ದೇವನೂರರ ಹೊಸ ಪುಸ್ತಕ: ಕರ್ನಾಟಕದಲ್ಲಾದರೂ ಮುಕ್ತ ಚರ್ಚೆಗೆ ಸಿದ್ಧವಾಗುವುದೇ ಆರೆಸ್ಸೆಸ್?

Devanura Mahadeva

'ಆರ್ ಎಸ್ ಎಸ್ ಆಳ ಮತ್ತು ಅಗಲ' ಎಂಬುದು, ಬರಹಗಾರ ದೇವನೂರ ಮಹಾದೇವ ಅವರ ಹೊಸ ಪುಸ್ತಕ. ಭಾರತೀಯ ಜನತಾ ಪಕ್ಷದ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಲವು ಮುಖಗಳನ್ನು ತೆರೆದಿಡುವ ಪುಟ್ಟ ಕೃತಿ ಇದು. ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಪುಸ್ತಕದ ಮಹತ್ವ ಕುರಿತ ಟಿಪ್ಪಣಿ ಮತ್ತು ಆಯ್ದ ಅಧ್ಯಾಯ ಇಲ್ಲಿದೆ

ದೇವನೂರರು ಈ ನಾಡಿನ ಅತಿ ವಿಶಿಷ್ಟ ಸೃಜನಶೀಲ ಸಾಹಿತಿ, ಚಿಂತಕ, ಹೋರಾಟಗಾರರಲ್ಲಿ ಒಬ್ಬರು. ಇವೆಲ್ಲವೂ ಒಟ್ಟಿಗೇ ಆಗಿರುವುದರಿಂದಲೋ ಏನೋ, ‘ಆಕ್ಟಿವಿಸ್ಟ್‌ಗಳಲ್ಲಿ ಇರಬಹುದಾದ ದುಡುಕು’ ಅವರಲ್ಲಿ ಇರುವುದಿಲ್ಲ. ಸೈದ್ಧಾಂತಿಕ ಕಾರಣಕ್ಕಾಗಿ ಅವರು ತೀರ್ಪುಗಳನ್ನು ನೀಡುವುದಿಲ್ಲ. ಏನೇ ಬರೆದರೂ, ಮಾತಾಡಿದರೂ ಅದನ್ನು ಒಂದಲ್ಲ ಹತ್ತು ಬಾರಿ, ಕೆಲವೊಮ್ಮೆ ನೂರು ಬಾರಿ ತಿದ್ದಿ ತೀಡಿ ಅಂತಿಮವಾಗಿ ಹೊರಹಾಕುತ್ತಾರೆ. ಬಹುಶಃ ಆ ಕಾರಣದಿಂದಲೇ ಅವರು ಬರೆಯುವುದು ಮತ್ತು ಮಾತಾಡುವುದು ಕಡಿಮೆಯೇ. ಹಾಗಿದ್ದರೂ ಅಥವಾ ಹಾಗಿರುವುದರಿಂದಲೇ ಅವರ ಬರಹಗಳಿಗೆ ಮತ್ತು ಮಾತುಗಳಿಗೆ ಕಳೆದ 50 ವರ್ಷಗಳಲ್ಲಿ ಇನ್ನಿಲ್ಲದ ಮಹತ್ವ ದಕ್ಕಿದೆ.

ಈಗ ಅವರು ಒಂದು ಹೊಸ ಪುಸ್ತಕ ಬರೆದಿದ್ದಾರೆ. ಇವತ್ತಿನ ಸಂದರ್ಭದಲ್ಲಿ ಜೀವಿಸಿರುವ ಲೇಖಕರೊಬ್ಬರು ಈ ಕಾಲವನ್ನು ಎದುರುಗೊಳ್ಳುವ ಬಗೆ ಅಂದರೆ ಹೀಗೆಯೇ ಇರಬೇಕು ಎನ್ನಿಸುವ ಹಾಗೆ ಆ ಪುಸ್ತಕವಿದೆ. ಯಥಾಪ್ರಕಾರ ಅದರಲ್ಲಿ ದೇವನೂರರ ಮಾತಿನ ಶೈಲಿಯಿದೆ; ಓದುಗರಿಗೆ ಯಾವುದಾದರೂ ಒಂದು ಸಂಗತಿಯನ್ನು ವಿವರಿಸಲು ಅವರು ಸಾಮಾನ್ಯವಾಗಿ ಬಳಸುವ ಕಿರುಗತೆಗಳೂ ಒಂದೆರಡಿವೆ. ಸಾಮಾನ್ಯವಾಗಿ ಅವರು ಅಷ್ಟಾಗಿ ಬಳಸದ, ಇತ್ತೀಚೆಗಷ್ಟೇ ಬಳಸಲು ಆರಂಭಿಸಿರುವ ಅಂಕಿ-ಅಂಶ, ಪುರಾವೆಗಳು ಈ ಪುಸ್ತಕದಲ್ಲಿ ಎದ್ದುಕಾಣುತ್ತವೆ. ಆ ಪುರಾವೆಗಳೋ, ಆರೆಸ್ಸೆಸ್‍ನ ದೀರ್ಘಕಾಲದ ಸರಸಂಘಚಾಲಕರಾದ ಗೋಳ್ವಾಲ್ಕರ್, ಚಾತುರ್ವರ್ಣ ಹಿಂದುತ್ವದ ತಾತ್ವಿಕ ಐಕಾನ್ ಸಾವರ್ಕರ್ ಅವರ ನೇರ ಬರಹಗಳಿಂದ ಎತ್ತಿಕೊಂಡವು.

