ಮೋಟಮ್ಮ ಅವರ ಆತ್ಮಕತೆ 'ಬಿದಿರು ನೀನ್ಯಾರಿಗಲ್ಲದವಳು' ಪುಸ್ತಕದ ಆಯ್ದ ಭಾಗ | ಅಚ್ಚರಡಿ ಎಸ್ಟೇಟ್

Motamma

ಅಚ್ಚರಡಿ ಎಸ್ಟೇಟ್‍ಗೆ ನಮ್ಮ ಕುಟುಂಬವು ಬಂದು ಸೇರಿಕೊಂಡ ಒಂದು ವರ್ಷಕ್ಕೊ, ಎರಡು ವರ್ಷಕ್ಕೊ ನಾನು ಹುಟ್ಟಿದೆ. ನನಗೆ ಯಾವಾಗ ಜನ್ಮಕೊಟ್ಟರು ಎಂಬುದಕ್ಕೆ ಸರಿಯಾದ ದಾಖಲೆಗಳಿಲ್ಲ. ನಮ್ಮ ತಂದೆ-ತಾಯಿ ನನ್ನ ಹುಟ್ಟಿದ ದಿನಾಂಕವನ್ನು ಬರೆದಿಟ್ಟಿಲ್ಲ. ಯಾಕೆಂದರೆ ಅವರು ಅನಕ್ಷರಸ್ತರಾಗಿದ್ದರು. ಅವರಿಗೆ ತಾರೀಖು ಬರೆದಿಡಬೇಕು ಎಂಬ ತಿಳಿವಳಿಕೆ ಇರಲಿಲ್ಲ

ಆ ಕಾಲದಲ್ಲಿ ಜೀತಪದ್ಧತಿ ಬಹಳ ಜೋರಾಗಿತ್ತು. ಎಲ್ಲಿ ನೋಡಿದರೂ ಜೀತವೇ ಇತ್ತು. ಬಡವರೆಲ್ಲ ಜೀತ ಮಾಡಿಯೇ ಬದುಕಬೇಕಾಗಿತ್ತು. ಜೀತವೇ ಜೀವನ. ಜೀತವಿಲ್ಲದೇ ಜೀವನವಿಲ್ಲವಾಗಿತ್ತು. ಬಡವರು ಜೀತದಲ್ಲಿಯೇ ಹುಟ್ಟಿ, ಜೀತದಲ್ಲಿಯೇ ಬೆಳೆದು, ಜೀತದಲ್ಲಿಯೇ ಸಾಯುತ್ತಿದ್ದರು. ಅಂಥ ದುರ್ಬರ ಸ್ಥಿತಿಯದು. ಇದೊಂದು ರೀತಿಯ ‘ಜೀತದ ಚಕ್ರ’. ಜೀತ ಪದ್ಧತಿ ಅಂತ ಹೇಳಿದರೆ ಈಗಿನ ಆಧುನಿಕ ಕಾಲದ ಜನರಿಗೆ ಅರ್ಥ ಆಗ್ಲಿಕ್ಕಿಲ್ಲ. ಉದಾಹರಣೆಗೆ, ಜೀತದಾಳಿನ ಮನೆಯಲ್ಲಿ ಯಾರದಾದರೂ ಮದುವೆ ಇದೆ ಅಂತಾದರೆ ಮುಗಿಯಿತು. ಅವನ ‘ಜೀತಚಕ್ರ’ಕ್ಕೆ ಇನ್ನಷ್ಟು ಸಾಲದ ಹೊರೆ ಸೇರ್ಪಡೆಯಾಗುತ್ತಿತ್ತು. ಮದುವೆ ಖರ್ಚಿಗೆ ಹಣ ಬೇಕಲ್ಲವೇ? ಜೀತದಾಳುವಾಗಿ ದುಡಿಯುವವರಿಗೆ ಮದುವೆಗೆ ಬೇಕಾಗುವಷ್ಟು ಹಣ ಎಲ್ಲಿಂದ ಬರಬೇಕು? ಒಬ್ಬ ಜೀತದಾಳು ಹಣ ಕೂಡಿಡಲು ಹೇಗೆ ಸಾಧ್ಯ? ಹೀಗಾಗಿ, ಮದುವೆಗೆ ಬೇಕಾದ ಹಣಕಾಸಿನ ಸಹಾಯವನ್ನು ಜೀತದಾಳುಗಳು, ತಾವು ಜೀತದಾಳಾಗಿ ದುಡಿಯುತ್ತಿದ್ದ ಯಜಮಾನನ ಬಳಿಯೇ ಹೋಗಿ ಕೇಳುತ್ತಿದ್ದರು. ಆ ಯಜಮಾನನು ದೊಡ್ಡ ಮನಸ್ಸು ಮಾಡಿ ಹಣ ಕೊಡುತ್ತಿದ್ದನು.

ಜೀತಕ್ಕಿಟ್ಟುಕೊಂಡ ಯಜಮಾನರುಗಳು ತಮ್ಮ ಜೀತದಾಳಿಗೆ ಮದುವೆಗೆ ಅಂತ ಕೊಡುವ ಹಣವನ್ನು ಒಂದು ತಟ್ಟೆಯಲ್ಲಿಟ್ಟು, ಅದರ ಜೊತೆಗೆ ವೀಳ್ಯದ-ಎಲೆ ಅಡಿಕೆಯನ್ನು ಇಟ್ಟು ಕೊಡುತ್ತಿದ್ದರು. ಅದನ್ನು ಪಡೆಯುವರು ತುಂಬ ಕೃತಜ್ಞತೆಯಿಂದ ತೆಗೆದುಕೊಂಡು, ‘ನಾನು ದುಡಿದು ಈ ಹಣದ ಋಣವನ್ನು ತೀರಸ್ತೀನಿ’ ಎಂದು ಮನಸ್ಸಿನಲ್ಲಿ ಪ್ರಮಾಣ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ಹೀಗೆ ತೆಗೆದುಕೊಂಡ ಹಣವನ್ನು ಚುಕ್ತಾ ಮಾಡಲು ಸಾಧ್ಯನೇ ಆಗ್ತಿರಲಿಲ್ಲ. ಅದು ಯಾವ ಥರಾ ಬಡ್ಡಿ ಹಾಕ್ತಿದ್ರೋ ಗೊತ್ತಿಲ್ಲ. ಬಡ್ಡಿಗೆ ಬಡ್ಡಿ, ಚಕ್ರಬಡ್ಡಿ ಬೆಳೀತಲೇ ಇತ್ತು. ಮದುವೆ ಆಮೇಲೆ ಅದೇನಾಗ್ತಿತ್ತು ಅಂದ್ರೆ, ಹೆಂಡತಿ ಬಸುರಿ ಆಗೋದು, ತವರು ಮನೆಗೆ ಹೋಗೋದು, ಹೆರಿಗೆ ಆಗೋದು, ಮತ್ತೆ ವಾಪಸ್ ಕರೆದುಕೊಂಡು ಬರೋದು. ಈ ಎಲ್ಲದಕ್ಕೂ ಮತ್ತೆ ಖರ್ಚಿನ ಬಾಬ್ತು ಜಮಾ ಆಗುತ್ತಿತ್ತು. ಹೀಗಾಗಿ ಒಬ್ಬನೇ ಜೀತದಾಳು ಆ ಹಣ ಋಣ ತೀರಸಲಿಕ್ಕೆ ಸಾಧ್ಯ ಆಗುತ್ತಿರಲಿಲ್ಲ. ತಂದೆ ಮಾಡಿದ ಸಾಲವನ್ನು ಮಗ ತೀರಿಸಬೇಕಿತ್ತು. ತಾವು ಜೀತಕ್ಕಿದ್ದ ಮನೆ ಬಿಟ್ಟು ಇನ್ನೊಬ್ಬರು 50 ರೂಪಾಯಿ ಜಾಸ್ತಿ ಕೊಡ್ತಾರೆ ಅಂದ್ರೂ ಅಲ್ಲಿಗೆ ಹೋಗೊದಕ್ಕೆ ಆಗುತ್ತಿರಲಿಲ್ಲ. ‘ನಮ್ಮ ಮನೆಯಲ್ಲಿ ಸಾಲ ಇಟ್ಕೊಂಡು ಹೇಗೆ ಬೇರೆಯವರ ಮನೆಗೆ ಹೋಗ್ತೀಯಾ?’ ಅಂತ ಜೀತ ಇಟ್ಕೊಂಡವ್ರು ಕ್ಯಾತೆ ತೆಗೆಯುತ್ತಿದ್ದರು. ಹೀಗಾಗಿ ಜೀತದಾಳುಗಳು, ಜೀತದಾಳುವಾಗಿ ಹುಟ್ಟಿ, ಜೀತದಾಳುವಾಗಿ ಬದುಕಿ, ಜೀತದಾಳಾಗಿ, ಆ ಸಾಲದಲ್ಲೇ ಸಾಯಬೇಕಿತ್ತು.

ಮದುವೆ, ಕಾಯಿಲೆ-ಕಸಾಲೆ ಅಂತ ಹಣ ಸಾಲ ಪಡೆದುಕೊಂಡು ಜೀತ ಮಾಡ್ತಿದ್ದವರಿಗೆ ಆಯಾ ಕುಟುಂಬಗಳ ಹೆಸರಿನ ಒಕ್ಕಲು ಎಂದು ಕರೆಯುತ್ತಿದ್ದರು. ಉದಾಹರಣೆಗೆ ಕೃಷ್ಣೇಗೌಡರ ಮನೆಯಲ್ಲಿ ಕೆಲಸ ಮಾಡ್ತಿದ್ದವರಿಗೆ ‘ಕೃಷ್ಣೇಗೌಡರ ಒಕ್ಕಲು’, ರಾಮೇಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ‘ರಾಮೇಗೌಡರ ಒಕ್ಕಲು’ ಅಂತು ಕರೆಯುತ್ತಿದ್ದರು. ಹೀಗೆ ಜೀತಪದ್ಧತಿ ತನ್ನ ಕರಾಳ ಬಾಹುಗಳನ್ನು ಎತ್ತೆತ್ತಲೂ ಚಾಚಿಕೊಂಡಿತ್ತು. ಒಮ್ಮೆ ಜೀತದ ಬಲೆಗೆ ಸಿಕ್ಕಿಕೊಂಡವರು ಹೊರಬರಲು ಸಾಧ್ಯವೇ ಆಗುತ್ತಿರಲಿಲ್ಲ.

ಈ ಲೇಖನ ಓದಿದ್ದೀರಾ?: ಎನ್ ಸಂಧ್ಯಾರಾಣಿ ಅವರ 'ಇವ ಲೆಬನಾನಿನವ' ಪುಸ್ತಕದ ಆಯ್ದ ಭಾಗ

ದಲಿತರಿಗೆ ಅಲ್ಪ ಸ್ವಲ್ಪ ಜಮೀನಿದ್ದರೂ ಕೂಡ, ಅದು ಇಡೀ ವರ್ಷದ ಬದುಕಿಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕೂಲಿ ಮಾಡಬೇಕಿತ್ತು. ಅಥವಾ ಮನೆಯ ಯಾವುದಾದರೂ ಒಬ್ಬ ವ್ಯಕ್ತಿ ಜೀತಕ್ಕಿರಬೇಕಿತ್ತು. ಇನ್ನು ಕೆಲವರು ಸಾಹುಕಾರರ ಜಮೀನನ್ನು ಗೇಣಿಗೆ ಪಡೆದುಕೊಂಡು, ಗೇಣಿ ಮಾಡಿ ಬದುಕುತ್ತಿದ್ದರು. ಹಾಗೆ ನೋಡಿದ್ರೆ, ನಮ್ಮ ತಂದೆಯವರು ಸ್ವಲ್ಪ ಸ್ಥಿತಿವಂತರಾಗೇ ಇದ್ದರು. ಸ್ವಲ್ಪ ಜಮೀನಿತ್ತು. ಜೊತೆಗೆ ತಾವು ಕೆಲಸ ಮಾಡುವ ಸಾಹುಕಾರರ ಜಮೀನನ್ನು ಗೇಣಿಗೆ ಪಡೆದು ಉಳುಮೆ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಬೇರೆಯವರಂತೆ ಜೀವನಪರ್ಯಂತ ಜೀತ ಮಾಡಿಯೇ ಬದುಕಬೇಕು ಅಂತಿರಲಿಲ್ಲ. ಆದರೂ, ಕೆಸವೊಳಲು ಗ್ರಾಮದಲ್ಲಿ ಕೃಷ್ಣೇಗೌಡ್ರು ಎಂಬುವರ ಜಮೀನಿನಲ್ಲಿ ಇವರು ಕೂಲಿ ಮಾಡುತ್ತಿದ್ದರು.

