ಹೊಸ ಓದು | ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿದ್ದ ಎರಡು ಹೆಣ ಮತ್ತು ಕೊರೊನಾ

'ಸುಡು ಬಯಲು' ಪುಸ್ತಕದ ಆಯ್ದ ಭಾಗ | "ವೈವಿಧ್ಯಮಯವಾದ ಭಾರತ ದೇಶವನ್ನು ಭಾರತೀಯರಿಂದ ಆಳಲು ಆಗದು," ಎಂದು ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಹೇಳಿದ್ದರು. ಇದೊಂದು 'ಕುಹಕತನದ ಹೇಳಿಕೆ' ಎಂದೇ ನಾನು ಭಾವಿಸಿದ್ದೆ. ಆದರೆ ಇದೀಗ ಯಾತನೆ ಆಗುತ್ತಿದೆ. ನಮ್ಮ ದೇಶ, ದೇಶವಾಸಿಗಳು ಬದಲಾಗುವುದಿಲ್ಲವೇ? ಎಂಬ ಆತಂಕ ಕಾಡುತ್ತಿದೆ

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿ 15 ತಿಂಗಳಿನಿಂದ ಅಂತ್ಯಸಂಸ್ಕಾರ ಕಾಣದೆ ಅನಾಥವಾಗುಳಿದ ಎರಡು ಶವಗಳ ಸುದ್ದಿ ಕೇಳಿದಾಗ ವಿಚಲಿತಗೊಂಡಿದ್ದೆ. ಪರಮ ಪವಿತ್ರ ಗಂಗೆಯ ಒಡಲಲ್ಲಿ ಹರಿದು ಬಂದ ಸಾಲು-ಸಾಲು ಹೆಣಗಳು ನಿದ್ದೆಗೆಡಿಸಿದ್ದವು. ಅಲ್ಲದೆ, ಕೊರೊನಾ ಎರಡನೆಯ ಅಲೆ ಸಂದರ್ಭದಲ್ಲಿ ದಹನಕ್ಕಾಗಿ ಕಾಯುತ್ತಿದ್ದ ಮೃತದೇಹಗಳ ಸಾಲು ಕಂಡಾಗಲೂ ಯಾತನೆಯಿಂದ ನರಳಿದ್ದೆ. ಇಂತಹ ಚಿತ್ರಣ ನನ್ನನ್ನು ಮಾತ್ರವಲ್ಲ ನಿಮ್ಮೆಲ್ಲರನ್ನೂ ವಿಹ್ವಲರನ್ನಾಗಿಸಿರಬಹುದು.

ಇಎಸ್‌ಐ ವಿಚಾರದಲ್ಲಿ ಸರ್ಕಾರ ಅವಸರದ ಮತ್ತು ದೋಷಪೂರಿತ ತೀರ್ಮಾನಗಳನ್ನು ತೆಗೆದುಕೊಂಡಿದೆ. ಒಂದಂತೂ ನಿಜ, ಇಎಸ್‌ಐ ಕೆಲವು 'ಮೆಡಿಕಲ್ ಮಾಫಿಯಾ' ಮತ್ತು ಹಲವರ ನಿರುದ್ಯೋಗ ನಿವಾರಿಸುತ್ತಿರುವವರ ಇಲಾಖೆಯಾಗಿ ಉಳಿದಿದೆ. ಬಡ ಕಾರ್ಮಿಕರ ಆರೋಗ್ಯದ ಹೊಣೆ ಹೊರದೆ, ಆಂಗ್ಲರಿಗಿಂತಲೂ ಕೆಟ್ಟದಾಗಿ ವರ್ತಿಸುವ ಅಧಿಕಾರಿಗಳ ದಂಡು ಇಲ್ಲಿದೆ. ಕೇವಲ ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಿದರೆ, 15 ತಿಂಗಳಿನಿಂದ ಕೊಳೆಯುತ್ತಿದ್ದ ಶವಗಳ ಆತ್ಮಕ್ಕೆ ಶಾಂತಿ ಲಭಿಸುತ್ತದೆಯೇ? ಶವ ಅಂತ್ಯಸಂಸ್ಕಾರ ಕಾಣುವ ಮೊದಲೇ ವಿಧಿವಿಧಾನಗಳನ್ನು ನೆರವೇರಿಸಿರುವ ಕುಟುಂಬಸ್ಥರ ನೋವು, ಸಂಕಟ ಶಮನಗೊಳ್ಳುತ್ತದೆಯೇ? ಇಲ್ಲಿ ನಿರ್ಲಕ್ಷ್ಯದ ಹೊಣೆಯನ್ನು ಅಧಿಕಾರಿಗಳ ತಲೆಗೆ ಕಟ್ಟಿದರೆ ಸಾಲದು; ಇಲಾಖೆಯನ್ನು ಮುನ್ನಡೆಸುವವರು ಹೊರಬೇಕು, ಸರಿಪಡಿಸಲೂಬೇಕು.

