ಎನ್ ಸಂಧ್ಯಾರಾಣಿ ಅವರ 'ಇವ ಲೆಬನಾನಿನವ' ಪುಸ್ತಕದ ಆಯ್ದ ಭಾಗ

Young Gibran

ಗಿಬ್ರಾನ್ ತನ್ನ ಕಡೆಯ ದಿನಗಳನ್ನು ಕಳೆದದ್ದು ಸಂಗಾತಿ ಬಾರ್ಬರಾ ಯಂಗ್ ಜೊತೆ. ಆ ದಿನಗಳು, ದಕ್ಕಿದ ಅನುಭಾವ, ಗಿಬ್ರಾನನ ಬರವಣಿಗೆ ಕುರಿತು ಬಾರ್ಬರಾ ಬರೆದ ಪುಸ್ತಕ 'This Man From Lebanon.' "ಗಿಬ್ರಾನ್ ನನ್ನ ಅನುಗಾಲದ ಅನುರಕ್ತಿ," ಎನ್ನುವ ಲೇಖಕಿ ಎನ್ ಸಂಧ್ಯಾರಾಣಿ ಈ ಪುಸ್ತಕವನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಪುಸ್ತಕದ ಆಯ್ದ ಭಾಗ, ಬೆನ್ನುಡಿ ಇಲ್ಲಿದೆ

ನಾನು 'ದ ಪ್ರಾಫೆಟ್' ಬರೆಯುತ್ತಿದ್ದಾಗ, 'ದ ಪ್ರಾಫೆಟ್' ನನ್ನನ್ನು ಬರೆಯುತ್ತಿತ್ತು - ಗಿಬ್ರಾನ್

**
ತಾಯಿಯನ್ನು ಕುರಿತು: ಆಕೆ ಲೆಕ್ಕವೇ ಇರದಷ್ಟು ಕವಿತೆಗಳನ್ನು ಸ್ವತಃ ಜೀವಿಸಿದಳು. ಆದರೆ ಒಂದನ್ನೂ ಬರೆಯಲಿಲ್ಲ. ತಾಯಿಯ ಹೃದಯದಲ್ಲಿ ನಿಶ್ಶಬ್ದವಾಗಿ ಉಳಿಯುವ ಕವಿತೆ ಮಗುವಿನ ತುಟಿಗಳಿಂದ ಹಾಡಾಗಿ ಹೊಮ್ಮುತ್ತದೆ.

**
ಕಷ್ಟ, ಕಳವಳ ಮತ್ತು ಖುಷಿಯ ಎದೆಗುದಿಯಿಂದ ಹುಟ್ಟಿಬರುವ ಅದೇ ಕವಿತೆ, ಹೃದಯವನ್ನು ಹಗುರಾಗಿಸುತ್ತದೆ.

**
ಕಲಾವಿದನೊಬ್ಬ ತನ್ನ ಕಲಾರಸಿಕರಿಗೆ ನೀಡಬಹುದಾದ ಕೊಡುಗೆ ಕೇವಲ ಆತ ತನ್ನ ಪ್ರತಿಭೆಯಿಂದ ಕೃತಿಗೆ ಏನನ್ನು ಧಾರೆಯೆರೆಯುತ್ತಾನೋ ಅದಕ್ಕೆ ಮಾತ್ರ ಸೀಮಿತ ಆಗಿರುವುದಿಲ್ಲ. ಆತನ ಪ್ರೇಮ ಮತ್ತು ಸೃಜನಶೀಲತೆಯ ಈ ಫಲ, ಅವರ ಮನಸ್ಸು ಮತ್ತು ಗ್ರಹಿಕೆಯಲ್ಲಿ ಏನನ್ನು ಸೃಜಿಸುತ್ತದೆಯೋ ಅದರಲ್ಲಿ ಆ ಕೊಡುಗೆಯ ಸಂಪೂರ್ಣ ಫಲ ಇರುತ್ತದೆ.

**
ಇಡೀ ಪ್ರಪಂಚದಲ್ಲಿ ಒಂದೇ ಒಂದು ಮರವೇನಾದರೂ ಇದ್ದಿದ್ದರೆ, ಆಗ ಎಲ್ಲ ದೇಶಗಳ ಜನರೂ ಅದಕ್ಕಾಗಿ ತೀರ್ಥಯಾತ್ರೆ ಮಾಡಿ, ಅದರೆದುರಲ್ಲಿ ಪೊಡಮೊಟ್ಟು ಅದನ್ನು ಆರಾಧಿಸುತ್ತಿದ್ದರು.

