ಹೊಸ ಓದು | 'ತಲೈವ' ರಜನೀಕಾಂತ್ ಕುರಿತು ನಟ ಅಶೋಕ್ ಬರೆದ 'ಗೆಳೆಯ ಶಿವಾಜಿ' ಪುಸ್ತಕದ ಆಯ್ದ ಭಾಗ

ಮದ್ರಾಸಿನ ಮೌಂಟ್‌ ರೋಡ್‌. ಶಿವಾಜಿಯ ಬೃಹತ್ ಕಟೌಟ್‌ ಮೇಲೆ ಕಿಡಿಗೇಡಿಗಳು ರಾತ್ರೋರಾತ್ರಿ ರಾಜಕೀಯ ಪಕ್ಷದ ಬಾವುಟ ಕಟ್ಟಿಬಿಟ್ಟಿದ್ದರು. ಶಿವಾಜಿ ಕೋಪಗೊಂಡು, ಆ ಬಾವುಟ ತೆಗೆಯಲು ಜನ ಕಳಿಸಿದ. ಸ್ವಲ್ಪ ಹೊತ್ತು ಯೋಚಿಸಿದ ನಂತರ, ಬಾವುಟ ತೆಗೆಯದಂತೆ ಸಂದೇಶ ಕೊಟ್ಟು, ಅಲ್ಲಿ ಎಲ್ಲ ಪಕ್ಷಗಳ ಬಾವುಟ ಕಟ್ಟಲು ಇನ್ನೊಂದು ತಂಡ ಕಳಿಸಿದ!

1996ರಲ್ಲಿ ಶಿವಾಜಿ ರಾಜಕೀಯಕ್ಕೆ ಬರಲು ಪ್ರಶಸ್ತವಾದ ಸಮಯವಾಗಿತ್ತು ಎಂದು ಸಾಮಾನ್ಯ ನಾಗರಿಕರು, ಬುದ್ಧಿಜೀವಿಗಳು, ಅಭಿಮಾನಿಗಳು, ಹಿತಚಿಂತಕರು ಎಲ್ಲರ ಅಭಿಪ್ರಾಯವಾಗಿತ್ತು, ಶಿವಾಜಿಗಾಗ 45ರ ಪ್ರಾಯ. ತನ್ನ ಅರ್ಧ ಗಂಟೆಯ ಭಾಷಣದಲ್ಲಿ ಒಂದು ಸರ್ಕಾರವನ್ನೇ ಉರುಳಿಸುವಷ್ಟು ಪ್ರಭಾವಶಾಲಿಯಾಗಿದ್ದ.

Eedina App

ಅಂದು ನಡೆದ ಒಂದು ಘಟನೆಯನ್ನು ನನ್ನ ಸ್ನೇಹಿತನೊಬ್ಬ ವಿವರಿಸಿದ್ದ. ಕೆಲಸದ ನಿಮಿತ್ತ ಮದ್ರಾಸಿಗೆ ಹೋಗಿದ್ದ ನನ್ನ ಗೆಳೆಯ, ಮತ್ತೆ ಬೆಂಗಳೂರಿಗೆ ಬರಲೆಂದು ರೈಲ್ವೆ ಸ್ಟೇಷನ್‌ಗೆ ಹೋಗಿದ್ದನಂತೆ. ಟಿ.ವಿ.ಯೊಂದರಲ್ಲಿ ಶಿವಾಜಿ ಭಾಷಣ ಪ್ರಸಾರವಾಗುತ್ತೆ ಎಂಬುದು ಅನೌನ್ಸ್ ಆದ ಕೂಡಲೇ ಇಡೀ ನಿಲ್ದಾಣದಲ್ಲಿ ಮೌನ ಆವರಿಸಿಬಿಟ್ಟಿತಂತೆ. ನಿಂತವರು ನಿಂತಲ್ಲಿಯೇ, ಕುಳಿತವರು ಕುಳಿತಲ್ಲಿಯೇ ಚಲಿಸದೆ ಇವನ ಸಂಪೂರ್ಣ ಭಾಷಣವನ್ನು ಆಲಿಸಿಯೇ ಕದಲಿದರಂತೆ. ಇಂಥಾ ಮೋಡಿಯನ್ನು ಅಂದು ಮಾಡಿದ್ದ ಶಿವಾಜಿ, ಇಂದಿಗೂ 25 ವರ್ಷಗಳ ನಂತರವೂ ಉಳಿಸಿಕೊಂಡಿರುವುದು ಅಲೌಕಿಕ ಶಕ್ತಿಯ ಪ್ರಭಾವವೇ ಇರಬೇಕು.