Image

ಕೊರೊನಾ ಮೊದಲ ಮತ್ತು ಎರಡನೆಯ ಅಲೆಯ ಕಾಲದಲ್ಲಿ ಹಲವು ಪರಿಚಿತರು, ಸ್ನೇಹಿತರು, ಮಾರ್ಗದರ್ಶನ ಮಾಡುತ್ತಿದ್ದವರು ಘನತೆ ಇಲ್ಲದ ಅಂತ್ಯಸಂಸ್ಕಾರವನ್ನು ಕಾಣದಿದ್ದಾಗ ಸಾಕಷ್ಟು ಹಿಂಸೆಯಾಗಿತ್ತು. ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ, ಐಸಿಯು ಸಿಗದೆ, ವೆಂಟಿಲೇಟರ್ ಸಿಗದೆ, ಸೂಕ್ತ ಔಷಧ ದೊರಕದೆ, ಆಕ್ಸಿಜನ್ ಲಭ್ಯವಾಗದೆ ಜೀವ ಬಿಟ್ಟವರನ್ನು ಕಂಡು ಮಮ್ಮಲ ಮರುಗುತ್ತಿದ್ದೆ. ಅಗಲಿದ ಹಲವರಲ್ಲಿ ಕೆಲವರು ಕರೆ ಮಾಡಿ, ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ಔಷಧ ಕೊಡಿಸಲು ನರಳಿಕೆಯ ಧ್ವನಿಯಲ್ಲಿ ಕೇಳಿದಂತಾಗುತ್ತಿದೆ. ಗಂಗೆಯ ಒಡಲಲ್ಲಿ ಈಜುತ್ತಿದ್ದ ಮೃತದೇಹಗಳು ರಕ್ಷಿಸಿ, ರಕ್ಷಿಸಿ ಎಂದು ಮೊರೆ ಇಡುವಂತೆ ಭಾಸವಾಗುತ್ತಿದೆ. ಹೀಗಾಗಿ ಪ್ರಶ್ನಿಸುತ್ತಿರುವೆ - ಎಲ್ಲಿರುವೆ ಸಾವೇ? ಇದು ನಿನ್ನ ನಿಜವಾದ ವಿಜಯವೇ? ಎಲ್ಲಿದೆ ಸಾವೇ ನಿನ್ನ ಕುಟುಕು?