**
ಮೊದಲ ಮಹಾಯುದ್ಧವನ್ನು ಕುರಿತು: ಇದು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧವಲ್ಲ, ಹೆಚ್ಚಿನ ಬುದ್ಧಿವಂತಿಕೆಗಾಗಿ ನಡೆದದ್ದು. ಆ ಹೆಚ್ಚಿನ ಬುದ್ಧಿವಂತಿಕೆಯೇ ಇಂದಿನ ದೇಶಗಳಿಗೆ, 'ಈ ಸಲದ ಗೆಲುವು ಪ್ರಪಂಚಕ್ಕೆ ಹೆಚ್ಚಿನ ಸ್ವಾತಂತ್ರ್ಯ ಕೊಡುತ್ತದೆ' ಎಂದು, ಯುದ್ಧವನ್ನು ಕುರಿತಾದ ಸೋಲಿಸಲಾಗದ ಸಂಕಲ್ಪಶಕ್ತಿಯನ್ನು ಕೊಟ್ಟಿದೆ.

**
ಧರ್ಮವಾಗಲೀ, ವಿಜ್ಞಾನವಾಗಲೀ, ಜಗತ್ತಿನಲ್ಲಿರುವ ಒಳಿತಿನ ಸೌಂದರ್ಯಕ್ಕೆ ಮಿಗಿಲಾದುದಲ್ಲ.

Image
Iva Lebananinava Book Cover 2

ರೇವಿನ ಸಮೀಪ ನಾನೊಂದು ಹೊಸ ಪಟ್ಟಣವನ್ನು ಕಟ್ಟುತ್ತೇನೆ, ಸಮೀಪದ ದ್ವೀಪದಲ್ಲಿ ಒಂದು ವಿಗ್ರಹವನ್ನು ಪ್ರತಿಷ್ಠಾಪಿಸುತ್ತೇನೆ; ಸ್ವಾತಂತ್ರ್ಯದ ವಿಗ್ರಹವಲ್ಲ, ಸೌಂದರ್ಯದ ವಿಗ್ರಹ. ಏಕೆಂದರೆ, ಸ್ವಾತಂತ್ರ್ಯದ ವಿಗ್ರಹದಡಿಯಲ್ಲಿ ಜನ ನಿರಂತರವಾಗಿ ಯುದ್ಧಗಳನ್ನೇ ಮಾಡಿದ್ದಾರೆ. ಆದರೆ, ಸೌಂದರ್ಯದ ವಿಗ್ರಹವಿದ್ದರೆ, ಆ ಮುಖದೆದುರಿನಲ್ಲಿ ಜನ ಮಿಕ್ಕೆಲ್ಲರೆಡೆಗೆ ಭಾತೃತ್ವದ ಕೈಚಾಚುತ್ತಾರೆ.

**
ಲೆಬನಾನ್ ಪ್ರವಾಸದಲ್ಲಿದ್ದ ಒಬ್ಬ ಅಮೆರಿಕನ್ ಮಹಿಳೆಯನ್ನು ಕುರಿತು ಒಂದು ಕತೆ ಇದೆ. ತರುಣ ಲೆಬನೀಸ್ ಕವಿಯೊಬ್ಬನನ್ನು ಭೇಟಿ ಮಾಡಿದ ಆಕೆ, "ನ್ಯೂಯಾರ್ಕ್‌ನಲ್ಲಿರುವ ನಿಮ್ಮ ದೇಶದ ಒಬ್ಬಾತ – ಖಲೀಲ್ ಗಿಬ್ರಾನ್, ನನಗೆ ಪರಿಚಯ. ನಿನಗೆ ಆತ ಗೊತ್ತೇ?" ಎಂದು ಕೇಳಿದಳಂತೆ. ಆಗ ಆ ತರುಣ ಕವಿ, "ಮೇಡಂ, ಶೇಕ್ಸ್‌ಪಿಯರ್ ಗೊತ್ತೇ ಎಂದು ನಿಮ್ಮನ್ನು ನಾನು ಕೇಳುತ್ತೇನೆಯೇ?" ಎಂದು ಉತ್ತರಿಸಿದನಂತೆ!

**
"ಧರ್ಮ?" - ಒಂದು ಪ್ರಶ್ನೆಗೆ ಉತ್ತರಿಸುತ್ತ ಅವ ಹೀಗೆಂದಿದ್ದ; "ಅದೇನದು? ನನಗೆ ಗೊತ್ತಿರುವುದು ಬದುಕು ಮಾತ್ರ. ಬದುಕೆಂದರೆ ಭೂಮಿ, ದ್ರಾಕ್ಷಿ ತೋಟ ಮತ್ತು ನೇಯುವ ಮಗ್ಗ… ಚರ್ಚ್ ಎನ್ನುವುದು ನಿನ್ನೊಳಗೆ ಇದೆ. ಸ್ವತಃ ನೀನೇ ಅಲ್ಲಿನ ಉಪಾಸಕ."

