ಹೊಸ ಓದು | ಕೆ ಎನ್ ಗಣೇಶಯ್ಯ ಬರೆದಿರುವ 'ಹಾತೆ-ಜತೆ-ಕತೆ' ಪುಸ್ತಕದ ಆಯ್ದ ಭಾಗ

ಬೆಂಗಳೂರಿನ ಮಾಧ್ಯಮ ಅನೇಕ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿರುವ ಸ್ವಾರಸ್ಯಕರ ಪುಸ್ತಕ 'ಹಾತೆ-ಜತೆ-ಕತೆ.' ಈ ಚಿತ್ರವತ್ತಾದ ಪುಸ್ತಕಕ್ಕೆ ಬರಹಗಾರ ಕೆ ಎನ್ ಗಣೇಶಯ್ಯ ಕತೆಗಳನ್ನು ಬರೆದಿದ್ದು, ಪೂರ್ಣಿಮಾ ಬೆಳವಾಡಿ ಚಿತ್ರಗಳನ್ನು ಬರೆದಿದ್ದಾರೆ. ಹಿರಿಯರು-ಕಿರಿಯರೆನ್ನದೆ ಯಾರು ಬೇಕಾದರೂ ಓದಬಹುದಾದ ಅತ್ಯಂತ ವಿಭಿನ್ನ ಪುಸ್ತಕವಿದು ಎಂಬುದು ವಿಶೇಷ

ಮರೆಯಲ್ಲಿ, ಹೊಂಚು ಹಾಕಿ, ಒಂದೇ ಕಡೆ ಕದಲದೆ ಕುಳಿತಿದ್ದ ಆ ರಾಕ್ಷಸನ ಗೋಲಿಯಂತಹ ಎರಡೂ ಕಣ್ಣುಗಳು ನೇರವಾಗಿ ಅನತಿ ದೂರದಲ್ಲಿಯೇ ಇದ್ದ ಎರಡು ಎಳೆ ಜೀವಗಳ ಮೇಲೆ ನೆಟ್ಟಿದ್ದವು. ಆ ಎರಡೂ ಎಳೆ ಜೀವಗಳ ಮೈಯ ಮಾಂಸವು ತಿನ್ನಲು ಎಷ್ಟು ರುಚಿಕರವಾಗಿರಬಹುದು ಎಂದು ನೆನೆಸಿಕೊಂಡಂತೆಲ್ಲ ಆ ರಾಕ್ಷಸ ತನ್ನ ಕೋರೆ ಹಲ್ಲುಗಳ ನಡುವಿನ ಕಪ್ಪು ನಾಲಿಗೆಯನ್ನು, ಹೊರತೆಗೆದು ಸವರಿಕೊಳ್ಳುತ್ತಿದ್ದ. ಸುತ್ತಲ ಪರಿಸರಕ್ಕೆ ಹೊಂದಿಕೊಂಡಂತೆ ಮಾರುವೇಷದಲ್ಲಿದ್ದ ಆ ಕ್ರೂರಿ ರಾಕ್ಷಸನ ತದೇಕ ದೃಷ್ಟಿಯೊಳಗೆ ಸಿಲುಕಿದ್ದ ಆ ಎರಡು ಅಮಾಯಕ ಜೀವಗಳು ಆತನ ಇರುವಿಕೆಯ ಅರಿವೇ ಇಲ್ಲದೆ ಓಡಾಡುತ್ತಿದ್ದವು. ಆದರೂ ಅವುಗಳನ್ನು ಆಗಾಗ ಒಂದು ಅನುಮಾನ ಕಾಡುತ್ತಿತ್ತು ಕೂಡ. ಹಾಗೆಂದೆ ಅವರಲ್ಲಿ ಹಿರಿಯನಾದವ ಹೇಳುತ್ತಿದ್ದ.