ಈ ಲೇಖನ ಓದಿದ್ದೀರಾ?: ವಾರಾಂತ್ಯದ ಓದು | ಚಳಿಗಾಲಕ್ಕೂ ಯಾತ್ರಾರ್ಥಿ-ಪ್ರವಾಸಿಗರ ವಾಹನ ಅಪಘಾತಗಳಿಗೂ ಏನು ಸಂಬಂಧ?

AV Eye Hospital ad

ವರ್ಷಕ್ಕೆ ಹದಿನೈದು-ಇಪ್ಪತ್ತು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಶಿವಾಜಿ, ಈಗ ವರ್ಷಕ್ಕೆ ಅಥವಾ ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಿದ್ದರೂ, ಅಭಿಮಾನಿಗಳು ಕಾತರದಿಂದ ಕಾಯುವುದಿದೆ. ತಿಂಗಳು ಮೊದಲೇ ‘ಬಲ್ಕ್ ಬುಕಿಂಗ್’ ಮಾಡಿ ಬಿಡುಗಡೆಗೆ ಕಾತರಿಸುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ‘ರಜನೀ ಸಿನಿಮಾ ವೀಕ್ಷಣೆ’ಯ ಬೋನಸ್ಸನ್ನು, ವಿಮಾನ ಯಾನ, ಊಟ, ವಸತಿಯ ಸಮೇತ ನೀಡುತ್ತಿದ್ದುದೂ ಉಂಟು. ಈ ಮಟ್ಟದ ಜನಪ್ರಿಯತೆ ಹೆಚ್ಚುತ್ತಿದ್ದಂತೆ, ಶಿವಾಜಿಯ ರಾಜಕೀಯ ಪ್ರವೇಶಕ್ಕೆ ಒತ್ತಡ ಹೆಚ್ಚಾಯಿತು. ಅಭಿಮಾನಿಗಳಷ್ಟೇ ಅಲ್ಲ, ರಾಜಕೀಯ ಪರಿಣಿತರೂ ಶಿವಾಜಿಯ ನಿರ್ಧಾರಕ್ಕೆ ಕಾಯುತ್ತಿದ್ದರು. 2016ರಲ್ಲಿ ಶ್ರೀಮತಿ ಜಯಲಲಿತಾ, 2018ರಲ್ಲಿ ಶ್ರೀ ಕರುಣಾನಿಧಿಯವರ ನಿರ್ಗಮನದ ನಂತರ, ಶಿವಾಜಿಗೆ ರಾಜಕೀಯ ಪ್ರವೇಶ ಅನಿವಾರ್ಯವಾಯಿತು. ಅವರಿಬ್ಬರ ಅನುಪಸ್ಥಿತಿಯಲ್ಲಿ ನಿರ್ಮಾಣವಾದ ‘ಶೂನ್ಯ’ವನ್ನು ತುಂಬಲು ಶಿವಾಜಿಯೇ ಸೂಕ್ತ ವ್ಯಕ್ತಿ ಎಂದು ಎಲ್ಲರಿಗೂ ಅನಿಸಿತು. ಶಿವಾಜಿಯ ಸಹನಟ ಪ್ರತಿಸ್ಫರ್ಧಿ ಕಮಲ್ ಹಾಸನ್ ತನ್ನ ರಾಜಕೀಯ ಪ್ರವೇಶವನ್ನು ಪ್ರಕಟಿಸಿದ ಮೇಲೆ ಶಿವಾಜಿಗೆ ಒತ್ತಡ ಅಧಿಕವಾಯಿತು. ಈ ಅಭಿಮಾನಿಗಳ ಮನಸ್ಥಿತಿಯೇ ಒಂದು ರೀತಿ ಉನ್ಮಾದದ ಪರಾಕಾಷ್ಠೆ. ತಮ್ಮ ತಲೈವ ಈಗ ಈ ಸವಾಲನ್ನು ಸ್ವೀಕರಿಸದೆ ಹೋದರೆ, ತಾವೆಲ್ಲ ‘ಗಾಂಡು’ಗಳಾದಂತೆ ಎಂದು ಭಾವಿಸತೊಡಗಿದರು. ಅಭಿಮಾನಿಗಳ ಮನಸ್ಥಿತಿ ಅವರ ಆರಾಧ್ಯ ದೇವರಿಗಿಂತ ಚೆನ್ನಾಗಿ ಬೇರೆಯವರಿಗೆ ಅರ್ಥವಾಗುವುದಿಲ್ಲ. ಶಿವಾಜಿ ರಾಜಕೀಯ ಪ್ರವೇಶವನ್ನು ಘೋಷಿಸಿಯೇಬಿಟ್ಟ. ಅಭಿಮಾನಿಗಳು ಹುಚ್ಚೆದ್ದು ಕುಣಿದರು. ತಮ್ಮ ಕನಸಿನ ಆದರ್ಶ ರಾಜ್ಯ ಉದಯವಾಗಿಬಿಡುತ್ತದೆ, ತಮ್ಮೆಲ್ಲ ದ್ರಾರಿದ್ಯ ದೂರವಾಗಿಬಿಡುತ್ತದೆ, ತಮ್ಮದೇ ಆದ ಸ್ವಂತ ಸೂರು ಲಭಿಸುತ್ತದೆ, ತಮ್ಮ ಮಕ್ಕಳೂ ಒಳ್ಳೆಯ ಬಟ್ಟೆ ತೊಟ್ಟು, ಟೈ ಕಟ್ಟಿ, ಬೂಟ್ ಹಾಕಿಕೊಂಡು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಾರೆ, ಎಂಜಿನಿಯರ್, ಡಾಕ್ಟರ್ ಆಗುತ್ತಾರೆ, ಸಾಫ್ಟ್‌ವೇರ್ ಉದ್ಯೋಗಿಯಾಗಿ ಲಕ್ಷಾಂತರ ಸಂಬಳ ತರುತ್ತಾರೆ ಎಂದು ಕನಸು ಕಾಣತೊಡಗಿದರು.