ಹೀಗಿದ್ದಾಗ, ನಮ್ಮ ತಂದೆಗೆ ನನ್ನ ದೊಡ್ಡಕ್ಕ ಮತ್ತು ಎರಡನೇ ಅಕ್ಕ ಹುಟ್ಟಿದರು. ಮೂರನೆಯವನು ಅಣ್ಣ. ಅವನು ಹುಟ್ಟಿದ ವೇಳೆಗೆ ಸಂಸಾರ ಸ್ವಲ್ಪ ಹೊರೆಯಾಯಿತು. ಇಷ್ಟು ಹೊತ್ತಿಗಾಗಲೇ ಎಲ್ಲ ಕೂಲಿ ಮಾಡುವವರಲ್ಲಿ ಸ್ವಲ್ಪ ತಿಳಿವಳಿಕೆ ಬಂದಿತ್ತು. ಎಲ್ಲಿ ಹೆಚ್ಚು ಕೂಲಿ ಕೊಡುತ್ತಾರೊ ಅಲ್ಲಿಗೆ ಹೋಗಬೇಕು ಎಂಬ ಭಾವನೆ ಬೆಳೆದಿತ್ತು. ಒಬ್ಬರ ಬಳಿಯೇ ಕೂಲಿ ಮಾಡುವುದರಿಂದ ಜೀವನ ನಿಂತ ನೀರಾಗುತ್ತದೆ ಎಂಬ ಭಾವನೆ ಬೆಳೆದಿತ್ತು. ಆಗ ಕಾಫೀ ಎಸ್ಟೇಟ್‍ಗಳಲ್ಲಿ ಹೆಚ್ಚಿನ ಕೂಲಿ ಸಿಗುತ್ತಿತ್ತು. ಇವರಿದ್ದ ಹಳ್ಳಿಯಲ್ಲಿ ದಿನಕ್ಕೆ ಎಂಟಾಣೆ- ಒಂದು ರೂಪಾಯಿ ಕೂಲಿ ಇದ್ದರೆ, ಕಾಫೀ ತೋಟದಲ್ಲಿ ದಿನಕ್ಕೆ ಒಂದೂವರೆಯಿಂದ ಎರಡು ರೂಪಾಯಿ ಕೂಲಿ ಸಿಗುತ್ತಿತ್ತು. ಹಾಗಾಗಿ ನಮ್ಮ ತಂದೆಯ ವಯಸ್ಸಿನ ಸಮಾನ ಮನಸ್ಕರು, ಈ ಊರನ್ನು ಬಿಟ್ಟು ಹೋಗಬೇಕು ಎಂದು ಒಂದು ಪ್ಲಾನ್ ಮಾಡಿದರು. ಎಲ್ಲಿಗೆ ಹೋದರೆ ಚೆನ್ನಾಗಿ ಕೂಲಿ ಸಿಗುತ್ತೋ ಎಂದು ಅವರೆಲ್ಲ ಸೇರಿ ಮಾತಾಡಿಕೊಂಡು ಕೆಸವೊಳಲು ಬಿಟ್ಟು ಬೇರೆಕಡೆ ಹೋಗುವುದಕ್ಕೆ ಒಂದು ಪ್ಲಾನ್ ಮಾಡಿದರು. ಅವಾಗ ಬ್ರಿಟಿಷರ ಆಡಳಿತ ವ್ಯವಸ್ಥೆ ಇತ್ತು. ಚಿಕ್ಕಮಗಳೂರಲ್ಲಿ ಆಗ ಬ್ರಿಟಿಷರ ತೋಟಗಳೇ ಜಾಸ್ತಿ ಇದ್ದವು. ಉದಾಹರಣೆಗೆ ಮೂಡಿಗೆರೆಯಲ್ಲಿದ್ದ ಕಣಜೂರು ಎಸ್ಟೇಟ್, ಅಚ್ಚರಡಿ ಎಸ್ಟೇಟ್. ಹಾಗೇ ಇನ್ನೂ ಎಷ್ಟೋ ಎಸ್ಟೇಟುಗಳಿದ್ದವು. ಅದರಲ್ಲಿ ಬ್ರಿಟಿಷರಿಗೆ ಸೇರಿದ ಅಚ್ಚರಡಿ ಎಸ್ಟೇಟು ಎಂಬುದು ಮೂಡಿಗೆರೆ ಮತ್ತು ಸಕಲೇಶಪುರದ ಮಧ್ಯಭಾಗದಲ್ಲಿ ಇದೆ. ಹಾನಬಾಳು ಹೋಬಳಿಯ ವ್ಯಾಪ್ತಿಯಲ್ಲಿ ಹುರಡಿ ಅಂತ ಒಂದು ಗ್ರಾಮವಿದೆ. ಅದರ ವ್ಯಾಪ್ತಿಯಲ್ಲಿ ಬರುವ ಅಚ್ಚರಡಿ ಎಸ್ಟೇಟ್‍ಗೆ ನಮ್ಮ ತಂದೆ ಮತ್ತು ಇನ್ನೂ ನಾಲ್ಕಾರು ಜನರು ಹೋಗಲು ಪ್ಲಾನ್ ಮಾಡಿದರು.

ಇವರೆಲ್ಲ ಹೀಗೆ ಒಂದು ಟೀಮ್ ಮಾಡಿ ಮಾತಾಡಿಕೊಂಡು, ‘ಇಲ್ಲಿದ್ರೆ ನಮಗೆ ಸಂಬಳನೂ ಜಾಸ್ತಿ ಕೊಡಲ್ಲ, ಸಾಲಗಳು ತೀರಲ್ಲ. ನಾವೆಲ್ಲ ಊರು ಬಿಟ್ಟು ಓಡಿಹೋಗೋಣ’ ಅಂತ ನಿರ್ಧಾರ ಮಾಡಿದರಂತೆ. ನಮ್ಮ ಕುಟುಂಬ ಹಾಗೂ ನಮ್ಮಗಳ ಜೊತೆಗೆ ಇನ್ನೂ ಐದಾರು ಕುಟುಂಬಗಳು ರಾತ್ರೋರಾತ್ರಿ ನಡ್ಕೊಂಡು ಕೆಸವೊಳಲು ಬಿಟ್ಟು ಅಚ್ಚರಡಿ ಎಸ್ಟೇಟ್‍ಗೆ ಹೋಗಿ ಸೇರಿಕೊಂಡರು. ಹಗಲು ಹೊತ್ತಿನಲ್ಲಿ ಹೋಗುವಂತಿರಲಿಲ್ಲ. ಹೀಗೆ ಒಂದು ಒಕ್ಕಲಿನಿಂದ ಇನ್ನೊಂದು ಒಕ್ಕಲಿಗೆ ಓಡಿಹೋಗುವಾಗ ಸಿಕ್ಕಾಕಿಕೊಂಡ್ರೆ ಹಿಡಿದು ಕಟ್ಟಿಹಾಕಿ ಹೊಡೆಯುತ್ತಿದ್ದರು. ಅಷ್ಟು ಕ್ರೂರ ಪದ್ಧತಿ. ಅದಕ್ಕಾಗಿ ಎಲ್ಲ ಕುಟುಂಬಗಳು ರಾತ್ರೋರಾತ್ರಿ ಓಡಿಹೋಗಿ ಹೊಸ ಎಸ್ಟೇಟು ಸೇರಿಕೊಳ್ಳುತ್ತಿದ್ದರು. ಹೀಗೆ ನಮ್ಮ ಕುಟುಂಬವು ಕೆಸವೊಳಲು ಗ್ರಾಮ ತೊರೆದು, ಅಚ್ಚರಡಿ ಎಸ್ಟೇಟ್ ಸೇರಿಕೊಂಡಿತು. ಅಲ್ಲಿ ಮತ್ತೆ ಹೊಸದಾಗಿ ಜೀವನ ಪ್ರಾರಂಭವಾಯಿತು.

ಈ ಲೇಖನ ಓದಿದ್ದೀರಾ?: ಹರುಕಿ ಮುರಕಮಿಯ 'ಕಿನೊ ಮತ್ತು ಇತರ ಕತೆಗಳು' ಪುಸ್ತಕದ ಆಯ್ದ ಭಾಗ

ಅಚ್ಚರಡಿ ಎಸ್ಟೇಟ್‍ಗೆ ನಮ್ಮ ಕುಟುಂಬವು ಬಂದು ಸೇರಿಕೊಂಡ ಒಂದು ವರ್ಷಕ್ಕೊ, ಎರಡು ವರ್ಷಕ್ಕೊ ನಾನು ಹುಟ್ಟಿದೆ. ನನಗೆ ಯಾವಾಗ ಜನ್ಮಕೊಟ್ಟರು ಎಂಬುದಕ್ಕೆ ಸರಿಯಾದ ದಾಖಲೆಗಳಿಲ್ಲ. ನಮ್ಮ ತಂದೆ-ತಾಯಿ ನನ್ನ ಹುಟ್ಟಿದ ದಿನಾಂಕವನ್ನು ಬರೆದಿಟ್ಟಿಲ್ಲ. ಯಾಕೆಂದರೆ ಅವರು ಅನಕ್ಷರಸ್ತರಾಗಿದ್ದರು. ಅವರಿಗೆ ತಾರೀಖು ಬರೆದಿಡಬೇಕು ಎಂಬ ತಿಳಿವಳಿಕೆ ಇರಲಿಲ್ಲ. ಹೀಗಾಗಿ ನನಗೆ ನನ್ನ ಜನ್ಮ ದಿನಾಂಕವೇ ಗೊತ್ತಿಲ್ಲ. ಆದರೆ ನಾನು ಹುಟ್ಟಿದ್ದು ಶನಿವಾರ ಅಂತ ಮಾತ್ರ ನನ್ನ ತಾಯಿ ನೆನಪು ಇಟ್ಟುಕೊಂಡಿದ್ದರು. ಅದು ಮಾತ್ರ ನನಗೆ ಗೊತ್ತು. ಸ್ಕೂಲಿನಲ್ಲಿ ಮೇಷ್ಟ್ರು ಯಾವ ದಿನಾಂಕವನ್ನು ಬರೆದಿಟ್ಟರೋ ಅದೇ ನನ್ನ ಹುಟ್ಟಿದ ದಿನಾಂಕವಾಯಿತು. ಅವರು ನಿಖರವಾಗಿ ಹೇಗೆ ಬರೆಯುವುದಕ್ಕೆ ಸಾಧ್ಯ? ಯಾವುದೋ ಒಂದು ಅಂದಾಜು ದಿನಾಂಕವನ್ನು ಬರೆದಿರುತ್ತಾರೆ. ಅಥವಾ ತಾವು ಗಣತಿ ಮಾಡಲು ಬಂದ ದಿನಾಂಕವನ್ನೇ ಐದಾರು ವರ್ಷ ಹಿಂದಿನ ದಿನವನ್ನಾಗಿ ಹಾಕಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿರುತ್ತಾರೆ. ಹೀಗಾಗಿ ನನಗೆ ನಮ್ಮ ಶಾಲೆಯ ಮೇಷ್ಟ್ರು ಬರೆದ ದಿನಾಂಕವೇ ನನ್ನ ಹುಟ್ಟಿದ ದಿನಾಂಕವಾಗಿದೆ.

ನಮ್ಮ ಕುಟುಂಬ ಹೊಸದಾಗಿ ಶಿಫ್ಟಾಗಿದ್ದುದು ಒಬ್ಬ ಬ್ರಿಟಿಷ್ ಪ್ರಜೆಯ ಎಸ್ಟೇಟ್‍ಗೆ. ಆ ಎಸ್ಟೇಟ್‍ನ ಮಾಲೀಕ ಸ್ವಾತಂತ್ರ್ಯ ಬಂದ ಮೇಲೆ ವಾಪಸ್ ಇಂಗ್ಲೆಂಡ್‍ಗೆ ಹೋದರಂತೆ. ಆದರೆ, ಅವರ ಮಗಳು ಮಾತ್ರ ತಕ್ಷಣ ದೇಶ ಬಿಟ್ಟು ಹೋಗಲಿಲ್ಲ. ಆಕೆಯೇ ಆ ಎಸ್ಟೇಟನ್ನು ನೋಡಿಕೊಳ್ಳುತ್ತಿದ್ದರು. ಆಕೆಗೆ ಮದುವೆ ಆಗಿರಲಿಲ್ಲ. ಆ ಲೇಡಿಯ ಹೇಸರೇನು ಅಂತ ನಂಗೆ ಗೊತ್ತಿಲ್ಲ. ಎಲ್ಲಾರೂ ಆಕೆಯನ್ನು “ಮಿಸಿಯಮ್ಮ- ಮಿಸಿಯಮ್ಮ” ಅಂತ ಕರೆಯುತ್ತಿದ್ದರು. ಇಂಗ್ಲೀಷ್‍ನ ‘ಮಿಸ್’ ಎಂಬೋ ಪದ ಗೊತ್ತಿಲ್ಲದ ಕಾರಣ, ಎಲ್ಲರೂ ಆಕೆಯನ್ನು ‘ಮಿಸಿಯಮ್ಮ’ ಅಂತಲೇ ಕರೆಯುತ್ತಿದ್ದರು. ಕೆಲವರು ಆಕೆಯನ್ನು ‘ಬಂಗ್ಲೆ ಮಿಸಿಯಮ್ಮ’ ಅಂತಲೂ ಕರೆಯುತ್ತಿದ್ದರು. ಅವರ ತಂದೆ ಹೆಸರು ಮಿಡಲ್‍ಟನ್ ಅಂತ. ನಾನು ಈ ಮಿಡಲ್‍ಟನ್ ಅವರ ಅಚ್ಚರಡಿಯ ಕಾಫೀ ಎಸ್ಟೇಟ್‍ನಲ್ಲಿ ಹುಟ್ಟಿದ್ದು.

ಆ ಮಿಸಿಯಮ್ಮ ಬಡವರ ಬಗ್ಗೆ ಬಹಳ ಕನಿಕರ ಇಟ್ಟುಕೊಂಡಿದ್ದರು. ಅವರಿಗೆ ಸಾಮಾಜಿಕ ಕಳಕಳಿಯಿತ್ತು. ತಮ್ಮ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಒಳ್ಳೆಯ ಸಂಬಳ ಕೊಡುತ್ತಿದ್ದರು. ಒಳ್ಳೆಯ ವಾಸದ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಹೀಗಿದ್ದ ಮನೆಗಳ ಓಣಿಯನ್ನು ‘ಕೂಲಿ ಲೈನ್’ ಎಂದು ಕರೆಯುತ್ತಿದ್ದರು. ಆ ದಿನಗಳಲ್ಲಿ ಕಾಫೀ ಎಸ್ಟೇಟ್‍ಗಳಲ್ಲಿ ಲೇಬರ್ ಕ್ವಾಟರ್ಸ್ ಇದ್ದದ್ದು ಬಹಳ ಕಡಿಮೆ. ನಾವಿದ್ದ ಎಸ್ಟೇಟ್‍ನ ಪ್ರತಿಯೊಂದು ಕ್ವಾಟರ್ಸ್‍ನಲ್ಲಿ ಎರಡು ರೂಮ್‍ಗಳಿದ್ದವು. ಪ್ರತಿ ವಾರಕ್ಕೊಂದು ಸಾರಿ ಆಕೆ ಲೇಬರ್ ಕ್ವಾಟರ್ಸ್‍ಗಳಿಗೆ ಭೇಟಿ ನೀಡುತ್ತಿದ್ದರು. ಕೆಲಸಗಾರರ ಮಕ್ಕಳು-ಮರಿಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ‘ಮಕ್ಕಳ ಆರೋಗ್ಯ ಚೆನ್ನಾಗಿದೆಯಾ?’ ಅಂತೆಲ್ಲ ಕೇಳುತ್ತಿದ್ದರು. ಕೆಲಸಕ್ಕೆ ಹೋಗುವ ಬಸುರಿ ಹೆಂಗಸು, ಬಾಣಂತಿಯರ ಬಗ್ಗೆ ಬಹಳ ಕಾಳಜಿ ಮಾಡುತ್ತಿದ್ದರು. ಅವರಿಗೆಲ್ಲ ವಿಶ್ರಾಂತಿ ಕೊಡುತ್ತಿದ್ದರಂತೆ. ಹೆರಿಗೆಯಾದ ಮೇಲೆ ಬಾಣಂತಿಗೆ ಒಂದು ತಿಂಗಳಷ್ಟೇ ರಜೆ. ಮಗು ಒಂದು ತಿಂಗಳು ಆಗ್ತಲೇ ಬಾಣಂತಿಯರೂ ಕೂಡ ಕೂಲಿಗೆ ಹೋಗುತ್ತಿದ್ದರು. ಹೊಟ್ಟೆ ಪಾಡಲ್ವಾ? ತಿಂಗಳ ಕೂಸು ಇದ್ದರೂ ಕೆಲಸಕ್ಕೆ ಹೋಗಬೇಕಾಗಿತ್ತು. ಮಿಸಿಯಮ್ಮ ತಿಂಗಳ ಕೂಸಿಗೆ ಎದೆಹಾಲು ಕೊಡಲು ದಿನದಲ್ಲಿ 3 ಸಲ ಬಿಡುವು ಕೊಡುತ್ತಿದ್ದರು. ಮೂರು ತಿಂಗಳ ಕೂಸಿದ್ದರೆ ಎದೆಹಾಲು ಕೊಡಲು ಎರಡು ಸಲ ಬಿಡುವು ಕೊಡುತ್ತಿದ್ದರಂತೆ. ನನ್ನ ತಾಯಿ ನನ್ನನ್ನು ಇಂಥ ಒಂದು ಎಸ್ಟೇಟ್‍ನಲ್ಲಿ ಹೆತ್ತರು. ನಮ್ಮ ತಾಯಿಯೂ ಸಹ ಇದೇ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದರು.

