ಹೊಸ ಓದು | ರವಿಕುಮಾರ್ ನೀಹ ಅವರ 'ಅರಸು ಕುರನ್ಗರಾಯ' ಪುಸ್ತಕದ ಆಯ್ದ ಭಾಗ

ಬಂಡೆಯಲ್ಲಿ ಬರಹ ಸಿಕ್ಕ ಖುಷಿಯಲ್ಲಿ ನಾವಿದ್ದಾಗಲೇ, ಆ ಜಾಗ ಖರೀದಿಸಿದ್ದವರು ಬಂದರು. ಶಾಸನ ಸಿಕ್ಕರೆ ಇಡೀ ಜಮೀನನ್ನೇ ಸರ್ಕಾರ ಕಿತ್ತುಕೊಳ್ಳುತ್ತದೆ ಎಂದು ಅವರ ಆತಂಕ. ನಾವೆಲ್ಲ ಏನೇ ಹೇಳಿದರೂ ಅವರಿಗೆ ಸಮಾಧಾನವಿಲ್ಲ. ಕೊನೆಗೆ, ಜೆಸಿಬಿಯವರನ್ನು ಕರೆಸಿ, "ರಾತ್ರೀನೇ ಈ ಬಂಡೆ ಒಡೆದುಹಾಕಿ. ಇದಿದ್ರೆ ಅಲ್ವಾ ಎಲ್ರೂ ಬರೋದು," ಎಂದು ಹೇಳಿಬಿಟ್ಟರು!

ಸುತ್ತಾಟದ ಒಂದು ದಿನ, ದನ ಮೇಯಿಸುತ್ತಿದ್ದ ಸುಶೀಲಮ್ಮ ಎನ್ನುವವರನ್ನು ಹಾಗೇ ಕುರನ್ಗರಾಯ, ಕೋಟೆ ಇತ್ಯಾದಿ ಬಗ್ಗೆ ಕೇಳುತ್ತ, "ಇಲ್ಲಿ ಏನಾದರೂ ಬರಹಗಳಿವೆಯಾ?" ಎಂದು ಕೇಳಿದೆ. ಅವರ ಜೊತೆಗೆ ಇನ್ನಿಬ್ಬರು ಹೆಂಗಸು, ಒಬ್ಬ ಹುಡುಗನೂ ಇದ್ದ.

ಕೈ ತೋರಿಸುತ್ತ, "ಅಗಳಪ್ಪ ಅಲ್ಲೇನೋ ಇರಂಗೈತೆ, ಆತಪ್ಪನ ಗುಂಡಿನ ಹತ್ತಿರ," ಎಂದು ಹೇಳಿದರು. ಜೊತೆಯಲ್ಲಿದ್ದ ಹುಡುಗ, "ಬನ್ನಿ ಸಾರ್ ತೋರಿಸುತ್ತೇನೆ," ಎಂದು ಕರೆದೊಯ್ದ, ಆತಪ್ಪ/ ಪಾತಪ್ಪನ ಗುಂಡು ತೋರಿಸಿದ. ಆಗಲೇ ಸಂಜೆಯಾಗಿತ್ತು. ವಿಶಾಲ ಬಂಡೆಯ ಮೇಲೆ ಪಾತಪ್ಪನನ್ನು ಕೆತ್ತಲಾಗಿತ್ತು. ಕೈಯಲ್ಲಿದ್ದ ಕತ್ತಿಯಿಂದ ಒಬ್ಬನನ್ನು ತಿವಿಯುತ್ತ, ಮತ್ತೊಬ್ಬನನ್ನು ತುಳಿಯುತ್ತಿರುವ ಶಿಲ್ಪ ವಿಶೇಷವಾಗಿತ್ತು. ಆ ಉಬ್ಬುಶಿಲ್ಪದ ಕೆತ್ತನೆ ಸೌಂದರ್ಯ, ಠೀವಿ, ರಾಜ ಗಾಂಭೀರ್ಯ ನೋಡಿದರೆ, ಅದು ಕುರನ್ಗನದೇ ಶಿಲ್ಪವಾಗಿರಬಹುದೆನಿಸುತ್ತದೆ. "ಸಂಜೆ ಆಗುತ್ತಲೇ ಪ್ರಾಣಿಗಳೆಲ್ಲ ಕೆಳಕಿಳಿಯುತ್ತವೆ ಬನ್ನಿ ಸಾರ್..." ಎಂದು ಕರೆದೊಯ್ದರು. ರಾತ್ರಿ ಕಾಂತುಗೆ, ಲಕ್ಷ್ಮೀಶನಿಗೆ ಕಾಲ್ ಮಾಡಿ, "ನಾಳೆ ಹೋಗೋಣ ಬನ್ನಿ," ಎಂದು ಕರೆದೆ.