'ಸಾವು' ಒಂದು ಅನಿವಾರ್ಯ. ಪ್ರತಿಯೊಬ್ಬರಿಗೂ ಒದಗುವ ಒಂದು ಖಚಿತ ಘಟನೆ. 'ಸಾವು' ನಾವು ಎದುರಿಸಬೇಕಾದ ವಾಸ್ತವ. ಆದರೆ, ಯಾವಾಗ, ಎಲ್ಲಿ, ಹೇಗೆ ಬರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಕೊನೆಯ ದಿನ ಬರುತ್ತದೆ. ಆಗ ಕೊನೆಯ ಉಸಿರು ನಿಲ್ಲುತ್ತದೆ. ಓದುಗರೇ ನಿಲ್ಲಿ... ಗುಜರಾತಿನ ಕವಯಿತ್ರಿ ಪಾರುಲ್ ಕಾಖ‌ ಅವರು ರಚಿಸಿರುವ 'ಶವವಾಹಿನಿ ಗಂಗಾ' ಹಾಡು ಕೇಳಿಬರುತ್ತಿದೆ. ಅಂದಹಾಗೆ, ಕವನ ಆಲಿಸಿದ ಸ್ತ್ರೀದ್ವೇಷವಾದಿಗಳು ಸುಮಾರು 28 ಸಾವಿರ ನಿಂದನೆಗಳ ಸಂದೇಶಗಳನ್ನು ಹರಿಯಬಿಟ್ಟಿದ್ದಾರೆ. ಕಾರಣ, ಪಾರುಲ್ ಗಂಗೆಯಲ್ಲಿ ತೇಲುತ್ತಿದ್ದ ಹೆಣಗಳ ಬಗ್ಗೆ ಕವನ ರಚಿಸಿದ್ದರು. ಹೀಗಾಗಿ, ಟೀಕಿಸಿ ವಿಷಪೂರಿತ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. ಪಾರುಲ್ ಕವನವು ವಂಚನೆಯ ಉಲ್ಲೇಖದಿಂದ ಆರಂಭವಾಗುತ್ತದೆ. 'ಎಲ್ಲವೂ ಒಳ್ಳೆಯದೇ ಒಡೆಯನೇ.../ ನಿನ್ನ ರಾಜ್ಯದಲ್ಲಿ ಎಲ್ಲವೂ ಕ್ಷೇಮವೇ?/ ಇದೀಗ ಗಂಗಾ ಶವದ ವಾಹಕವಾಗಿದೆ..." ಹೀಗೆ ಸಾಗುತ್ತದೆ ಕವನ. ಹಲವು ಭಾಷೆಗಳಲ್ಲಿಯೂ ಕವನ ಭಾಷಾಂತರಗೊಂಡಿದೆ.
ಕ್ರೂರ ಕೊರೊನಾ ಇಂದಿಗೂ ಬಿಡದೆ ಕಾಡುತ್ತಲೇ ಇದೆ. ಇದರೊಂದಿಗೆ 'ಒಮಿಕ್ರಾನ್' ಕೂಡ ಸೇರಿಕೊಂಡಿದೆ. ಇವೆರಡೂ ಕೂಡಿ ನಮ್ಮನ್ನು 'ವಸಾಹತುಶಾಹಿ' ಯುಗಕ್ಕೆ ಕೊಂಡೊಯ್ದಂತೆ ಕಾಣುತ್ತಿದೆ. ಬಹಳ ಹಿಂದೆ, ಅಂದರೆ, ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬರಗಾಲ ಬಂದಾಗ, ಜನ ಹಸಿವಿನೊಂದಿಗೆ, ಸೋಂಕು ರೋಗಕ್ಕೂ ಒಳಗಾಗಿ ಜೀವಬಿಟ್ಟಾಗ ಹೊಳೆ-ಕಾಲುವೆ-ನದಿಪಾಲು ಮಾಡಿ ಕೈತೊಳೆದುಕೊಂಡಿದ್ದರಂತೆ. ಸ್ವಾತಂತ್ರ್ಯಾನಂತರದ ಭಾರತದಲ್ಲೂ ಇದೇ ದಯನೀಯ ಸ್ಥಿತಿ ಇದೆ. ಉತ್ತರ ಪ್ರದೇಶದ ಗಡಿಯಲ್ಲಿರುವ ಬಿಹಾರದ ಬಾಕ್ಸರ್‌ನಲ್ಲಿರುವ ಗಂಗಾ ನದಿಯ ತಟದಲ್ಲೂ 'ಉಸಿರಿಲ್ಲದ ದೇಹಗಳು' ಕೊಚ್ಚಿಕೊಂಡು ಹೋಗಿವೆ. ನೀರುಪಾಲಾದ ದೇಹಗಳ ಸಂಖ್ಯೆಯನ್ನು ಕೆಲವರು 48 ಎಂತಲೂ, ಮತ್ತು ಕೆಲವರು 150 ಎಂತಲೂ ಹೇಳುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ನಿಮಗೆ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್ ಇದ್ದರೆ ದಯವಿಟ್ಟು ಖಿನ್ನತೆ ಕಾಡದಂತೆ ನೋಡಿಕೊಳ್ಳಿ; ಏಕೆಂದರೆ...