ಈ ಲೇಖನ ಓದಿದ್ದೀರಾ?: 'ಸಂಸತ್ತಿನಲ್ಲಿ ಬಾಬು ಜಗಜೀವನ್ ರಾಮ್ ಭಾಷಣಗಳು' ಕೃತಿಯ ಆಯ್ದ ಭಾಗ

ನಮ್ಮ ತಂದೆಗೆ ನಮ್ಮ ಅಣ್ಣ ಒಬ್ಬನೇ ಮಗ ಅನ್ನೋ ಕಾರಣಕ್ಕೆ ಅವನ ಮೇಲೆ ತುಂಬಾ ಪ್ರೀತಿ. ನಾನು ಹುಟ್ಟೋಕ್ಕೂ ಮೊದಲು ನಮ್ಮಪ್ಪನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಆಮೇಲೆ ಮೂರನೆಯವನಾಗಿ ನನ್ನ ಅಣ್ಣ ಹುಟ್ಟಿದ. ಮತ್ತೆ ನಾಲ್ಕನೇ ಮಗುವಾಗಿ ನಾನು ಹುಟ್ಟಿದೆ. ನಾಲ್ಕನೆಯ ಮಗು ಹೆಣ್ಣು ಎಂಬುದನರಿತು ನಮ್ಮ ತಂದೆಗೆ ತುಂಬ ಬೇಸರ ಆಗಿತ್ತಂತೆ. ತಾನೂ ಒಬ್ಬನೇ ಗಂಡುಮಗ. ತನಗೂ ಒಬ್ಬನೇ ಗಂಡುಮಗ ಅಂತ ಬೇಸರ ಮಾಡಿಕೊಂಡಿದ್ದರಂತೆ. ನಾನು ಹುಟ್ಟುವ ಸಂದರ್ಭದಲ್ಲಿ ನಮ್ಮ ಅಣ್ಣನಿಗೆ ಹುಚ್ಚುನಾಯಿ ಕಡಿದಿತ್ತಂತೆ. ಆಗ ಅವನನ್ನು ಸಕಲೇಶಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಹುಚ್ಚುನಾಯಿ ಕಡಿತಕ್ಕೆ ಸಕಲೇಶಪುರದ ಆಸ್ಪತ್ರೆಯಲ್ಲಿ ಯಾರೋ ಚುಚ್ಚುಮದ್ದು ಕೊಡ್ತಾರೆ ಎಂಬ ವಿಚಾರ ತಿಳಿದು, ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಇಂಥ ಸಂದರ್ಭದಲ್ಲಿ ನಮ್ಮ ತಾಯಿಗೆ ಡೆಲಿವರಿ ಆಯಿತು. ಈ ಅಚ್ಚರಡಿ ಎಸ್ಟೇಟ್‍ಗೆ ನಮ್ಮ ಕುಟುಂಬದೊಂದಿಗೆ ಗುಳೇಬಂದಿದ್ದ ಒಬ್ಬರು ದಾರದಹಳ್ಳಿ ಬಾಸಯ್ಯ ಎನ್ನುವವರು, ನಾನು ಹುಟ್ಟಿದ ವಿಚಾರವನ್ನು ತಿಳಿಸಲು ಸಕಲೇಶಪುರಕ್ಕೆ ಅವಸರ ಅವಸರವಾಗಿ ಹೋದರು. ಸಕಲೇಶಪುರದಲ್ಲಿ ನಮ್ಮ ತಂದೇನ ಭೇಟಿಯಾಗಿ ನಾನು ಹುಟ್ಟಿಷ ವಿಷಯವನ್ನು ಅವರಿಗೆ ತಿಳಿಸಿ, ‘ನಿಮ್ಮ ಮನೆಯವರಿಗೆ ಹೆರಿಗೆಯಾಗಿದೆ’ ಎಂದು ಹೇಳಿದಾಗ, ‘ಹೌದಾ? ಏನ್ ಮಗು?’ ಅಂತ ಕೇಳಿದ್ರಂತೆ. ಬಾಸಯ್ಯ ‘ಹೆಣ್ಣು ಮಗು’ ಅಂದಾಗ; ‘ಅಯ್ಯೋ! ಯಾರಿಗ್ ಬೇಕು ಹೆಣ್ಣ್‍ಮಗು? ಯಾರಿಗಾದರೂ ಕೊಟ್‍ಬಿಡಕ್ಕೇಳು’ ಅಂದರಂತೆ. ಹುಚ್ಚುನಾಯಿ ಕಡಿತಕ್ಕೆ ನನ್ನ ಅಣ್ಣನಿಗೆ ಚುಚ್ಚುಮದ್ದು ಕೊಡಿಸಿಕೊಂಡು ಮನೆಗೆ ಬಂದ ಮೇಲೆ ಸಹ ನಮ್ಮ ತಾಯಿಯ ಬಳಿ ಹೋಗಿ ‘ಹೆಂಗಿದೆ ಮಗು?’ ಅಂತನೂ ಕೇಳಲಿಲ್ಲವಂತೆ. ನನ್ನ ಮುಖವನ್ನೂ ನೋಡಲಿಲ್ಲವಂತೆ ನಮ್ಮಪ್ಪ. ಹಾಗೆ ಹೆಣ್ಣುಮಗು ಅಂತ ತಾತ್ಸಾರ ಮಾಡಿದರಂತೆ. ಹೀಗೆ ತಂದೆಗೆ ಬೇಡದ ಹೆಣ್ಣುಮಗುವಾಗಿ ನಾನು ಈ ಭೂಮಿಗೆ ಬಂದೆ!

Image
Motamma Cover 2

ಆಗಿನ ಪದ್ದತಿ ಪ್ರಕಾರ ಯಾರದೇ ಮನೆಯಲ್ಲಿ ಹೆರಿಗೆಯಾದರೂ ಕೂಡ 12 ದಿನಗಳ ಕಾಲ ಸೂತಕ ಪಾಲಿಸುತ್ತಿದ್ದರಂತೆ. ಆ ಸೂತಕ ಕಳೆಯಲು 12ನೇ ದಿನದಂದು ಭಟ್ಟರ ಮನೆಗೆ ಹೋಗಿ ತೀರ್ಥ ತಂದು ಮನೆಯ ತುಂಬ ಸಿಂಪರಣೆ ಮಾಡುತ್ತಿದ್ದರು. ಹೀಗೆ ಮನೆಯ ಶುದ್ಧೀಕರಣವಾದ ನಂತರ ಹೊಸದಾಗಿ ಹುಟ್ಟಿದ ಮಗುವಿಗೆ ಏನು ಹೆಸರು ಇಡಬೇಕು ಎಂಬುದನ್ನು ಕೇಳಲು ಮತ್ತೆ ಭಟ್ಟರ ಮನೆಗೆ ಹೋಗುತ್ತಿದ್ದರು. ಆಗ ಆ ಭಟ್ಟರು ಪಂಚಾಂಗ ತೆಗೆದು, ಯಾವ ದಿನದಲ್ಲಿ ಮಗು ಹುಟ್ಟಿದೆ ಎಂಬುದನ್ನು ಒಂದು ಹಾಳೆಯಲ್ಲಿ ಬರೆದುಕೊಂಡು, ನಂತರ ‘ನಿನ್ನ ಮಗುವಿಗೆ ಇಂಥ ಹೆಸರಿಡು’ ಎಂದು ಹೇಳಿ ಕಳುಹಿಸುತ್ತಿದ್ದರು. ಇದು ಪ್ರತಿಯೊಬ್ಬ ತಂದೆಯಾದವರು ಕಡ್ಡಾಯವಾಗಿ ನೆರವೇರಿಸುತ್ತಿದ್ದ ಜವಾಬ್ದಾರಿಯಾಗಿತ್ತು. ಆದರೆ, ನಾನು ಬೇಡದ ಮಗುವಾದ ಕಾರಣ, ನಮ್ಮಪ್ಪ ಭಟ್ಟರ ಮನೆಗೆ ಹೆಸರೇನಿಡಬೇಕು ಎಂದು ಕೇಳಲು ಹೋಗಲೆ ಇಲ್ವಂತೆ. ನನಗೆ ಹೆಸರಿಡುವುದೂ ಅವರಿಗೆ ಬೇಕಾಗಿರಲಿಲ್ಲ. ಆಮೇಲೊಂದು ದಿನ ನನ್ನ ಅಕ್ಕ ಭಟ್ಟರ ಮನೆಗೆ ಹೋಗಿ ಯಾರೊ ಒಬ್ಬರು ಭಟ್ಟರಿಗೆ, ‘ನನಗೆ ತಂಗಿ ಹುಟ್ಟವ್ಳೆ. ಅವ್ಳಿಗೇನು ಹೆಸ್ರಿಡಬೇಕಂತ ಹೇಳಿ’ ಅಂತ ಕೇಳಿದಳಂತೆ. ಅವರು ಏನೋ ಒಂದು ಹೆಸರು ಹೇಳಿದರು. ಆದರೆ, ಮನೆಗೆ ಬರೋವಷ್ಟರಲ್ಲಿ ಏನು ಹೆಸರು ಹೇಳಿದರೂಂತ ಆಕೆಗೆ ಮರೆತು ಹೋಗಿತ್ತು. ಅವಳು ಎಷ್ಟು ನೆನಪಿಸಿಕೊಳ್ಳಲು ಪ್ರಯತ್ನಿಸಿದರೂ ನೆನಪಾಗಿಲ್ಲ. ಹೀಗಾಗಿ ನನಗೆ ನಾಮಕರಣ ಮಾಡುವ ಗೊಡವೆಗೇ ಹೋಗಲಿಲ್ಲ. ಆದ್ದರಿಂದ ನನಗೆ ಅಧಿಕೃತವಾಗಿ ನಾಮಕರಣವೇ ಆಗಲಿಲ್ಲ.

ನಾನು ಮೂರು ತಿಂಗಳಿಗೆ ಸಾಕಷ್ಟು ದಷ್ಟಪುಷ್ಟ ಇದ್ದೆನಂತೆ. ಹೀಗೆ ಮೂರು ತಿಂಗಳ ಮಗು ಇರಬೇಕಾದರೆ ಒಂದು ದುರ್ಘಟನೆ ನಡೆಯಿತಂತೆ. ನಮ್ಮ ಜಿಲ್ಲೆಯು ಮಲೆನಾಡಾದ ಕಾರಣ ಜೂನ್- ಜುಲೈ ತಿಂಗಳಿನಲ್ಲಿ ಮಳೆಗಾಲ ಬಲೇ ಜೋರು. ಆ ಕಾಲದಲ್ಲಿ ಹಲಸಿನ ಹಣ್ಣುಗಳು ತುಂಬಾ ಜಾಸ್ತಿ. ಬಡವರೆಲ್ಲ ಹಲಸಿನ ಹಣ್ಣನ್ನು ಗುಡ್ಡೆ ಹಾಕಿಕೊಂಡು ತಿನ್ನುತ್ತಿದ್ದರು. ಅದರ ಜೊತೆಗೆ ಹಲಸಿನ ಹಣ್ಣಿನಿಂದ ಥರಾವರಿ ತಿಂಡಿ ತಿನಿಸುಗಳನ್ನು ಮಾಡುತ್ತಿದ್ದರು. ಹಲಸಿನ ಕಡಬು, ಹಲಸಿನ ದೋಸೆ, ಸಂಡಿಗೆ ಮಾಡುತ್ತಿದ್ದರು. ಅದರ ಬೀಜ ತೆಗೆದಿಟ್ಟು ಅದಕ್ಕೆಲ್ಲ ಮಣ್ಣು ಸವರಿ ಒಣಗಿಸಿಟ್ಟು ಅದನ್ನ ದೀಪಾವಳಿ ಟೈಮಲ್ಲಿ ಹುರಿದು ತಿನ್ನುತ್ತಿದ್ದರು. ಕಿತ್ತು ತಿನ್ನುವಂಥ ಬಡತನ. ಅದನ್ನು ನೀಗುವುದಕ್ಕೆ ಬಡವರು ಹಲಸಿನ ಹಣ್ಣಿನ ಮೊರೆ ಹೋಗುತ್ತಿದ್ದರು. ಆವಾಗ ಈ ಮಕ್ಕಳು ದೊಡ್ಡವರಿಗೆ ಗೊತ್ತಿಲ್ಲದ ಹಾಗೆ ಹಲಸಿನ ಬೀಜಗಳನ್ನು ಒಲೆಗೆ ಹಾಕುತ್ತಿದ್ದರು. ಒಲೆಯ ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜಗಳು “ಪಡ್ಡ್-ಪಡ್ಡ್” ಅಂತ ಸಿಡಿಯುತ್ತವೆ. ಸಿಡಿದುಹೋಗಿ ಎಲ್ಲಿಯೋ ದೂರಕ್ಕೆ ಬೀಳುತ್ತವೆ. ಹೀಗೆ ಸಿಡಿದುಹೋಗಿ ಬಿದ್ದುದನ್ನು ಮಕ್ಕಳು ಹುಡುಕಿಕೊಂಡು ತಿನ್ನುತ್ತಿದ್ದರು. ನಾನು ಹುಟ್ಟಿದಾಗ ನಮ್ಮಣ್ಣ ಮೂರುವರೆ/ನಾಲ್ಕು ವರ್ಷದ ಮಗು. ನನ್ನ ಎರಡನೇ ಅಕ್ಕನಿಗೆ ಐದು/ಆರು ವರ್ಷ. ಎಳೆ ಮಗುನ ಎತ್ತಿಕೊಳ್ಳಲು ಅವಳಿಗೆ ಆಕೆಗೆ ಗೊತ್ತಿಲ್ಲ. ನಮ್ಮ ಕಡೆ ತೊಟ್ಟಿಲು ಇರುತ್ತಿರಲಿಲ್ಲ. ಅದಕ್ಕೆ ಹಸುಗೂಸನ್ನು ಒಂದು ಹೆಡಿಗೆಯೊಳಗೆ ಹಾಕೋರು. ಹೆಡಿಗೆ ಅಂದ್ರೆ ದೊಡ್ಡ ಕುಕ್ಕೆ. ಅದರ ಅಡಿಗೆ ಸ್ವಲ್ಪ ಹುಲ್ಲು ಹಾಕಿ ಅದರ ಮೇಲೊಂದು ಕಂಬಳಿ ಹಾಸಿ, ಕಂಬಳಿಯ ಮೇಲೆ ಮತ್ತೊಂದು ಬಟ್ಟೆ ಹಾಕಿ, ನಂತರ ಅದರ ಮೇಲೆ ಹಸುಗೂಸನ್ನು ಮಲಗಿಸುತ್ತಿದ್ದರು. ಬೆಚ್ಚಗೆ ಇರಲಿ ಅಂತ. ಇಂಥ ಹೆಡಿಗೆಯಲ್ಲಿ ಕೂಸನ್ನು ಮಲಗಿಸಿ, ಅದಕ್ಕೆ ಚಳಿ ಆಗದೇ ಇರಲಿ ಅಂತ ಒಲೆಗೆ ಹತ್ತಿರದಲ್ಲಿ ಇಟ್ಟಿರುತ್ತಿದ್ದರು. ಮಳೆಗಾಲದ ಮಳೆ ಬೇರೆ ತುಂಬ ಶೀತದ ಮಳೆ. ನಮ್ಮ ಕಡೆ ‘ಹುಡ್ರು’ ಮಳೆ ಅಂತಾರೆ. ಅದಕ್ಕೋಸ್ಕರ ಯಾವಾಗಲೂ ಒಲೆಯಲ್ಲಿ ಬೆಂಕಿ ಹಾಕಿರುತ್ತಾರೆ.

