ಹೊಸ ಓದು | ಅಂಬೇಡ್ಕರ್ ಚಳವಳಿಯಲ್ಲಿದ್ದ ಮಹಿಳೆಯರ ಕುರಿತ 'ನಾವೂ ಇತಿಹಾಸ ಕಟ್ಟಿದೆವು' ಪುಸ್ತಕದ ಆಯ್ದ ಭಾಗ

ಸಾಮಾಜಿಕ ಚಳವಳಿಗಳಲ್ಲಿ ಅಂಬೇಡ್ಕರ್‌ ಅವರಿಗೆ ಕೈಜೋಡಿಸಿದ ಕೆಲವು ಮಹಿಳೆಯರನ್ನು ಕಂಡು, ಮಾಹಿತಿ ಪಡೆದು, ಪತ್ರಿಕಾ ವರದಿ-ಹೊತ್ತಗೆ-ಪತ್ರಗಳನ್ನು ಪರಿಶೀಲಿಸಿ ರೂಪಿಸಿದ ಅಪೂರ್ವ ಪುಸ್ತಕ 'ನಾವೂ ಇತಿಹಾಸ ಕಟ್ಟಿದೆವು.' ಅಂಬೇಡ್ಕರ್ ಮೊಮ್ಮಗಳಾದ ರಮಾಬಾಯಿ ತೇಲ್ತುಂಬ್ಡೆ ಈ ಪುಸ್ತಕವನ್ನು ಸೆ.4ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ

ಸೋನುತಾಯಿ ಲಾಂಜೆವಾರ್

ನಾವು ಸೋನುತಾಯಿ ಲಾಂಜೆವಾರ್ ಅವರನ್ನು ಹುಡುಕಿಕೊಂಡು ಹೋಗಿ ಭೇಟಿಯಾದಾಗ ಅವರಿಗೆ 60 ವರ್ಷ. ಮುಕುಂದ್ ರಾವ್ ಅಂಬೇಡ್ಕರ್ ನಗರದಲ್ಲಿರುವ ಇಂದೋರಾ ಗುಡಿಸಲು ವಾಸಿಗಳ ಅಸೋಸಿಯೇಷನ್‍ಗೆ ಹೋದೆವು. ಅವರು ನೀಟಾಗಿ ಸಗಣಿ ಸಾರಿಸಿದ ನೆಲದ, ಎರಡು ಪುಟ್ಟ ಕೋಣೆಗಳ ಗುಡಿಸಲಿನಲ್ಲಿ ಇದ್ದರು. ಗೋಡೆಯ ಮೇಲೆ ಗಂಧದ ಹಾರವನ್ನು ಹಾಕಿದ ಡಾ. ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರ ಫೋಟೋಗಳನ್ನು ಹಾಕಿದ್ದರು. ಅಚ್ಚಬಿಳುಪಿನ ಸೀರೆ ರವಿಕೆ ತೊಟ್ಟಿದ್ದ ಸೋನು ತಾಯಿಯವರದು ಸಾಧಾರಣ ಮೈಕಟ್ಟು. ಕಪ್ಪುಬಣ್ಣದ ಪ್ರಶಾಂತ ಮುಖಭಾವದ ಸೋನು ತಾಯಿಯವರು ನಮ್ಮೊಂದಿಗೆ ಮಾತನಾಡತೊಡಗಿದರು.