ಮರುದಿನ, ಅಂದರೆ, 29.10.2020ರಂದು ಎದ್ದು, ಸುಮಾರು ಹನ್ನೊಂದು ಗಂಟೆಗೆ ಪಾತಪ್ಪನ ಗುಂಡಿನತ್ರ ಹೋದೆವು. ಅದನ್ನು ಕೆತ್ತಿರುವ ಕ್ರಮ, ಉಬ್ಬುಶಿಲ್ಪ ಆಕರ್ಷಕ ಎನಿಸಿತು. ಜೊತೆಗೆ ಇಲ್ಲೆಲ್ಲ ಇಷ್ಟೊಂದು ದೊಡ್ಡ ಬಂಡೆಗಳಿವೆ. ಈ ಬಂಡೆಗಳಲ್ಲಿ ಏನಾದರೂ ಬರಹಗಳಿವೆಯೇ ಎಂದು ಎಲ್ಲ ಬಂಡೆಗಳನ್ನು ಶೋಧಿಸಲು ಶುರುಮಾಡಿದೆವು. ಕಾಂತು ಮಚ್ಚು ತಂದಿದ್ದ. ಬಂಡೆ ಪಕ್ಕದಲ್ಲಿರುವ ಎಲ್ಲ ಗಿಡಗಳನ್ನು ಕಡಿಯುವುದು-ನೋಡುವುದು ಹೀಗೆ ಮಾಡುತ್ತ ಮಧ್ಯಾನ್ಹವೇ ಆಗಿಬಿಟ್ಟಿತ್ತು ಸುಸ್ತು, ನಿರಾಸೆ ಆವರಿಸತೊಡಗಿತು.

ಈ ಪುಸ್ತಕ ಓದಿದ್ದೀರಾ?: ಹೊಸ ಓದು | ಅಂಬೇಡ್ಕರ್ ಚಳವಳಿಯಲ್ಲಿದ್ದ ಮಹಿಳೆಯರ ಕುರಿತ 'ನಾವೂ ಇತಿಹಾಸ ಕಟ್ಟಿದೆವು' ಪುಸ್ತಕದ ಆಯ್ದ ಭಾಗ

ನಾವು ಹೀಗೆ ಬಂಡೆ-ಬಂಡೆ ಹುಡುಕುತ್ತಿರುವುದನ್ನು ನೋಡಿದ ಅಲ್ಲಿನ ಶೇಖರಪ್ಪ ಮತ್ತು ಸುಶೀಲಮ್ಮ, "ಕೊಲ್ಮೆ ಗುಂಡು ಎದುರಿಗೆ ಬೇವಿನ ಮರದ ಕೆಳಗಿರೋ ಒಂದು ಬಂಡೆಯಲ್ಲಿ ಇನ್ನೆಂತದೋ ಚಿತ್ರ ಇದ್ದಂಗಿತ್ತು ನೋಡಿ," ಎಂದರು. ಅಲ್ಲಿ ಸಾಕಷ್ಟು ಬಂಡೆಗಳು, ಎಲ್ಲ ಬಂಡೆಗಳ ಬಳಿ ಬೇವಿನ ಮರಗಳೇ. ಹುಡುಕಿಯೇ ಹುಡುಕಿದೆವು. ಮತ್ತೆ ಅವರನ್ನು ಕೇಳಿದೆವು. "ತುಂಬಾ ಹಿಂದೆ ನೋಡಿದ್ದೆವು. ಒಟ್ಟು ಇಲ್ಲೇ ಎಲ್ಲೋ ಇದೆ. ಹುಡುಕಿದರಷ್ಟೇ ಕಾಣುವುದು ಅನ್ನುತ್ತೆ," ಅಂದರು.