ಹೀಗಿರಬೇಕಾದ್ರೆ, ಅಂದು ಏನಾಯಿತು ಅಂದರೆ, ನಮ್ಮ ಅಣ್ಣ ಮತ್ತು ಒಂದಷ್ಟು ಹುಡುಗರು ಸೇರಿಕೊಂಡು ಹಲಸಿನ ಬೀಜಗಳನ್ನು ಒಲೆಯಲ್ಲಿ ಹಾಕಿದರು. ಕೆಂಡದ ಒಲೆಯಲ್ಲಿ ಬಿದ್ದ ಹಲಸಿನ ಬೀಜಗಳು ಸ್ವಲ್ಪ ಸಮಯದ ನಂತರ ‘ಪಡ್ಡ್-ಪಡ್ಡ್’ ಅಂತ ಎಲ್ಲೆಲ್ಲೊ ಸಿಡದುಬಿದ್ದವು. ಹೀಗೆ ಸಿಡಿಯುವಾಗ ಒಂದು ಬೆಂಕಿ ಕೆಂಡ ಸಿಡಿದು ಹೆಡಿಗೆಯಲ್ಲಿದ್ದ ನನ್ನ ಮೇಲೆ ಬಂದು ಬಿತ್ತು. ಮೈಮೇಲೆ ಬಟ್ಟೆಯನ್ನೂ ಹಾಕಿಲ್ಲ. ಸುಮ್ಮನೆ ಒಂದು ಸಣ್ಣ ಬಟ್ಟೇನ ಎದೆ ಮೇಲೆ ಹೊದಿಸಿದ್ದರು. ದೇವರ ಅನುಗ್ರಹ ಇತ್ತಂತ ಕಾಣಿಸುತ್ತದೆ. ನಾನು ಬದುಕುಳಿದೆ. ಯಾಕೆಂದರೆ, ಪಡ್ಡ್ ಅಂತ ಸಿಡಿದ ಹಲಸಿನ ಬೀಜದ ಜೊತೆಗೆ ನನ್ನ ಮೈಮೇಲೆ ಬಿದ್ದ ಬೆಂಕಿ ಕೆಂಡ ಅಲ್ಲೇ ಮೈಯಲ್ಲಿ ಅಂಟಿಕೊಂಡುಬಿಟ್ಟಿದೆ. ಅದು ಪುಣ್ಯಕ್ಕೆ ಪಕ್ಕಕ್ಕೆ ಅಥವಾ ಕೆಳಗೆ ಕುಕ್ಕೆಯಲ್ಲಿ ಬಿದ್ದಿಲ್ಲ. ಒಂದುವೇಳೆ ಅದೇನಾದರೂ ನನ್ನ ಮೈಮೇಲೆ ಬೀಳದೇ ಕುಕ್ಕೆಯಲ್ಲೇನಾದರೂ ಬಿದ್ದು ಬಿಟ್ಟಿದ್ದರೆ ಬಟ್ಟೆ ಕಂಬಳಿ ಮತ್ತು ಅದರ ಕೆಳಗಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಇಡೀ ಕುಕ್ಕೇನೇ ಉರಿದು ಭಸ್ಮವಾಗಿ ಹೋಗೋ ಸಾಧ್ಯತೆ ಇತ್ತು. ಅದರ ಜೊತೆ ನಾನೂ.....! ಆದರೆ, ದೇವರು ದೊಡ್ಡವನು. ನಾನು ಹೀಗೆಲ್ಲ ರಾಜಕೀಯದಲ್ಲಿ ಬೆಳೆದು ಇಷ್ಟರ ಮಟ್ಟಿಗೆ ಸಮಾಜದಲ್ಲಿ ಮೇಲೆ ಬರಬೇಕು ಅಂತ ದೇವರ ಅನುಗ್ರಹ ಇತ್ತೂಂತ ಕಾಣಿಸುತ್ತದೆ. ಅದಕ್ಕೆ ಆ ದಿನ ನಾನು ಮಲಗಿದ್ದ ಕುಕ್ಕೆಗೆ ಬೆಂಕಿ ಹೊತ್ತಿಕೊಂಡಿಲ್ಲ. ಬದಲಾಗಿ ಆ ಕೆಂಡದುಂಡೆಯು ನನ್ನ ಅಂಟಿಕೊಂಡು ಅಲ್ಲಿಯೇ ಗಾಯ ಮಾಡಿದೆ. ಆದರೆ, ಬುಟ್ಟಿಗೆ ಬಿದ್ದಿಲ್ಲ. ಸಿಡಿದುಬಿದ್ದ ಆ ಕೆಂಡದುಂಡೆ ನನ್ನ ಮೈಯಲ್ಲಿ ಸಿಕ್ಕಿಕೊಂಡು ಮೈಯ ಅಷ್ಟೂ ಭಾಗವನ್ನು ಸುಟ್ಟುಬಿಟ್ಟಿತು. ಆ ಸುಟ್ಟ ಗುರುತು ಈಗಲೂ ಇದೆ. ಬೆಂಕಿ ಉಂಟೆ ಮೈಗೆ ತಾಕಿದ ತಕ್ಷಣ ನಾನು ವಿಪರೀತ ಅಳೋಕೆ ಶುರು ಮಾಡಿದೆನಂತೆ. ಅಕ್ಕನಿಗೆ ಎತ್ತಿಕೊಳ್ಳಲಾಗಿಲ್ಲ. ನನ್ನನ್ನು ಹಾಗೆ ಹೀಗೆ ತೂಗಿಸಿದ್ದಾಳೆ. ನಮ್ಮ ತಾಯಿ ಎಂಟು ಎಂಟುವರೆಗೆ ಕೆಲಸಕ್ಕೆ ಹೋಗಿ, ಹತ್ತು ಗಂಟೆಗೆ ಹಾಲು ಕುಡಿಸಲಿಕ್ಕೆ ಮನೆಗೆ ಬರುತ್ತಿದ್ದರು. ಹೀಗೆ ಬರುವ ಹೊತ್ತಿಗೆಲ್ಲ ನನಗೆ ಪ್ರಜ್ಞೆ ತಪ್ಪಿಹೋಗಿತ್ತು. ಆಕೆ ಗಾಬರಿಯಾಗಿಬಿಟ್ಟರು. ಮಗು ಏಳುತ್ತಿಲ್ಲ. ಕೈಕಾಲು ಆಡಿಸುತ್ತಿಲ್ಲ. ಮೈ ಹಿಡಿದು ನೋಡಿದ್ರೆ; ಹೆಚ್ಚು ಕಡಿಮೆ ಡೆಡ್ ಬಾಡಿ ಥರಾ ಕಾಲು ಕೈ ಎಲ್ಲ ತಣ್ಣಗಾಗಿ ಬಿಟ್ಟಿದ್ದುವಂತೆ. ಇದನ್ನು ಕಂಡ ನಮ್ಮವ್ವ ಜೋರಾಗಿ ಅಳಕ್ಕೆ ಕೂಗಾಡಕ್ಕೆ ಶುರು ಮಾಡಿದರಂತೆ. ಅವ್ವನ ಕೂಗಾಟ ಅಳಾಟನೆಲ್ಲ ಕೇಳಿಸಿಕೊಂಡ ಲೇಬರ್ ಕ್ವಾಟರ್ಸ್‍ನಲ್ಲಿದ್ದವರೆಲ್ಲ ಓಡೋಡಿ ಬಂದು ‘ಏನಾಗಿದೆ, ಏನಾಗಿದೆ; ಮಗುಗೆ ಏನಾಗಿದೆ?’ ಅಂತ ಗಾಬರಿ ಬಿದ್ದರು. ಅವರಲ್ಲೊಬ್ರು ನನ್ನನ್ನ ಎತ್ಕೊಂಡ್ರಂತೆ. ಹೀಗೆ ಎತ್ಕೊಂಡಾಗ ಮೈಗೆ ಅಂಟಿಕೊಂಡಿದ್ದ ಬೆಂಕಿಕೆಂಡ ಕೆಳಗೆ ಬಿತ್ತಂತೆ. ಕೆಳಗಡೆ ಬಿದ್ದಿದ್ದ ಕೆಂಡ ನೋಡಿದಾಗಲೇ ಅವರಿಗೆ ಏನಾಗಿದೆ ಎಂಬುದರ ಅಂದಾಜಾಗಿದ್ದು. ಅವರೆಲ್ಲ ನನ್ನನ್ನ ಪರಿಶೀಲಿಸಲಾಗಿ ಮೈಯಲ್ಲಿ ಗಾಯವಾಗಿ ಗುಳ್ಳೆಗಳಾಗಿತ್ತು. ರೆಟ್ಟೆ, ಕಿಬ್ಬೊಟ್ಟೆ- ಹೀಗೆ ಎಲ್ಲ ಕಡೆನೂ ನೋಡಿದ್ದಾರೆ. ‘ಇಲ್ಲೆಲ್ಲ ಗಾಯ ಆಗಿದೆ. ಮೈಗೆ ಕೆಂಡ ತಗುಲ್ಕೊಂಡದೆ. ಹುಲ್ಲಿಗೆ ಬಿದ್ದಿದ್ದರೆ ಏನು ಗತಿ?’ ಅಂತ ಮಾತಾಡಿಕೊಂಡರಂತೆ. ಮುಖಕ್ಕೆ ನೀರು ಹಾಕಿ, ಎಷ್ಟೋ ಹೊತ್ತು ಆದ ಮೇಲೆ ನಾನು ಸ್ವಲ್ಪ ಕೂಗಿದೆನಂತೆ. ನಂತರ ಅಳುವುದಕ್ಕೆ ಪ್ರಾರಂಭಿಸಿದೆನಂತೆ. ಆಗ ಎತ್ತಿಕೊಂಡು ಬಹಳ ಸುಧಾರಿಸಿದ್ದಾರೆ. ಎದೆ ಹಾಲು ಕೊಟ್ಟು ನಂತರ ಸಮಾಧಾನ ಮಾಡಿದರು. ನಂತರ ನಮ್ಮ ತಾಯಿ ವಾಪಸು ಕೆಲಸಕ್ಕೆ ಹೋಗಲೇ ಇಲ್ವಂತೆ. ಅಲ್ಲೆಲ್ಲ ಬರೀ ಅದೇ ಸುದ್ದಿ. ಈ ಥರಾ ಮಗೂನ ಮಲಗಿಸಿದ್ರು. ಮೈಗೆ ಬೆಂಕಿ ತಗಲಿತ್ತು, ಮಗು ಬದಕ್ಕಿದ್ದೇ ಹೆಚ್ಚು ಅಂತೆಲ್ಲ ಅವರು ಮಾತಾಡಿಕೊಂಡರಂತೆ.

ಈ ಲೇಖನ ಓದಿದ್ದೀರಾ?: ಏಣಗಿ ಬಾಳಪ್ಪ ಅವರ 'ಬಣ್ಣದ ಬದುಕಿನ ಚಿನ್ನದ ದಿನಗಳು' ಕೃತಿಯ ಆಯ್ದ ಭಾಗ

ನಮ್ಮ ತಂದೆಯ ಸ್ನೇಹಿತರಾದ ದಾರದಹಳ್ಳಿ ಬಾಸಯ್ಯ ಅನ್ನೋರು ಅಲ್ಲಿಗೆ ಬಂದರಂತೆ. ಅವರು ತಂಬಾ ಕೋಳಿ ಸಾಕುತ್ತಿದ್ದರು. ಅವರು ತಮ್ಮ ಮನೇಲಿದ್ದ ದೊಡ್ಡ ಕೋಳಿ ಹುಂಜನ್ನ ಕುಯ್ದು ಅದರ ಚರಬಿ ತಗೆದು, ಅದನ್ನು ಎಣ್ಣೆ ತರ ಕಾಯಿಸಿ, ಕೋಳಿಯ ಗರೀಗಳನ್ನು ಸುಟ್ಟು, ಅದರ ಬೂದಿಯನ್ನ ಮತ್ತು ಚರ್ಬಿಯಿಂದ ಬಂದ ಆ ಎಣ್ಣೆ- ಎರಡನ್ನೂ ಮಿಕ್ಸ್ ಮಾಡಿ, ನನ್ನ ಮೈಮೇಲಿನ ಸುಟ್ಟ ಗಾಯಕ್ಕೆ ಆಯಿಂಟ್‍ಮೆಂಟ್ ಥರಾ ಹಚ್ಚಿದರಂತೆ. ಇದರಿಂದ ಗಾಯವೇನೂ ಕಡಿಮೆಯಾಗಿಲ್ಲ. ಅದು ಇನ್ನಷ್ಟು ಭಯಂಕರ ಗಾಯವಾಗಿ, ಅದು ಮತ್ತಷ್ಟು ಅಗ್ರಿವೇಟಾಗಿ ಸೋರುವುದಕ್ಕೆ ಶುರುವಾಯ್ತಂತೆ.

