ಹರುಕಿ ಮುರಕಮಿಯ 'ಕಿನೊ ಮತ್ತು ಇತರ ಕತೆಗಳು' ಪುಸ್ತಕದ ಆಯ್ದ ಭಾಗ

haruki murukami 1

ಜಪಾನ್‌ನ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಸಣ್ಣ ಕತೆಗಳ ಸಂಕಲನ 'ಕಿನೊ ಮತ್ತು ಇತರ ಕತೆಗಳು.' ಮುರಕಮಿಯ ಕಥಾಶೈಲಿ ಮತ್ತು ಓಘವನ್ನು ಅಷ್ಟೇ ಆಪ್ತವೆನ್ನಿಸುವಂತೆ ಕನ್ನಡಕ್ಕೆ ಅನುವಾದಿಸಿದವರು ಮಂಜುನಾಥ ಚಾರ್ವಾಕ. ಪುಸ್ತಕವನ್ನು 'ಋತುಮಾನ' ಪ್ರಕಾಶನ ಪ್ರಕಟಿಸಿದ್ದು, 'ಕಿನೊ' ಎಂಬ ಕತೆಯ ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ಇಲ್ಲಿ ಕೊಡಲಾಗಿದೆ

ಚಳಿಗಾಲ ಬಂತು ಮತ್ತು ಆ ಬೆಕ್ಕು ಇದ್ದಕ್ಕಿದ್ದ ಹಾಗೆ ಕಾಣೆಯಾಯಿತು. ಆ ಬೆಕ್ಕು ಕಾಣೆಯಾಗಿರುವುದು ಅವನ ಗಮನಕ್ಕೆ ಬರಲು ಕೆಲವು ದಿನಗಳಾದವು. ಕಿನೊ ಇನ್ನೂ ಅದಕ್ಕೊಂದು ಹೆಸರೂ ಇಟ್ಟಿರಲಿಲ್ಲ. ಆ ಬೆಕ್ಕು ತನಗೆ ಬೇಕಾದಾಗ ಬಾರಿಗೆ ಬರುತಿತ್ತು ಮತ್ತು ಕೆಲವೊಮ್ಮೆ ಕೆಲವು ದಿನಗಳ ಕಾಲ ಕಾಣಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ ಕಿನೊ ಆ ಬೆಕ್ಕು ಒಂದು ವಾರ ಕಾಣದಿದ್ದರೆ ಹೆಚ್ಚೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವನಿಗೆ ಬೆಕ್ಕು ಬಹಳ ಇಷ್ಟವಾಗಿತ್ತು ಮತ್ತು ಆ ಬೆಕ್ಕಿಗೆ ಇವನ ಮೇಲೆ ನಂಬಿಕೆ ಇದ್ದಹಾಗೆ ತೋರುತ್ತಿತ್ತು. ಬಾರಿನ ಒಂದು ಮೂಲೆಯಲ್ಲಿ ಆ ಬೆಕ್ಕು ತನ್ನ ಪಾಡಿಗೆ ಮಲಗಿದ್ದರೆ ಏನೂ ಕೇಡಾಗುವುದಿಲ್ಲ ಎಂದು ಅವನ ನಂಬಿಕೆ. ಬೆಕ್ಕು ಕಾಣೆಯಾಗಿ ಎರಡು ವಾರವಾದರೂ ಮರಳದಿದ್ದಾಗ ಸ್ವಲ್ಪ ಚಿಂತಿತನಾದ. ಮೂರು ವಾರ ಕಳೆದ ನಂತರವಂತೂ, ಬೆಕ್ಕು ಮರಳಿ ಬರುವುದಿಲ್ಲ ಎಂದು ಖಾತ್ರಿಯಾಗಿ ಅನಿಸಿತ್ತು. ಆ ಬೆಕ್ಕು ಕಾಣೆಯಾದ ಸಮಯಕ್ಕೆ ಸರಿಯಾಗಿ, ಕಿನೊ ಆ ಕಟ್ಟಡದ ಸುತ್ತ ಹಾವುಗಳನ್ನು ನೋಡಿದ.