Eedina App

“ಲೋ ತಮ್ಮ, ಹುಷಾರು. ಇಲ್ಲೆ ಎಲ್ಲೋ, ಈ ಕಡೆಯ ಕಾಡಿನಲ್ಲಿ, ಈ ಪೊದೆಗಳಲ್ಲಿ ಆ ಪಾಪಿ ಕದ್ದು ಕುಳಿತಿರ್ತಾನಂತೆ,” ಮೆಲುದನಿಯಲ್ಲಿಯೇ ಹೇಳಿದ ಅಣ್ಣ.

“ಪಾಪಿ? ಅಂದ್ರೆ ಯಾರಣ್ಣ?”

AV Eye Hospital ad

“ಇದ್ದಾನಂತೆ ಇತ್ತ ಕಡೆ ಒಬ್ಬ ರಾಕ್ಷಸ.”

“ರಾಕ್ಷಸ! ಆದರೆ  ಪಾಪಿ ಯಾಕೆ?”

“ಯಾಕೆಂದರೆ ಅವ ಹುಟ್ಟುವ ಮೊದಲೇ ತಂದೆಯನ್ನು ಕಳೆದುಕೊಂಡ ಪಾಪಿಷ್ಟನಂತೆ. ಹಾಗಂತ ಅಮ್ಮ ಹೇಳ್ತಿದ್ರು... ಇಲ್ಲೇ ಎಲ್ಲೋ ಹೊಂಚು ಹಾಕಿ ಕಾದು ಕುಳಿತಿರುತ್ತಾನಂತೆ. ಅವನ ಕೈಗೆ ಸಿಕ್ಕರೆ ನಮ್ಮನ್ನ ಸಿಗಿದು ಸೀಳಿಬಿಡುತ್ತಾನೆ, ಹುಷಾರ್ ಅಂತ ಅಮ್ಮ ಎಚ್ಚರಿಕೆ ಕೊಟ್ಟಿದ್ದಾರೆ.” ಆ ವಿವರ ಕೇಳಿ ತಮ್ಮನಿಗೆ ಹೆದರಿಕೆಯಾದರೂ, ಆ ಪಾಪಿಯ ಬಗ್ಗೆ ಪಾಪ ಅನಿಸಿ ಕೇಳಿದ.

ಈ ಲೇಖನ ಓದಿದ್ದೀರಾ?: ಪಾಟಿ ಚೀಲ | ನಿಮ್ಮ ಮಗುವಿನ ಜೊತೆ ಹೀಗೆಲ್ಲ ವರ್ತಿಸುವ ಮುನ್ನ ದಯವಿಟ್ಟು ಒಮ್ಮೆ ಯೋಚಿಸಿ

“ಹುಟ್ಟುವ ಮೊದಲೆ ತಂದೆ ಕಳೆದುಕೊಂಡನೆ? ಪಾಪ ಅಲ್ಲವೆ ಅಣ್ಣ?”

“ಪಾಪ? ಅವನಿಗೇಕೆ ಪಾಪ ಅಂತೀಯ. ಆ ಪಾಪಿ ಹುಟ್ಟುವ ಮೊದಲೆ, ಅಂದರೆ, ಇವನ ತಂದೆಯ ಪರಿಚಯ ಆಗುತ್ತಿದ್ದಂತೆಯೇ ಇವನ ತಾಯಿ, ಆಹಾ.. .ಆ ಮಹಾತಾಯಿ, ಆತನನ್ನು  ಕೊಂದುಹಾಕಿದಳಂತೆ. ಆನಂತರವೇ ಈ ಪಾಪಿ ಹುಟ್ಟಿದ್ದಂತೆ.”

ಅದನ್ನು ಕೇಳಿ ತಮ್ಮ “ಹೋ...” ಎಂದನಾದರೂ ಒಂದು ಪ್ರಶ್ನೆ ಅವನ ತಲೆಯಲ್ಲಿ ಸುಳಿದಾಡತೊಡಗಿತು. ತನಗೆ ತಿಳಿದಂತೆ ಅಥವಾ ಅಮ್ಮ ಹೇಳಿದಂತೆ ತಂದೆ ತಾಯಿ ಸೇರಿದ ಮೇಲೆ ಮಾತ್ರವೆ ಮಕ್ಕಳು ಹುಟ್ಟಲು ಸಾಧ್ಯ. ಆದರೆ ಈ ರಾಕ್ಷಸನ ತಾಯಿಯು ಈತನ ತಂದೆ ತನ್ನ ಪರಿಚಯ ಮಾಡಿಕೊಳ್ಳುತ್ತಿದ್ದಂತೆಯೇ ಆಕೆ ಸಾಯಿಸಿಬಿಟ್ಟಳು ಎಂದಾದರೆ ಇವ ಹೇಗೆ ಹುಟ್ಟಿದ?