Image
mohan bhagwat
ಅರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

'ಚಾತುರ್ವರ್ಣ ಹಿಂದುತ್ವ ಪ್ರಬೇಧ' ಎನ್ನುವ ಬಳಕೆ ಈ ಪುಸ್ತಕದ ಪ್ರಮುಖ ಸಂಗತಿಗಳಲ್ಲಿ ಒಂದು. ಅದನ್ನು ಪುಸ್ತಕದುದ್ದಕ್ಕೂ ತಂದಿರುವ ರೀತಿ ಅನನ್ಯವಾದುದು. ತಮ್ಮದು ಚಾತುರ್ವರ್ಣ ಹಿಂದುತ್ವ ಪ್ರಬೇಧ ಅಲ್ಲ ಎಂದು ಆರೆಸ್ಸೆಸ್‍ನವರು ಹೇಳುವುದಾದರೆ, ಅವರು ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರನ್ನು ಇನ್ನು ಮುಂದೆ ‘ಗುರು ಸ್ಥಾನ’ದಿಂದ ಕೆಳಗೆ ತಳ್ಳಬೇಕಾಗುತ್ತದೆ. ಹೌದು ಎನ್ನುವುದಾದರೆ ಆ ಕುರಿತಂತೆ ದೇವನೂರರ ಪುಸ್ತಕ ಎತ್ತುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿ ಬರುತ್ತದೆ.

ಅದೇನೇ ಇರಲಿ, ಆರೆಸ್ಸೆಸ್ ಈ ಪುಸ್ತಕದೊಳಗಿನ ಸಂಗತಿಗಳ ಕುರಿತು ಮುಕ್ತ ಚರ್ಚೆಗೆ ಬರಬೇಕು. ಕರ್ನಾಟಕದ ಎಲ್ಲ ಜಾತಿ-ಧರ್ಮಗಳಿಗೆ ಸೇರಿದ ಮನುಷ್ಯರನ್ನು ತನ್ನ ಸೃಜನಶೀಲತೆ, ಆಳವಾದ ಕಕ್ಕುಲಾತಿ ಹಾಗೂ ಕ್ರಿಯಾಶೀಲತೆಗಳಿಂದ ಕಲಕಿರುವ ಬರಹಗಾರರೊಬ್ಬರ ಹೊಸ ಬರಹವನ್ನು ಎದುರುಗೊಳ್ಳುವ ರೀತಿ ಅದು. ಆ ಧೈರ್ಯವನ್ನು ಆರೆಸ್ಸೆಸ್ ತೋರುತ್ತದೆಯೇ ಎಂಬುದನ್ನು ಕಾದುನೋಡಬೇಕು. ಹಾಗಿಲ್ಲದೆ, ಟ್ರೋಲ್‍ಗಳ ಮೂಲಕ ಮಾತ್ರ ಎದುರಿಸುತ್ತದೆಯಾ ಎಂಬುದೂ ಇನ್ನು ಕೆಲವು ದಿನಗಳಲ್ಲೇ ಗೊತ್ತಾಗುತ್ತದೆ. ಬಿಡುಗಡೆಯಾಗುವ ಮುಂಚೆಯೇ ರಾಜ್ಯದ ಹತ್ತಕ್ಕೂ ಹೆಚ್ಚು ಪ್ರಕಾಶಕರು ಈ ಪುಸ್ತಕವನ್ನು ಪ್ರಕಟಿಸುತ್ತಿರುವುದನ್ನು ನೋಡಿದರೆ, ಉತ್ತರಿಸದೆ ಇರುವುದು ಆರೆಸ್ಸೆಸ್‍ಗೂ ಕಷ್ಟವಾಗಬಹುದು.

