ಹೊಸ ಓದು | ರಮೇಶ್ ಅರೋಲಿ ಅವರ 'ಮಧುಬಾಲ' ಪುಸ್ತಕದ ಆಯ್ದ ಭಾಗ

Madhubala

ಅಂದಿನ ಪಾಕಿಸ್ಥಾನದ ಜನನಾಯಕ ಝುಲ್ಫಿಕರ್ ಅಲಿ ಭುಟ್ಟೋ ಆಗಾಗ ನೇರ ಬೊಂಬಾಯಿ ತಲುಪಿ, ಮಧುಬಾಲಳ ಸ್ಟುಡಿಯೋಕ್ಕೆ ಬಂದು ಕುಳಿತುಬಿಡುತ್ತಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಭುಟ್ಟೋ ಬೊಂಬಾಯಿ ಹೈಕೋರ್ಟ್ ಬ್ಯಾರಿಸ್ಟರ್ ಆಗಿದ್ದರು. ನೆಲ ಇಬ್ಭಾಗ ಆದ ಮೇಲೂ ಬೊಂಬಾಯಿ ಪ್ರೀತಿ ಹಾಗೆಯೇ ಇತ್ತು; ಜೊತೆಗೆ ಮಧುಬಾಲ ಭೇಟಿಯ ನೆಪವೂ ಇರುತ್ತಿತ್ತು

ಒಮ್ಮೆ ಸಿನಿ ಪತ್ರಕರ್ತ ಬನ್ನಿ ರೂಬೇನ್ 'ಫಿಲ್ಮ್ ಫೇರ್' ಪತ್ರಿಕೆಗಾಗಿ ಮಧುಬಾಲ ಕುರಿತು ವಿಶೇಷ ಲೇಖನಕ್ಕಾಗಿ ಆಕೆಯನ್ನು 'ಅರೇಬಿನ್ ವಿಲ್ಲಾ'ದಲ್ಲಿ ಸಂದರ್ಶನ ಕೋರಿ ಭೇಟಿ ಮಾಡಲು ಹೋದರು. ಮನೆಗೆ ಕಾವಲುಗಾರರು ಅಲ್ಲದೆ ದುರುಗುಟ್ಟುವ ಅಲ್ಸಟೈನ್ ನಾಯಿಗಳ ದಂಡೇ ಅಲ್ಲಿತ್ತು. ಯಾರೇ ಹೊಸಬರು ಮಧುಬಾಲ ಮನೆಗೆ ಭೇಟಿ ನೀಡಬೇಕೆಂದರೆ ಮೊದಲು ಅನುಮತಿ ತೆಗೆದುಕೊಂಡಿರಬೇಕಾಗಿತ್ತು. ಇಲ್ಲವಾದಲ್ಲಿ ಪ್ರವೇಶಯಿದ್ದಿಲ್ಲ. ಹೀಗೆ ಅನುಮತಿ ಮೇರೆಗೆ ವಿಲ್ಲಾಗೆ ಬಂದ ರೂಬೆನ್‌ರನ್ನು ಬರಮಾಡಿಕೊಂಡು ಕೆಳಮಹಡಿ ಕೋಣೆಯಲ್ಲಿ ಕೂಡಿಸಲಾಯಿತು. ನಂತರ ಮಧುಬಾಲ ವಾಸವಿದ್ದ ಮೇಲ್ಮಹಡಿಗೆ ಕಳುಹಿಸಲಾಯಿತು. ತುಸು ಹೊತ್ತಿನ ನಂತರ ಮಧುಬಾಲ ಅಲ್ಲಿಗೆ ಬಂದಳು. ಹಾಯ್-ಹಲೋ ನಂತರ ಆಕೆ ತನ್ನ ಕೋಣೆ ಪ್ರವೇಶಿಸಿ, ಒಳಗಿನಿಂದ ಬಾಗಿಲ ಬೋಲ್ಟ್ ಹಾಕಿದಳು. ಇದು ರೂಬೆನ್‌ರಿಗೆ ಸ್ವಲ್ಪ ಅಜೀಬ್ ಅನಿಸಿತಾದರೂ ಏನೋ ಮುಖ್ಯವಾದ ವಿಷಯ ಇರಬೇಕು ಅಥವಾ ಗದ್ದಲವಾಗಬಹುದು ಅಂತ ಹಾಗೆ ಮಾಡಿರಬೇಕು ಅನಿಸಿ ಸುಮ್ಮನಾದರು.