**
ನನ್ನ ಹೃದಯ ತಾಳಿಕೊಳ್ಳುತ್ತದೆ ಸರ್ವ ಸ್ವರೂಪ.
ಸನ್ಯಾಸಿಗೆ ಮಠದ ಮೆಟ್ಟಿಲು, ಗುಡಿಗೆ ವಿಗ್ರಹ
ಜಿಂಕೆ ಹಿಂಡುಗಳಿಗೆ ಹುಲ್ಲುಗಾವಲು, ನಂಬಿದವನ ಕಾಬಾ
ತೋರಾಹ್ ಪಟ್ಟಿ, ಖುರಾನಿನದ್ದೂ
ನಾನು ಆರಾಧಿಸುವ ಧರ್ಮ ಪ್ರೇಮ,

**
ನನ್ನ ಈ ಹುಚ್ಚುತನದಲ್ಲಿ ನಾನು ಸ್ವಾತಂತ್ರ್ಯ ಮತ್ತು ಸುರಕ್ಷತೆ ಎರಡನ್ನೂ ಕಂಡುಕೊಂಡಿದ್ದೇನೆ. ಒಂಟಿಯಾಗಿರಬಲ್ಲ ಸ್ವಾತಂತ್ರ್ಯ ಮತ್ತು ಬೇರೆಯವರಿಂದ ಅರ್ಥವಾಗಲ್ಪಡುವುದರಿಂದ ಸುರಕ್ಷತೆ. ನಮ್ಮನ್ನು ಅರ್ಥ ಮಾಡಿಕೊಳ್ಳುವವರು ನಮ್ಮಲ್ಲಿನ ಏನನ್ನೋ ಅಡಿಯಾಳಾಗಿಸಿಕೊಳ್ಳುತ್ತಾರೆ.

* * * * *

ಬೆನ್ನುಡಿ

Image
Chidambara Narednra
ಚಿದಂಬರ ನರೇಂದ್ರ

ಕನ್ನಡಕ್ಕೂ ಲೆಬನಾನ್‌ನ ಮಹಾಕವಿ ಖಲೀಲ್ ಜಿಬ್ರಾನ್‌ನಿಗೂ ಅವಿನಾಭಾವ ಸಂಬಂಧ. ವರಕವಿ ಬೇಂದ್ರೆ ಅಂತೂ, ಜಿಬ್ರಾನ್‌ನನ್ನು ತಮ್ಮ ಗುರು ಚತುರ್ಮುಖರಲ್ಲಿ ಒಬ್ಬ ಎಂದು ಗುರುತಿಸುತ್ತಾರೆ, ತಮ್ಮ ಹಲವಾರು ಕವಿತೆಗಳಿಗೆ ಅವನಿಂದ ಸ್ಫೂರ್ತಿ ಪಡೆಯುತ್ತಾರೆ. ತಾನು ಅದನ್ನು ಬರೆಯುವಾಗ ಅದು ತನ್ನನ್ನು ಬರೆಯಿತು ಎಂದು ಖಲೀಲ್ ಜಿಬ್ರಾನ್‌ನೇ ಬೆರಗಿನಿಂದ ಹೇಳುವ ಅವನ ಆಚಾರ್ಯ ಕೃತಿ 'The Prophet' ಕನ್ನಡಕ್ಕೆ ಮತ್ತೆ-ಮತ್ತೆ ಅನುವಾದವಾಗುತ್ತಲೇ ಇದೆ. ಜಿಬ್ರಾನ್‌ನ ಅನುವಾದಗಳ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗುತ್ತಿರುವುದು ಸಂಧ್ಯಾರಾಣಿಯವರು ಅನುವಾದಿಸಿರುವ, ಬಾರ್ಬರಾ ಯಂಗ್ ಅವರ 'ಇವ… ಲೆಬನಾನಿನವ' (This Man from Lebanon) ಎನ್ನುವ ಅಪರೂಪದ ಅನುವಾದ.