* * * * *

ಮತಾಂತರ ನಿಷೇಧ ಕಾಯ್ದೆಯ ಮರ್ಮ

Image
Devanura Mahadeva new book 1
ಹೊಸ ಪುಸ್ತಕದ ಮುಖಪುಟ

ಕರ್ನಾಟಕ ಸರ್ಕಾರ ಇತ್ತೀಚೆಗೆ 'ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021' ಅನ್ನು ವಿಧಾನಸಭೆಯಲ್ಲಿ ಮಂಡಿಸಿ, ಆತುರಾತುರವಾಗಿ ಅನುಮೋದನೆಯನ್ನು ಪಡೆದುಕೊಂಡು, ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನಾಗಿಸಿ ಜಾರಿ ಮಾಡಲು ಸಚಿವ ಸಂಪುಟದ ಒಪ್ಪಿಗೆಯೂ ಸಿಕ್ಕಿ, ರಾಜ್ಯಪಾಲರು ಅಂಕಿತವನ್ನೂ ಹಾಕಿ ಈಗ ಕಾಯ್ದೆ ಆಗಿದೆ. ಈ ಕಾಯ್ದೆಗೆ 'ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ' ಎಂಬ ಹೆಸರಿದೆ. ಆದರೆ, ಇದರ ಒಳಹೊಕ್ಕು ನೋಡಿದರೆ, ಇದರೊಳಗೆ ಮತಾಂತರಕ್ಕೆ ಅಡೆತಡೆ, ನಿಷೇಧಗಳೇ ತುಂಬಿ ತುಳುಕುತ್ತಿವೆ. ಈ ಕಾಯ್ದೆಯಲ್ಲಿ ಧಾರ್ಮಿಕವೂ ಇಲ್ಲ, ಸ್ವಾತಂತ್ರ್ಯವೂ ಇಲ್ಲ, ಹಕ್ಕೂ ಇಲ್ಲ, ಸಂರಕ್ಷಣೆಯೂ ಇಲ್ಲ. 'ಮುಕ್ತಿ' ಹೆಸರಿನಲ್ಲಿ 'ಕೊಲ್ಲುವ' ಕ್ರಿಯೆ ಇಲ್ಲಿ ನಡೆದಿದೆ. ಅದಕ್ಕಾಗೇ ಈ 'ಧಾರ್ಮಿಕ ಸ್ವಾಂತಂತ್ರ್ಯ ಹಕ್ಕು ಸಂರಕ್ಷಣೆ' ಕಾಯ್ದೆಯ ಒಳಾರ್ಥಕ್ಕೆ ಅನುಗುಣವಾಗಿ ಇದನ್ನು ಜನಪ್ರಿಯವಾಗಿ 'ಮತಾಂತರ ನಿಷೇಧ ಕಾಯ್ದೆ' ಎಂತಲೇ ಎಲ್ಲರೂ ಕರೆಯತೊಡಗಿದ್ದಾರೆ!

ಭಾರತದ ಇತಿಹಾಸದಲ್ಲೇ ಎಲ್ಲೂ ಯಾವ ಪಾಳೇಗಾರರಾಗಲೀ, ಯಾವ ರಾಜರಾಗಲೀ ಅಥವಾ ಯಾವ ಚಕ್ರವರ್ತಿಯೇ ಆಗಲಿ, ಮತಾಂತರ ನಿಷೇಧ ಕಾನೂನು ಜಾರಿ ಮಾಡಿದ ಉದಾಹರಣೆಗಳು ಬಹುಶಃ ಅಷ್ಟಾಗಿ ಇಲ್ಲ. ಎಲ್ಲ ಮತ, ಪಂಥ, ಆಧ್ಯಾತ್ಮಿಕ ಪ್ರಯೋಗಗಳ ನೆಲ ಭಾರತ. ಇದೇ ಭಾರತದ ಸಂಸ್ಕೃತಿ. ಇದೇ ಭಾರತದ ಪರಂಪರೆ. ಇದನ್ನೇ ಭಾರತೀಯತೆ ಎಂದು ಕರೆಯುತ್ತಿರುವುದು ಕೂಡ. ಇತಿಹಾಸ ತಜ್ಞರು 'ಯುದ್ಧ ವೈವಾಹಿಕ ಸಂಬಂಧದಲ್ಲಿ ಕೊನೆಗೊಳ್ಳುತ್ತದೆ' ಎಂಬ ಮಾತು ಹೇಳುತ್ತಾರೆ. ಅಷ್ಟೇಕೆ, ಭಾರತದ ಪುರಾಣಗಳಲ್ಲೂ ದೇವಾನುದೇವತೆಗಳು ಯುದ್ಧ ಮಾಡಿ ಸೋತು ಗೆದ್ದು ಕೊನೆಗೆ ವೈವಾಹಿಕ ಸಂಬಂಧ ಬೆಳೆಸಿ ಪರಸ್ಪರ ಬೆರೆತು, ಒಂದಾಗಿ ಬಾಳುತ್ತಿದ್ದಾರೆ. ಆದರೆ, ಈ 'ದೈವಭಕ್ತ' ಎನ್ನಿಸಿಕೊಂಡ ಮನುಷ್ಯರು ಮಾತ್ರ ಅಸಹನೆ, ದ್ವೇಷ, ಜಾತೀಯತೆಯ ಮೇಲು ಕೀಳೆಂಬ ಗಠಾರದಲ್ಲೇ ಜೀವಿಸುತ್ತಿದ್ದಾರೆ. ಚಾತುವ್ವರ್ಣದ ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿಗಾಗಿ ಟೊಂಕ ಕಟ್ಟಿರುವ ಆರ್‌ಎಸ್‌ಎಸ್‌ ಆಶಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ಚುನಾಯಿತ ಬಿಜೆಪಿ ಸರ್ಕಾರವು, ಈಗ ಆ ಭೂತಕಾಲದ ದಿಕ್ಕಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆ ಭೂತಕಾಲದ ಸಂಚಲ್ಲಿ ಇದೂ ಒಂದು.