ಶಿವಾಜಿ ರಾಜಕೀಯಕ್ಕೆ ಬರುತ್ತಾನಾ? ಇಲ್ಲವಾ? ಬಂದರೆ ಮುಖ್ಯಮಂತ್ರೀನಾ? ಅಲ್ಲವಾ? ಯಾವಾಗ ಬರಬಹುದು? ಇವೇ ಊಹಾಪೋಹಗಳು, ಚರ್ಚೆಗಳು, ಟಿ.ವಿ ಸಂವಾದಗಳು, ಸಿದ್ಧಾಂತಗಳು, ಭರವಸೆಗಳು... ಓಹ್, ಒಂದಾ ಎರಡಾ? ಎಲ್ಲ ಕಥಕ್ಕಳಿಗಳು, ಯಕ್ಷಗಾನಗಳು, ಜಲ್ಲಿಕಟ್ಟುಗಳೂ, ತಮಾಷಾಗಳೂ ಮುಗಿದು, 2021ರ ಜನವರಿಯಲ್ಲಿ ಶಿವಾಜಿ ಬೆಂಗಳೂರಿಗೆ ಬಂದ. ಗ್ರಹಣ ಬಿಟ್ಟ ಚಂದ್ರನಂತೆ ನಿರುಮ್ಮಳವಾಗಿದ್ದ. ನನಗೆ ನಲವತ್ತು ವರ್ಷಗಳ ಹಿಂದಿನ ಶಿವಾಜಿಯನ್ನು ಕಂಡಂತಾಯಿತು.