ನಮ್ಮಲ್ಲಿ ಕೊರೊನಾ ಸೋಂಕಿನಿಂದ 50 ಸಾವಿರ ಸೋಂಕಿತರು ಮೃತಪಟ್ಟಿರುತ್ತಾರೆಂದು ಸರ್ಕಾರ ಹೇಳಿದೆ. ಆದರೆ, ಸುಮಾರು 3 ಲಕ್ಷ ಮಂದಿ ಮೃತಪಟ್ಟಿದ್ದಾರೆಂದು ಕೆಲ ಮೂಲಗಳು ಹೇಳುತ್ತಿವೆ. ಸಾವಿನ ಲೆಕ್ಕದಲ್ಲಿ ಭಾರೀ ಅಂತರವಿರುವುದರಿಂದ 'ಡೆತ್ ಆಡಿಟ್' ನಡೆಯಬೇಕೆಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ರಾಮಲಿಂಗಾ ರೆಡ್ಡಿ ಒತ್ತಾಯಿಸಿದ್ದರು. ಒಂದೊಂದು ಆಸ್ಪತ್ರೆಯಲ್ಲಿ 500ರಿಂದ 600 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕಿತರಿಗೆ ಕಳಪೆ ಔಷಧಿ ನೀಡಲಾಗಿದೆ. 16 ಕಂಪನಿಗಳಲ್ಲಿ ಎರಡು ಕಂಪನಿಗಳನ್ನು ಮಾತ್ರ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಎಲ್ಲರ ವಿರುದ್ಧವೂ ಕ್ರಮ ಕೈಗೊಂಡು ನಷ್ಟ ವಸೂಲು ಮಾಡಬೇಕೆಂದು ಈಶ್ವರ ಖಂಡ್ರೆ ಹೇಳಿದ್ದರು. 2018ರಲ್ಲಿ 4,83,511 ಜನ, 2019ರಲ್ಲಿ 5,08,584 ಜನ, 2020ರಲ್ಲಿ 65,530 ಜನ ಮೃತಪಟ್ಟಿದ್ದಾರೆ. ಇವರುಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಸರ್ಕಾರವೇ ಹೇಳಬೇಕಿದೆ. "ಇದೊಂದು ವೃಥಾ ಆರೋಪ, ಕೊರೋನಾ ಅಂಕಿ-ಅಂಶ ಮುಚ್ಚಿಡುವ ಉದ್ದೇಶ ನಮಗಿಲ್ಲ," ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ.

ನೆರೆಯ ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಆರು ಸಾವಿರ ಕೊರೋನಾ ಸಾವುಗಳನ್ನು ಮುಚ್ಚಿಟ್ಟಿದೆ ಎಂಬ ಆರೋಪವೂ ಕೇಳಿಬಂದಿತ್ತು. 2021ರ ಜೂನ್ 1ರವರೆಗೆ 13,235 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆಂದು ಆರ್‌ಟಿಐ ಅರ್ಜಿಯೊಂದಕ್ಕೆ ಕೇರಳ ಸರ್ಕಾರ ಉತ್ತರಿಸಿತ್ತು. ಆದರೆ, ಇದೇ ಅವಧಿಯಲ್ಲಿ 19,584 ಮಂದಿ ಕೊರೊನಾಗೆ ಬಲಿಯಾಗಿದ್ದಾರೆಂದು ಜನನ-ಮರಣ ಮುಖ್ಯ ನೋಂದಣಿ ಕಚೇರಿಯಿಂದ ಗೊತ್ತಾಗಿದೆ. 6,349 ಜನರ ಸಾವಿಗೆ ಕೊರೊನಾ ಕಾರಣವೆಂದು ಪತ್ರ ನೀಡಲಾಗಿದೆ.