Image
Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಈಗ, ಈ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಹೆಸರಿನಲ್ಲಿ ಜಾರಿಗೊಳಿಸಬೇಕೆಂದಿರುವ ಕಾಯ್ದೆಯಲ್ಲಿ ಸರ್ಕಾರ ಏನೆಲ್ಲ ಅಡೆತಡೆಗಳನ್ನು ಹಾಕಿದೆ ಎಂದರೆ, ಮತಾಂತರವಾಗಲು ಬಯಸುವ ವ್ಯಕ್ತಿ ಏಳು ಕೆರೆ ನೀರು ಕುಡಿಯಬೇಕಾಗುತ್ತದೆ. ಮತಾಂತರವಾಗಲು ಬಯಸುವವರು ಕನಿಷ್ಠ 30 ದಿವಸಗಳ ಮುಂಚಿತವಾಗಿ ಜಿಲ್ಲಾ ದಂಡಾಧಿಕಾರಿಯವರಿಗೆ 'ನಮೂನೆ-I'ರಲ್ಲಿ ಘೋಷಣೆ ಮಾಡಬೇಕಂತೆ. ಹಾಗೆಯೇ, ಮತಾಂತರದ ವಿಧಿ ವಿಧಾನಗಳನ್ನು ನೆರವೇರಿಸುವ ಧಾರ್ಮಿಕ ಮುಖಂಡರು ಕೂಡ 'ನಮೂನೆ II'ರಲ್ಲಿ ನೋಟಿಸ್ ನೀಡಬೇಕಂತೆ. ಆಮೇಲೆ ಆಕ್ಷೇಪಣೆಗಳನ್ನೂ ಆಹ್ವಾನಿಸುತ್ತಾರೆ. ಯಾರಾದರೂ ನೆಂಟರಿಷ್ಟರು, ನೆರೆಹೊರೆಯವರು, ಸಹೋದ್ಯೋಗಿಗಳು ಆಕ್ಷೇಪಣೆ ಸಲ್ಲಿಸಬಹುದಂತೆ! ಬಲವಂತವಾಗಿ, ಆಮಿಷ ತೋರಿಸಿ ಮತಾಂತರವಾಗಿದ್ದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಬೇಕಾದವರು, ಯಾರು ಮತಾಂತರಗೊಂಡಿರುವರೋ ಅವರು ಮಾತ್ರವೇ ಅಲ್ಲವೇ? ಈ ಸರ್ಕಾರ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆಯೇ ಹೇಗೆ?

ಜೊತೆಗೆ, ಈ ಕಾಯ್ದೆಯಲ್ಲಿರುವ - ಯಾರು ಮತಾಂತರ ಮಾಡುತ್ತಾರೋ ಅವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣ ನೋಡಿದರೂ, ಬಹುಶಃ ಯಾರೂ ಮತಾಂತರ ಮಾಡಲು ಮುಂದೆ ಬರಲಾರರು. ಸ್ವಇಚ್ಛೆಯಿಂದ ಮತಾಂತರವಾದರೂ ಅದನ್ನು ತಪ್ಪು ನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡ್ಡಿ ಮತಾಂತರ ಮಾಡಿದ್ದಾರೆಂದು ತಿರುಚಿ, ಅದೆಲ್ಲವನ್ನೂ ಮತಾಂತರ ಮಾಡಿದವರ ಮೇಲೆ ಆರೋಪಿಸಿ ಚಿತ್ರಹಿಂಸೆ ನೀಡುವ ಸಾಧ್ಯತೆಗಳೇ ಹೆಚ್ಚಿವೆ. ಹೀಗಾದರೆ, ಸ್ವಇಚ್ಛೆಯಿಂದ ಮತಾಂತರವಾಗಲು ಬಯಸುವವರು ಏನು ಮಾಡಬೇಕು? ಬಹುಶಃ ಉಳಿದಿರುವ ಒಂದೇ ದಾರಿ ಎಂದರೆ, ಸ್ವಇಚ್ಛೆಯಿಂದ ಮತಾಂತರವಾಗಲು ಬಯಸುವವರು ಜಿಲ್ಲಾಧಿಕಾರಿಗಳಿಗೆ ನಮೂನೆ 1ರಲ್ಲಿ ಅರ್ಜಿ ಸಲ್ಲಿಸಿ, 'ನೀವೇ ನಮ್ಮ ಮತಾಂತರಕ್ಕೆ ವ್ಯವಸ್ಥೆ ಮಾಡಿ' ಎಂದು ಒತ್ತಾಯಿಸುವುದಷ್ಟೇ ಉಳಿದಿರುವುದು!