ಇವನ 'ಅಣ್ಣಾತ್ತೆ' ಚಿತ್ರದ ಶೂಟಿಂಗ್‌ನಲ್ಲಿ ಕೆಲವರಿಗೆ ಕರೋನ ಆಗಿ, ಇವನಿಗೂ ರಕ್ತದೊತ್ತಡ ವಿಪರೀತ ಏರುಪೇರಾಗಿ, ಡಾಕ್ಟರ್ ಸಲಹೆಯಂತೆ ವಿಶ್ರಾಂತಿಗೆ ತೆರಳಿದ. ಶೂಟಿಂಗ್ ನಿಂತಿತು. ನಂತರ ಇವನೊಂದು ಪ್ರಕಟಣೆ ನೀಡಿ, ದೈವ ಸಂದೇಶದಂತೆ ತಾನು ರಾಜಕೀಯಕ್ಕೆ ಬರುವುದಿಲ್ಲವೆಂದೂ ಅಭಿಮಾನಿಗಳು, ಹಿತೈಷಿಗಳು, ಚಿತ್ರರಂಗದ ಸಮಸ್ತರೂ ಹಾಗೂ ತನ್ನನ್ನು ಸಾಕಿ, ಸಲಹಿ, ‘ತಲೈವ’ ಎಂದು ಕೊಂಡಾಡಿದ ತಮಿಳು ಜನತೆಯೂ ಅರ್ಥ ಮಾಡಿಕೊಳ್ಳಬೇಕೆಂದು ಪ್ರಾರ್ಥಿಸಿದ. ಸರ್ಕಸ್ ಟೆಂಟಿನಷ್ಟು ದೊಡ್ಡದಾಗಿ ಊದಿದ್ದ ಬಲೂನು ‘ಟುಸ್’ ಎಂದು ನೆಲ ಕಚ್ಚಿತು.

ಈ ಲೇಖನ ಓದಿದ್ದೀರಾ?: ವಾರದ ವಿಶೇಷ | ಹಬ್ಬಕ್ಕೆ ತಿಂಗಳಿರುವಾಗಲೇ ಸಡಗರವೇ ತಾನಾಗುತ್ತಿದ್ದ ಅಮ್ಮನೇ ನನ್ನ ಪಾಲಿನ ಹುತ್ತರಿ