ಅದಾವುದೂ ಅರ್ಥವಾಗದೆ ಅಣ್ಣನನ್ನು ಏನೋ ಕೇಳುವವನಿದ್ದ. ಅಷ್ಟರಲ್ಲಿಯೇ ಸುಂಟರಗಾಳಿ ಸುಳಿದಂತೆ ಅಲ್ಲೊಂದು ಸಣ್ಣದಾದ, ಆದರೆ ರಭಸವಾದ ಗಾಳಿ ಬೀಸಿದಂತಾಗಿತ್ತು. ಅದರ ಬೆನ್ನಲ್ಲಿಯೇ ಯಾರೋ ಓಡಿಹೋಗುತ್ತಿದ್ದ ಶಬ್ದ ಕೇಳಿಸಿತು. ಅವರಿಬ್ಬರೂ ಅತ್ತ ತಿರುಗಿ ನೋಡಿ ದಂಗಾದರು. ಆ ರಾಕ್ಷಸ ಬೇಟೆಗಾರ ತಮ್ಮ ಪಕ್ಕದಿಂದಲೇ ಜಿಗಿದು ಹೋಗುತ್ತಿದ್ದ. ಅವನು ಹೋಗುತ್ತಿದ ರಭಸಕ್ಕೆ ಅಲ್ಲೆಲ್ಲ ಗಾಳಿ ಬೀಸಿತ್ತು. ಅವನ ಬಿರುಸಿಗೆ ಹೆದರಿದ ಅವರಿಬ್ಬರೂ ಇದ್ದಲ್ಲಿಯೇ ಮುದುರಿ ಕುಳಿತರು. ಆ ರಾಕ್ಷಸನ ದೇಹದ ಮುಂದೆ ಚಾಚಿಕೊಂಡಿದ್ದ ಚೂಪಾದ ಹಲ್ಲುಗಳಿರುವ ಉದ್ದನೆಯ ಮಚ್ಚಿನಂತಹ ಕೈಯ ಆಯುಧ ನೋಡಿ ಇಬ್ಬರೂ ಬೆಚ್ಚಿ ಬಿದ್ದರು. ಆ ಆಯುಧದ ಕೈಲಿ ಸಿಲುಕಿಕೊಂಡರೆ ತಾವು  ಹರಿದು ತುಂಡಾಗುತ್ತಿದ್ದದ್ದು ಖಚಿತ ಎಂದು ಯೋಚಿಸುತ್ತಿದ್ದಂತೆ ಭಯದಿಂದ ಅವರ ತಲೆ ತಿರುಗಿದಂತಾಗಿತ್ತು. ಅಣ್ಣ ತನ್ನ ಒಂದು ಕೈಯನ್ನು ಆ ಬೇಟೆಗಾರನತ್ತ ತೋರಿಸುತ್ತ, ಮತ್ತೊಂದು ಕೈಯಲ್ಲಿ ತಮ್ಮನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಹೆದರಿಕೆಯ ದನಿಯಲ್ಲಿಯೇ ತೊದಲುತ್ತ ಪಿಸುಗುಟ್ಟಿದ.

ಈ ಲೇಖನ ಓದಿದ್ದೀರಾ?: ವಾರಾಂತ್ಯದ ಓದು | 'ಏನಮ್ಮಾ... ಮಗ ಮುಖ್ಯಮಂತ್ರಿ ಆದ್ಮೇಲೆ ನಿನ್ನ ಖರ್ಚು-ವೆಚ್ಚ ಜಾಸ್ತಿಯಾದಂತೆ ಕಾಣುತ್ತೆ!'