ನಮ್ಮ ತಾಯಿಯ ಹೆಸರು ವಸಂತಿ ಅಂತ. ನನಗೆ ಸುಟ್ಟಗಾಯವಾಗಿದ್ದರಿಂದ ನಮ್ಮವ್ವ ಕೆಲವು ದಿನ ಕೆಲಸಕ್ಕೆ ಹೋಗಲಿಲ್ಲ. ಬಂಗ್ಲೆ ಮಿಸಿಯಮ್ಮ ‘ವಸಂತಿ ಯಾಕೆ ಕೆಲ್ಸಕ್ಕೆ ಬರ್ತಿಲ್ಲ?’ ಅಂತ ವಿಚಾರಿಸಿದರಂತೆ. ಹೀಗೀಗೆ ಮಗುಗೆ ಸುಟ್ಟಗಾಯವಾಗಿದೆ ಅಂತ ಕೇಳಿ ತಿಳಿದುಕೊಂಡ ಆಕೆ, ತಕ್ಷಣ ನಾವಿದ್ದ ಕೂಲಿ ಲೈನ್‍ಗೆ ಬಂದರಂತೆ. ನಂಗೆ ಗಾಯವಾಗಿ ಒಂದೆರಡು ದಿನಗಳ ನಂತರ ಬಂದಿರಬಹುದು ಅಂತ ಕಾಣತ್ತೆ. ಆಕೆ ಬಂದಿದ್ದು ನೋಡಿ ಕೂಲಿಲೈನ್‍ನಲ್ಲಿದ್ದ ಎಲ್ಲರೂ ‘ಮಿಸಿಯಮ್ಮ ಬಂದ್ರು, ಮಿಸಿಯಮ್ಮ ಬಂದ್ರು’ ಎಂದು ಓಡೋಡಿ ಬಂದು ನಮ್ಮವ್ವಂಗೆ ಸುದ್ದಿ ಮುಟ್ಟಿಸಿದರು. ಮಿಸಿಯಮ್ಮ ಸೀದಾ ನಮ್ಮ ತಾಯಿ ಹತ್ತಿರ ಬಂದು, ‘ವಸಂತಿ, ಮಗು ಎಲ್ಲಿ? ಮಗು ಎಲ್ಲಿ?’ ಅಂತ ಸ್ವಲ್ಪ ಇಂಗ್ಲಿಷ್ ಸ್ಟೈಲಿನಲ್ಲೇ ಕೇಳಿದ್ರಂತೆ. ಇಂಗ್ಲಿಷ್ ಶೈಲಿಯಲ್ಲಿಯೇ ಕನ್ನಡವನ್ನು ಮಾತನಾಡುತ್ತಿದ್ದರಾಕೆ. ಮಗೂನ ಕೈಯಲ್ಲಿ ಎತ್ತಿ ಹಿಡಿದುಕೊಂಡು, ನಂಗಾಗಿರೋ ಗಾಯನ ನೋಡಿ, ಗಾಬರಿಬಿದ್ದು ನಮ್ಮ ತಾಯಿಗೆ ಕೆನ್ನೆಗೆ ಒಂದೇಟು ಹೊಡೆದರಂತೆ. ‘ನಿನಗೆ ಈ ಮಗು ಬೇಡವಾ? ನಿನಗೆ ಮಗು ಬೇಡವಾ?’ ಅಂತ ಜೋರು ಮಾಡುತ್ತಲೇ ಹೊಡೆದರಂತೆ. ಆಕೆ ಹೊಡೆದದ್ದು ಎಡಗೈಯಿಂದ. ಆಕೆಯ ಎಡಗೈ ರಿಂಗು ನಮ್ಮ ತಾಯಿಯ ಕೆನ್ನಗೆ ಜೋರಾಗಿ ತಾಗಿದ್ದರಿಂದ ಅದರ ಗುರುತು ಕೆನ್ನೆ ಮೇಲೆ ಅಂಟಿಕೊಂಡಿತ್ತಂತೆ. ಅಂದರೆ ಅಷ್ಟು ಜೋರಾಗಿ ಆಕೆ ಹೊಡೆದಿದ್ದರು. ಆ ಹೊಡೆತದಿಂದ ನಮ್ಮ ತಾಯಿಗೆ ನಿಜವಾಗಲೂ ಒಂದು ಥರಾ ತಲೆ ದಿಮ್ಮ್ ಅಂತಂತೆ. ಈ ಕೂಡಲೇ ಹೋಗಿ ಡಾಕ್ಟರ್‍ಗೆ ತೋರಿಸ್ಬೇಕು, ಮೆಡಿಸಿನ್ಸ್ ತಗೋಬೇಕು ಅಂತ ಅಪ್ಪನಿಗೆ ಅವ್ವನಿಗೆ ಜೋರು ಮಾಡಿ ದುಡ್ಡು ಕೊಟ್ಟು, ಡಾಕ್ಟರ್ ಹತ್ತಿರ ಹೋಗಿ ಅಂತ ಜೋರು ಮಾಡಿ ಕಳುಹಿಸಿದರಂತೆ. ಡಾಕ್ಟರ್‍ಗೆ ತೋರಿಸಿದ ಮೇಲೆ ಹೇಗೋ ವಾಸಿಯಾಯಿತು. ಎಷ್ಟೋ ದಿನಗಳು ಕಳೆದ ಮೇಲೆ ಆ ಗಾಯ ಹೇಗೋ ಮಾಯವಾಗಿ ನಾನು ಬದುಕಿಕೊಂಡೆ. ನಾನು ಕೂಡ ಗುಂಡ್‍ಗುಂಡಕ್ಕೆ ಚೆನ್ನಾಗಿ ಬೆಳೆದೆ.

ನನ್ನ ಮೈಗೆ ಬೆಂಕಿಯುಂಡೆ ತಗುಲಿದ್ದು ನೋಡಿದ ಮಿಸಿಯಮ್ಮ, ಆವತ್ತಿನಿಂದ ಕೂಲಿ ಲೈನಿನ ಎಲ್ಲ ಮಕ್ಕಳಿಗೂ ಹಾಲು ಕೊಡುವ ಸಂಪ್ರದಾಯ ಪ್ರಾರಂಭ ಮಾಡಿದರಂತೆ. ಆ ಮಿಸಿಯಮ್ಮನ ಎಸ್ಟೇಟ್‍ನಲ್ಲಿ ಆಕೆ ಹತ್ತಿಪ್ಪತ್ತು ಸೀಮೆ ಹಸುಗಳನ್ನು ಸಾಕಿದ್ದರು. ಆ ಹಸುಗಳು ಕೊಡ್ತಿದ್ದ ಹಾಲಲ್ಲೇ ಮಕ್ಕಳಿಗೆಲ್ಲ ಹಾಲು ಕುಡಿಯೋಕೆ ಕೊಡತ್ತಿದ್ದರಂತೆ. ಹಾಲು ಕುಡಿದರೆ ಮಕ್ಕಳು ಚೆನ್ನಾಗಿರುತ್ತವೆ. ಅವರು ಚೆನ್ನಾಗಿ ಬೆಳೆಯಬೇಕು ಅಂತ ಹೀಗೆ ಹಾಲು ಕುಡಿಸುವ ಈ ಏರ್ಪಾಟು ಮಾಡಿದರಂತೆ. ಈ ಸುಟ್ಟ ಗಾಯದ ಘಟನೆ ಆದನಂತರ ಹೀಗೆ ಹಾಲು ಕೊಡುವ ವಿಚಾರ ಗ್ರೇಟ್ ಅನ್ನಿಸ್ತದೆ. ಯಾಕೆಂದ್ರೆ, ಆಯಮ್ಮ ಸೀಮೆ ಹಸು ಹಾಲು ಕೊಟ್ಟಿದ್ದರಿಂದ ನನಗೆ ಬಲ ಬಂತು, ಬುದ್ದಿ ಬಂತು ಅಂತ ನಾನು ಅಂದುಕೊಳ್ತೀನಿ. ಆ ಘಟನೆ ಆದ ಮೇಲೆ ಯಾವ ಥರಾ ಟ್ರಿಟ್‍ಮೆಂಟು ಕೊಟ್ಟರು ಅಂತ ನಿಮಗೆ ಯಾರಿಗಾದರೂ ನೆನೆಪಿದೆಯಾ? ಅಂತ ನಮ್ಮಕ್ಕಂದಿರು, ಅಣ್ಣನ್ನ ಕೇಳಿದರೆ ಅವರ್ಯಾರಿಗೂ ಅದು ಸರಿಯಾಗಿ ಗೊತ್ತಿಲ್ಲ. ‘ಅದೇನೂ ಗೊತ್ತಿಲ್ಲ, ಬರೀ ಒಂದು ಆಯಿಂಟ್ಮೆಂಟ್ ಇತ್ತು. ಅದನ್ನ ಎಲ್ಲೆಲ್ಲಿ ಗಾಯವಾಗಿತ್ತೋ ಅಲ್ಲೆಲ್ಲ ಅವ್ವ ಹಚ್ತಿದ್ರು. ಅದನ್ನ ಬಿಟ್ರೆ ಇನ್ನೇನು ಇಲ್ಲ’ ಅಂತ ಉತ್ತರ ಸಿಕ್ಕಿತು. ಆದ್ರೆ, ನಮ್ಮ ಅಕ್ಕಂದಿರು ಇದರ ಬಗ್ಗೆ ಭಾರಿ ಹೇಳತ್ತಿದ್ದರು. ಎರಡನೇ ಅಕ್ಕ ಅಂತೂ, ‘ಇವಳು ದೇವರ ದಯೆಯಿಂದ ಬದುಕಿದಳು; ಇಲ್ಲಾ ಅಂದರೆ ಯಾವತ್ತೋ ಮರತ್ ಬಿಡಬೇಕಾಗಿತ್ತು’ ಅಂತೆಲ್ಲ ಹೇಳ್ತಿದ್ದರು.

ಈ ಲೇಖನ ಓದಿದ್ದೀರಾ?: 'ಕರಿಡಬ್ಬಿ' ಪುಸ್ತಕದ ಆಯ್ದ ಭಾಗ | ಕೋವಿಡ್ ಕಾಲದಲ್ಲಿ ನ್ಯಾಯಾಂಗ ಏನು ಮಾಡಿತು?

ನಮ್ಮ ತಂದೆಗೆ ಎಲ್ಲರ ಮೇಲೂ ಪ್ರೀತಿ ಇತ್ತು. ಆದರೆ, ಮೂರನೆ ಮಗು ಹೆಣ್ಣು ಮತ್ತು ಒಬ್ಬನೇ ಮಗ ಅಂತ ಸ್ವಲ್ಪ ತಾತ್ಸಾರ ಮಾಡಿದರಂತೆ. ಆದರೂ ನಾನು ದಷ್ಟಪುಷ್ಟವಾಗೇ ಬೆಳದೆ. ನಮ್ಮಲ್ಲಿ ಸಣ್ಣ ಮಕ್ಕಳಿಗೆ ಏನೇ ಹೆಸರಿಟ್ಟರೂ ಪ್ರೀತಿಯಿಂದ ತಂಗಿ, ಪುಟ್ಟ, ಚೋಟು, ಮೋಟು ಅನ್ನೋದು ಜಾಸ್ತಿ. ಹೀಗಾಗಿ ನಂಗೆ ಪ್ರೀತಿಯಿಂದ ಮನೆಯಲ್ಲಿ ‘ಮೋಟು’ ಅಂತ ಕರೆಯೋರು. ‘ಮೋಟು’ ಅಂತ ಯಾಕೆ ಕರೆಯುತ್ತಿದ್ದರು ಅಂದರೆ, ನಾನು ಕುಳ್ಳಕ್ಕಿದ್ದೆ. ಜೊತೆಗೆ ಗುಂಡಗುಂಡಕ್ಕೆ ಇದ್ದೆನಾದ್ದರಿಂದ ಎಲ್ಲರೂ ನನ್ನನ್ನ ‘ಮೋಟು-ಮೋಟು’ ಅಂತಾನೆ ಕರಿತ್ತಿದ್ರು. ಹೋರಗಿನವರು ‘ಮೋಟಕ್ಕ’ ಅಂತಿದ್ದರು. ನನಗೆ ಅಧಿಕೃತವಾಗಿ ನಾಮಕರಣ ಮಾಡಲೇ ಇಲ್ಲವಲ್ಲ. ಹೀಗಾಗಿ ಅದೇ ಹೆಸರು ಶಾಶ್ವತ ಆಯಿತು. ಇಡೀ ರಾಜ್ಯದಲ್ಲೇ ನನ್ನದು ಹೊಸ ಹೆಸರು, ಒಂದು ವಿಭಿನ್ನ ನಾಮ.

ಆ ಎಸ್ಟೇಟ್‍ನಲ್ಲಿ ನಮ್ಮ ಕುಟುಂಬ ಮೂರು ವರ್ಷಗಳ ಕಾಲ ಇತ್ತಂತೆ. ನಮ್ಮ ತಂದೆಯ ಹೆಸರು ಸಣ್ಣಯ್ಯ ಅಂತ. ಅವರ ತಂದೆ-ತಾಯಿ ಹೆಸರುಗಳು ನಮಗೆ ಗೊತ್ತಿಲ್ಲ. ನಾವು ಅವರನ್ನು ನೋಡಿರಲೇ ಇಲ್ಲ. ಹೀಗಾಗಿ ತಿಳಿದುಕೊಳ್ಳುವುದಕ್ಕೂ ಹೋಗಲಿಲ್ಲ.