ಆದರೆ, ಶಿವಾಜಿಯ ಅಭಿಮಾನಿಗಳು ಇವನನ್ನು ಮನಸಾರೆ ಮೆಚ್ಚಿದ್ದರು. ಅವರು ಇವನನ್ನು ಮೆಚ್ಚಿದ್ದೇ ಇವನ ‘ಡೌನ್ ಟು ಅರ್ತ್’ ಸ್ವಬಾವಕ್ಕಾಗಿ. ಕಪ್ಪು ಬಣ್ಣದ, ಸಿಕ್ಕಿದ್ದನ್ನು ತಿನ್ನುವ, ಸಾರಾಯಿ ಕುಡಿಯುವ, ತನಗನಿಸಿದ್ದನ್ನು ಮಾಡುವ, ಮಾಡಿದ್ದನ್ನು ದಕ್ಕಿಸಿಕೊಳ್ಳುವ, ಅದನ್ನು ಒಪ್ಪಿಕೊಳ್ಳುವ ತಮ್ಮ ಬಂಧುವಾಗಿ ಇವನನ್ನು ಸ್ವೀಕರಿಸಿದ್ದರು. ಇವನಿಗೆ ಜಾತಿ, ಮತ, ಅಂತಸ್ತು, ರಾಜಕಾರಣ, ಸಿರಿತನ ಇವಾವುಗಳ ಮಸಿ ಅಂಟಿಕೊಳ್ಳಲಿಲ್ಲ; 'ಪ್ಯೂರ್ ಲೈಕ್ ನೆಕ್ಟರ್.' ಇಂಥಾ ಶಿವಾಜಿ, ನಲವತ್ತು ವರ್ಷಗಳ ಕಾಲ ತಮ್ಮೆಲ್ಲ ಜಂಜಾಟಗಳನ್ನು ಕೆಲ ಕಾಲ ಮರೆಯುವ, ಮರೆತು ದುಡಿಯುವ ‘ಹಂಗಾಮು’ ಕೊಟ್ಟಿದ್ದ ಶಿವಾಜಿ ಅತ್ತಾಗ ಜನ ಅತ್ತಿದ್ದಾರೆ, ನಕ್ಕಾಗ ನಕ್ಕಿದ್ದಾರೆ, ಹೊಡೆದಾಗ ತಮ್ಮ ತೊಡೆ ತಟ್ಟಿದ್ದಾರೆ, ಅವನ ಕಣ್ಣುಗಳ ಕನಸನ್ನು ತಮ್ಮ ಮನಸ್ಸಿನ ಹೊಲದಲ್ಲಿ ಬಿತ್ತಿ ಬೆಳೆ ತೆಗೆದಿದ್ದಾರೆ, ಸುಗ್ಗಿ ಮಾಡಿದ್ದಾರೆ, ಸುಗ್ಗಿಯ ಹಾಡಿನೊಂದಿಗೆ ಕುಣಿದಿದ್ದಾರೆ, ಶಿವಾಜಿಯೂ ಮನುಷ್ಯನೇ ಎಂಬುದನ್ನು ಅರ್ಥೈಸಿಕೊಂಡಿದ್ದಾರೆ. ಎಪ್ಪತ್ತು ವರ್ಷದವನಾದರೂ ತಮಗಾಗಿ ಜೀವ ಕೊಡಲೂ ಹಿಂಜರಿಯದ ಈ ಮಹಾನ್ ವ್ಯಕ್ತಿಯನ್ನು, ಅವರು ಕೇವಲ ನಟನೆಂದು ಭಾವಿಸಿ, ಇವನನ್ನು ಬಿಟ್ಟು ಮತ್ತೊಂದು ಓಡುವ ಕುದುರೆಯ ಹಿಂದೆ ಹೋಗುವವರಲ್ಲ; ಅವರ ಪ್ರೀತಿ, ಅಂತಃಕರಣ ಅಂಥದ್ದು.

ತಮಿಳುನಾಡಿನ ಜನ ರಾಜಕೀಯವಾಗಿ ತುಂಬಾ ಪ್ರಜ್ಞಾವಂತರು. ಹಾಗೆಯೇ, ತುಂಬಾ ಭಾವಜೀವಿಗಳು. ತಮ್ಮ ಭಾಷೆ, ಜಲ, ನೆಲ, ರಾಜಕೀಯ ನಾಯಕರು, ನಟ-ನಟಿಯರು, ಸಾಹಿತಿಗಳ ಬಗ್ಗೆ ತುಂಬಾ ಅಭಿಮಾನ. ಕೆಲವೊಮ್ಮೆ ಅದು ಅಂಧಾಭಿಮಾನ ಅಥವಾ ದುರಭಿಮಾನ ಎನಿಸಿದರೂ, ಅವರು ತಮ್ಮ ಸಂಸ್ಕೃತಿ, ಜಾನಪದ, ಪರಂಪರೆ, ಶಿಲ್ಪಕಲೆ ಮುಂತಾದವುಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡಬಲ್ಲರು.