“ಅವನೇ... ಅವನೇ... ಆ ರಾಕ್ಷಸ ಪಾಪಿ...” ಅಣ್ಣನ ಹೆದರಿಕೆಯ ದನಿ ಕೇಳಿ, ಆ ರಾಕ್ಷಸನ ಬಿರುಸಿನ ಜಿಗಿತ ಕಂಡು, ಅವನ ವಿಕೃತವಾದ ಕೈಗಳ ಆಯುಧ ನೋಡಿ ಹೆದರಿ ಮುದುರಿಕೊಂಡಿದ್ದ ತಮ್ಮನು ಭಯದಿಂದ ತೊದಲುತ್ತ ಕೇಳಿದ.

“ಅಣ್ಣ... ಅಂದರೆ... ಇಷ್ಟೂ ಹೊತ್ತು ಅವ ಇಲ್ಲಿಯೇ… ನಮ್ಮ ಪಕ್ಕದಲ್ಲಿಯೇ ಇದ್ದನೆ…?”

“ಹೌದು. ನೋಡು ನಮಗೆ ಕಾಣಲೇ ಇಲ್ಲ. ಅಬ್ಬ..ಎಂತಹ ಮುಸುಕುದಾರಿ ಮೋಸಗಾರ ಅಲ್ಲವೆ?”

“ಉಸ್... ದೇವರೆ ಹೇಗೋ ತಪ್ಪಿಸಿಕೊಂಡೆವು… ನಮ್ಮ ಅದೃಷ್ಟ” ಎಂದು ದೀರ್ಘವಾದ ಉಸಿರು ಬಿಟ್ಟ ಆ ತಮ್ಮ.

“ನಿಜಕ್ಕೂ ಇಂದು ನಾವು ಅದೃಷ್ಟ ಮಾಡಿದ್ದೆವು. ನಡೆ, ಮೊದಲು ಇಲ್ಲಿಂದ ತಪ್ಪಿಸಿಕೊಳ್ಳೋಣ,” ಎಂದು ತಮ್ಮನನ್ನು ಕರೆದೊಯ್ದ. 

ಇಬ್ಬರೂ ಬಿರಬಿರನೆ ಜಿಗಿಯುತ್ತ ಕಾಡಿನೊಳಗೆ ಮರೆಯಾದರು.

ಈ ಲೇಖನ ಓದಿದ್ದೀರಾ?: ಊರ್ಬದಿ | ಮಲೆನಾಡಿನ ಮಾಗಿಯ ಬಯಲು ಮತ್ತು ಕಣಿವೆ ತಬ್ಬುತ್ತಿದ್ದ ಅವ್ವನ ದನಿ

ಆ ಎಳೆ ಜೀವಗಳು ಅದೃಷ್ಟ ಮಾಡಿದ್ದರೋ ಇಲ್ಲವೋ, ಆದರೆ ಒಂದು ವಿಚಿತ್ರವೆಂದರೆ ಅವರ ಮಾತಿನಿಂದಲೇ ಅವರಿಬ್ಬರ ಜೀವ ಉಳಿದಿತ್ತು ಎನ್ನಬಹುದೇನೋ. ಕಾರಣ ಮರೆಯಲ್ಲಿ ಕುಳಿತು ಅವರನ್ನೇ ದಿಟ್ಟಿಸಿ ನೋಡುತ್ತಿದ್ದ ಆ ರಾಕ್ಷಸ ಇವರಿಬ್ಬರ ನಡುವೆ ನಡೆದ ಸಂಬಾಷಣೆ ಕೇಳಿ ಕಂಗೆಟ್ಟಿದ್ದ.  ತಾನು ಕೇಳಿಸಿಕೊಂಡ ಅವರ ಮಾತುಗಳ ಸತ್ಯಾಸತ್ಯತೆ ತಿಳಿಯದೆ ವಿಚಲಿತಗೊಂಡು ಅಧೀರನಾಗಿದ್ದ. ಆ ಮನಸ್ಥಿತಿಯಲ್ಲಿ ಆತ ತನ್ನ ಗುರಿಗೆ ಸಿಲುಕಿದ್ದ  ಬೇಟೆಗಳನ್ನೂ ಬಲಿ ತೆಗೆದುಕೊಳ್ಳದೆ ಅಲ್ಲಿಂದ ಒಂದೇ ಜಿಗಿತದಲ್ಲಿ ಹೊರನಡೆದಿದ್ದ. ಹಾಗೆ ಹೋಗುತ್ತಿದ್ದಂತೆ ಅವನ ತಲೆಯಲ್ಲಿ ಹಲವಾರು ಪ್ರಶ್ನೆಗಳು ಸುಳಿದಾಡುತ್ತಿದ್ದವು:

‘ಹೌದು. ನನಗೆ ತಂದೆ ಇಲ್ಲ. ನಿಜ. ಈ ಬಗ್ಗೆ ನಾನು ಎಂದೂ ಯಾರನ್ನೂ ಕೇಳಿಲ್ಲ. ಕಾರಣ ಇದುವರೆಗೆ ಅದು ಸ್ವಾಭಾವಿಕ ಎಂದೆ ಪರಿಗಣಿಸಿದ್ದೆ. ಆದರೆ ನಾನು ಕಂಡಂತೆ ಬಹುಪಾಲು ಮಿಕ್ಕ ಎಲ್ಲರಿಗೂ ತಂದೆ ಇದ್ದಾರೆ.  ನನಗೇಕೆ ಇಲ್ಲ? ನನ್ನ ತಂದೆ ಯಾರೆಂದೂ ತಿಳಿಯದು… ಹಾಗಾದರೆ ನನ್ನ ತಾಯಿಯ ಬಗ್ಗೆ ಇವರಿಬ್ಬರೂ ಹೇಳಿದ್ದೆಲ್ಲ ಸತ್ಯವೆ? ನನ್ನ ತಾಯಿಯೇ ನನ್ನ ತಂದೆಯನ್ನು ಕೊಂದು ಹಾಕಿದಳೆ? ಅದೂ ಕೂಡ ಪರಿಚಯ ಆಗುತ್ತಿದ್ದಂತೆಯೇ? ಕಾರಣ? ನಮ್ಮ ತಾಯಿ ಅಷ್ಟು ಕಟೋರ ಸ್ವಭಾವದವಳೆ? ಆದರೆ ಆಕೆ ನನ್ನನ್ನು ಅಷ್ಟು ಮಮತೆಯಿಂದ ಸಾಕಿದ್ದಾಳೆ ಅಲ್ಲವೆ? ನನ್ನನ್ನು ಎಂದೂ ಯಾವ ಕೊರತೆಯೂ ಇಲ್ಲದಂತೆ ಯಾವುದೇ ನೋವು ತಿಳಿಯದಂತೆ ಬೆಳೆಸಿದ್ದಾಳೆ. ಅಂತಹ ಕರುಣಾಮಯಿ ತಾಯಿ ನನ್ನ ತಂದೆಯನ್ನು ಕೊಂದಳೆ? ಅಥವಾ ನನ್ನ ತಂದೆ ಅಷ್ಟು ಕೆಟ್ಟವನಾಗಿದ್ದನೆ? ನಾನು ಇದರ ಬಗ್ಗೆ ಯಾರನ್ನು ಕೇಳುವುದು? ಈಗ ಅಮ್ಮನೂ ಇಲ್ಲ. ನನಗೆ ನನ್ನ ಅಣ್ಣ ತಮ್ಮಂದಿರೂ ಯಾರೂ ಬಳಿಯಲ್ಲಿ ಇಲ್ಲ…'

ಈ ಲೇಖನ ಓದಿದ್ದೀರಾ?: ಡಾಕ್ಟರ್‌ ಮಾತು | 'ನಾರ್ಮಲ್ ಬಿಪಿ' ಎಂದರೆ ಎಷ್ಟು, ಏನು? ಅದನ್ನು ಗೊತ್ತುಮಾಡಿಕೊಳ್ಳುವುದು ಹೇಗೆ?