ಒಂದೆರಡು ಗಂಟೆ 'ಫಿಲ್ಮ್ ಫೇರ್'ಗಾಗಿ ಬರೆಯಲಿರುವ ಲೇಖನದ ಪ್ರಶ್ನೆಗಳಿಗೆ ಉತ್ತರ ಪಡೆದ ನಂತರ ರೂಬೆನ್‌ರಿಗೆ, ಮಧುಬಾಲ ‘ಫಿಲ್ಮ್ ಫೇರ್' ಪತ್ರಿಕೆಯ ಇನ್ನೊಬ್ಬ ಪತ್ರಕರ್ತ ಗುಲ್ಷನ್ ಇವಿಂಗ್‌ರನ್ನು ಸಂದರ್ಶನಕ್ಕೆ ಕರೆಯದೆ ತಮ್ಮನ್ನೇ ಕರೆದಿರುವ ಸುಳಿವು ಹತ್ತಿತು; ಅದು ತಾವು ದಿಲೀಪ್ ಕುಮಾರ್‌ಗೆ ಆತ್ಮೀಯರಾದ ಕಾರಣ ಎಂದು. ಮತ್ತು, ಆ ವಿಷಯ ಸಿನಿಮಾ ಉದ್ಯಮದಲ್ಲಿ ಎಲ್ಲರಿಗೂ ತಿಳಿದದ್ದಾಗಿತ್ತು. "ಫಿಲ್ಮ್ ಫೇರ್' ಲೇಖನದ ವಿಷಯ ಹಾಗಿರಲಿ, ಮುಖ್ಯವಾಗಿ ನಾನು ನನ್ನ ಯೂಸುಫ್ ಖಾನರ (ದಿಲೀಪ್ ಕುಮಾರ್) ಬಗ್ಗೆ ಮಾತಾಡಬೇಕು," ಎಂದು ಭಾವುಕವಾಗಿ, ತಮ್ಮ ಸಂಬಂಧದ ಆರಂಭ, ಕೋರ್ಟ್ ಕೇಸ್ ಹಾಗೂ ಆ ನಂತರದ ಬೆಳವಣಿಗೆಗಗಳ ಬಗ್ಗೆ ಸುದೀರ್ಘವಾಗಿ ಹಂಚಿಕೊಳ್ಳುತ್ತಾಳೆ. ಮಾತಿನಿಂದ ಪರಸ್ಪರ ತಮಗೆ ಆದ ನೋವು, ಖೇದ, ಮನಸ್ತಾಪದ ಕುರಿತು ಮಾತಾಡಿ, ಅದನ್ನು ಹೇಗಾದರು ಮಾಡಿ ದಿಲೀಪ್ ಕುಮಾರ್‌ರಿಗೆ ತಲುಪುವಂತೆ, ಮತ್ತು ತಾನು ಇನ್ನೂ ದಿಲೀಪ್‌ರನ್ನು ಅದೆಷ್ಟು ಪ್ರೀತಿಸುತ್ತಿದ್ದೇನೆ ಎಂಬುದನ್ನು ತಿಳಿಯಪಡಿಸಲು ಬಯಸಿದ್ದಳು. ಕಣ್ಣೀರಾಗಿ, ಕರಗಿದ ದನಿಯಲ್ಲಿ ಆಕೆ ಆ ಮಾತೆಲ್ಲ ಹೇಳಿದ್ದಳು.

Image
Madhubala Book Cover

ಆದರೆ, ಮೊರಾರ್ಜಿ ದೇಸಾಯಿ ಕಾಲದ ಒಂದಷ್ಟು ನೈತಿಕತೆ ಜೀವಾಡುತ್ತಿದ್ದ ಪತ್ರಿಕೋದ್ಯಮದ ದಿನಗಳಾದ ಕಾರಣ, ಅಷ್ಟು ಸೆನ್ಸೇಷನಲ್ ಆಗಿ ವಿಷಯವನ್ನು ವೈಭವೀಕರಿಸಿ ಪ್ರಕಟಿಸಲಿಲ್ಲ. ಅದೊಂದು ದೊಡ್ಡ ಬ್ರೆಕಿಂಗ್ ನ್ಯೂಸ್ ಆಗಬಹುದಿತ್ತು. ಆದರೆ, ಎಂದಿನಂತೆ ಮಧುಬಾಲ ಮತ್ತು ದಿಲೀಪ್ ಕುಮಾರ್‌ರ ಖಾಸಗಿತನವನ್ನು ಗೌರವಿಸಿ, ಅವರ ವೈಯಕ್ತಿಕ ವಿಷಯಗಳನ್ನು ರೋಚಕವಾಗಿ ಬರೆಯಲಿಲ್ಲ. "ಐ ವಿಲ್ ನೆವರ್ ಫರ್ಗೆಟ್..." ತಲೆಬರಹದಡಿ ಪ್ರಕಟವಾದ ಆ ಲೇಖನದ ಕೊನೆಯಲ್ಲಿ, "...ಮತ್ತು ಕೊನೆಯಲ್ಲಿ ನನ್ನ ಅತ್ಯಂತ ಪ್ರೀತಿಪಾತ್ರರಾದ, ಆಮೇಲೆ ಶತ್ರುವಾಗಿ ಹೊಮ್ಮಿದವರನ್ನು ನಾನೆಂದೂ ಮರೆಯಲಾರೆ," ಅಂದಿದ್ದು ಯಥಾವತ್ತು ಪ್ರಕಟವಾಗಿತ್ತು.  