ಚಿತ್ರರಂಗದಲ್ಲಿ ಶಿವಾಜಿಯ ಏಳಿಗೆಯನ್ನು ಸಹಿಸದ ಕೆಲವು ವ್ಯಕ್ತಿಗಳು, ಅದರಲ್ಲೂ ಸಹನಟರಲ್ಲಿ ಕೆಲವರು, ಇವನ ಬಗ್ಗೆ ವಿಷ ಕಾರುತ್ತಿದ್ದರು. ಒಂದು ಸಣ್ಣ ಅವಕಾಶ ಸಿಕ್ಕರೂ ಅವನನ್ನು ಎಳೆದು, ಕೆಡವಿ, ನಿರ್ನಾಮ ಮಾಡಬೇಕೆಂಬ ರೋಷ ಅವರಲ್ಲಿ ತುಂಬಿ ತುಳುಕುತ್ತಿತ್ತು. ಶಿವಾಜಿ ಕನ್ನಡದವನೆಂಬ ಅಂಶವನ್ನೇ ಎತ್ತಿ ಆಡುತ್ತ, ಅವನು ತಮಿಳು ಜನತೆಗೆ ಸೇರಿದವನಲ್ಲ, ಪರಕೀಯ ಎಂಬುದನ್ನು ಪದೇಪದೆ ಎತ್ತಿ ಆಡುತ್ತ, ಅವನ ತೇಜೋವಧೆಗೆ ಪ್ರಯತ್ನಿಸುತ್ತಲೇ ಇದ್ದರು. ಆದರೆ, ಶಿವಾಜಿ ಇವರ ಕೈಗೆ ಎಟುಕದೆ ಎತ್ತರಕ್ಕೆ ಬೆಳೆದುಬಿಟ್ಟಿದ್ದ ಮತ್ತು ಬೆಳೆಯುತ್ತಲೇ ಇದ್ದ.

ಈ ಲೇಖನ ಓದಿದ್ದೀರಾ?: ರುಚಿ-ಅಭಿರುಚಿ | ಹುಣಸೂರು ಮಂದಿಗೆ ಮಾತ್ರ ರುಚಿ ಗೊತ್ತಿರೋ ಹುಡಿಬಾಡಿನ ಉಪ್ಸಾರು

ಇವನದೊಂದು ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ, ಮದ್ರಾಸಿನ ಮೌಂಟ್‌ ರೋಡಿನಲ್ಲಿ, ಶಿವಾಜಿಯ ಬೃಹತ್ ಕಟೌಟ್ ನಿಲ್ಲಿಸಿದ್ದರು. ಕೆಲವು ಕಿಡಿಗೇಡಿಗಳು ಇವನ ಎತ್ತಿದ ಕೈಮೇಲೆ, ರಾಜಕೀಯ ಪಕ್ಷದ ಬಾವುಟವೊಂದನ್ನು ರಾತ್ರೋರಾತ್ರಿ ಕಟ್ಟಿಬಿಟ್ಟಿದ್ದರು. ತಪ್ಪು ಸಂದೇಶವನ್ನು ಸಾರಬಹುದಾಗಿದ್ದ ಈ ಕೃತ್ಯದಿಂದ ಶಿವಾಜಿ ಬಹು ಕೋಪಗೊಂಡು, ಆ ಬಾವುಟವನ್ನು ತೆಗೆದು ಹಾಕಲು ತನ್ನ ಜನಗಳನ್ನು