ಈ ಲೇಖನ ಓದಿದ್ದೀರಾ?: ಮೋಟಮ್ಮ ಅವರ ಆತ್ಮಕತೆ 'ಬಿದಿರು ನೀನ್ಯಾರಿಗಲ್ಲದವಳು' ಪುಸ್ತಕದ ಆಯ್ದ ಭಾಗ | ಅಚ್ಚರಡಿ ಎಸ್ಟೇಟ್

ಈ ಕಾಯ್ದೆಯಲ್ಲಿ ಅಸ್ವಸ್ಥ ಚಿತ್ತರು, ಅಪ್ರಾಪ್ತರ ಮತಾಂತರಕ್ಕೆ ನಿಷೇಧ ಕಾನೂನು ಅನ್ವಯಿಸಿದ್ದರೆ ಅರ್ಥ ಮಾಡಿಕೊಳ್ಳಬಹುದಿತ್ತು. ಇನ್ನೊಂದು ವಿಪರ್ಯಾಸವೆಂದರೆ, ಮಹಿಳೆಯರು ಮತ್ತು ದಲಿತರು ಮತಾಂತರವಾದರೆ ಅವರನ್ನು ಈ ಸರ್ಕಾರ ಪರಿಗಣಿಸಿರುವ ವೈಖರಿಯನ್ನು ನೋಡಿದರೆ, ಅದು ಮಹಿಳೆಯರು ಮತ್ತು ದಲಿತರ ಘನತೆಗೆ ಧಕ್ಕೆ ತರುವಂತಿದೆ. ಮಹಿಳೆಯರು, ದಲಿತರು, ಅಸ್ವಸ್ಥ ಚಿತ್ತರು, ಅಪ್ರಾಪ್ತರನ್ನು ಒಂದೇ ಎಂಬಂತೆ ನೋಡಲಾಗಿದೆ. ಮಹಿಳೆಯರು ಮತ್ತು ದಲಿತರನ್ನು ಮತಾಂತರ ಮಾಡುವವರಿಗೆ ನೀಡುವ ಹೆಚ್ಚು ಶಿಕ್ಷೆಯ ಪ್ರಮಾಣದಲ್ಲಿ ಇದು ಸ್ಪಷ್ಟವಾಗಿದೆ. ಹಾಗಾದರೆ, ಮಹಿಳೆಯರು, ದಲಿತರು ಅಸ್ವಸ್ಥ ಚಿತ್ತರೇ? ಅಪ್ರಾಪ್ತರೇ? ಏನು ಈ ಸರ್ಕಾರದ ಗ್ರಹಿಕೆ? ಮಹಿಳೆಯರೆಂದರೆ, ದಲಿತರೆಂದರೆ ಬುದ್ಧಿಹೀನರು, ಸ್ವಂತಿಕೆ ಇಲ್ಲದವರು, ಇವರಿಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲ ಎಂದು ಈ ಸರ್ಕಾರ ಅಂದುಕೊಂಡಂತಿದೆ. ಆದರೆ, ಈ ಕಾಯ್ದೆ ಜಾರಿ ಮಾಡಿದ ಸರ್ಕಾರ ಒಂದನ್ನು ನೆನಪಿಟ್ಟುಕೊಳ್ಳಬೇಕು. ಏನೆಂದರೆ, ಈ ಬಹುಸಂಖ್ಯಾತ ಮಹಿಳಾ ಮತ್ತು ದಲಿತ ಮತದಾರರ ಮತ ಪಡೆದೇ ಇವರು ಶಾಸಕರೋ ಆಡಳಿತ ಪಕ್ಷವೋ ಆಗಿದ್ದಾರೆಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಆದರೆ, ಈ ಕೃತಘ್ನರು ಮಾಡಿದ್ದೇನು? ತಮ್ಮನ್ನು ಆಯ್ಕೆ ಮಾಡಿದವರನ್ನೇ ತಾರತಮ್ಯಕ್ಕೊಳಪಡಿಸಿ, ಅವರನ್ನು ಎರಡನೆಯ ದರ್ಜೆ ಪ್ರಜೆಗಳನ್ನಾಗಿಸಿ ಅವಮಾನ ಮಾಡಿದ್ದಾರೆ. ಹೀಗೆ ಅವಮಾನಿಸಿದವರನ್ನು ಮುಂಬರುವ ಚುನಾವಣೆಗಳಲ್ಲಿ ಹುಟ್ಟಡಗಿಸುವ ಮೂಲಕ ಮಹಿಳೆಯರೂ ದಲಿತರೂ ತಮಗೆ ಅಂಟಿಸಿದ ಕಳಂಕವನ್ನು ತೊಳೆದುಕೊಳ್ಳಬೇಕಾಗಿದೆ. ಇಂಥ ಶಾಸಕರಿಗೆ ಸ್ವಲ್ಪ ಬುದ್ಧಿ ಕೊಡಬೇಕಾಗಿದೆ, ಸ್ವಂತಿಕೆ ತಂದುಕೊಡಬೇಕಾಗಿದೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನೂ ತಂದುಕೊಡಬೇಕಾಗಿದೆ. ಈ ಅಪ್ರಾಪ್ತರನ್ನು ಪ್ರಬುದ್ಧ ಮಾಡಬೇಕಾಗಿದೆ. ಶಾಸನಸಭೆಯಲ್ಲಿ ಚರ್ಚೆ ಮಾಡದೆ ಕೈ ಎತ್ತುವ ಇಂತಹ ಶಾಸಕರನ್ನು ಮಹಿಳೆಯರೂ ದಲಿತರೂ ಎಚ್ಚರಗೊಂಡು ವಿಚಾರಿಸಿಕೊಳ್ಳಬೇಕಾಗಿದೆ.