Eedina App

ಸ್ವಲ್ಪ ಹೊತ್ತಿನಲ್ಲೇ ಇಬ್ಬರು ಯುವಕರು ಬೈಕಿನಲ್ಲಿ ಬಂದು “ಬಾಯಿ, ಬೇಗ ಹೊರಡು, ಬಾಳಬಾವು ಪೇಟೆಗೆ ನಿಮ್ಮನ್ನು ಕರೆದುಕೊಂಡು ಬಾ ಎಂದು ಗಾನಾರ್ ಸಾಹಿಬ್ ಹೇಳಿದ್ದಾರೆ. ಅಲ್ಲಿಗೆ ಗುಡಿಸಲುಗಳನ್ನು ಉರುಳಿಸಲು ಪೊಲೀಸರು ಬಂದಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಅಲ್ಲಿ ವಾಸಮಾಡುತ್ತಿರುವ ಬಡವರು ಎಲ್ಲಿಗೆ ಹೋಗಬೇಕು? ಗುಡಿಸಲುಗಳನ್ನು ಒಡೆಯಲು ಶುರುಮಾಡುತ್ತಿದ್ದಂತೆ ಹದಿನೈದರಿಂದ ಇಪ್ಪತ್ತು ಜನ ಮಹಿಳೆಯರು ಪ್ರತಿಭಟಿಸುವ ಸಲುವಾಗಿ ದಾರಿಗೆ ಅಡ್ಡವಾಗಿ ಮಲಗಿದರು. ಆಮೇಲೆ ಪೊಲೀಸರು ಅವರನ್ನು ಚೆನ್ನಾಗಿ ಥಳಿಸಿದರು. ವತ್ಸಲಾಬಾಯಿ ಮೇಷ್ರಮ್ ಅವರು ಮುಂದೆ ಇದ್ದರು, ಅವರಿಗೂ ಹೊಡೆದು ಪೊಲೀಸ್ ವ್ಯಾನಿನಲ್ಲಿ ಒಯ್ದರು. ಬುದ್ಧನ ಪ್ರತಿಮೆಯನ್ನು ಮುಟ್ಟಲು ಬಂದಾಗ ಮಹಿಳೆಯರು ದಾರಿಗಡ್ಡಲಾಗಿ ಮಲಗಿ ಪ್ರತಿಮೆಯನ್ನು ರಕ್ಷಿಸಿದರು. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಬೇಗ ಹೊರಡಿ, ನೀವಿಲ್ಲದೆ ಈ ಕೆಲಸ ಆಗುವುದಿಲ್ಲ. ಅದಕ್ಕೇ ನಿಮಗೆ ಹೇಳಿ ಕಳಿಸಿರುವುದು” ಎಂದು ಕರೆದರು.

“ಸರಿ ನಡಿ ಬರುತ್ತೇನೆ. ಎಲ್ಲಿಗೆ ಹೋಗಿದ್ದಾರೆ ಅವರು? ಚಂದ್ರಿಕಾ, ಮಾಯಾ ಬೇಗ ರೆಡಿಯಾಗಿ ಬನ್ನಿ. ದಯಮಾಡಿ ನೀವು ನನ್ನ ಕ್ಷಮಿಸಿ, ಬರುವುದು ತಡರಾತ್ರಿಯಾಗಬಹುದು. ನಾಳೆ ಮಧ್ಯಾಹ್ನ ನಾಲ್ಕು ಗಂಟೆಗೆ ಬನ್ನಿ ಖಂಡಿತ ಮಾತಾಡೋಣ” ಎಂದು ಹೇಳಿ ಸೋನುಬಾಯಿಯವರು ಹೊರಟು ಹೋದರು. ಹತ್ತು ನಿಮಿಷಗಳ ನಂತರ ಹನ್ನೆರಡು ಅಥವಾ ಹದಿಮೂರು ಮಹಿಳೆಯರು ಮತ್ತು ನಾಲ್ಕೈದು ಗಂಡಸರು ಅವರನ್ನು ಅನುಸರಿಸಿ ಹೋದರು. ಇಬ್ಬರು ಮಹಿಳೆಯರ ಕೈಲಿ ಪುಟ್ಟ ಮಕ್ಕಳಿದ್ದರು, ಒಬ್ಬ ಮಹಿಳೆ ಬಸುರಿ.

AV Eye Hospital ad

ಒಂದೇ ಒಂದು ಮಾತನ್ನೂ ಆಡದೆ ಸೋನುತಾಯಿಯವರು ಅವರು ಮಾಡುತ್ತಿರುವ ಕೆಲಸದ ಸೂಚನೆಯನ್ನು ನೀಡಿದ್ದರು. ಮರುದಿನ ಸೋನುತಾಯಿಯವರು ಸುದೀರ್ಘವಾಗಿ ಮಾತನಾಡಿದರು.