ಕಳುಹಿಸಿದ. ತುಂಬಾ ಉದ್ವೇಗಗೊಂಡಿದ್ದ ಶಿವಾಜಿ ಒಂದರ ಮೇಲೊಂದರಂತೆ ಸಿಗರೇಟುಗಳನ್ನು ಸೇದುತ್ತ, ಶತಪಥ ತಿರುಗುತ್ತ ಯೋಚಿಸುತ್ತಿದ್ದ. ಇದ್ದಕ್ಕಿದ್ದಂತೆ ತನ್ನ ನಡಿಗೆ ನಿಲ್ಲಿಸಿ, ಬಾವುಟ ತೆಗೆಯಲು ಹೋಗಿದ್ದ ಮಂದಿಗೆ ಅದನ್ನು ತೆಗೆಯದಂತೆ ತಿಳಿಸಿ, ಅಲ್ಲಿ ಎಲ್ಲ ಪಕ್ಷಗಳ ಬಾವುಟಗಳನ್ನು ಕಟ್ಟಲು ಇನ್ನೊಂದು ತಂಡವನ್ನು ಕಳುಹಿಸಿದ. ಕ್ಷಣಾರ್ಧದಲ್ಲಿ ನಡೆದ ಈ ಬೆಳವಣಿಗೆಯಿಂದ ರಜನೀ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಒಂದು ಪಕ್ಷದ ಬಾವುಟವನ್ನು ತೆಗೆದು ಆ ಪಕ್ಷದ ಕೆಂಗಣ್ಣಿಗೆ ಗುರಿಯಾಗಬೇಕಿದ್ದ ಶಿವಾಜಿ, ಎಲ್ಲ ಪಕ್ಷಗಳ ಬಾವುಟಗಳನ್ನು ತನ್ನ ಕೈಯ್ಯಲ್ಲಿ ಹೊತ್ತು ಎಲ್ಲ ಪಕ್ಷಗಳಿಗೆ ಪ್ರಿಯನಾಗಿಬಿಟ್ಟ. ಇಂಥಾ ಚಾಣಾಕ್ಷತನ ಶಿವಾಜಿಯಲ್ಲಿದೆ. ಇದು ಅವನಿಗೆ ತಾರಾಪಟ್ಟ ದೊರಕಿದ ಮೇಲೆ. ಚಿತ್ರರಂಗದ ಒಳಹೊರಗುಗಳನ್ನು ಅರ್ಥಮಾಡಿಕೊಳ್ಳುತ್ತ, ತಮಿಳುನಾಡಿನ ಸಂಕೀರ್ಣ ರಾಜಕಾರಣವನ್ನು ಅರ್ಥೈಸಿಕೊಂಡು, ತನ್ನ ಜನಪ್ರಿಯತೆಯನ್ನೂ, ತಾರಾಪಟ್ಟವನ್ನೂ, ಜನಗಳ ನಿರ್ವಾಜ್ಯ ಪ್ರೇಮವನ್ನೂ ಗಳಿಸಿಕೊಳ್ಳಲು ಸಫಲವಾಗಿದ್ದಾನೆಂದರೆ, ಅದು ಸುಲಭಸಾಧ್ಯವಾದ ಕಾರ್ಯವಲ್ಲ. ಮನುಷ್ಯ ಪ್ರಯತ್ನದೊಂದಿಗೆ, ದೈವಸಹಾಯವೂ ಇಲ್ಲದಿದ್ದರೆ, ಇದೆಲ್ಲ ಸಾಧ್ಯವಿಲ್ಲವೆಂದು ನನ್ನ ನಂಬಿಕೆ.