ಆ ಬ್ರಿಟೀಷ್ ಲೇಡಿ ಬಗ್ಗೆ ಹೇಳ್ಬೇಕು ಅಂದರೆ, ಸರಿಯೋ ತಪ್ಪೋ ಆಯಮ್ಮ ನಮ್ಮ ದೇಶನೇ ಬಿಟ್ಟು ಹೋಗಲು ತೀರ್ಮಾನ ಮಾಡಿದರು. ಅವರು ತಮ್ಮ ದೇಶಕ್ಕೆ ಹೋಗುತ್ತಾರೆ ಎಂಬುದನ್ನು ತಿಳಿದ ಎಲ್ಲ ಕೂಲಿಕಾರರು ತಮ್ಮತಮ್ಮ ಊರಿಗೆ ವಾಪಸ್ಸು ಹೋಗೋಣ ಅಂತ ನಿರ್ಧಾರ ಮಾಡಿದರಂತೆ. ತಮ್ಮ ಎಸ್ಟೇಟಿನಲ್ಲಿ ಆ ಮಹಿಳೆಯು ಒಂದಷ್ಟು ನಾಯಿಗಳನ್ನು ರಕ್ಷಣೆಗೋಸ್ಕರ ಸಾಕಿಕೊಂಡಿದ್ದರು. ಅವುಗಳನ್ನು ಎಲ್ಲರೂ ‘ಡಾಗ್ಸ್ ಸ್ಕ್ವಾಡ್’ ಅಂತ ಕರೆಯುತ್ತಿದ್ದರು. ಐದಾರು ನಾಯಿಗಳಿದ್ದವು. ಯಾವ ಯಾವ ಜಾತಿ ನಾಯಿಗಳು ಅಂತ ಗೊತ್ತಿಲ್ಲ. ಎಲ್ಲವೂ ದೊಡ್ಡ ದೊಡ್ಡ ನಾಯಿಗಳು. ಒಂದೊಂದೂ ಬೊಗಳಿದರೂ ಗುಡಗು-ಸಿಡಿಲ ಹೊಡೆದಂಥ ಸದ್ದು. ಆ ಥರಾ ಬೊಗಳಿತ್ತಿದ್ದವು ಅಂತ ಹೇಳ್ತಿದ್ದರು. ನಮ್ಮ ತಂದೆಯೊಂದಿಗೆ ಎಸ್ಟೇಟಿಗೆ ಕೆಲಸಕ್ಕೆ ಬಂದಿದ್ದ ಸಿದ್ದಯ್ಯ ಎಂಬುವರು ಆ ನಾಯಿಗಳಿಗೆ ಸ್ನಾನ ಮಾಡಿಸುವುದು, ಊಟ ಹಾಕುವುದು, ಅವುಗಳನ್ನ ತಿರುಗಾಡಿಸ್ಕೊಂಡು ಬರೋದು- ಹೀಗೆ ಎಲ್ಲವನ್ನೂ ಮಾಡುತ್ತಿದ್ದರು. ಅಷ್ಟು ಪ್ರೀತಿಯಂದ ನೋಡಿಕೊಳ್ಳುತ್ತಿದ್ದರು. ಅವರಿಗೆ ಎಲ್ಲರೂ ‘ನಾಯಿ ಸಿದ್ದಯ್ಯ’ ಅಂತಲೇ ಕರೆಯುತ್ತಿದ್ದರು. ಪಾಪ! ಈ ಸಿದ್ದಯ್ಯ ಅಂದರೆ ಬಂಗ್ಲೆ ಮಿಸಿಯಮ್ಮಂಗೂ ಬಹಳ ನಂಬಿಕೆ.

ನನಗೆ ಮೂರು ವರ್ಷ ಇರುವಾಗ ಬಂಗ್ಲೆ ಮಿಸಿಯಮ್ಮ ತಮ್ಮ ದೇಶಕ್ಕೆ ಹೋದರು. ಆಗ ಆ ಎಸ್ಟೇಟ್‍ನಲ್ಲಿದ್ದ ಎಲ್ಲರೂ ತಂತಮ್ಮ ಊರುಗಳಿಗೆ ಹೊರಟುಬಿಟ್ಟರಂತೆ. ಆಗ ನಮ್ಮ ತಂದೆಯೂ ಕುಟುಂಬಸಮೇತರಾಗಿ ಊರಿಗೆ ವಾಪಸ್ ಬಂದುಬಿಟ್ಟರು. ಆದರೆ, ಇವರೆಲ್ಲರೂ ವಾಪಸು ತಮ್ಮ ತಮ್ಮ ಊರುಗಳಿಗೆ ಹೋದರೂ, ಆ ಮಿಸಿಯಮ್ಮ ತಕ್ಷಣ ವಾಪಸು ತಮ್ಮ ದೇಶಕ್ಕೆ ಹೋಗಲಿಲ್ಲ. ಕೊನೆಗೆ ಇಷ್ಟವಿಲ್ಲದೇ ಹೋಗೋದು ಅಂತ ಡಿಸೈಡ್ ಮಾಡಿ, ಎಸ್ಟೇಟ್‍ನ ಭೂಮಿಯನ್ನೆಲ್ಲ ಯಾರಿಗೋ ಮಾರಿದರಂತೆ. ಕೊನೆಯತನಕ ಅವರ ಜೊತೆ ಅಲ್ಲೆ ಇದ್ದ ದಲಿತರಿಗೆ ಎರಡೆರಡು ಎಕರೆ ಭತ್ತದ ಗದ್ದೆನ ಫ್ರೀಯಾಗಿ ತೋಟ ಕೊಟ್ಟರಂತೆ. ನಾಯಿ ಸಿದ್ಧಯ್ಯನಿಗೆ 5 ಎಕರೆ ಭತ್ತದ ಗದ್ದೆ ಕೊಟ್ಟರು. ಆಮೇಲೆ ಆತ ತನ್ನ ಗದ್ದೆಯನ್ನು ತುಂಬಾ ಚೆನ್ನಾಗಿ ಡೆವಲಪ್ ಮಾಡಿದನು. ಅದರಿಂದ ಅವರು ಒಳ್ಳೆಯ ಸ್ಥಿತಿಗೆ ಬಂದರು. ಆತನಿಗೆ ಬ್ರೀಟಿಷರ ಥರಾ ವಿಶೇಷವಾದ ಡಿಸಿಪ್ಲೇನ್ ಇತ್ತು. ಆತ ಒಂದ ಥರಾ ಚಡ್ಡಿ ತೊಟ್ಟು, ಲೇಸ್ ಇರೋ ಶೂಸ್ ಹಾಕಿಕೊಂಡು, ತಲೆಗೊಂದು ಬ್ರಿಟಿಷರ ಥರದ ಕ್ಯಾಪ್ ಧರಿಸಿಕೊಂಡು ಓಡಾಡತ್ತಿದ್ದರು.

Image
Motamma 2

ಆ ಬಂಗ್ಲೆ ಮಿಸಿಯಮ್ಮನ ಬಗ್ಗೆ ಇನ್ನಷ್ಟು ಹೇಳಬೇಕು ಅಂದ್ರೆ...

ಆವತ್ತು ನನ್ನ ಮೈಗೆ ಬೆಂಕಿಕೆಂಡ ತಗುಲಿ ಸುಟ್ಟು ಹೋದದ್ದರ ಬಗ್ಗೆ ನಮ್ಮವ್ವ ವರ್ಣನೆ ಮಾಡುತ್ತಿದ್ದರು. ಆ ಮಿಸಿಯಮ್ಮನನ್ನು ಇವರೆಲ್ಲ ನೇರವಾಗಿ ನೋಡುತ್ತಿದ್ದುದು ಬಲು ಅಪರೂಪ. ಏಕೆಂದರೆ ಅಲ್ಲಿ ಕೆಲಸಕ್ಕ ಹೋಗವರೆಲ್ಲರನ್ನೂ ಗಣತಿ ಅಂತ ಮಾಡುತ್ತಿದ್ದರು. ಅಂದರೆ ಅಟೆಡೆಂನ್ಸ್ ಹಾಕೋದು. ಈ ಕೆಲ್ಸ ಮಾಡಕ್ಕೆ ಒಬ್ಬರು ರೈಟರ್ ಅಂತ ಇದ್ದರು. ಒಂದು ತೋಟಕ್ಕೆ ಒಬ್ಬರು ಅಥವಾ ಇಬ್ಬರು ಗಣತಿ ಮಾಡುವವರು ಇರುತ್ತಿದ್ದರು. ಒಬ್ಬ ಆಫೀಸ್ ರೈಟರ್ ಆದರೆ, ಇನ್ನೊಬ್ಬರು ಕೆಲಸ ಮತ್ತು ಕೆಲಸಗಾರರನ್ನು ನೋಡಿಕೊಳ್ಳುವ ರೈಟರು. ಬೆಳಿಗ್ಗೆ ಎಂಟು ಗಂಟೆ ಅಥವಾ ಎಂಟೂವರೆಗೆಲ್ಲ ಕೆಲಸಗಾರರು ಎಸ್ಟೇಟ್‍ನ ತೋಟಕ್ಕೆ ಬರಬೇಕಾಗಿತ್ತು. ಹೀಗೆ ಬರ್ತಿದ್ದ ಕೆಲ ಸಂದರ್ಭಗಳಲ್ಲಿ ಮಾತ್ರ ಮಿಸಿಯಮ್ಮ ಕಾಣಿಸಿಕೊಳ್ತಿದ್ದರು. ಉಳಿದಂತೆ ಹೊರಗಡೆ ಬರುತ್ತಿರಲಿಲ್ಲ. ಕುದುರೆ ಹತ್ತಿಕೊಂಡು ಓಡಾಡುತ್ತಿದ್ದರಂತೆ. ಈಗಿನಂತೆ ಜೀಪ್, ಕಾರು ಏನೂ ಇರಲಿಲ್ಲವಲ್ಲ? ಕುದುರೆ ಮೇಲೆ ಕೂತ್ಕೊಂಡು, ತಲೆಗೊಂದು ಕ್ಯಾಪ್ ಹಾಕ್ಕೊಂಡು ಸುತ್ತಾಡತಿದ್ದರಂತೆ. ಸಿಕ್ಕಾಪಟ್ಟೆ ಕೆಂಪಗಂದ್ರೆ ಕೆಂಪಗೆ, ಅಷ್ಟು ಬಣ್ಣವಾಗಿದ್ದರಂತೆ. ಬ್ರಿಟಿಷ್ ಸ್ಟೈಲಲ್ಲೇ ಮಿಡಿ ಹಾಕ್ಕೋಂಡು ಅಥವಾ ಚಡ್ಡಿ ಹಾಕಿಕೊಂಡು ಓಡಾಡುತಿದ್ದರಂತೆ. ಹೀಗೆ ಕೆಂಪಕೆಂಪಗೆ ಇದ್ದೋರು, ಮುಟ್ಟಿದ್ರೆ ಮೈಯಿಂದ ಎಲ್ಲಿ ರಕ್ತ ಹೊರಗೆ ಬರ್ತದೇನೋ ಅನ್ನುವಷ್ಟು ಕೆಂಪಗೆ ಇದ್ದೋರು- ನಮ್ಮ ಲೈನಿಗೆ ಹೆಂಗೆ ಬಂದರೂಂತ ನಮ್ಮವ್ವಂಗೆ ಅಚ್ಚರಿಯಾಗಿತ್ತಂತೆ. ನಮ್ಮವ್ವ ಹೇಳ್ತಿದ್ರು- ನಮ್ಮನೇಗೆ ಬಂದಾಗ ಅವರು ಅರ್ಧದ ಚಡ್ಡಿ ಹಾಕಿಕೊಂಡಿದ್ದರು. ದಪ್ಪ ದಪ್ಪವಾಗಿ ತೊಡೆ ಬಿಟ್ಕೊಂಡು ಬಂದಿದ್ದರಂತೆ. ಅದೆಷ್ಟೋ ಸಲ ಗಂಡಸರು, ಕೆಲಸ ಮಾಡೋ ಕೂಲಿಕಾರರು ಆಯಮ್ಮ ಓಡಾಡುವುದ ನೋಡಿ ಜೋಕ್ ಮಾಡಿಕೊಂಡು ನಗಾಡತ್ತಿದ್ದರಂತೆ. ಅವರ ಬಣ್ಣ ನೋಡಿ, ಅವರ ವೇಷ ಭೂಷಣಗಳನ್ನು ನೋಡಿ ಖುಷಿ ಪಟ್ಟುಕೊಂಡು ಜೋಕ್ ಮಾಡತ್ತಿದ್ದರಂತೆ. ಆ ಥರದ ಪರಸ್ನಾಲಿಟಿ ಅವರಿಗಿತ್ತು. ಅವರು ಟಕ್ ಟಕ್ ಟಕ್ ಅಂತ ಕುದರೆ ಮೇಲೆ ಓಡಾಡತ್ತಿದ್ದರು. ಮೂಡಿಗೆರೆಗೆ, ಸಕಲೇಶಪುರಕ್ಕೆಲ್ಲ ಕುದುರೆ ಮೇಲೆ ಹೋಗಿ ಬರ್ತಿದ್ದರು. ನೋಡುವುದಕ್ಕೆ ಅಷ್ಟೊಂದು ಗಟ್ಟಿಮುಟ್ಟಾಗಿ, ಕಟ್ಟುಮಸ್ತಾಗಿದ್ದ ಅವರು, ಮನಸ್ಸಿನಲ್ಲಿ ಮಾನವೀಯ ಅಂತಃಕರಣ ಉಳ್ಳವರಾಗಿದ್ದರು. ಹಂಗಂಗಲೇ ನನಗೆ ಬೆಂಕಿ ತಗುಲಿಕೊಂಡಾಗ ಮನೆತನಕ ಬಂದು, ಅವ್ವನಿಗೆ ಗದರಿಸಿ ಯೋಗಕ್ಷೇಮ ವಿಚಾರಿಸಿಕೊಂಡು, ನಮ್ಮ ಲೈನಿನ ಎಲ್ಲ ಮಕ್ಕಳಿಗೂ ಹಾಲು ಕೊಡುವ ಕಾರ್ಯಕ್ರಮ ಶುರುಮಾಡಿದ್ದರು.

