ಏಣಗಿ ಬಾಳಪ್ಪ ಅವರ 'ಬಣ್ಣದ ಬದುಕಿನ ಚಿನ್ನದ ದಿನಗಳು' ಕೃತಿಯ ಆಯ್ದ ಭಾಗ

Enagi 5

ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕಥನದ ಈ ಪುಸ್ತಕ ಇದೀಗ ಎಂಟನೇ ಮುದ್ರಣ ಕಂಡಿದೆ. ಕೃತಿಯ ಆಯ್ದ ಭಾಗಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ಶಾಲೆಗಳಿಗೆ ಪಠ್ಯವಾಗಿವೆ. ಬಸವ ಜಯಂತಿಯಂದು (ಮೇ 3) ಮೈಸೂರಿನ ಕಲಾಮಂದಿರದಲ್ಲಿ ಮರು ಬಿಡುಗಡೆ ಆಗಲಿರುವ ಈ ಕೃತಿಯ 'ಶಿವಧೋ ಬಸವಣ್ಣ' ಹೆಸರಿನ ಅಧ್ಯಾಯ ಇಲ್ಲಿದೆ

ಬಸವೇಶ್ವರ ನಾಟಕಕ್ಕೆ ವಚನಗಳನ್ನು ಬಳಸಿದ್ದು ಛಲೋ ಆಯ್ತು. ಅಲ್ಲಿಯವರೆಗೆ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಬಸವಣ್ಣನ ವಚನಗಳನ್ನು ಉದಾಹರಿಸುತ್ತಿದ್ರು. ಇದು ಬಿಟ್ರೆ ಪುಸ್ತಕಗಳಲ್ಲಿ ಕಾಣುತ್ತಿದ್ದೆವು. ಆದ್ರ ನಾಟಕಕ್ಕೆ ವಚನಗಳನ್ನು ಬಳಸಿದಾಗ ಜನ ಮುಗಿಬಿದ್ದು ನೋಡಿದ್ರು. ಇದರಿಂದ ಶಾಸ್ತ್ರೀಯ ಸಂಗೀತದಲ್ಲಿ ಕೂಡ ವಚನ ಗಾಯನ ಸುರುವಾಯ್ತು. ಇದೇ ಹೊತ್ತಿಗೆ ಪಂಡಿತ ಸಿದ್ಧರಾಮ ಜಂಬಲದಿನ್ನಿ, ಮಲ್ಲಿಕಾರ್ಜುನ ಮನ್ಸೂರ ಅವರು ಆಕಾಶವಾಣಿ ಮುಖಾಂತರ ವಚನ ಗಾಯನವನ್ನು ಪ್ರಸಿದ್ಧಿಗೊಳಿಸಿದ್ರು. ಇನ್ನುಳಿದ ಗಾಯಕರೂ ಕಾರ್ಯಕ್ರಮಗಳಲ್ಲಿ ವಚನಗಳನ್ನು  ಹಾಡಲಿಕ್ಕೆ ಸುರು ಮಾಡಿದ್ರು.

ನಾಟಕದ ಆರಂಭದಲ್ಲಿ ಬಸವಣ್ಣ ಹುಟ್ಟಿರ‍್ತಾನ. ಹೆಣ್ಣುಮಕ್ಕಳೆಲ್ಲ ಕೂಡಿ ಬಸವಣ್ಣಗ ಹೆಸರು ಇಡಾಕ ಜೋಗುಳ ಹಾಡ್ತಾರ. ಇದು ನಲವಡಿ ಶ್ರೀಕಂಠಶಾಸ್ತ್ರಿಗಳ ರಚನೆ.