Image

ಇನ್ನು, ಗುಜರಾತ್‌ನ 170 ಪುರಸಭೆಗಳ ಪೈಕಿ 68 ಪುರಸಭೆಗಳಲ್ಲಿ ಮರಣದ ದಾಖಲಾತಿಗಳು ದೊರೆತಿವೆ. ಇವು ಕೈಯಲ್ಲಿ ಬರೆದವಾಗಿವೆ. ಇದು 2019ರಿಂದ 2021ರ ಏಪ್ರಿಲ್‌ವರೆಗಿನ ದಾಖಲಾತಿ ಸಾವಿರಾರು ಪುಟಗಳಲ್ಲಿವೆ. ಅಮ್ರೇಲಿಯದ ಒಂದು ಚಿತಾಗಾರದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ 7 ಡೆತ್ ರಿಜಿಸ್ಟರ್‌ ಭರ್ತಿಯಾಗಿವೆ. ಪ್ರತೀ ರಿಜಿಸ್ಟರ್‌ನಲ್ಲಿ 100 ಪುಟಗಳಿವೆಯಂತೆ. 2020ರ ಬಳಿಕ 10,075 ಜನ ಮಾತ್ರ ಕೊರೊನಾಗೆ ಬಲಿಯಾಗಿದ್ದಾರೆಂದು ಗುಜರಾತ್ ಸರ್ಕಾರ ಹೇಳಿದೆ. ಆದರೆ, 2021ರ ಏಪ್ರಿಲ್ ಮಾಸ ಒಂದರಲ್ಲಿಯೇ 68 ಪುರಸಭೆಗಳ ವ್ಯಾಪ್ತಿಯಲ್ಲಿ 12,757 ಸಾವುಗಳಾಗಿವೆ ಎಂದು ಮರಣ ನೋಂದಣಿ ಇಲಾಖೆ ಹೇಳಿದೆ.

ಸಕಲ ಜೀವರಾಶಿಗಳನ್ನು ಪವಿತ್ರಗೊಳಿಸುವ ಗಂಗಾ ಮಾತೆಯೇ, ನಿನ್ನ ಒಡಲಲ್ಲಿ ತೇಲಿದ ಉಸಿರಿಲ್ಲದ ದೇಹಗಳೆಷ್ಟು? ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಕಟ್ಟಿಸಿದಂತೆ, ಎಷ್ಟು ಹೊಸ ಶವಾಗಾರಗಳನ್ನು ಕಟ್ಟಿಸಲಾಗಿದೆ? ಇನ್ನೂ ಅದೆಷ್ಟು ಅಂತ್ಯಸಂಸ್ಕಾರ ಕಾಣದೆ ಮೃತದೇಹಗಳು ಉಳಿದಿವೆ?

ಓದುಗರೇ, ಮಳೆಗಾಲದಲ್ಲೊಮ್ಮೆ ಭೂಮಿಯಿಂದ ಎದ್ದು ದೀಪದ ಬೆಳಕಿಗೆ ಬಂದು ಜೀವ ಬಿಡುವ ಹುಳುವಿನಂತೆ ಜನ ಕೂಡ ಕೊರೊನಾ ಸೋಂಕಿಗೆ ಆಹುತಿಯಾದರು. ಬೆಂಗಳೂರಿನ, ಸುತ್ತಲಿರುವ ಎಲ್ಲ ಚಿತಾಗಾರಗಳು ತುಂಬಿ ತುಳುಕುತ್ತಿದ್ದವು. ಅಗಲಿದ ರಕ್ತಸಂಬಂಧಿಗೆ 'ಗೌರವಯುತ ಅಂತ್ಯಸಂಸ್ಕಾರ' ನಡೆಸಲು ಆಗದ 'ಅಸಹಾಯಕ ಸ್ಥಿತಿ' ನಮ್ಮವರದಾಗಿತ್ತು.

ಈ ಲೇಖನ ಓದಿದ್ದೀರಾ?: ಗುಂಪಿನಲ್ಲಿ ವ್ಯಾಯಾಮ ಮಾಡುವುದು ಖಿನ್ನತೆಗೆ ಒಂದು ಬಗೆಯ ಚಿಕಿತ್ಸೆ - ಹೇಗೆ?