ತಮ್ಮ ಭುಜಕ್ಕೆ ವಾಲಿ ಆಕೆ ಅತ್ತು ಹಂಚಿಕೊಂಡ ಆ ಮಾತನೆಲ್ಲ ದಿಲೀಪ್ ಕುಮಾರ್‌ಗೆ ತಿಳಿಯಪಡಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿದ ರೂಬೆನ್, ಅದರಂತೆ ಹೋಗಿ ದಿಲೀಪ್ ಕುಮಾರ್‌ಗೆ ಆ ಮಾತೆಲ್ಲ ಕೇಳಿಸಲು ಹೋದರು. "ಆಕೆ ಇನ್ನೂ ನಿಮ್ಮತ್ತ ಆಶಾಭಾವನೆಯಿಂದ ನೋಡುತ್ತಿದ್ದಾಳೆ. ನೀವ್ಯಾಕೆ ಒಮ್ಮೆ ಆಕೆಯನ್ನು..." - ಎಂದು ಮಾತು ಮುಗಿಸುವ ಮುನ್ನವೇ ದಿಲೀಪ್ ಕುಮಾರ್ ಸಿಟ್ಟಿನಿಂದ ರೂಬೆನ್‌ರ ಮಾತು ಮೊಟಕುಗೊಳಿಸಿ, "ಇನ್ನೆಂಥ ಮೂರ್ಖ ಆಶಾಭಾವ!" ಅಂದುಬಿಟ್ಟರು. ಅದೇ ಕೊನೆ... ಮತ್ತೆಂದೂ ರೂಬೆನ್ ಅವರು ಮಧುಬಾಲ ಕುರಿತು ದಿಲೀಪ್ ಕುಮಾರ್ ಎದುರು ಪ್ರಸ್ತಾಪಿಸಲಿಲ್ಲ.

ಮನುಷ್ಯ ಜಗತ್ತಿನ ಎಷ್ಟೋ ಸಂಬಂಧಗಳು ತಾವಾಗೇ ಮುದುಡಿಹೋಗುವುದಿಲ್ಲ. ಘಾಸಿಗೊಂಡ ಎರಡು ಮನಸುಗಳ ನಡುವೆ ಆದ ಒಪ್ಪಂದ, ಮುಚ್ಚಳಿಕೆ ಒಂದೇ ಒಂದು "ಕ್ಷಮಿಸು" ಅಥವಾ "ಪರವಾಗಿಲ್ಲ ಬಿಡು" ಎಂಬೆರಡು ಪದಗಳಿಂದಲೂ ಸರಿಹೋಗಬಹುದು. ಆದರೆ, ನಮ್ಮ ಅಹಂನ ಕಾರಣ ಅದೆಂದೂ ರಿಪೇರಿ ಆಗದ ಸೈಕಲ್ ಟ್ಯೂಬ್‌ನಂತೆ ಬೊಕ್ಕೆಗಳಾಗಿ, ನೀರುಣಿಸದ ಸಸಿಗಳಂತೆ ಒಣಗಿಬಿಡುತ್ತದೆ. ಈ ಇಬ್ಬರ ನಡುವೆ ಆಗಿದ್ದೂ ಇದೇ.