ಅವನು ನೋಡಿದ ಮೊದಲ ಹಾವು ತೆಳು ಕಂದು ಬಣ್ಣ ಹೊಂದಿ ಉದ್ದವಾಗಿತ್ತು. ಆ ಹಾವು ಎದುರುಗಿದ್ದ ಮರದ ನೆರಳಿನಲ್ಲಿ ಹರಿದಾಡುತ್ತಿತ್ತು. ಕಿನೊ, ದಿನಸಿ ಸಾಮಗ್ರಿಗಳಿದ್ದ ಬ್ಯಾಗನ್ನು ಒಂದು ಕೈಯ್ಯಲ್ಲಿ ಹಿಡಿದುಕೊಂಡು ಬಾಗಿಲು ತೆರೆಯುತ್ತಿದ್ದಾಗ ಆ ಹಾವನ್ನು ನೋಡಿದ. ಟೋಕಿಯೋ ನಗರದ ಮಧ್ಯಭಾಗದಲ್ಲಿ ಹಾವು ಕಾಣಿಸುವುದು ಬಹಳ ಅಪರೂಪವಾದ್ದರಿಂದ ಸ್ವಲ್ಪ ಆಶ್ಚರ್ಯಗೊಂಡನಾದರೂ, ಹೆಚ್ಚೇನೂ ಚಿಂತಿಸಲಿಲ್ಲ. ಅವನ ಕಟ್ಟಡದ ಹಿಂಭಾಗದಲ್ಲೇ ನೆಝು ವಸ್ತುಸಂಗ್ರಹಾಲಯದ ಉದ್ಯಾನವನ ಇದ್ದುದರಿಂದ, ಹಾವುಗಳು ಇರಲೇಬಾರದೆಂದೇನಿರಲಿಲ್ಲ.  
ಆದರೆ, ಎರಡು ದಿನಗಳ ನಂತರ, ಮಧ್ಯಾಹ್ನದ ವೇಳೆ ಪತ್ರಿಕೆ ತೆಗೆದುಕೊಳ್ಳಲು ಬಾಗಿಲು ತೆರೆದಾಗ, ಇನ್ನೊಂದು ಬೇರೆಯದೇ ಹಾವನ್ನು ಅದೇ ಜಾಗದಲ್ಲಿ ನೋಡಿದ. ಈ ಹಾವು ನೋಡಲು ನೀಲಿ ಬಣ್ಣದಾಗಿದ್ದು, ಸಣ್ಣಗೆ ನುಣುಪಾಗಿತ್ತು. ಆ ಹಾವು ಕಿನೊನನ್ನು ನೋಡಿದಾಗ, ಸ್ವಲ್ಪ ಹೆಡೆಯೆತ್ತಿ, ಈ ಮೊದಲೇ ಇವನು ಪರಿಚಯವಿರುವ ಹಾಗೆ ಅವನನ್ನೇ ನೋಡಿತು. ಕಿನೊ, ದಿಕ್ಕು ತೋಚದೆ ಸುಮ್ಮನೆ ನಿಂತ. ಆ ಹಾವು ಹೆಡೆಯಿಳಿಸಿ, ಆ ನೆರಳಲ್ಲಿ ಕಾಣೆಯಾಯಿತು. ಈ ಇಡೀ ಘಟನೆ ಕಿನೊ ಒಳಗೆ ಅಸಾಧ್ಯ ಭಯ ಸೃಷ್ಟಿಸಿತು.

