರಿಂದ ನಿಯಮಿತವಾಗಿ ಶಾಲೆಗೆ ಹಾಜರಾಗಲು ಸಮಸ್ಯೆಯಾಗುತ್ತಿದೆ. ನಮ್ಮೂರಿನಲ್ಲೇ ಪ್ರೌಢಶಾಲೆ ಆರಂಭಿಸಿದರೆ ಅನುಕೂಲವಾಗುತ್ತದೆ” ಎಂದು ಮನವಿ ಮಾಡಿದರು.
ಮಹಾರಾಷ್ಟ್ರ ಸರ್ಕಾರ ಕನ್ನಡ ಮಾಧ್ಯಮ ಪ್ರೌಢಶಾಲೆ ಆರಂಭಿಸುವಂತೆ ಒತ್ತಾಯ
“ನಾವು ಮೂಲತಃ ಹುಕ್ಕೇರಿ ತಾಲೂಕಿನ ನಿಡಸೋಸಿಯವರು. ಉದ್ಯೋಗಕ್ಕಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದೇವೆ. ನನ್ನ ಮಗ ಎಸ್ಎಸ್ಎಲ್ಸಿ ವ್ಯಾಸಂಗಕ್ಕಾಗಿ ಬೋರಗಾಂವಗೆ ಹೋಗುತ್ತಾನೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಪ್ರಯಾಣದಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಾನೆ. ಇದರಿಂದ ಕಲಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಹಾರಾಷ್ಟ್ರ ಸರ್ಕಾರ ಇಚಲಕರಂಜಿಯಲ್ಲೇ ಕನ್ನಡ ಮಾಧ್ಯಮ ಪ್ರೌಢಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು” ಎಂದು ಕನ್ನಡಿಗರೊಬ್ಬರು ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಗಾಂಧಿ ಸಿದ್ಧಾಂತ ತೆಗೆದು ಗೋಡ್ಸೆ ಸಿದ್ಧಾಂತ ಹೇರಿಕೆಯಾಗುತ್ತಿದೆ: ರಾಜಾರಾಂ ತಲ್ಲೂರ್ ಕಿಡಿ
“ಕೆ.ಎಸ್.ಪಾಟೀಲ ಪ್ರೌಢಶಾಲೆ ಗಡಿ ಭಾಗದಲ್ಲಿದೆ. ಈ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆಯಲು ಮಹಾರಾಷ್ಟ್ರದ ಇಚಲಕರಂಜಿಯಿಂದ 35 ಮಕ್ಕಳು, ಉಪರಿಯಿಂದ ಇಬ್ಬರು, ಕುರಂದವಾಡದಿಂದ ಮೂವರು ಮಕ್ಕಳು ಬರುತ್ತಾರೆ” ಎಂದು ಪ್ರೌಢಶಾಲೆ ಮುಖ್ಯಶಿಕ್ಷಕರು ತಿಳಿಸಿದರು.