"ವೈವಿಧ್ಯಮಯವಾದ ಭಾರತ ದೇಶವನ್ನು ಭಾರತೀಯರಿಂದ ಆಳಲು ಆಗದು," ಎಂದು ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಹೇಳಿದ್ದರು. ಇದೊಂದು 'ಕುಹಕತನದ ಹೇಳಿಕೆ' ಎಂದೇ ನಾನು ಭಾವಿಸಿದ್ದೆ. ಆದರೆ ಇದೀಗ ಬಹಳ ಯಾತನೆಯಾಗುತ್ತಿದೆ. ನಮ್ಮ ದೇಶ, ದೇಶವಾಸಿಗಳು ಬದಲಾಗುವುದಿಲ್ಲವೇ? ಎಂಬ ಆತಂಕ ಕಾಡುತ್ತಿದೆ. ಇಂತಹ ದಯನೀಯ ಸ್ಥಿತಿ ತಲುಪಿರುವುದಕ್ಕೆ ಆಡಳಿತ ನಡೆಸುತ್ತಿರುವ ಪಕ್ಷ ಒಂದೇ ಕಾರಣವೆಂದು ಹೇಳಲಾರೆ. ನಮ್ಮನ್ನಾಳುತ್ತ ಬಂದ ಎಲ್ಲ ಪಕ್ಷಗಳ ಪಾಲು ಇದೆ ಎಂಬುದನ್ನು ಮರೆಯುವಂತಿಲ್ಲ. ಆದರೂ ನಮಗಿಂದು 'ಅಭಿವೃದ್ಧಿ', 'ಆತ್ಮನಿರ್ಭರ'ವೆಂಬ ಶಬ್ದಗಳು ಪೊಳ್ಳಿನ ಮಾತುಗಳೆಂಬಂತೆ ಭಾಸವಾಗದೆ ಇರದು.

ನನಗಿಲ್ಲಿ, ಕೊರೊನಾ ಮೊದಲ ಮತ್ತು ಎರಡನೆಯ ಅಲೆಯ ಕಾಲದಲ್ಲಾದ ಸಾವು-ನೋವುಗಳ ಕುರಿತಂತೆ ಪ್ರಕಟಗೊಂಡಿರುವ ಅಂಕಿ-ಸಂಖ್ಯೆಗಿಂತ ಹಲವು ಪಟ್ಟು ಹೆಚ್ಚು ಸಂಭವಿಸಿದೆ ಎಂಬುದು ದಿಗ್ಭ್ರಮೆ ಮೂಡಿಸುತ್ತಿದೆ. ಇದು ಆಧುನಿಕ ಭಾರತದ ಮಾನವ ದುರಂತ ಎಂದೇ ಬಣ್ಣಿಸಬಹುದಾಗಿದೆ. ಕೊರೊನಾ ಉಂಟುಮಾಡಿದ 'ಮಾನವ ಜೀವದ ಧ್ವಂಸ' ಕುರಿತಂತೆ 'ಸಮಗ್ರ ಸಂಶೋಧನೆ' ನಡೆಯುವ ಅಗತ್ಯವಿದೆ.