ಆ ಮಿಸಿಯಮ್ಮನ ತಂದೆಯವರಿಗೆ ಹುಷಾರ್ ತಪ್ಪಿದ ಸುದ್ದಿ ತಿಳಿದು ಅವರು ಇಂಗ್ಲೆಂಡ್‍ಗೆ ಹೋದರು. ಆಮೇಲೆ ಅವರ ತಂದೆ ತೀರಿಕೊಂಡರಂತೆ. ಸ್ವಲ್ಪ ದಿನಗಳಾದ ಮೇಲೆ ಮಿಸಿಯಮ್ಮ ವಾಪಸು ಬಂದು ಅಚ್ಚರಡಿ ತೋಟದಲ್ಲೇ 2-3 ವರ್ಷ ಇದ್ದರು. ಆಮೇಲೆ ಯಾಕೋ ಅವರು ತಮ್ಮ ದೇಶಕ್ಕೆ ಹೋಗೊದಕ್ಕೆ ಮನಸ್ಸು ಮಾಡಿದರು. ಆಕೆಗೂ ವಯಸ್ಸಾಗಿತ್ತು. ಆಗಲೇ 60 ವರ್ಷ ಆಗಿತ್ತು ಅನ್ಸತ್ತೆ. ಆಮೇಲೆ ಆ ತೋಟವನ್ನು ತಮಗೆ ಗೊತ್ತಿರುವ ಒಬ್ಬರಿಗೆ ಮಾರಿದರಂತೆ. ಎಲಬುಡಗಿ ದೊರೆ ಅಂತ ಒಬ್ಬರಿದ್ದರು. ಅವರೂ ಬ್ರಿಟಿಷರೇ. ಬ್ರಿಟಿಷರನ್ನೆಲ್ಲ ‘ದೊರೆ’, ‘ದೊರೆಸಾನಿ’ ಅಂತೆಲ್ಲ ಕರೆಯುತ್ತಿದ್ದರು. ಆ ಎಲಬುಡಗಿ ದೊರೆಗೆ ತಮ್ಮ ಜಮೀನನ್ನ ಮಾರಿದರಂತೆ. ಈಗ ಅದು ಎಲಬುಡಗಿ ಎಸ್ಟೇಟ್ ಅಂತ ಹೆಸರಾಗಿದೆ. ಈ ಎಲಬುಡಗಿ ದೊರೆಗೂ ಈ ಮಿಸಿಯಮ್ಮಗೂ ಸ್ವಲ್ಪ ಸ್ನೇಹ ಇತ್ತೂಂತ ಹೇಳ್ತಾರೆ. ಅವರಿಗೆ ತಮ್ಮ ದೇಶದವರು ಇನ್ಯಾರೂ ಇಲ್ಲಿ ಇರಲಿಲ್ಲ. ಎಲಬುಡಗಿ ದೊರೆ ಕೂಡ ಬ್ರಿಟಿಷರವರೇ. ಹೀಗಾಗಿ ಕಷ್ಟ-ಸುಖ ಹಂಚಕೊಳ್ಳೊಕೆ ಅವರು ಇವರಿಗೆ ಬಹಳ ಆಪ್ತರಾಗಿದ್ದರು ಅಂತ ಹೇಳ್ತಾರೆ.

ಈ ಲೇಖನ ಓದಿದ್ದೀರಾ?: 'ವೋಲೆ ಸೋಯಿಂಕಾ ವಾಚಿಕೆ' ಕುರಿತು ಅನುವಾದಕರ ಮಾತು

ಮಿಸಿಯಮ್ಮ ಆ ದೊರೆಗೆ ತಮ್ಮ ತೋಟನ್ನೆಲ್ಲ ಮಾರಿ ಇಂಗ್ಲೆಂಡಗೆ ವಾಪಸ್ ಹೋದರು. ಹೋಗಬೇಕಾದರೆ ಈ ಜನರನ್ನೆಲ್ಲ ನೋಡಿ, ಜೋರಾಗಿ ಅತ್ತು ಕಣ್ಣೀರು ಹಾಕಿದ್ದರಂತೆ. ರಸ್ತೆಯಲ್ಲಿ ಎಲ್ಲರೂ ನಿಂತುಕೊಂಡು ಕೈ ಮುಗಿದು ‘ಹೋಗ್ಬೇಡಿ ಅಮ್ಮ’ ಅಂತ ಗೋಳಾಡಿದರಂತೆ. ಆದರೆ ಆಕೆ ಅವರನ್ನೆಲ್ಲ ಸಂತೈಸಿ, ತಾನು ತಮ್ಮ ದೇಶಕ್ಕೆ ವಾಪಸ್ ಹೋಗ್ತಿರುವುದಾಗಿ ಹೇಳಿ, ಬೀಳ್ಕೊಟ್ಟು ಹೋದರಂತೆ. ಅದು ಚಿಕ್ಕಮಗಳೂರು ತಾಲ್ಲೂಕು ಆಲ್ದೂರು ಮತ್ತು ಗುಲ್ಲನಪೇಟೆ ಮಧ್ಯ ಬರುತ್ತೆ.

ಆ ಮಿಸಿಯಮ್ಮನ ಎಸ್ಟೇಟ್ ಬಿಟ್ಟಮೇಲೆ ನಾವು ವಾಪಸು ಬಂದಿದ್ದು ನಮ್ಮ ಸ್ವಂತ ಹಳ್ಳಿ ಕೆಸವೊಳಲಿಗೆ ಅಲ್ಲ. ಮಗ್ಗಲಮಕ್ಕಿ ಅಂತ ಹೆಸರಿನ ಊರಿಗೆ ನಮ್ಮ ಕುಟುಂಬದವರೆಲ್ಲ ವಾಪಸು ಬಂದು ಹೊಸದಾಗಿ ತಮ್ಮ ಜೀವನ ಪ್ರಾರಂಭ ಮಾಡಿದರು. ಅದು ದಾರದಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರೋ ಒಂದು ಸಣ್ಣ ಹ್ಯಾಮ್ಲೆಟ್. ಇದು ಮಲೆನಾಡಿನ ದ್ವೀಪವೇ ಸರಿ. ಮಗ್ಗಲಮಕ್ಕಿ ಹಳ್ಳಿಗೆ ನಮ್ಮ ಕುಟುಂಬ ಬಂದು ಅಲ್ಲಿಯೇ ಸೆಟ್ಲ್ ಆಯ್ತು. ಈಗಲೂ ನಾವು ಅದೇ ಹಳ್ಳಿಯಲ್ಲಿ ಇದ್ದೇವೆ. ಮಗ್ಗಲಮಕ್ಕಿ ಗ್ರಾಮದಲ್ಲಿ 50ರಿಂದ 60 ಮೇಲ್ವರ್ಗದ ಕುಟುಂಬಗಳು, ಎಂಟು-ಹತ್ತು ದಲಿತರ ಕುಟುಂಬಗಳು ಇದ್ದವು. ಸುಧಾರಿತ ರಸ್ತೆಗಳಿಲ್ಲ, ವಿದ್ಯುತ್ ಸೌಕರ್ಯವಿಲ್ಲದ ಕುಗ್ರಾಮವದು. ಮಳೆಗಾಲದಲ್ಲಿ ಸದಾ ಸುರಿಯುವ ಮಳೆ. ಛಳಿಗಾಲದಲ್ಲಿ ವಿಪರೀತ ಛಳಿ. ಬಡವರು ಮಳೆಗಾಲದಲ್ಲಿ ನಡುಮನೆ ಕೋಣೆಯಲ್ಲಿ ಬೆಂಕಿ ಹಾಕಿ ಮೈಕಾಯಿಸಿಕೊಳ್ಳುತ್ತಿದ್ದರು. ಛಳಿಗಾಲದಲ್ಲಿ ಮನೆಯ ಹೊರಗಿನ ಅಂಗಳದಲ್ಲಿ ಬೆಂಕಿಹಾಕಿಕೊಂಡು, ಸಾಮೂಹಿಕವಾಗಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದರು. ಅದು ಅಲ್ಲಿನ ರೂಢಿ.

ಮಗ್ಗಲಮಕ್ಕಿಯಲ್ಲಿ ಅದು ಎಂಥದೋ ಒಂದು ಗೌಡರ ಮನೆ. ಅಲ್ಲಿ ನಮ್ಮ ತಂದೆ ಕೆಲಸಕ್ಕೆ ಸೇರಿಕೊಂಡರು. ಮಿಸಿಯಮ್ಮನ ಎಸ್ಟೇಟ್‍ನಲ್ಲಿ ನಮ್ಮ ತಂದೆ ತೋಟದ ಮೇಸ್ತ್ರಿಯಾಗಿ ಕೆಲಸ ಮಾಡತ್ತಿದ್ದರು. ತೋಟಕ್ಕೆ ಎಷ್ಟು ಜನ ಬಂದರು? ಎಷ್ಟು ಜನ ಹೋದರು? ಏನೇನು ಕೆಲಸವನ್ನು ಎಷ್ಟೆಷ್ಟು ಮಾಡ್ತಾರೆ ಅಂತೆಲ್ಲ ಮೇಲ್ವಿಚಾರಣೆ ನೋಡಿಕೊಳ್ಳುವವರಿಗೆ ಮೇಸ್ತ್ರಿ ಅಂತಿದ್ದರು. ನಮ್ಮ ತಂದೆ ಮತ್ತು ದಾರದಹಳ್ಳಿ ಬಾಸಯ್ಯ- ಇಬ್ಬರೂ ಸೇರಿಕೊಂಡು ತೋಟದ ಕೆಲಸದ ಮೇಲ್ವಿಚಾರಣೆ ಮಾಡತ್ತಿದ್ದರು. ಅದು ಸುಮಾರು ಇನ್ನೂರು-ಮುನ್ನೂರು ಎಕರೆಯಷ್ಟು ದೊಡ್ಡ ತೋಟ. ಅದರಲ್ಲಿ ಕಾಫೀ ಮೆಣಸು ಮತ್ತಿತರ ಸಾಂಬಾರ ಪದಾರ್ಥಗಳನ್ನು ಬೆಳೆಯುತ್ತಿದ್ದರು. ಹಾಗೆ ಅಲ್ಲಿಂದ ಬಂದು ನಮ್ಮ ತಂದೆ ಗೇಣಿ ಜಮೀನು ಕೂಡ ಮಾಡಿದ್ದರು. ನಮ್ಮಪ್ಪನಂತೆ ಬೇರೆಯವರೂ ಸಹ ಗೇಣಿ ಜಮೀನು ಮಾಡಿ ಉತ್ತಮ ಬೆಳೆ ತೆಗೆಯುತ್ತಿದ್ದರು.

ಈ ಲೇಖನ ಓದಿದ್ದೀರಾ?: ಜಿ ಎನ್ ದೇವಿ ಅವರ 'ಮಹಾಭಾರತ: ಭೂಮಕಾವ್ಯ ಮತ್ತು ಭಾರತರಾಷ್ಟ್ರ' ಪುಸ್ತಕದ ಆಯ್ದ ಭಾಗ

ಮಗ್ಗಲಮಕ್ಕಿಗೆ ಬಂದ ಹೊತ್ತಿಗೆ ನನ್ನ ದೊಡ್ಡ ಅಕ್ಕನ ಮದುವೆ ಆಗಿತ್ತು. ಆಕೆಗೆ ಮದುವೆ ಆಗಿದ್ದು ನನಗೆ ಏನೇನು ಗೊತ್ತಿಲ್ಲ. ಆಕೆಯ ಗಂಡನ ಮೊದಲನೇ ಹೆಂಡತಿ ತೀರಿಹೋಗಿದ್ದಳು. ಇವಳು ಎರಡನೆಯವಳು. ಬಹಳ ಸಣ್ಣ ವಯಸ್ಸಲ್ಲೇ ಮದುವೆ ಮಾಡಿದರು. 12 ಅಥವಾ 13 ವರ್ಷಕ್ಕೇನೇ ಆಕೆಗೆ ಮದುವೆ ಆಗಿಹೋಯಿತು. ನಮ್ಮ ಭಾವನೂ ಕೂಡ ನಮ್ಮ ತಂದೆ ಜೊತೆ ಕೆಲಸ ಮಾಡಿಕೊಂಡಿದ್ದರು. ಮಿಸಿಯಮ್ಮನ ಎಸ್ಟೇಟ್‍ನಲ್ಲೂ ಸ್ವಲ್ಪ ಕಾಲ ಭಾವ ಕೆಲಸ ಮಾಡಿದ್ದರು. ಮಿಸಿಯಮ್ಮ ದೇಶ ಬಿಟ್ಟುಹೋಗುವಾಗ ಅನೇಕರಿಗೆ ಜಮೀನು ಕೊಟ್ಟಂತೆ ನಮ್ಮ ಭಾವನಿಗೂ ಕೂಡ 2 ಎಕರೆ ಜಮೀನು ಕೊಟ್ಟರು. ಆಮೇಲೆ ಮಗ್ಗಲಮಕ್ಕಿಗೆ ಬಂದ ಮೇಲೂ ಅವರು ನಮ್ಮ ತಂದೆಯ ಜೊತೆ ಸೇರಿಕೊಂಡು ವ್ಯವಸಾಯ ಮಾಡಿಕೊಂಡಿದ್ದರು.

ಆಮೇಲೆ ನನ್ನ ಇನೊಬ್ಬ ಅಕ್ಕ ವಯಸ್ಸಿಗೆ ಬಂದಳು. ಅಂದರೆ 12, 13 ವರ್ಷ. ಅವಳು ನಮ್ಮ ಅಪ್ಪ-ಅಮ್ಮನ ಜೊತೆ ಹೊರಗಡೆ ಕಾಫೀ ತೋಟದಲ್ಲಿ ಕಳೆ ಕೀಳಲಿಕ್ಕೆ ಹೋಗುತ್ತಿದ್ದಳು. ಅವಳಿಗೂ ಮದುವೆ ಮಾಡಿದರು. ಪಕ್ಕದ ದಾರದಹಳ್ಳಿಯ ವರನಿಗೆ ಮದುವೆ ಮಾಡಿಕೊಟ್ಟರು. ಅಷ್ಟು ಹೊತ್ತಿಗೆ ನಮ್ಮ ಅಣ್ಣ 7-8 ವರ್ಷದವನಾಗಿದ್ದ. ನಾನು ಅವನ ಹಿಂದೆ ಹಿಂದೆ ಓಡಾಡಿಕೊಂಡಿದ್ದೆ. ನೋಡನೋಡುತ್ತಲೇ ಬೆಳೆದೆವು.

ಮಗ್ಗಲಮಕ್ಕಿಯಲ್ಲಿ ಪ್ರಾಥಮಿಕ ಶಾಲೆಯೂ ಇರಲಿಲ್ಲ. ಅಲ್ಲಿ ಒಕ್ಕಲಿಗರೇ ಜಾಸ್ತಿ ಸಂಖ್ಯೆಯಲ್ಲಿದ್ದರು. ನಮ್ಮ ದಲಿತ ಸಮುದಾಯಕ್ಕೆ ಸೇರಿದವರು ಹೆಚ್ಚಿರಲಿಲ್ಲ. ಏಳೆಂಟು ಒಕ್ಕಲಿದ್ದರು ಅಷ್ಟೆ. ಅವಾಗ ಇದ್ದಕ್ಕಿದ್ದಂತೆ ನಮ್ಮೂರಿಗೆ ಒಂದು ಪ್ರಾಥಮಿಕ ಶಾಲೆ ಮಂಜೂರಾಯಿತಂತೆ. ಇದು ಪ್ರಾಯಶಃ ಸಾವಿರದ ಒಂಬೈನೂರ ಐವತ್ನಾಲ್ಕೋ- ಐವತ್ತೈದೊ ಇರಬೇಕು. ಹೀಗೆ ಶಾಲೆ ಮಂಜೂರಾಗಿ ನನ್ನ ಅದೃಷ್ಟದ ಬಾಗಿಲು ತೆರೆಯಿತು.