* * *

ನನ್ನ ತಂದೆಯವರ ಹೆಸರು ಕೇಶವ್‍ರಾವ್ ಬಗ್ದೆ. ಅವರು ಜನಿಸಿದ್ದು 1901ರಲ್ಲಿ. ಅವರಿಗೆ ಬಾಲ್ಯದಿಂದಲೇ ಸಮಾಜ ಸೇವೆಯ ಬಗ್ಗೆ ಆಸಕ್ತಿ ಇತ್ತು. ಪಂಜಾಬ್‍ರಾವ್ ಶಂಭರ್ಕರ್ ಮತ್ತು ಅವಲೆ ಬಾಬು ಅವರು ಸೇರಿ ಸತ್ಯಶೋಧಕ್ ಸಮಾಜ್ ಸೇವಕ್ ಸಂಘ ಎಂಬ ಹೆಸರಿನ ಸಮಾಜವನ್ನು ಸ್ಥಾಪಿಸಿದ್ದರು. ನಮ್ಮ ತಂದೆಯವರು ಆ ಸಮಾಜದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಾಮಾಜಿಕ ಕಾರ್ಯ ಆಗಿನಿಂದಲೇ ಶುರುವಾಯಿತು.

ಮೊದಲು ನಾವು ಹಿಂದೂ ಧರ್ಮದಲ್ಲಿದ್ದಾಗ ಇಬ್ಬರು ಹೆಣ್ಣು ಮಕ್ಕಳಿದ್ದುದರಿಂದ ನನ್ನ ಪೋಷಕರು ಮುಂದಿನ ಮಗು ಗಂಡಾದರೆ ಪ್ರತಿವರ್ಷ ಜಾತ್ರೆಗೆ ಬರುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಎರಡೋ ಮೂರೋ ವರ್ಷಗಳ ನಂತರ ಗಂಡು ಮಗುವಾದಾಗ ನನ್ನ ತಂದೆಯವರು ಹರಕೆಯನ್ನು ತೀರಿಸಲಿಲ್ಲ. ಕಾರಣ ನನ್ನ ತಂದೆಯವರು ಬಾಬಾಸಾಹೇಬರ ಭಾಷಣಗಳನ್ನು ಕೇಳಿ ಮತ್ತು ಜನತಾ ಪತ್ರಿಕೆಯಲ್ಲಿ ಅವರ ಲೇಖನಗಳನ್ನು ಓದಿ ಅವರ ಯೋಚನೆಗಳನ್ನು ಬದಲಾಯಿಸಿಕೊಂಡಿದ್ದರು. ಹಳೆಯ ಸಾಂಪ್ರದಾಯಿಕ ಆಚರಣೆಗಳನ್ನು ಕೈಬಿಡಲು ನಿರ್ಧರಿಸಿ ಹಾಗೆ ನಡೆದುಕೊಂಡರು.