Image
Book Cover Page

ಮೂರು ದಿನಗಳ ನಂತರ, ಮೂರನೇ ಹಾವನ್ನು ನೋಡಿದ. ಆ ಹಾವೂ, ಆ ಮರದ ನೆರಳಿನಲ್ಲಿಯೇ ಇತ್ತು ಮತ್ತು ಮೊದಲೆರಡು ಹಾವಿಗಿಂತ ಸಣ್ಣಗೆ ಕಡುಗಪ್ಪು ಬಣ್ಣದ್ದಾಗಿತ್ತು. ಕಿನೊಗೆ ಹಾವುಗಳ ಬಗ್ಗೆ ಅಷ್ಟೇನೂ ತಿಳಿದಿರದಿದ್ದರೂ, ಈ ಹಾವು ಬಹಳ ಅಪಾಯಕಾರಿ ಎಂದು ಅವನ ಒಳ ಮನಸ್ಸು ಹೇಳಿತು. ನೋಡುವುದಕ್ಕೆ ವಿಷಕಾರಿ ಹಾವಿನ ಹಾಗೆ ತೋರುತ್ತಿತ್ತು. ಇವನ ಇರುವಿಕೆ ಅರಿವಿಗೆ ಬಂದ ಕ್ಷಣವೇ ಅದು ಪೊದೆಗಳ ಒಳಗೆ ಮರೆಯಾಯಿತು. ವಾರವೊಂದರಲ್ಲಿ ಮೂರು ಹಾವು ಹೇಗೆ ನೋಡಿದರೂ ಹೆಚ್ಚೇ. ಏನೋ ವಿಚಿತ್ರ ವಿದ್ಯಮಾನದ ಹಾಗೆ ತೋರುತ್ತಿತ್ತು.

ಕಿನೊ ದೊಡ್ಡಮ್ಮನಿಗೆ ಫೋನ್ ಮಾಡಿದ. ಅವಳಿಗೆ ಅಲ್ಲಿನ ಆಗುಹೋಗುಗಳನ್ನು ಹೇಳಿ, ನಂತರ ಆ ಜಾಗದ ಸುತ್ತಮುತ್ತ ಯಾವಾಗಲಾದರೂ ಹಾವುಗಳನ್ನು ನೋಡಿದ್ದಳಾ ಎಂದು ಕೇಳಿದ.

"ಹಾವುಗಳಾ?" ಎಂದಳು ದೊಡ್ಡ ಧ್ವನಿಯಲ್ಲಿ, ಆಶ್ಚರ್ಯವಾದಂತೆ.

"ಅಲ್ಲಿ ಮೂವತ್ತು ವರ್ಷಗಳ ಕಾಲ ಕಳೆದಿದ್ದೇನೆ. ಆದರೆ, ಒಮ್ಮೆಯೂ ಒಂದು ಹಾವು ಸಹಿತ ನೋಡಿಲ್ಲ. ಇದು ಭೂಕಂಪ ಅಥವಾ ಇನ್ಯಾವುದಾದರೂ ದುರಂತದ ಕುರುಹಾ ಎಂದು ಯೋಚಿಸುತ್ತಿದ್ದೇನೆ. ಸಾಧಾರಣವಾಗಿ ಪ್ರಾಣಿಗಳಿಗೆ ಪ್ರಕೃತಿ ವಿಕೋಪಗಳ ಮುನ್ಸೂಚನೆ ದೊರೆಯುತ್ತದೆ."

"ಹಾಗಂತೀಯ? ಹಾಗಿದ್ದರೆ ತುರ್ತಾಗಿ ಬೇಕಾದ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಉತ್ತಮ ಅನ್ನಿಸುತ್ತದೆ," ಎಂದ.

ಈ ಲೇಖನ ಓದಿದ್ದೀರಾ?: 'ಸಂಸತ್ತಿನಲ್ಲಿ ಬಾಬು ಜಗಜೀವನ್ ರಾಮ್ ಭಾಷಣಗಳು' ಕೃತಿಯ ಆಯ್ದ ಭಾಗ

"ಅದೂ ಸರಿ... ಒಂದಲ್ಲ ಒಂದು ದಿನ ದೊಡ್ಡ ಭೂಕಂಪವೊಂದು ಟೋಕಿಯೋಗೆ ಅಪ್ಪಳಿಸುತ್ತದೆ."

"ಆದರೆ, ಹಾವುಗಳು ಭೂಕಂಪಕ್ಕೆ ಅಷ್ಟೊಂದು ಸೂಕ್ಷ್ಮವಾಗಿ ಸ್ಪಂದಿಸುತ್ತವೆಯಾ?"