ನಾವು ಬೇವಿನಮರ, ಬಂಡೆ ಹೀಗೆ ಹುಡುಕುತ್ತ ಹೋದೆವು. ಅವರು ಹೇಳಿದ ಸ್ಥಳಗಳ ಆಚೆಗೂ ಎಲ್ಲೆಲ್ಲಿ ಬೇವಿನ ಮರದೊಂದಿಗೆ ಬಂಡೆ ಇದೆಯೋ ಅವುಗಳನ್ನೆಲ್ಲ ತಡಕುತ್ತ ಹೋದೆವು. ಮೂರೂವರೆ ನಾಲ್ಕು ಗಂಟೆ ಸುಮಾರು ಮಣ್ಣಿನಕೋಟೆಯನ್ನು ಬಳಸಿ, ಮಾರಮ್ಮನ ಗುಡಿತವಾಸಿ ಸುತ್ತುಹಾಕಿಕೊಂಡು ಒಂದು ಬಂಡೆಯ ಬಳಿಗೆ ಬಂದೆವು. ಆ ಬಂಡೆಯಲ್ಲಿ ಗಣೇಶನದು ಏನೋ ಚಿತ್ರ ಹತ್ತಿರಕ್ಕೆ ಬಂದಾಗ ಅಸ್ಪಷ್ಟವಾಗಿ ಕಾಣಿಸತೊಡಗಿತು. ಅವರು ಹೇಳಿದ ಬಂಡೆ ಇದೇ ಇರಬಹುದೇ ಎಂದರೆ, ಇಲ್ಲಿ ಬೇವಿನ ಮರದ ಜೊತೆ ಸಿಗ್ರೆಮರ ಇತ್ತು.

Image

ನಾನು ಕಾಂತನನ್ನು ಕರೆದು ಅಲ್ಲಿ ಇರುವ ಇದ್ದಿಲಿನಿಂದ ಅದು ಹೇಗಿದೆಯೋ ಹಾಗೆ ಬರೆಯಲು ಹೇಳಿದೆ. ಹಾಗೆ ನನಗೆ ಅದರ ಪಕ್ಕದಲ್ಲಿ ಒಂದು ಬರಹ ಇರುವಂತೆ ಕಂಡಿತು. ಅವರಿಗೆ ಹೇಳಿದೆ. ಲಕ್ಷ್ಮೀಶನ ಕಣ್ಣು ತುಂಬಾ ಸೂಕ್ಷ, ಆ ಗಣೇಶನ ಚಿತ್ರ ತಿದ್ದುತ್ತಿದ್ದಾಗ, "ಸಾರ್ ಇಲ್ಲಿ ಸಾಕಷ್ಟು ಬರಹ ಇರುವಂತಿದೆ ಸಾರ್," ಎಂದು ಮೊಬೈಲ್‌ನಲ್ಲಿ ಹಿಡಿದು ತೋರಿದ. ನಮಗೆ ಖುಷಿ ಇಮ್ಮಡಿಗೊಂಡಿತ್ತು. ದಣಿವು ಕಡಿಮೆಯಾದಷ್ಟು ಸಂಭ್ರಮಿಸಿದೆವು.