ಬಾರ್ಬರಾ ಯಂಗ್ ಅಮೇರಿಕೆಯ ಕವಿ, ಕಲಾ ವಿಮರ್ಶಕಿ. ಜಿಬ್ರಾನ್‌ನ ಕೊನೆಯ ವರ್ಷಗಳಲ್ಲಿ ಅವನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಅವನ ತಲ್ಲಣಗಳನ್ನ, ಧ್ಯಾನವನ್ನ, ಅವನ ಸುತ್ತ ಹರಡಿಕೊಂಡಿರುತ್ತಿದ್ದ ಅಲೌಕಿಕತೆಯನ್ನ ಕಣ್ಣಾರೆ ಕಂಡವರು, ಅನುಭವಿಸಿದವರು. ಆತ್ಮೀಯ ಗೆಳತಿಯಾಗಿ ಅವನ ಮಾತುಗಳನ್ನ, ಮೌನವನ್ನ ಗ್ರಹಿಸಿದವರು. ಈ ಪುಟ್ಟ ಹೊತ್ತಿಗೆಯಲ್ಲಿ ಬಾರ್ಬರಾ, ಜಿಬ್ರಾನ್‌ನ ವ್ಯಕ್ತಿತ್ವವನ್ನು, ಅವನ ಚಿತ್ರಕಲೆ, ಕಾವ್ಯ, ಅಧ್ಯಾತ್ಮ, ಮನುಷ್ಯ ಸಹಜ ಬಯಕೆಗಳು, ಅಸಾಮಾನ್ಯ ದೈವಿಕತೆಯನ್ನು ಹೋಲುವ ಪ್ರತಿಭೆ ಎಲ್ಲದರ ಮುಖಾಂತರ ಅತ್ಯಂತ ಆಪ್ತವಾಗಿ ಕಟ್ಟಿಕೊಡುತ್ತಾರೆ.

ಈ ಪುಸ್ತಕ ಓದಿದ್ದೀರಾ?: 'ಕರಿಡಬ್ಬಿ' ಪುಸ್ತಕದ ಆಯ್ದ ಭಾಗ | ಕೋವಿಡ್ ಕಾಲದಲ್ಲಿ ನ್ಯಾಯಾಂಗ ಏನು ಮಾಡಿತು?

ಪ್ರೇಮಿಯಾಗಿ, ಬಂಡಾಯಗಾರನಾಗಿ, ತತ್ವಜ್ಞಾನಿಯಂತೆ, ದ್ರಷ್ಟಾರನಂತೆ, ಕಾವ್ಯ ರಚಿಸುವ ಮತ್ತು ಪದ್ಯವನ್ನು ಗದ್ಯದಂತೆ, ಗದ್ಯವನ್ನು ಪದ್ಯದಂತೆ ಹೃದಯಂಗಮಯವಾಗಿ ಬರೆಯಬಲ್ಲ ಜಿಬ್ರಾನ್‌ನನ್ನು ಅನುವಾದಿಸುವವರು, ಕೇವಲ ಚತುರ ಅನುವಾದಕರಾಗಿದ್ದರಷ್ಟೇ ಸಾಲದು, ಸೂಕ್ಷ್ಮ ಮನಸ್ಸಿನ ಕವಿಯೂ ಆಗಿರಬೇಕಾಗುತ್ತದೆ. ಸಂಧ್ಯಾರಾಣಿಯವರ ಈ ಅನುವಾದ ಸಫಲವಾಗಿರುವುದೇ ಅವರು ಈ ಎರಡೂ ಮಾನದಂಡಗಳನ್ನು ಯಶಸ್ವಿಯಾಗಿ ಸಾಧಿಸಿಕೊಂಡಿರುವುದಕ್ಕೆ. ಇಲ್ಲಿನ ಗದ್ಯ, ಪದ್ಯ ಎರಡೂ ಬಾರ್ಬರಾ ಮತ್ತು ಜಿಬ್ರಾನ್‌ರ ಮೂಲಕ್ಕೆ ಅತ್ಯಂತ ಹತ್ತಿರ. ಜಿಬ್ರಾನ್‌ನಂಥ ಅದ್ಭುತ ಪ್ರತಿಭೆಯನ್ನ ಮತ್ತೊಂದು ಕೃತಿಯ ಮೂಲಕ ಕನ್ನಡಕ್ಕೆ ಪರಿಚಯಿಸಿದ ಕಾರಣಕ್ಕಾಗಿ ಸಂಧ್ಯಾರಾಣಿಯವರು ಕನ್ನಡ ಓದುಗರ ಅಭಿನಂದನೆಗೆ ಪಾತ್ರರು.

- ಚಿದಂಬರ ನರೇಂದ್ರ, ಕವಿ, ಅನುವಾದಕರು

ನಿಮಗೆ ಏನು ಅನ್ನಿಸ್ತು?
2 ವೋಟ್
Image
av 930X180