ಹೀಗೆ ಹಲವು ರೀತಿಯಲ್ಲಿ ಯೋಚಿಸುತ್ತ ಲಗುಬಗೆಯಿಂದ ಹೋಗುತ್ತಿದ್ದಂತೆ ತಟಕ್ಕನೆ ಒಂದು ಮುಷ್ಟಿ, ಅಗಾಧವಾದ ಮುಷ್ಟಿ, ತನ್ನ ಸುತ್ತ ಧಾವಿಸಿ ಬಂದಂತಾಯಿತು. ನೋಡ ನೋಡುತ್ತಿದ್ದಂತೆ ತನ್ನತ್ತ ಬೀಸಿ ಬರುತ್ತಿದ್ದ ಆ ಮುಷ್ಟಿಯ ಬೆರಳುಗಳು ತನ್ನನ್ನು ಬಳಸಿ ಸುತ್ತಿಕೊಂಡವು- ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲದಂತೆ. ಆ ಮುಷ್ಟಿಯು ಗೋಡೆಯಂತೆ ಕ್ಷಣಾರ್ದದಲ್ಲಿ ತನ್ನನ್ನು ಸುತ್ತುವರಿದು, ಕದಲಲೂ ಆಗದಂತೆ ಬಿಗಿಯಾಗಿ ಬಂದಿಸಿಬಿಟ್ಟಿತ್ತು. ಏನೂ ಮಾಡಲಾಗದೆ ಕಣ್ಣು ಮುಚ್ಚಿ, ಆ ಮುಷ್ಟಿಯೊಳಗೆ ತಾನು ಸೆರೆಸಿಕ್ಕಿದ್ದೇನೆ ಎಂಬ ಅರಿವು ಮೂಡುತ್ತಿದ್ದಂತೆಯೇ ತನ್ನನ್ನು ಸರಕ್ಕನೆ ಎತ್ತಲೋ ಎಸೆದಂತಾಯಿತು; ಮುಷ್ಟಿಯಿಂದ ಬಿಡುಗಡೆಯಾಗಿತ್ತು.

ಕಣ್ಣು ತೆರೆದು ನೋಡಿದ.

ತಾನು ಒಂದು ಪಂಜರದೊಳಗೆ ಬಂಧಿಯಾಗಿದ್ದ.

ಅದೊಂದು ದುಂಡಾದ ದೊಡ್ಡ ಪಂಜರ.

ಪಾರದರ್ಶಕ ಗೋಡೆಯ ಪಂಜರ. ಆ ಪಾರದರ್ಶಕ ಗೋಡೆಯಲ್ಲಿ ಎಲ್ಲೆಲ್ಲೂ ಸಣ್ಣ ಸಣ್ಣ ರಂಧ್ರಗಳನ್ನು ಮಾಡಲಾಗಿತ್ತು. ಆ ರಂದ್ರಗಳ ಮೂಲಕ ಗಾಳಿ ಒಳಗೂ ಹೊರಗೂ ಸರಿದಾಡುತ್ತಿತ್ತು. ಆತ ಬೆರಗಾಗಿ ಆ ಪಾರದರ್ಶಕ ಗೋಡೆಯ ಮೂಲಕ ಹೊರಗೆ ಕಣ್ಣು ಹಾಯಿಸಿದ. ಅಲ್ಲಿ ಕಂಡ ದೃಶ್ಯ ಅವನನ್ನು ಬೆಚ್ಚಿ ಬೀಳಿಸಿತು!

ಪುಸ್ತಕ: ಹಾತೆ-ಜತೆ-ಕತೆ | ಕತೆ: ಕೆ ಎನ್ ಗಣೇಶಯ್ಯ | ಕಲೆ: ಪೂರ್ಣಿಮಾ ಬೆಳವಾಡಿ | ಪ್ರಕಾಶನ: ಮಾಧ್ಯಮ ಅನೇಕ ಪಬ್ಲಿಷರ್ಸ್, ಬೆಂಗಳೂರು | ಬೆಲೆ: ₹ 250

ನಿಮಗೆ ಏನು ಅನ್ನಿಸ್ತು?
0 ವೋಟ್
eedina app