Image

ಹಲವು ತಜ್ಞರ ಪ್ರಕಾರ, 4.14 ಲಕ್ಷಕ್ಕಿಂತ ಹೆಚ್ಚು ಸಾವು-ನೋವುಗಳು ಸಂಭವಿಸಿವೆ. ಪ್ರಕಟಗೊಂಡಿರುವ ಅಂಕಿ-ಸಂಖ್ಯೆ ಉತ್ಪ್ರೇಕ್ಷೆಯಿಂದ ಕೂಡಿದ್ದು, ದಾರಿ ತಪ್ಪಿಸುವಂತಿದೆಯೇ ಎಂಬ ಅನುಮಾನವನ್ನು ಉಂಟುಮಾಡಿದೆ. ಇದನ್ನೇಕೆ ಹೇಳುತ್ತಿರುವೆನೆಂದರೆ, 20.7.2021ರಂದು ಬಿಡುಗಡೆಗೊಂಡ ವರದಿಯೊಂದು ನಮ್ಮ ದೇಶದಲ್ಲಾದ ಸಾವು-ನೋವುಗಳ ಸಂಖ್ಯೆಯನ್ನು ಲೆಕ್ಕ ಹಾಕಿದೆ. ಅಧಿಕೃತ ದಾಖಲೆಯಲ್ಲಿನ ಪ್ರಮಾಣ ಮತ್ತು ನಿರೀಕ್ಷಿತ ನೈಜ ಸಂಖ್ಯೆಯ ನಡುವಿನ ಅಂತರ 3 ದಶಲಕ್ಷದಿಂದ 4.7 ದಶಲಕ್ಷದಷ್ಟಿದೆ ಎಂದು ವರದಿ ಅಂದಾಜಿಸಿದೆ. ಇದು ಜನವರಿ 2020ರಿಂದ ಜೂನ್ 2021ರ ನಡುವೆ ನಡೆದ ಸಾವು-ನೋವುಗಳನ್ನು ಆಧರಿಸಿ ಪ್ರಕಟಿಸಿರುವ ವರದಿಯಾಗಿದೆ. ಇದನ್ನು ಕಂಡಾಗ ಖಚಿತವಾದ ಸಾವು-ನೋವುಗಳ ಅಂಕಿ-ಸಂಖ್ಯೆ ನೀಡುವಲ್ಲಿ ಸರ್ಕಾರದ ಅಸ್ಪಷ್ಟತೆಯನ್ನು ಸಾಬೀತುಪಡಿಸುತ್ತದೆ. ಇದಕ್ಕೆ ಪುರಾವೆಯಾಗಿ ಬೆಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ 15 ತಿಂಗಳ ನಂತರ ಎರಡು ಶವಗಳು ಕಾಣಿಸಿಕೊಂಡಿರುವುದನ್ನು ಕಾಣಬಹುದಾಗಿದೆ.

ಇರಲಿ, 2014-15ರ ಆಸುಪಾಸಿನಲ್ಲಿ ಆಫ್ರಿಕಾದಲ್ಲಿ 'ಎಬೋಲಾ' ಕಾಣಿಸಿಕೊಂಡಿತ್ತು. ಇದು ತೀವ್ರತರದ ಮಾರಣಾಂತಿಕ ರೋಗವೆಂದು ಗುರ್ತಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಸಾವು-ನೋವುಗಳನ್ನುಂಟು ಮಾಡಿತ್ತು. ಇಡೀ ಜಗತ್ತು ಬೆಚ್ಚಿಬೆರಗಾಗಿತ್ತು. ಆಗ ನಡೆದ ಸಾವು-ನೋವುಗಳಿಗೆ ಎಬೋಲಾ ಮಾತ್ರ ಕಾರಣವಲ್ಲ. ಸಿಡುಬು, ಏಡ್ಸ್, ಮಲೇರಿಯಾ, ಟಿ.ಬಿ ಕಾಡಿದ್ದರಿಂದ ಸಾವು-ನೋವು ಹೆಚ್ಚಾಗಿತ್ತು. ಗೊತ್ತಿರಲಿ, ದುರ್ಬಲ ಆರೋಗ್ಯ ವ್ಯವಸ್ಥೆಯಿಂದಾಗಿಯೇ ಸಿಡುಬು, ಏಡ್ಸ್, ಮಲೇರಿಯಾ, ಟಿ.ಬಿ.ಯಂತಹ ಮಾರಕ ರೋಗಗಳಿಗೆ ಚಿಕಿತ್ಸೆ ನೀಡಲು ಅಂದು ಆಗಿರಲಿಲ್ಲ. ಹೀಗಾಗಿ ಇವುಗಳಿಗಿಂತ 'ಎಬೋಲಾ' ಉಂಟುಮಾಡಿದ ಹಾನಿಯ ಪ್ರಮಾಣ ಕಡಿಮೆ ಇತ್ತು.

ಪುಸ್ತಕ: ಸುಡು ಬಯಲು (ಸತ್ಯಾನ್ವೇಷಣೆಯ ಬೆನ್ನೇರಿ...) | ಲೇಖಕರು: ಎಂ ಎಸ್ ಮಣಿ | ಪ್ರಕಟಣೆ: ಐ ಎಚ್ ಎಸ್ ಪ್ರಕಾಶನ, ವಿಜಯಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ | ಪುಟಗಳು: 364 | ಬೆಲೆ: ₹375 | ಸಂಪರ್ಕ ಸಂಖ್ಯೆ: 97411 57603

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180