ಈ ಪುಸ್ತಕ ಓದಿದ್ದೀರಾ?: ಮೋಟಮ್ಮ ಅವರ ಆತ್ಮಕತೆ 'ಬಿದಿರು ನೀನ್ಯಾರಿಗಲ್ಲದವಳು' ಪುಸ್ತಕದ ಆಯ್ದ ಭಾಗ | ಅಚ್ಚರಡಿ ಎಸ್ಟೇಟ್

ಪ್ರೇಮ್‍ನಾಥ್ ಮತ್ತು ದಿಲೀಪ್ ಕುಮಾರ್ ಗೆಳೆಯರಾಗಿದ್ದರು. ಖಾಸಗಿಯಾಗಿ ಮಾತನಾಡುವಾಗ ಮಧುಬಾಲ ತಮ್ಮಿಬ್ಬರಿಗೆ ಗುಲಾಬಿ ನೀಡಿದ ಸಂಗತಿ ತಿಳಿದು, ಆಕೆ ಇಬ್ಬರನ್ನೂ ಮೂರ್ಖರನ್ನಾಗಿ ಮಾಡಿದಳು ಎಂದು ಅಭಿಪ್ರಾಯಪಡುತ್ತಿದ್ದರು. ಯಾಕೆಂದರೆ, ಅವರಿಬ್ಬರಿಗೂ ಆಕೆ ಕೈಯಾರೆ ಬರೆದ ಪತ್ರಗಳನ್ನು ಕಳುಹಿಸಿದ್ದಳಂತೆ.

ಆದರೆ, 'ಮುಘಲ್-ಎ-ಅಜಾಮ್' ಚಿತ್ರೀಕರಣದಲ್ಲಿ ಮತ್ತೆ ಮಧುಬಾಲ ದಿಲೀಪ್ ಕುಮಾರ್‌ರಿಗೆ ಹತ್ತಿರವಾಗುವ, ಒಡೆದ ಕನಸಿನ ಬಾಗಿಲು ಮತ್ತೆ ಬಡಿಯುವ ಅನೇಕ ಘಟನೆಗಳು ಘಟಿಸಿದ್ದವು. ಇನ್ನು, ಅಂದಿನ ಪಾಕಿಸ್ಥಾನದ ಪ್ರಮುಖ ರಾಜಕೀಯ ನಾಯಕ ಝುಲ್ಫಿಕರ್ ಅಲಿ ಭುಟ್ಟೋ ಸಮಯ ಮಾಡಿಕೊಂಡು ನೇರ ಬೊಂಬಾಯಿ ತಲುಪಿ, ಮಧುಬಾಲಳ ಸಿನಿಮಾ ಚಿತ್ರೀಕರಣದ ಸ್ಟುಡಿಯೋಕ್ಕೆ ಬಂದು ಕುಳಿತುಬಿಡುತ್ತಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಭುಟ್ಟೋ ಬೊಂಬಾಯಿ ಹೈಕೋರ್ಟಿನ ಬ್ಯಾರಿಸ್ಟರ್ ಆಗಿದ್ದರು. ನೆಲ ಇಬ್ಭಾಗ ಆದ ಮೇಲೂ ಆತನಿಗೆ ಬೊಂಬಾಯಿ ಮೇಲಿನ ಪ್ರೀತಿ ಮತ್ತು ಅದಕ್ಕೆ ನೆಪ ಎಂಬಂತೆ ಮಧುಬಾಲರನ್ನು ಹುಡುಕಿಕೊಂಡು ಬಂದ ಅನೇಕ ಉದಾಹರಣೆಗಳಿವೆ. ಶ್ರೀಮಂತ ಮನೆತನದ, ಬೊಂಬಾಯಿಯಲ್ಲಿಯೇ ಅನೇಕ ಎಸ್ಟೇಟುಗಳ ಮಾಲೀಕರಾಗಿದ್ದ ಭುಟ್ಟೋ, 'ಮುಘಲ್-ಎ-ಅಜಾಮ್' ಚಿತ್ರೀಕರಣದ ಸಮಯದಲ್ಲಿ ಆಗಾಗ್ಗೆ ಬಂದು ಮಧುಬಾಲಳ ಆ 'ಅನಾರ್ಕಲಿಯ' ಮುಖವನ್ನು ನೋಡುತ್ತ ಕುಳಿತುಬಿಡುತ್ತಿದ್ದರಂತೆ. ದಿಲೀಪ್‌ರಿಂದ ಮುರಿದುಬಿದ್ದ ಸಂಬಂಧ, ಅದರಿಂದ ಚೇತರಿಸಿಕೊಳ್ಳಲಿದ್ದ ಮಧುಬಾಲಗೆ, ಬಹಳ ಕಡಿಮೆ ಅವಧಿಯ ಝುಲ್ಫಿಕರ್‌ರ ಈ ಬಂಧ ತನ್ನನ್ನು ಎಲ್ಲಿಗೂ ಕೊಂಡೊಯ್ಯದು ಎಂದು ಅರಿವಿದ್ದ ಕಾರಣ ಇದರಿಂದ ದೂರವಾದಳು.