"ಹಾವುಗಳು ಯಾವುದಕ್ಕೆ ಸೂಕ್ಷ್ಮವಾಗಿ ಸ್ಪಂದಿಸುತ್ತವೆ ಅಂತ ನನಗೆ ಗೊತ್ತಿಲ್ಲ. ಆದರೆ, ಹಾವುಗಳಿಗೆ ಬಹಳ ಬುದ್ಧಿ. ಪುರಾಣಗಳಲ್ಲಿ ಅವು ಜನರಿಗೆ ದಾರಿ ತೋರಿಸುತ್ತಿದ್ದವು. ಆದರೆ, ಹಾವುಗಳು ದಾರಿ ತೋರಿಸಿದಾಗ, ಒಳ್ಳೆಯ ದಾರಿ ತೋರಿಸುತ್ತವೆ ಅಥವಾ ಕೆಟ್ಟ ದಾರಿ ತೋರಿಸುತ್ತವೆ ಎನ್ನುವುದು ಮಾತ್ರ ಹೇಳಲಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಎರಡೂ ಮಿಶ್ರಿತವಾದ ದಾರಿಯೇ  ತೋರಿಸುತ್ತವೆ."

"ಬಹಳ ಗೊಂದಲವಾಗುತ್ತಿದೆ," ಎಂದ ಕಿನೊ.

"ಖಂಡಿತ... ಹಾವುಗಳು ಮೂಲತಃ ಬಹಳ ಗೊಂದಲಮಯ ಜೀವಿಗಳು. ಈ ಪುರಾಣಗಳಲ್ಲಿ, ಅತೀ ದೊಡ್ಡ ಮತ್ತು ಜಾಣ ಹಾವು ತನ್ನ ಹೃದಯವನ್ನು ಇನ್ನೆಲ್ಲೋ ಅಡಗಿಸಿಟ್ಟಿರುತ್ತದೆ. ಹಾಗಾಗಿ, ನೀನು ನಿಜವಾಗಿಯೂ ಹಾವನ್ನು ಕೊಲ್ಲಲೇಬೇಕೆಂದಿದ್ದರೆ, ಅದರ ಅಡಗುತಾಣದಲ್ಲಿ ಹಾವಿಲ್ಲದಾಗ, ಅದರ ಹೃದಯವನ್ನು ಹುಡುಕಿ, ಎರಡು ಭಾಗವಾಗಿ ಕತ್ತರಿಸಬೇಕು. ಅಷ್ಟು ಸುಲಭದ ಕೆಲಸವಲ್ಲ ಅದು."
ನನ್ನ ದೊಡ್ಡಮ್ಮನಿಗೆ ಇದೆಲ್ಲ ಹೇಗೆ ತಿಳಿದಿತ್ತು?

"ಒಂದು ದಿನ ಟಿ.ವಿ.ಯಲ್ಲಿ ಬೇರೆ-ಬೇರೆ ದೇಶದ ಪುರಾಣಗಳ ಬಗೆಗಿನ ಕಾರ್ಯಕ್ರಮವೊಂದು ನೋಡುತ್ತಿದ್ದೆ. ಆ ಕಾರ್ಯಕ್ರಮದಲ್ಲಿ ಒಬ್ಬ ಪ್ರೊಫೆಸರ್ ಇದರ ಬಗ್ಗೆ ಮಾತಾಡುತ್ತಿದ್ದ. ಟಿ.ವಿ ಬಹಳ ಉಪಯುಕ್ತ. ಸಮಯವಿದ್ದಾಗ ನೀನೂ ಟಿ.ವಿ ನೋಡಬೇಕು," ಎಂದಳು.