ಬೀರಂ ಜಗದೀಶ್‌ಗೆ ಫೋನ್ ಮಾಡಿ, ರಂಗೋಲಿ ಪುಡಿ, ಇನ್ನೊಂದಷ್ಟು ಇದ್ದಿಲು ತರಲು ಹೇಳಿದೆವು. ಬೀರಂ ರಂಗೋಲಿ ಪುಡಿ, ಒಂದಷ್ಟು ಪುಡಿ ಬಟ್ಟೆ, ಇದ್ದಿಲು ಜೊತೆಗೆ ಸುಸ್ತಾಗಿದ್ದೇವೆಂದು ಉರಿದ ಕಡಲೆಕಾಯಿಯನ್ನು ತಂದರು. ಆ ಶಾಸನವನ್ನು ನೋಡಿ ಮತ್ತಷ್ಟು ಸಂಭ್ರಮಪಟ್ಟು, ಅಲ್ಲೇ ಕಡಲೆಕಾಯಿ ತಿಂದು ಬಜೆಹಳ್ಳದ ನೀರನ್ನು ಕುಡಿದು, ಆ ಶಾಸನದ ಅಕ್ಷರಗಳು ಕಾಣುವ ಹಾಗೆ ರಂಗೋಲಿ ಪುಡಿಯಿಂದ, ಇದ್ದಲಿನಿಂದ ಏನೇನೋ ಪ್ರಯೋಗ ಮಾಡಿದೆವು. ಇಂಟರ್‌ನೆಟ್‌ನಲ್ಲಿ ಏನೇನು ಪ್ರಯೋಗಗಳಿವೆಯೋ ಅವುಗಳನ್ನು ಕಾಂತು ಮಾಡುತ್ತಿದ್ದ. ಆದರೂ ನಮ್ಮ ಕೈಯಲ್ಲಿ ಆ ಬರಹವನ್ನು ಓದಲಾಗಲಿಲ್ಲ.

ಅವತ್ತು ಬೀರಂ ಮನೆಯಲ್ಲಿ ಮಾರಾಮಿ ಹಬ್ಬವಾದ್ದರಿಂದ ಬೇಗ ಮನೆಗೆ ಹೋಗಬೇಕಿತ್ತು, ಐದೂವರೆ ಸುಮಾರಿಗೆ ನಮ್ಮನ್ನು ಊಟಕ್ಕೆ ಕರೆದು ಹೊರಟುಹೋದರು. ಆ ಸಂಭ್ರಮದ ಜೊತೆಗೆ ಭರ್ಜರಿ ಊಟ ನಮಗಾಗಿ ಕಾಯುತ್ತಿತ್ತು. ಆದರೆ, ನಮಗಾಗಿ ಒಂದು ಸಂಕಟವೂ ಕಾಯುತ್ತಿತ್ತು ಎನಿಸುತ್ತದೆ.

ಈ ಪುಸ್ತಕ ಓದಿದ್ದೀರಾ?: ಹೊಸ ಓದು | ಕೆ ಪುಟ್ಟಸ್ವಾಮಿ ಅನುವಾದಿತ, ರ್‍ಯೂನೊಸುಕೆ ಅಕುತಗವ ಅವರ ಕತೆ 'ರಾಶೊಮಾನ್'