Image
Madhubala 2

ತಾತ್ಕಾಲಿಕ ಸಂಬಂಧಗಳ ಕಾರಣ ಬೇಸತ್ತ, ಎಲ್ಲೂ ನೆಲೆ ಕಾಣದ ಮಧುಬಾಲ, ತನಗೊಂದು ಖಾಯಂ ಸಂಬಂಧಕ್ಕಾಗಿ ಹಾತೊರೆಯುತ್ತಿದ್ದಾಗ, 'ಚಲ್ತಿ ಕಾ ನಾಮ್ ಗಾಡಿ' ಮತ್ತು 'ಹಾಫ್ ಟಿಕೆಟ್' ಸಿನಿಮಾ ಮೂಲಕ ಪರಿಚಯವಾಗಿದ್ದು ಕಿಶೋರ್ ಕುಮಾರ್. ಚಿತ್ರೀಕರಣದ ಸಮಯದಲ್ಲಿ ಆತನ ಲವಲವಿಕೆ, ನಗಿಸುವ ಸ್ವಭಾವಕ್ಕೆ ಮಾರುಹೋದ ಮಧುಬಾಲ, ಯಾರ ಮರ್ಜಿಗೂ ಕಾಯದೆ ಮದುವೆ ಆಗಿಯೇಬಿಟ್ಟಳು (1960). ಇದರಿಂದ ಅನೇಕರಿಗೆ ಅಚ್ಚರಿಯಾದದ್ದು ನಿಜ. ಸ್ವತಃ ಕಿಶೋರ್ ಕುಮಾರ್ ಅಣ್ಣ ಅಶೋಕ್ ಕುಮಾರ್‌ಗೆ ಇವರ ನಿರ್ಧಾರ ಅಚ್ಚರಿ ತಂದಿತ್ತು.

'ಆರಾಮ್' (1951) ಚಿತ್ರದಲ್ಲಿ ಮಧುಬಾಲ ಜೊತೆ ಬಾಲನಟಿಯಾಗಿ ನಟಿಸಿದ, ಈಗ ‘ತಬುಸ್ಸಂ ಟಾಕೀಸ್' ಅನ್ನೋ ಯುಟ್ಯೂಬ್ ಚಾನೆಲ್ ನಡೆಸುವ ನಟಿ ತಬುಸ್ಸುಮ್ ಹೇಳುವಂತೆ, "ಜಗತ್ತಿನ ಪ್ರೇಮಿಗಳ ದಿನದಂದು ಜನಿಸಿದ ಮಧುಬಾಲ, ಬದುಕಿನುದ್ದಕ್ಕೂ ಹಿಡಿ ಪ್ರೀತಿಗಾಗಿ ಹಾತೊರೆದಳು. ಆದರೆ, ಅದೆಂದೂ ಆಕೆಗೆ ದಕ್ಕಲಿಲ್ಲ." "ಹೆತ್ತವರೇ ಹುಡುಕಿ ನೋಡಿ ಮದುವೆ ಮಾಡಿಕೊಟ್ಟ ಹುಡುಗಿಯರು ಅದೃಷ್ಟವಂತರಾಗಿರ್ತಾರೆ. ಆದರೆ, ನನ್ನ ಜೀವನದಲ್ಲಿ ಒಂದೆಡೆ ಅಬ್ಬಾ, ಇನ್ನೊಂದೆಡೆ ನನ್ನ ಇನಿಯ - ಇಬ್ಬರ ಅಹಂ ನನ್ನನ್ನು ಮೆತ್ತಗೆ ಮಾಡಿತು. ಈ ಕಾರಣಕ್ಕೆ ನಾನು ಬದುಕಲ್ಲಿ ಮತ್ತೆ ಮತ್ತೆ ಸೋತೆ, ಗೆದ್ದೂ ಸೋತೆ..." ಎಂದ ಮಧುಬಾಲಳ ಮಾತುಗಳನ್ನು ತುಂಬಾ ದುಃಖದಿಂದ ಹಂಚಿಕೊಳ್ಳುತ್ತಾರೆ ತಬುಸ್ಸುಮ್.

ಪುಸ್ತಕ: ಮಧುಬಾಲ (ಜೀವನ ಕಥನ) | ಲೇಖಕರು: ರಮೇಶ್ ಅರೋಲಿ | ಪುಟಗಳು: 140 | ಬೆಲೆ: ₹ 170 | ಪ್ರಕಾಶನ: ಸಂಗಾತ ಪುಸ್ತಕ | ಸಂಪರ್ಕ: +91 93417 57653

ನಿಮಗೆ ಏನು ಅನ್ನಿಸ್ತು?
3 ವೋಟ್