ಇದನ್ನೆಲ್ಲ ನೋಡಿದರೆ, ಸರ್ಕಾರ ಮಾಡಹೊರಟಿರುವುದು ಏನನ್ನು? ಬಾಯಲ್ಲಿ 'ಧಾರ್ಮಿಕ ಹಕ್ಕು ಸ್ವಾತಂತ್ರ್ಯ' ಹೇಳಿ, ಕ್ರಿಯೆಯಲ್ಲಿ 'ಮತಾಂತರ ನಿಷೇಧ' ಮಾಡಿ, ಒಂದೇ ಏಟಿಗೆ ಸಂವಿಧಾನ ನೀಡಿರುವ ವ್ಯಕ್ತಿ ಸ್ವಾತಂತ್ರ್ಯದ ಕಾಲು ಮುರಿದಿದ್ದಾರೆ. ಜೊತೆಗೆ, ಸಂವಿಧಾನದಲ್ಲಿ ನೀಡಿರುವ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇ ಧರ್ಮವನ್ನು ಅವಲಂಬಿಸಿ, ಆಚರಿಸಿ, ಪ್ರಚಾರ ಮಾಡುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಗಂಟಲು ಹಿಚುಕಿದ್ದಾರೆ. ಜೊತೆಗೆ, ಮಹಿಳೆಯರು ಮತ್ತು ದಲಿತರನ್ನು ಎರಡನೆಯ ದರ್ಜೆ ಪ್ರಜೆಗಳನ್ನಾಗಿಸಿ ಅವಮಾನಿಸಿದ್ದಾರೆ!