ಆ ಬಂಡೆಯಲ್ಲಿ ಬರಹ ಸಿಕ್ಕ ಖುಷಿಯಲ್ಲಿ ನಾವಿದ್ದರೆ, ಆ ಬಂಡೆಯ ಜಾಗವಿರುವ ಜಮೀನನ್ನು ಯಾರೋ ತುಮಕೂರಿನವರು ಮೂರ್ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದರಂತೆ. ಅವರು ಅಲ್ಲಿಗೆ ಬಂದರು. "ನಾವೇನು ನಿಮ್ಮ ಜಮೀನಿಗೆ ಬಂದು ತೊಂದರೆ ಕೊಡ್ತೀವಾ? ನೀವ್ಯಾರು ಇಲ್ಲಿ ಬಂದು ನಮ್ಮ ಜಮೀನನ್ನು ಕಿತ್ತುಕೊಳಕೆ?" ಎಂದರು. ಅವರಿಗೆ ಯಾರೋ, ಇಲ್ಲಿ ಶಾಸನ ಸಿಕ್ಕರೆ ಇಡೀ ಜಮೀನನ್ನೇ ಸರ್ಕಾರ ವಶಪಡಿಸಿಕೊಳ್ಳುತ್ತೆ ಎಂದು ಹೇಳಿದ್ದರಂತೆ. ನಾವೆಲ್ಲ ಪರಿಪರಿಯಾಗಿ ಹೇಳಿ ನೋಡಿದೆವು. ಆತ ಒಪ್ಪಲಿಲ್ಲ. ಕೊನೆಗೆ, ಅಲ್ಲಿಯೇ ಜೆಸಿಬಿಯವರನ್ನು ಕರೆಸಿ, "ಇವತ್ತು ರಾತ್ರಿನೇ ಈ ಬಂಡೆಯನ್ನು ಒಡೆದುಹಾಕಿ. ಇದಿದ್ರೆ ಅಲ್ವಾ ಎಲ್ರೂ ಬರೋದು," ಎಂದು ಹೇಳಿದರು.

ನಮಗೆ ಉತ್ಸಾಹ, ಖುಷಿಯೇ ಇಳಿದುಹೋಯಿತು. ಸೇರಿದ್ದ ಜನರೆಲ್ಲ ಅವರ ಪರವಾಗಿದ್ದರು. ಕತ್ತಲು ಬೇರೆ ಆಗಿತ್ತು. ಏನೂ ಮಾತನಾಡಲಾಗದೆ ಅಲ್ಲಿಂದ ಹೊರಟೆವು. ಏನೋ ಸಂಕಟ. ಇಷ್ಟು ದಿನ ಕಾಣದಿದ್ದುದು ಈಗ ಕಂಡಿದೆ. ಇವತ್ತು ರಾತ್ರಿಗೆ ಇದನ್ನು ಒಡೆದುಹಾಕಿದರೆ ಸಿಕ್ಕ ಅಮೂಲ್ಯ ಮಾಹಿತಿ ಹೋಗುತ್ತದೆಯಲ್ಲ ಎನಿಸಿತು. ಬೀರಂ ಮನೆಗೆ ಹೋಗ್ತಾ, ಏನಾದರೂ ಮಾಡಿ ಅದನ್ನು ಉಳಿಸಲೇಬೇಕು ಎಂದು ಸಾಕಷ್ಟು ತಂತ್ರವನ್ನು ಹೆಣೆಯತೊಡಗಿದೆ. ಬೀರಂ ಮನೆಯಲ್ಲಿ ಕಣ್ಣ ಮುಂದೆ ಬಾಡೂಟವಿದ್ದರೂ ರುಚಿಸದಂತಾಗಿತ್ತು.

ಪುಸ್ತಕ: ಅರಸು ಕುರನ್ಗರಾಯ (ಜಾನಪದ-ಐತಿಹಾಸಿಕ ಅಧ್ಯಯನ ಕಥನ) | ಲೇಖಕರು: ರವಿಕುಮಾರ್ ನೀಹ | ಪ್ರಕಟಣೆ: ಜಲಜಂಬೂ ಲಿಂಕ್ಸ್, ಯಲ್ಲಾಪುರ, ತುಮಕೂರು | ಪುಟಗಳು: 208 | ಬೆಲೆ: ₹250 | ಸಂಪರ್ಕ ಸಂಖ್ಯೆ: 80954 67911 (ಪ್ರಕಾಶಕರು), 99457 52022 (ಲೇಖಕರು)

ನಿಮಗೆ ಏನು ಅನ್ನಿಸ್ತು?
0 ವೋಟ್