ಡಿಸೆಂಬರ್ 12ರ ಸೋಮವಾರ ಬಿಡುಗಡೆ ಆಗಲಿದೆ ಪುಸ್ತಕ

ಇದೆಲ್ಲವನ್ನೂ ಅರ್ಥೈಸಿಕೊಂಡು, ಅವನ ಪ್ರಗತಿಯನ್ನು ಅಭಿಮಾನದಿಂದ ನೋಡುತ್ತ, ವಿರಳವಾಗುತ್ತಿದ್ದ ನಮ್ಮ ಭೇಟಿಯಲ್ಲಿ ಚರ್ಚಿಸಿದಾಗ, ಕೆಲ ವಿಷಯಗಳಲ್ಲಿ ಅವರಿಗೇ ಒಂದು ಕ್ಲಾರಿಟಿ, ಸ್ಪಷ್ಟತೆ ದೊರಕುತ್ತಿತ್ತು. ನಮ್ಮ ಭೇಟಿಯಲ್ಲಿ ಇಂಥ ಮುನ್ನೆಲೆಗೆ ಬಂದ ವೈಯಕ್ತಿಕ ವಿಷಯಗಳು ಗೌಣವೆನ್ನುವಷ್ಟರ ಮಟ್ಟಿಗೆ ಹಿನ್ನೆಲೆಗೆ ಸರಿದುಬಿಟ್ಟವು. ಶಿವಾಜಿಯ ವಿಶೇಷ ಗುಣಗಳನ್ನು ಅವನೊಂದಿಗೆ ಬೆಳೆಸುತ್ತ, ಅದು ಅವನಿಗೆ ಪ್ರಶಂಸೆಯ ರೀತಿಯಾಗಲೀ, ಅವನನ್ನು ಹೊಗಳಿ ಏನಾದರೂ ಪಡೆದುಕೊಳ್ಳುವ ಹುನ್ನಾರವಾಗಲೀ ನನ್ನಲ್ಲಿರಲಿಲ್ಲ. ಇದನ್ನು ಅವನಾಗಲೀ ನಾನಾಗಲೀ ಪ್ರಕಟ ಮಾಡದೆ ಮಾತನಾಡದಿದ್ದರೂ, ಈ ವಿಷಯವಾಗಿ ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯವಿರಲಿಲ್ಲ. ಅರ್ಧ ಶತಮಾನದ ನಮ್ಮ ಸ್ನೇಹದಲ್ಲಿ ನಾವೆಲ್ಲರೂ ಕಂಡು ಕೇಳರಿಯದ ವ್ಯಕ್ತಿ ಮತ್ತು ವ್ಯಕ್ತಿತ್ವ ಶಿವಾಜಿಯದಾದ್ದರಿಂದ, ನನ್ನ ಅರಿವಿಗೆ ಗೋಚರಿಸಿದಷ್ಟು ಸತ್ಯವನ್ನು ಹೇಳಬೇಕೆಂಬುದು ನನ್ನ ಪ್ರಯತ್ನ. ಎಲ್ಲ ದಿಕ್ಕುಗಳಿಂದಲೂ ನಕಾರಾತ್ಮಕ ಸ್ಪಂದನೆಗಳು ದೂಡಿಕೊಂಡು ಬರುತ್ತಿರುವಾಗ, ಶಿವಾಜಿ ಸಕಾರಾತ್ಮಕವಾಗಿ ಸ್ಪಂದಿಸಿ, ಗಾಡಾಂಧಕಾರದ ನಡುವೆ ಬೆಳಗುವ ದೊಂದಿಯಾಗಬೇಕೆನ್ನುವುದು ನನ್ನ ಬಯಕೆ.

* * *

ಬೀ ಕಲ್ಚರ್ ಪ್ರಕಾಶನದಿಂದ ಪ್ರಕಟವಾಗಿರುವ ಈ ಪುಸ್ತಕ, ಇದೇ ಡಿಸೆಂಬರ್ 12ರ ಸೋಮವಾರ ಬಿಡುಗಡೆಯಾಗಲಿದೆ. ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ. ಅಧ್ಯಕ್ಷತೆ - ಅಗ್ರಹಾರ ಕೃಷ್ಣಮೂರ್ತಿ, ಅತಿಥಿ - ಸಿ ಎಸ್ ದ್ವಾರಕಾನಾಥ್, ಕೃತಿ ಬಿಡುಗಡೆ - ನೀನಾಸಂ ಸತೀಶ್, ಕೃತಿ ಪರಿಚಯ - ಸುಮನಾ ಕಿತ್ತೂರು. ಪುಸ್ತಕದ ಲೇಖಕರಾದ ನಟ ಅಶೋಕ್ ಮತ್ತು ಪ್ರಕಾಶಕರು ಉಪಸ್ಥಿತರಿರಲಿದ್ದಾರೆ.

ಪುಸ್ತಕ: ಗೆಳೆಯ ಶಿವಾಜಿ | ಲೇಖಕರು: ಅಶೋಕ್ | ಪ್ರಕಟಣೆ: ಬೀ ಕಲ್ಚರ್ (Bee Culture), ಮಲ್ಲೇಶ್ವರಂ, ಬೆಂಗಳೂರು | ಪುಟಗಳು: 128 | ಬೆಲೆ: ₹200 | ಸಂಪರ್ಕ ಸಂಖ್ಯೆ: ವಿಷ್ಣು ಕುಮಾರ್ ಎಸ್ - 97412 21367, ದಿಲಾವರ್ ರಾಮದುರ್ಗ - 98867 49111

ನಿಮಗೆ ಏನು ಅನ್ನಿಸ್ತು?
1 ವೋಟ್
eedina app