Image
Narendra Modi
ಪ್ರಧಾನಿ ನರೇಂದ್ರ ಮೋದಿ

ಇದೆಲ್ಲದರ ಹುನ್ನಾರವನ್ನು ಒಂದು ಉದಾಹರಣೆಯ ಮೂಲಕ ಹೇಳಿದರೆ ಇದು ಸ್ಪಷ್ಟವಾಗುತ್ತದೆ. ಸದನದಲ್ಲಿ ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ಒಂದು ಪ್ರಹಸನವೂ ನಡೆಯಿತು. ಸದನದಲ್ಲೇ ಬಟ್ಟೆ ಬಿಚ್ಚಿ ಪ್ರದರ್ಶನ ಮಾಡಿದ ಖ್ಯಾತಿಯ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್, ತನ್ನ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿರುವುದನ್ನು ಬಣ್ಣಿಸುತ್ತಾರೆ. ಆ ತಾಯಿ ಯಾಕೆ ಕ್ರಿಸ್ತನ ಮೊರೆ ಹೋಗಿರಬಹುದು ಎಂಬ ಪ್ರಶ್ನೆಯು ಯಾರ ಮನಸ್ಸಿಗೂ ಬರುವುದಿಲ್ಲ. ತಾನು ಹೆತ್ತ ಗೂಳಿಹಟ್ಟಿ ಶೇಖರ್ ಎಂಬ ತನ್ನ ಮಗನ ಅವಾಂತರಗಳಿಗೆ ಬೇಸತ್ತು ನೊಂದು ಸಾಂತ್ವನಕ್ಕಾಗಿ ಆ ತಾಯಿ ಕ್ರಿಸ್ತನ ಮೊರೆ ಹೋಗಿರಬಹುದಲ್ಲ? ಯಾರೂ ಆ ತಾಯಿಯ ಕಡೆ ನೋಡಲೇ ಇಲ್ಲ! ಆಯ್ತು, ಆ ನೊಂದ ತಾಯಿಗೆ ಸಂವಿಧಾನದಲ್ಲಿ ನೀಡಿರುವ, 'ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇ ಧರ್ಮವನ್ನು ಅವಲಂಬಿಸಿ, ಆಚರಿಸಿ, ಪ್ರಚಾರ ಮಾಡುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು' ಇಲ್ಲವೇ? ನಮ್ಮ ಶಾಸಕರಲ್ಲಿ ಯಾರೊಬ್ಬರೂ ಇದನ್ನು ಪರಿಗಣಿಸಲೇ ಇಲ್ಲ. ಈಗ ಜಾರಿ ಆಗಿರುವ ಕಾಯ್ದೆಯಲ್ಲಿ ಮನುಧರ್ಮ ಶಾಸ್ತ್ರದ, 'ಹೆಣ್ಣು ಮಗಳಾಗಿದ್ದಾಗ ತಂದೆಯ ಅಧೀನ, ಮದುವೆಯಾದ ಮೇಲೆ ಗಂಡನ ಅಧೀನ, ವಿಧವೆಯಾದರೆ ಮಗನ ಅಧೀನ' ಎಂಬ ಭೂತಕಾಲದ ವಾಸನೆ ಬಡಿಯುತ್ತಿದೆ. ಒಟ್ಟಿನಲ್ಲಿ ಇಲ್ಲಿ ನಡೆದಿರುವುದು 'ಸಂವಿಧಾನದ ಸಂಹಾರ' ಮತ್ತು ಇದರ ಜೊತೆಗೆ 'ಮನುಧರ್ಮ ಶಾಸ್ತ್ರದ ಪ್ರತಿಷ್ಠಾಪನೆ.'