ಜೋ ಜೋ ಜೋ ಜೋ
ಭುವನ ಪಾವನ ಬಸವ ಜೋ
ಶಿವನ ವಾಹನ ಬಸವ ಜೋ
ಕವಿದ ಕತ್ತಲೆ ಕಳೆಯ ಬಂದ ರವಿಯೇ ಜೋ
ಗಿಳಿಯೇ ತುಂಬಿದ ಹೊಳೆಯೇ ಜೋ
ಬೆಳೆಯ ಹೊನ್ನಿನ ಮಳೆಯೇ ಜೋ
ಮಗುವೆ ಜೋ ಸೊಗವೇ ಜೋ ನಗುವೆ ಜೋ
ನಂದ ನಂದಿಯೇ ವರವೇ ಜೋ
ಮಂದನಗೆಯ ಮಗುವೆ ಜೋ
ಚೆಂದ ಜೋ ಚೆಲುವೆ ಜೋ ನಲುವೇ ಜೋ
ಇಳೆಯ ಧರ್ಮ ನಿಳೆಯ ಜೋ
ಫಲಿತ ಪುಣ್ಯ ನಿಚಯ ಜೋ
ಬೆಳಕೆ ಜೋ, ಗಳಿಕೆ ಜೊ, ಬಯಸಿದಾ ಬಯಕೆ ಜೋ

Image
Enagi 3

ಮಂದ ಬಿಜ್ಜಳನ ದರ್ಬಾರದ ಕಲಾವತಿ ಅನ್ನುವ ಗಾಯಕಿ ಹಾಡು ಹೇಳ್ತಾಳ. ಅದು ಅಕ್ಕಮಹಾದೇವಿ ವಚನ:
ಪುರುಷನ ಮುಂದೆ ಮಾಯೆ
ಸ್ತ್ರೀ ಎಂಬ ಅಭಿಮಾನವಾಗಿ ಕಾಡಿತ್ತು ನೋಡಾ...

ಅದೇ ಕಲಾವತಿ ವಚನಗಳನ್ನು ಪಾಠ ಮಾಡುವಾಗ ಹೇಳುವ ಹಾಡಿದು:
ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು
ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿ.
ಮುಟ್ಟಿಸಲು ತೊಳಗಿ ಬೆಳಗುತ್ತಿದ್ದಿತಯ್ಯ ಶಿವನ ಪ್ರಕಾಶ
ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯ ಅಸಂಖ್ಯಾತ ಪ್ರಮಥರು
ಶಿವಭಕ್ತರಿದ್ದ ದೇಶ ಪಾವನವೆಂಬುದು ಹುಸಿಯೇ ಗುಹೇಶ್ವರ

Image
Enagi 4
ಬಸವಣ್ಣನ ಪಾತ್ರದಲ್ಲಿ ಏಣಗಿ ಬಾಳಪ್ಪ

ಇದೇ ನಾಟಕದಲ್ಲಿ ಕಲಾವತಿ ಮುಂದೆ ದಲಿತ ಸ್ತ್ರೀಯೊಬ್ಬಳು ಬಂದು, "ನನ್ನ ಮ್ಯಾಲೆ ಅಪವಾದ ಹೊರಿಸುವುದಲ್ಲದೆ, ಬಸವಣ್ಣನವರ ಮ್ಯಾಲೂ ಅಪವಾದ ಹೊರಿಸ್ಯಾರ. ಏನ ಮಾಡ್ಲಿ ತಾಯಿ?" ಅಂತ ಕೇಳಿದಾಗ ಆಕೆ ಅಕ್ಕಮಹಾದೇವಿಯ ಈ ವಚನ ಹೇಳುತ್ತಾಳೆ:
ಬೆಟ್ಟದಾ ಮೇಲೊಂದು ಮನೆಯ ಮಾಡಿ
ಮೃಗಗಳಿಗೆ ಅಂಜಿದೊಡೆ ಎಂತವ್ವ?

ಎಲ್ಲರಿಗೂ ಗೊತ್ತಿರುವ ವಚನವನ್ನು ಭಿನ್ನವಾಗಿ ಹಾಡಿದಾಗ ಪ್ರೇಕ್ಷಕರು ತಲ್ಲೀನರಾಗ್ತಿದ್ರು.

