ಬೆಳ್ತಂಗಡಿ | ಕಾಡಿನಲ್ಲಿ ವಿಷ ಕುಡಿದು ಕುಟುಂಬಸ್ಥರಿಗೆ ವಿಡಿಯೋ ಕಳುಹಿಸಿದ ಯುವಕ

Dakshina kannada
  • ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನ
  • ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಯುವಕನೋರ್ವ ಕಾಡಿನಲ್ಲಿ ವಿಷ ಕುಡಿದು ವಿಡಿಯೋ ಮಾಡಿ, ವಿಡಿಯೋ ತುಣುಕನ್ನು ಕುಟುಂಬದವರಿಗೆ ಕಳುಹಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ. ಕುಟುಂಬದವರಿಂದ ಮಾಹಿತಿ ಪಡೆದ ಪೊಲೀಸರು ಯುವಕನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ನಿವಾಸಿ ಸುನೀಲ್(28) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಬುಧವಾರ (ಸೆಪ್ಟೆಂಬರ್ 28) ಬೆಳ್ಳಿಗ್ಗೆ ಧರ್ಮಸ್ಥಳಕ್ಕೆ ಬಂದಿದ್ದು, ದೇವರ ದರ್ಶನ ಮುಗಿಸಿ ಮಧ್ಯಾಹ್ನದ ನಂತರ ಎಂಜಿ ವೃತ್ತದ ಬಳಿಯಿರುವ ಗುಡ್ಡಕ್ಕೆ ತೆರಳಿ ಕೃಷಿಗೆ ಬಳಸುವ ವಿಷವನ್ನು ಕುಡಿದಿದ್ದಾನೆ. ವಿಷ ಕುಡಿಯುವ ವಿಡಿಯೋವನ್ನು ತನ್ನ ಕುಟುಂಬದವರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾನೆ. ತಕ್ಷಣ ಎಚ್ಚೆತ್ತ ಕುಟುಂಬ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಪಿಎಫ್‌ಐಗೆ ನಿಷೇಧ | ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 12 ಕಚೇರಿಗಳಿಗೆ ಸೀಲ್

ಕುಟುಂಬದವರು ನೀಡಿದ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಠಾಣೆಯ ಪೊಲೀಸರು, ಸಬ್ಇನ್ಪೆಕ್ಟರ್ ಅನಿಲ್ಕುಮಾರ್ ನೇತೃತ್ವದಲ್ಲಿ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾರೆ. ಅರೆಪ್ರಜ್ಞಾ ಅವಸ್ಥೆಯಲ್ಲಿ ಸುನೀಲ್ ಪತ್ತೆಯಾಗಿದ್ದು, ತಕ್ಷಣ ಉಜಿರೆಯ ಖಾಸಗಿ ಆಸ್ಪತ್ತೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಧರ್ಮಸ್ಥಳ ಠಾಣೆಯ ಪೊಲೀಸ್ ಕಾನ್ಸ್‌ಟೆಬಲ್ ಪ್ರಶಾಂತ್, “ಮಾಹಿತಿ ಪಡೆದ ಹತ್ತು ನಿಮಿಷದಲ್ಲಿ ಯುವಕನನ್ನು ಪತ್ತೆಹಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಕೌಟುಂಬಿಕ ಸಮಸ್ಯೆಯೇ ಆತ್ಮಹತ್ಯೆ ಯತ್ನಿಸಲು ಕಾರಣವೆಂದು ತಿಳಿದುಬಂದಿದೆ” ಎಂದರು.

ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180