ಇನ್ನು EWS (ಆರ್ಥಿಕವಾಗಿ ಹಿಂದುಳಿದ ವರ್ಗ) ಮೀಸಲಾತಿಗೆ ಸಂಬಂಧಪಟ್ಟಂತೆ ನೋಡಿದರೆ, ಇಲ್ಲೂ ಇನ್ನೊಂದು ಬಗೆಯಲ್ಲಿ ಸಂವಿಧಾನ ಸಂಹಾರ ಮತ್ತು ಮನುಧರ್ಮದ ಪ್ರತಿಷ್ಠಾಪನೆ ಜೊತೆಜೊತೆಗೇ ಜರುಗಿರುವುದು ಕಾಣಿಸುತ್ತದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಾದ ಮೀಸಲಾತಿಗೆ - ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ, ಸಾಮಾಜಿಕವಾಗಿ ಹಿಂದುಳಿದಿರುವಿಕೆ ಹಾಗೂ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಾತಿನಿಧ್ಯದ ಕೊರತೆ - ಇವು ಅಳತೆಗೋಲಾಗಿದ್ದವು. ಇದರಲ್ಲೊಂದು ನ್ಯಾಯ ಇತ್ತು. ಇದಕ್ಕೊಂದು ಚಾರಿತ್ರ್ಯ ಇತ್ತು. ಹೀಗಿರುವಾಗ ಆರ್‌ಎಸ್‌ಎಸ್ ಸಂತಾನ, ಬಿಜೆಪಿಯ ಏಕವ್ಯಕ್ತಿ ನಾಯಕತ್ವದ ಪ್ರಧಾನಿ ಮೋದಿಯವರು ಒಂದೇ ಏಟಿಗೆ EWSಗೆ ಶೇಕಡ 10ರಷ್ಟು ಮೀಸಲಾತಿ ಜಾರಿಗೆ ತಂದುಬಿಟ್ಟರು. ಇದರಿಂದ ಈ ಹಿಂದೆ ಮೀಸಲಾತಿ ಪರಿಕಲ್ಪನೆಗೆ ಇದ್ದ 'ನ್ಯಾಯ' ಅನ್ನುವುದು ನೆಗೆದುಬಿತ್ತು, ಅದಕ್ಕಿದ್ದ ಚಾರಿತ್ರ್ಯವೂ ಹರಣವಾಯ್ತು. ಸ್ವಲ್ಪ ಹಿಂದಕ್ಕೆ ಹೋದರೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಂಡಲ್ ಆಯೋಗವನ್ನು ವಿರೋಧಿಸಿ ನಡೆದ ಉಗ್ರ ಪ್ರತಿಭಟನೆಯಲ್ಲಿ ಆರ್‌ಎಸ್‌ಎಸ್‌ನ ಛೂ ಗುಂಪುಗಳು ಮುಂಚೂಣಿಯಲ್ಲಿದ್ದವು. ಆಗ ಒಂದು ಅಮಾಯಕ ಜೀವದ ಸಾವೂ ಸಂಭವಿಸಿತು. ಇಂತಹ ಹಿನ್ನೆಲೆಯ ಮೋದಿಯವರು ಪ್ರಧಾನಿಯಾದ ಮೇಲೆ EWSಗೆ ಮೀಸಲಾತಿ ಜಾರಿ ಮಾಡಿ, ಸಂವಿಧಾನಕ್ಕೆ ಒಳೇಟು ನೀಡಿದರು. ಇವರ ಉದ್ದೇಶ ಇಷ್ಟೆ: ಈಗಿರುವ ಸಂವಿಧಾನವನ್ನು ಇದ್ದರೂ ಒಂದೇ, ಇಲ್ಲದಿದ್ದರೂ ಒಂದೇ ಎಂಬಂತೆ ಮಾಡುವುದು. ಅದಕ್ಕಾಗೇ, ಯಾವ ವರ್ಗವು ಸಾಮಾಜಿಕವಾಗಿ ಉಳಿದೆಲ್ಲ ವರ್ಗಗಳಿಗಿಂತಲೂ ಮುಂದುವರಿದಿದೆಯೋ, ಶಿಕ್ಷಣ ಮತ್ತು ಉದ್ಯೋಗ ಪ್ರಾತಿನಿಧ್ಯದಲ್ಲೂ ಅತಿ ಹೆಚ್ಚು ಪ್ರಾತಿನಿಧ್ಯ ಪಡೆದಿದೆಯೋ ಅಂತಹ EWS ವರ್ಗಕ್ಕೇ ಮತ್ತಷ್ಟು ಅವಕಾಶ ಹೆಚ್ಚಿಗೆ ದಕ್ಕುವಂತೆ ನಮ್ಮ ಪ್ರಧಾನಿ ಮೋದಿಯವರು ಮಾಡಿಬಿಟ್ಟರು. ಈ EWS ಮೀಸಲಾತಿ ಕಾಣಿಕೆಯು ಮನುಧರ್ಮಶಾಸ್ತ್ರದ ಆಶಯದಂತೆ, ಅಂದರೆ, ಹೆಚ್ಚು ಮೇಲ್ಪಟ್ಟ ಸ್ತರದವರಿಗೆ ಹೆಚ್ಚು ಸಲ್ಲಬೇಕು ಎಂಬ ನೀತಿಗೆ ಅನುಗುಣವಾಗಿದೆ! ಒಟ್ಟಿನಲ್ಲಿ ಇದಕ್ಕೆ ಶಾಸ್ತ್ರ ಕೇಳಬೇಕಾಗಿಲ್ಲ. ಮನುಧರ್ಮಶಾಸ್ತ್ರವನ್ನು ವರ್ತಮಾನ ಮಾಡಲು ಹೊರಟಿದ್ದಾರೆ. ಅದಕ್ಕಾಗಿ ಈಗ ಈ ಆರ್‌ಎಸ್‌ಎಸ್ ಮತ್ತು ಅದರ ಪರಿವಾರಗಳು ಎಂತಹ ವಾತಾವರಣವನ್ನು ಸೃಷ್ಟಿಸಿದ್ದಾರೆಂದರೆ, "ಸರ್ಕಾರದ ಇಂಥ ಕಾನೂನುಗಳು ಸರಿಯಾಗಿಲ್ಲ," ಅಂದರೂ, ಹಾಗೆ ಅಂದವರನ್ನು ದೇಶದ್ರೋಹಿಗಳೆಂದು ಆರ್‌ಎಸ್‌ಎಸ್‌ನ 'ಕೂಗುಮಾರಿ'ಗಳ ಗುಂಪು ಅಬ್ಬರಿಸುತ್ತಿದೆ. ಇಂತಹ ವಾತಾವರಣದಲ್ಲಿ ಭಾರತ ನರಳುತ್ತಿದೆ.

ನಿಮಗೆ ಏನು ಅನ್ನಿಸ್ತು?
42 ವೋಟ್