Image
Manjunatha Charvaka
ಮಂಜುನಾಥ ಚಾರ್ವಾಕ

ಕಿನೊ ತನ್ನ ಮನೆಯ ಸುತ್ತಮುತ್ತ ಹಾವುಗಳೇ ಹರಿದಾಡುತ್ತಿರುವ ಹಾಗೆ ಕಲ್ಪಿಸಿಕೊಳ್ಳತೊಡಗಿದ. ಅವುಗಳ ಇರುವಿಕೆ ಅವನ ಅರಿವಿಗೆ ಬಂದ ಹಾಗೆ ಆಗುತ್ತಿತ್ತು. ಅವನ ಬಾರ್ ಮುಚ್ಚಿ, ಸುತ್ತಮುತ್ತಲ ಜನರೆಲ್ಲ ಮಲಗಿದ ಮೇಲೆ, ಅಲ್ಲೊಂದು ಇಲ್ಲೊಂದು ಸೈರನ್ ಸದ್ದು ಬಿಟ್ಟರೆ ಮಿಕ್ಕಂತೆ ನಿಶ್ಶಬ್ದವಾಗಿರುವಾಗ ಹಾವುಗಳು ಹರಿದಾಡುತ್ತಿರುವ ಶಬ್ದ ಕೇಳಿಸಿದ ಹಾಗಾಗುತ್ತಿತ್ತು. ಅವನು ಆ ಬೆಕ್ಕಿಗಾಗಿ ಮಾಡಿದ್ದ ಸಣ್ಣ ಕಿಂಡಿಯನ್ನು, ಹಾವುಗಳು ಮನೆಯ ಒಳಗೆ ಬಾರದ ಹಾಗೆ ಮರದ ತುಂಡಿನಿಂದ ಮುಚ್ಚಿದ.

ಒಂದು ರಾತ್ರಿ ಹತ್ತು ಗಂಟೆಯ ಸಮಯಕ್ಕೆ, ಕಮಿಟ ಬಂದು, ಒಂದು ಬಿಯರ್ ಕುಡಿದು, ನಂತರ ಎಂದಿನಂತೆ ಎರಡು ಪೆಗ್ ವೈಟ್ ಲೇಬಲ್ ವಿಸ್ಕಿ ಕುಡಿದು, ಒಂದು ಸ್ಯಾಂಡ್ವಿಚ್ ತಿಂದ. ಅವನು ಆ ಸಮಯಕ್ಕೆ ಬಾರಿಗೆ ಬರುವುದು ಬಹಳ ಅಪರೂಪ. ಆಗೊಮ್ಮೆ ಈಗೊಮ್ಮೆ ಓದುತ್ತಿದ್ದವನು, ಕಣ್ಣೆತ್ತಿ ಎದುರಿಗಿದ್ದ ಗೋಡೆ ನೋಡುತ್ತ, ಏನೋ ಯೋಚಿಸುತ್ತಿದ್ದ. ಬಾರ್ ಮುಚ್ಚುವ ಸಮಯದವರೆಗೂ ಉಳಿದುಕೊಂಡಿದ್ದ. ಆ ದಿನ ಅವನೇ ಕೊನೆಯ ಗ್ರಾಹಕ.

"ಮಿಸ್ಟರ್ ಕಿನೊ, ಪರಿಸ್ಥಿತಿ ಈ ಮಟ್ಟಕ್ಕೆ ಬಂದಿದ್ದು ನಿಜಕ್ಕೂ ಬೇಸರದ ವಿಷಯ," ಎಂದಿನ ಶಾಂತವಾದ ಧ್ವನಿಯಲ್ಲಿ ಕಮಿಟ ಮಾತಾಡುತ್ತಿದ್ದ.

‘ಈ ಪರಿಸ್ಥಿತಿಗೆ?" ಕಿನೊ ಕೇಳಿದ.

"ನೀನು ಈ ಬಾರ್ ಅನ್ನು ಮುಚ್ಚಬೇಕಾಗಿ ಬಂದಿದೆ, ಸ್ವಲ್ಪ ದಿನದ ಮಟ್ಟಿಗಾದರೂ."

ಕಿನೊ ಹೇಗೆ ಪ್ರತಿಕ್ರಿಯಿಸಬಹುದೆಂದು ತಿಳಿಯದೆ ಕಮಿಟನನ್ನೇ ನೋಡುತ್ತಾ ನಿಂತ. ಬಾರ್ ಮುಚ್ಚಬೇಕಾ?

ಮುಖ್ಯ ಚಿತ್ರ: ಹರುಕಿ ಮುರಕಮಿ
ನಿಮಗೆ ಏನು ಅನ್ನಿಸ್ತು?
3 ವೋಟ್