ಹರಳಯ್ಯ ತನ್ನ ಜನರೊಂದಿಗೆ ಬಸವಣ್ಣನ ಧ್ಯಾನ ಮಾಡ್ತಾ ಹೊಂಟಾನ. ಆಗ ಈ ಭಜನೆ ಮಾಡ್ತಾರ:
ಶಿವಧೋ ಬಸವಣ್ಣ ನಮ್ಮ ಬಸವಣ್ಣ
ಶಿವನ ಚಿತ್ಕಳೆ ಚೆನ್ನಬಸವಣ್ಣ
ಶಿವನ ಭಕ್ತಿಯೇ ಬೆಳೆ ಬಸವಣ್ಣ ನಮ್ಮ ಬಸವಣ್ಣ ಶಿವಧೋ
ಆರು ಆಚಾರದ ಚೆನ್ನಣ್ಣ
ಮೂರನರ್ಪಿಸಿದಂಥ ಬಸವಣ್ಣ
ವೀರಶೈವವನೊಂದು ವಿಶ್ವಧರ್ಮವ ಮಾಡಿ ಬಳಕೆಗೆ ತಂದವ ಬಸವಣ್ಣ

ಇದನ್ನು ಓದಿದ್ದೀರಾ?: 'ಕರಿಡಬ್ಬಿ' ಪುಸ್ತಕದ ಆಯ್ದ ಭಾಗ | ಕೋವಿಡ್ ಕಾಲದಲ್ಲಿ ನ್ಯಾಯಾಂಗ ಏನು ಮಾಡಿತು?

ಇನ್ನು ಬಸವಣ್ಣ ಕಲ್ಯಾಣ ಬಿಟ್ಟು, ಅಂದ್ರ ಮಂತ್ರಿ ಪದವಿಯನ್ನು ಬಿಟ್ಟು ಕಪ್ಪಡಿ ಕ್ಷೇತ್ರಕ್ಕ (ಕೂಡಲ ಸಂಗಮ) ಹೊಂಟಾನ. ಜನರೆಲ್ಲ ಬಸವಣ್ಣಗ ಬೇಡಿಕೊಳ್ತಾರ. ಬಿಟ್ಟು ಹೋಗಬ್ಯಾಡ್ರಿ ಅಂತ ಕೆಲವರು ಅಳತಿರ‍್ತಾರ. ಅವರಿಗೆ ಸಮಾಧಾನ ಮಾಡಾಕ ಕೆಲವು ಹಿರಿಯರು ಈ ಹಾಡು ಹೇಳ್ತಾರ:

ಅಳಬೇಡ ಕಲ್ಯಾಣದ ಜೀವಿ ಅಳಬೇಡ
ಅಕಳಂಕ ಗುರು ಬಸವ ಎಮ್ಮನ್ನು ಅಗಲಿದನೆಂದು ಅಳಬೇಡ
ನೋಟದಲಿ ರೂಪಿರಲು ಮಾನಸದಿ ನೆನಹಿರಲು
ಕಿವಿಯೊಳಗೆ ಸುಳಿವ ಅಮೃತದ ಸುಳಿಯಿರಲು
ಅಗಲುವುದೆಂತಯ್ಯ
ಕಲ್ಯಾಣದ ಜೀವಿ ಅಳಬೇಡ....

- ಹಿಂಗ ಬಸವಣ್ಣನ ನಾಟಕಕ್ಕ ಸಿದ್ಧರಾಮ ಜಂಬಲದಿನ್ನಿ ಸಂಗೀತ ಸಂಯೋಜನೆ ಮಾಡಿದ್ರು. ಇವು ಯಾಕ ಪರಿಣಾಮ ಆದವು ಅಂದ್ರ, ಸನ್ನಿವೇಶ ಆಧರಿಸಿ ವಚನಗಳನ್ನು ಹೊತ್ತಿದ್ದರಿಂದ. ಇದರಿಂದ ಪ್ರೇಕ್ಷಕರಿಗೆ ಅಭಿನಯ, ಸಂಗೀತ, ಹಾಡು ಎಲ್ಲಾ ಕೂಡಿ ರಸದೌತಣ ಸಿಗುತ್ತಿತ್ತು. ಹಿಂಗಾಗಿ, ಅದು ಯಶಸ್ವಿ ಆತು. ಇದಕ್ಕಿಂತ ಮುಖ್ಯ ಅಂದ್ರ, ಆಗ ಜನರಿಗೆ ಶರಣರ ವಚನಗಳು ಕಿವಿಗೆ ಬೀಳುವಂಗ ಆದವು. ಹಿಂಗ ವಚನಗಳಿಗೆ ಪ್ರಚಾರ ಸಿಕ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್