
- 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮಹಾರಾಷ್ಟ್ರ
- ಖುದ್ದು ಭದ್ರತೆ ನೇತೃತ್ವ ವಹಿಸಿಕೊಂಡ ಅಲೋಕ್ ಕುಮಾರ್
ಹಲವು ವರ್ಷಗಳಿಂದ ಬಗೆಹರಿಯದೇ ಉಳಿದಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟಿನಿಂದ ಅಂತಿಮ ವಿಚಾರಣೆ ನಡೆಯಲಿದೆ.
ವಿಚಾರಣೆ ಹಿನ್ನೆಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಉಭಯ ರಾಜ್ಯಗಳ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ಕುಮಾರ್ ಅವರೇ ಖುದ್ದು ಬೆಳಗಾವಿಯಲ್ಲಿ ಮೊಕ್ಕಾಂ ಹೂಡಿ ಭದ್ರತೆ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಗಡಿ ವಿವಾದದ ಕಾರಣಕ್ಕೆ ಕಳೆದ ವಾರ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಗಳ ಮೇಲೆ ಕಲ್ಲು ತೂರಾಟ ಹಾಗೂ ಮಸಿ ಬಳಿದ ಪ್ರಕರಣ ನಡೆದಿತ್ತು. ಇಂದು ಅಂತಿಮ ವಿಚಾರಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹಲವು ಸಂಘಟನೆಗಳು ಬೆಳಗಾವಿಯಲ್ಲಿ ಅಶಾಂತಿ ಸೃಷ್ಟಿಸಬಹುದು ಎಂಬ ಕಾರಣಕ್ಕೆ ಭದ್ರತೆ ಹೆಚ್ಚಿಸಲಾಗಿದೆ.
ವಿವಾದದ ಹಿನ್ನೆಲೆ
ಸ್ವಾತಂತ್ರ್ಯಕ್ಕೂ ಮೊದಲು ಚದುರಿ ಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಕರ್ನಾಟಕ ಏಕೀಕರಣದಲ್ಲಿ ಒಗ್ಗೂಡಿಸಲಾಯಿತು. ಕನ್ನಡ ಮಾತನಾಡುವ ಪ್ರದೇಶಗಳನ್ನೆಲ್ಲಾ ಆಯಾ ರಾಜ್ಯಗಳಿಂದ ಬಿಡುಗಡೆ ಮಾಡಿ ನೂತನ ಕರ್ನಾಟಕ ರಾಜ್ಯಕ್ಕೆ ಸೇರಿಸಲಾಯಿತು. ಆದರೆ, ಮುಂಬೈ ಪ್ರಾಂತ್ರ್ಯದಲ್ಲಿದ್ದ ಅಕ್ಕಲಕೋಟೆ, ಜತ್ತ, ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರದಲ್ಲೇ ಉಳಿದವು. ಸಾಲದದ್ದಕ್ಕೆ, ಬೆಳಗಾವಿ, ಬೀದರ್, ಕಾರವಾರ ಜಿಲ್ಲೆಯ ಕೆಲವು ತಾಲೂಕುಗಳು ತಮ್ಮ ರಾಜ್ಯಕ್ಕೇ ಸೇರಿಸಬೇಕು ಎಂದು ಮಹಾರಾಷ್ಟ್ರ ಮತ್ತೊಮ್ಮೆ ಒತ್ತಾಯ ಮಾಡಲಾರಂಭಿಸಿತು. ಅಂದು ಆರಂಭವಾದ ಉಭಯ ರಾಜ್ಯಗಳ ಗಡಿ ವಿವಾದ ಇನ್ನೂ ಮುಗಿದಿಲ್ಲ.
ಮಹಾರಾಷ್ಟ್ರ ಸರ್ಕಾರದ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ 1960ರ ಜೂನ್ 5 ರಂದು ನಿವೃತ್ತ ನ್ಯಾಯಮೂರ್ತಿ ಮಹಾಜನ್ ನೇತೃತ್ವದಲ್ಲಿ ನಾಲ್ವರು ಸದಸ್ಯರನ್ನೊಳಗೊಂಡ ಆಯೋಗ ರಚಿಸಿತು. ಇದರಲ್ಲಿ ಕರ್ನಾಟಕದ ಇಬ್ಬರು ಹಾಗೂ ಮಹಾರಾಷ್ಟ್ರದಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಮಹಾಜನ್ ಹಾಗೂ ಇತರೆ ಸದಸ್ಯರ ತಂಡ ಗಡಿ ಭಾಗದ ಅಧ್ಯಯನ ನಡೆಸಿ ಕನ್ನಡ ಭಾಷಿಕರು ಹೆಚ್ಚಿರುವ ಆಧಾರದಲ್ಲಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯಬೇಕೆಂಬ ತೀರ್ಪು ನೀಡಿತ್ತು.
ಈ ಸಮಿತಿಯವರು ಗಡಿಭಾಗದ ಎಲ್ಲ ಊರುಗಳನ್ನು ಭೇಟಿ ಮಾಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿದರು. ಒಟ್ಟು 2,240 ಮನವಿಗಳನ್ನು ಸ್ವೀಕರಿಸಿದ ಸಮಿತಿ, ಮಹಾಜನ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ ಗಡಿ ವಿವಾದ | ಶಾಂತಿ ಕದಡಿದರೆ ತಕ್ಕ ಪಾಠ ಕಲಿಸುತ್ತೇವೆ: ಎಡಿಜಿಪಿ ಅಲೋಕ್ಕುಮಾರ್ ಎಚ್ಚರಿಕೆ
ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಹಸ್ತಕ್ಷೇಪ ಹೆಚ್ಚಾದ ನಂತರ ರಾಜ್ಯದಲ್ಲೂ ಹೋರಾಟಗಳು ಆರಂಭವಾದವು. ಬೆಳಗಾವಿ ನಗರದ ಎಲ್ಲ ಸರ್ಕಾರಿ ಕಚೇರಿ ಹಾಗೂ ಅಂಗಡಿಗಳ ಮೇಲೆ ಮರಾಠಿ ಹೆಸರು ಬದಲು ಕನ್ನಡ ಫಲಕ ಬರೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ಕನ್ನಡಪರ ಸಂಘಟನೆಗಳ ಮನವಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತು. ಇದಕ್ಕೆ ಮರಾಠಿ ಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದವು. ಆ ನಂತರ, ಬೆಳಗಾವಿ ಗಡಿ ವಿವಾದ ಭುಗಿಲೆದ್ದಿತು. 2004ರಲ್ಲಿ ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.