ಪ್ರಾಥಮಿಕ ಶಾಲೆ ಮಂಜೂರು ಆಗಿದ್ದರೂ ಎಷ್ಟೋ ದಿನ ಪ್ರಾರಂಭನೇ ಆಗಲಿಲ್ಲ. ಯಾರೂ ಮೇಷ್ಟ್ರೆ ಬಂದಿರಲಿಲ್ಲ. ಶಾಲೆ ಇರುವುದು ಕುಗ್ರಾಮದಲ್ಲಿ ಅಂತ ಹೇಳಿ ಯಾವ ಮೇಷ್ಟ್ರೂ ಬರಲಿಕ್ಕೆ ಒಪ್ಪಿರಲಿಲ್ಲವಂತೆ. ಅಲ್ಲಿ ಒಬ್ಬರು ಎಂ.ಬಿ. ಪುಟ್ಟೇಗೌಡರು ಅಂತ ಇದ್ದರು. ಅವರು ಆ ಕಾಲದಲ್ಲೇ ಬಿ.ಎ. ಓದಿದ ಮಹಾನುಭಾವರಾಗಿದ್ದರು. ಅವರು ಎಂ.ಬಿ. ಮೆಣಸೇಗೌಡ ಎಂಬುವರ ತಮ್ಮ. ಅವರು ಸ್ವಲ್ಪ ರಾಜಕೀಯದಲ್ಲಿ ಓಡಾಡಿಕೊಂಡಿದ್ದರು. ಅವರ ಸಹಪಾಠಿ ಯಾಗಿದ್ದವರೊಬ್ಬರು ಮೇಷ್ಟ್ರಾಗಿದ್ದರು ಒಂದು ದಿನ ಅವರು ಪೇಟೆಯಲ್ಲಿಯೊ ಮತ್ತೆಲ್ಲಿಯೋ ಭೇಟಿಯಾದರಂತೆ. ಅವರ ಹೆಸರು ಸತ್ಯನಾರಾಯಣ ಅಂತ. ಅವರು ಆ ಕಾಲಕ್ಕೇ ಗ್ರಾಜುಯೇಟ್ ಆಗಿದ್ದರು. ಅವರನ್ನು ಭೇಟಿಯಾದ ಪುಟ್ಟೇಗೌಡರು, ‘ಏನಾದರೂ ಮಾಡಪ್ಪ; ಮೊದಲು ನಮ್ಮೂರಿನ ಶಾಲೆ ಪ್ರಾರಂಭ ಮಾಡು. ಆಮೇಲೆ ಬೇಕಾದರೆ ಯಾರಾದರೂ ಮೇಷ್ಟ್ರು ಬರತಾರೆ’ ಅಂತ ಒತ್ತಾಸೆ ಮಾಡಿದರಂತೆ. ಅವರು ಯಾರನ್ನಾದರೂ ಪೋಸ್ಟಿಂಗ್ ಮಾಡುವಂತೆ ನಾನು ವಿದ್ಯಾ ಇಲಾಖೆಯ ಜಿಲ್ಲೆಯ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಅಂತ ಹೇಳಿ ಹೋದರಂತೆ. ಆಮೇಲೆ ಪಾಪ ಸತ್ಯನಾರಾಯಣ ಮೇಷ್ಟ್ರು ತಾವೇ ನಮ್ಮ ಊರಿಗೆ ಬಂದು ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದರು.

ಈ ಲೇಖನ ಓದಿದ್ದೀರಾ?: ಮಾರ್ಕ್ವೆಝ್ 1981ರಲ್ಲಿ ಹೇಳಿದ 'ಹಾದಿ ಬದಿಯ ಕಥೆಗಳು'

ಅಚ್ಚರಡಿ ಎಸ್ಟೇಟ್ ಬಿಟ್ಟುಬಂದ ಮೇಲೆ ನಮ್ಮ ತಂದೆ ಮೊದಲು ಸಿದ್ದೇಗೌಡರು ಎಂಬುವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆ ಸಿದ್ದೇಗೌಡರು ಆ ಊರಿನ ಭಾರಿ ಶ್ರೀಮಂತರು. ಅವರ ಮನೆ ವರಾಂಡದಲ್ಲಿ ಬತ್ತದ ಕೊಟ್ಟಿಗೆ ಇತ್ತು. ಅದಕ್ಕೆ ‘ವಡ್ಡಿ ಕೊಟ್ಟಿಗೆ’ ಅಂತ ಹೇಳುತ್ತಾರೆ. ಶಾರ್ಟ್‍ಕಟ್ ಆಗಿ ‘ವಡ್ಡಿ’ ಅಂತಲೂ ಹೇಳುತ್ತಾರೆ. ಒಂದು ಕೊಠಡಿಯಷ್ಟು ದೊಡ್ಡದಾದ ವಡ್ಡಿಕೊಟ್ಟಿಗೆಯನ್ನು ಮರದಲ್ಲಿ ಸಿದ್ಧಪಡಿಸಿಟ್ಟಿರುತ್ತಿದ್ದರು. ಭತ್ತಕ್ಕೆ ಹುಳ ಬೀಳಬಾರದು ಅಂತ ಭತ್ತನೆಲ್ಲ ಅದರಲ್ಲಿ ಸಂಗ್ರಹ ಮಾಡ್ತಿದ್ದರು. ಅವರ ಮನೆಯಲ್ಲಿ ಅಂಥದ್ದೊಂದು ದೊಡ್ಡದಾದ ವಡ್ಡಿಕೊಟ್ಟಿಗೆ ಇತ್ತು. ಅದರ ಪಕ್ಕದಲ್ಲಿ ಒಂದಿಷ್ಟು ಜಾಗ ಖಾಲಿ ಇತ್ತು. ಅಲ್ಲಿ ಶಾಲೆಯ ಮಕ್ಕಳನ್ನು ಕೂರಿಸಲು ಜಾಗ ಮಾಡಿದ್ದರು. ಆ ವಡ್ಡಿ ಕೊಟ್ಟಿಗೆಯೇ ನಮ್ಮ ಪಾಠಶಾಲೆಯಾಯಿತು. ಮರುದಿನ ಊರಿನ ಎಲ್ಲ ಕಡೆಗೂ ಡಂಗುರ ಸಾರಿಸಿ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಪ್ರಚಾರ ಮಾಡಿದ್ದರು. ಆಗ ನಮ್ಮ ತಂದೆನೇ ಸ್ವಲ್ಪ ಯಜಮಾನಿಕೆ ಮಾಡಿ, ‘ಮೇಷ್ಟ್ರು ಬರ್ತಾರೆ’ ಅಂತ ಊರಲ್ಲಿ ಎಲ್ಲರಿಗೂ ಹೇಳಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿಕೊಡಿ ಅಂತ ಒತ್ತಾಸೆ ಮಾಡಿದ್ದರು. ಆದರೆ, ನನ್ನನ್ನು ಶಾಲೆಗೆ ಕಳುಹಿಸಬೇಕು ಅಂತ ಅವರಿಗೆ ಯೋಚನೆ ಬಂದಿರಲಿಲ್ಲ. ನಂಗೆ ಹೇಳೂ ಇರಲಿಲ್ಲ. ಊರಿನ ಮಕ್ಕಳು ಮತ್ತು ನಮ್ಮ ಕಾಲೊನಿ ಮಕ್ಕಳೆಲ್ಲ, ಅಂದ್ರೆ ಒಂದೈದಾರು ಜನ ಹುಡುಗ-ಹುಡುಗಿಯರು ಶಾಲೆಗೆ ಹೊರಟರು. ಎಲ್ಲ ಮಕ್ಕಳೂ ನಂಗೆ, ‘ನೀ ಇಸ್ಕೂಲಿಗ್ ಬರಲ್ವ?’ ಅಂತ ಕೇಳಕ್ಕೆ ಶುರು ಮಾಡಿದರು. ನಾನು, ‘ಏ ತಡೀರಿ. ನಾನೂ ಬರತೀನಿ’ ಅಂತ ಅವರಿಗೆ ಹೇಳಿದೆ. ಎಲ್ಲ ಮಕ್ಕಳು ಶಾಲೆಗೆ ಹೊರಡೋ ಹೊತ್ತಿಗೆ ನಮ್ಮ ಅವ್ವ-ಅಪ್ಪ ಕೆಲಸಕ್ಕೆ ಹೋದರು. ಆಮೇಲೆ ಐನೂರೊಂದು ಬಾರ್ ಸೋಪಿನಲ್ಲಿ ಮುಖ ತೊಳಕೊಂಡು, ಕೈಕಾಲು ಮುಖಕ್ಕೆಲ್ಲ ಕೊಬ್ಬರಿ ಎಣ್ಣೆ ಹಚ್ಕೊಂಡು ನಾನು ಅವರೆಲ್ಲರ ಜೊತೆ ಶಾಲೆಗೆ ಹೋದೆ. ಆಗ ನನಗೆ ಸುಮಾರು ಐದು ತುಂಬಿ ಆರು ವರ್ಷ ಇರಬಹುದೇನೊ!?

ಶಾಲೆಯ ಮೊದಲ ದಿನದ ನನ್ನ ಅನುಭವ ಹೇಳಬೇಕು ಅಂದ್ರೆ- ನನ್ನ ಬಳಿ ಇರೋ ಬಟ್ಟೆಗಳೆಲ್ಲ ಹಳೆಯವು. ಹೀಗಾಗಿ ಮೊದಲ ದಿನ ಶಾಲೆಗೆ ನಮ್ಮ ಅಕ್ಕನ ‘ಕಿರಿಗೆ’ (ಸೀರೆಯ ಅರ್ಧಭಾಗದಂತಿದ್ದ) ಸೀರೆ ಕಟ್ಟಿಕೊಂಡು ಹೋಗಿದ್ದೆ. ಸಣ್ಣ ಮಕ್ಕಳು ಅಮ್ಮನ ಸೀರೆ ಉಟ್ಕೊತ್ತಾರಲ್ಲ ಹಂಗೆ. ನಂಗೆ ಸರಿಯಾಗಿ ಉಡಲಿಕ್ಕೆ ಸಹ ಬಂದಿರಲಿಲ್ಲ. ಸುಮ್ಮನೆ ಎಲ್ಲ ಸೀರೆಯನ್ನೂ ಹೆಂಗೆಂಗೊ ಸುತ್ತಿಕೊಂಡು, ಸೊಂಟಕ್ಕೆ ಎಂಗೆಂಗೋ ಕಟ್ಟಿಕೊಂಡು ಹೋಗಿದ್ದೆ. ನಮ್ಮ ಮೇಷ್ಟರು ತುಂಬಾ ಒಳ್ಳೆಯವ್ರು. ಅವರು ನನ್ನ ಕಡೆ ಕೈತೋರಿಸಿ, ‘ನೀನು ನಿಂತಕೊ’ ಅಂದರು. ನನ್ನ ಸೀರೆ, ನಾನಿದ್ದ ಎತ್ತರವನ್ನೆಲ್ಲ ಗಮನಿಸಿ, ‘ನಿಮ್ಮ ಅಪ್ಪ-ಅವ್ವ ಎಲ್ಲಿ?’ ಅಂತ ಕೇಳಿದರು. ‘ಅವರು ಕೆಲಸಕ್ಕೆ ಹೋಗಿದ್ದಾರೆ’ ಅಂದೆ. ‘ನಾಳೆ ಕರ್ಕೊಂಡು ಬರ್ತೀಯಾ?’ ಅಂತ ಕೇಳಿದರು. ‘ಹೂಂ’ ಅಂದೆ. ನಾವೆಲ್ಲ ಅಪ್ಪಂಗೆ ‘ಅಯ್ಯ’ ಅಂತಿದ್ದೆವು. ನಾನು ಮರುದಿನ ನಮ್ಮಪ್ಪಂಗೆ, ‘ಅಯ್ಯ, ನಿಂಗೆ ಮೇಷ್ಟ್ರು ಸ್ಕೂಲಿಗ್ ಬರಕ್ಕೆ ಹೇಳವ್ರೆ’ ಅಂತಂದೆ. ‘ಯಾಕೆ?’ ಅಂತ ಕೇಳಿದ್ರು. ನಾನು, ‘ಗೊತ್ತಿಲ್ಲ. ಬಾ ನೀನು. ನೆನ್ನೆ ಸ್ಕೂಲಿಗೆ ಹೋಗಿದ್ದೆ. ಅದ್ಕೆ ಬರಕ್ಕೆ ಹೇಳವ್ರೆ. ಬಾ’ ಅಂತ್ಹೇಳಿ, ಅವರ್ನ ಬಿಡದೇ ಕೈ ಹಿಡಿದು ಸ್ಕೂಲಿಗೆ ಕರ್ಕೊಂಡು ಹೋದೆ. ನಮ್ಮಯ್ಯ ಶಾಲೆಗೆ ಬಂದು ಮೇಷ್ಟ್ರ ಮುಂದೆ ಕೈಕಟ್ಟಿಕೊಂಡು ನಿಂತರು. ಆಗ ಮೇಷ್ಟ್ರು, ಇವರನ್ನು ನೋಡಿ, ‘ನಿನ್ನ ಮಗಳು ಚೂಟಿ ಇದ್ಹಂಗ್ ಇದ್ದಾಳೆ. ಅವಳಿಗೆ ನೀನು ಪೇಟೆಗ ಕರ್ಕೊಂಡು ಹೋಗಿ ಸ್ಲೇಟು ಬಳಪ ಕೊಡ್ಸು. ಅವಳು ಸೀರೆ ಉಟ್ಕೊಂಡು ಬಂದಿದ್ದಾಳೆ. ಇರೋದು ಚೋಟುದ್ದ. ಅವಳಿಗೆ ಸೀರೆ ಸರಿ ಹೋಗೋಲ್ಲ. ನೀನು ಒಳ್ಳೆ ಬಟ್ಟೆ ಕೊಡ್ಸು. ಲಂಗ ಕೊಡ್ಸು’ ಅಂತ ಹೇಳಿದರು. ಅಂದು ಶುಕ್ರವಾರ. ಸಂತೆ ದಿನ. ಆವಾಗ ನಮ್ಮಯ್ಯ, ನಮ್ಮ ಭಾವ ಅಂದರೆ ಎರಡನೇ ಅಕ್ಕನ ಗಂಡನನ್ನು ಕರೆದು, ‘ಇವಳನ್ನ ಸಂತೆಗೆ ಕರ್ಕೊಂಡು ಹೋಗಿ ಹೊಸ ಬಟ್ಟೆ ಕೊಡಿಸು’ ಅಂತ ಹೇಳಿದರು. ಅಲ್ಲಿಂದ ನನಗೆ ಶಿಸ್ತಾಗಿ ಶಾಲೆಗೆ ಹೋಗಲು ಒಂದು ದಾರಿಯಾಯಿತು.

ನಿಮಗೆ ಏನು ಅನ್ನಿಸ್ತು?
2 ವೋಟ್