ಎಂಟನೆಯ ತರಗತಿ ಪಾಸಾದ ನಂತರ ನಾನು ಶಿಕ್ಷಕರ ತರಬೇತಿಯ ಪರೀಕ್ಷೆಯನ್ನು ಪಾಸು ಮಾಡಿಕೊಂಡು ಶಿಕ್ಷಕಿಯಾಗಿ ಕೆಲಸ ಮಾಡತೊಡಗಿದೆ. ಕೆಲವು ವರ್ಷಗಳ ನಂತರ ನಗರ ಪಾಲಿಕೆಯು ಎಲ್ಲಾ ಶಿಕ್ಷಕಿಯರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಪಾಸು ಮಾಡಲೇಬೇಕೆಂದು ಡಿಕ್ರಿ ಹೊರಡಿಸಿತು. ಆಮೇಲೆ ನಾನು ಮೆಟ್ರಿಕ್ ಮುಗಿಸಿದೆ. ಸಮಾಜ ಸುಧಾರಕರಾದ ನನ್ನ ತಂದೆಯವರು ಬಾಬಾಸಾಹೇಬರ ಹೆಸರಿನಲ್ಲಿ ಪ್ರಮಾಣ ಮಾಡುತ್ತಿದ್ದರು. ಸಭೆಗಳು, ಭಾಷಣಗಳು ಮತ್ತು ಚರ್ಚೆಗಳಿಗೆ ಹೋಗುತ್ತಿದ್ದರು. ಅವರು ಬಾಬಾಸಾಹೇಬರ ಕಟ್ಟಾ ಅನುಯಾಯಿಯಾಗಿದ್ದರು. ನಾವೆಲ್ಲರೂ 1956ರಲ್ಲಿ ಬೌದ್ಧಧರ್ಮಕ್ಕೆ ಮತಾಂತರಗೊಂಡೆವು. ನನ್ನ ತಂದೆಯವರು ತಮ್ಮ 86ನೇ ವಯಸ್ಸಿನಲ್ಲಿ ಬುದ್ಧಂ ಶರಣಂ ಗಚ್ಛಾಮಿ ಎಂದು ಹೇಳುತ್ತ ತೀರಿಕೊಂಡರು.

ನನಗೆ 1947ರಲ್ಲಿ ಧರಮ್‍ರಾಜ್ ಅವರೊಂದಿಗೆ ಮದುವೆಯಾಯಿತು. ಅವರು ಜಬ್ಬಲ್‍ಪುರದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನನಗೆ ಇಬ್ಬರು ಮಕ್ಕಳು. ಒಬ್ಬ ಮಗ, ಒಬ್ಬಳು ಮಗಳು. ಇಬ್ಬರಿಗೂ ಶಿಕ್ಷಣ ಕೊಡಿಸಿದ್ದೇನೆ. ನನ್ನ ಮಗ ಉದ್ಯೋಗದಲ್ಲಿದ್ದಾನೆ. ಮಗಳು ಮನೆ ನೋಡಿಕೊಳ್ಳುತ್ತಾಳೆ ಮತ್ತು ಮಹಿಳಾ ಮಂಡಲಿಗೆ ಹೋಗುತ್ತಾಳೆ.

ಧರ್ಮಾಂತರದ ನಂತರ ನಮ್ಮ ತಂದೆ ಹಾಗೂ ಇನ್ನಿತರರು ಹಳೆಯ ದೇವ, ದೇವತೆಗಳ ಚಿತ್ರಗಳನ್ನು ನಾಗಪುರದ ನಾಗ್ ನದಿಯಲ್ಲಿ ಮುಳುಗಿಸಿ ಬಂದರು. ಆ ಸಂದರ್ಭದಲ್ಲಿ ಜಗೋಬ್ಜಿ ರಾಮ್‍ಟೆಕೆ, ಫೂಲ್‍ಚಂದ್ ಮೇಶ್ರಾಮ್ ಮತ್ತು ಬಸ್ತಿಯ ಇತರರು ನಮ್ಮೊಡನೆ ಇದ್ದರು. ಅವರುಗಳು ದೇವರುಗಳನ್ನು ಚೀಲದಲ್ಲಿ ತುಂಬಿಕೊಂಡು ನದಿಯಲ್ಲಿ ಮುಳುಗಿಸಿದರು. ಆ ಸಮಯದಲ್ಲಿ ಹಿಂದೂ ಧರ್ಮದಡಿಯಲ್ಲಿ ನಾವು ಅನುಭವಿಸುತ್ತಿದ್ದ ದೌರ್ಜನ್ಯಗಳನ್ನು ನೆನಪು ಮಾಡಿಕೊಂಡೆವು. ಹಿಂದೂ ಧರ್ಮವು ಹೇರಿದ್ದ ನರಕಯಾತನೆಗಳಿಂದ ಕೊನೆಗೂ ನಮಗೆ ಬಿಡುಗಡೆ ಸಿಕ್ಕಿತೆಂದು ಸಂತೋಷವಾಯಿತು.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 11 | ಯಾರಾದರೂ 'ಜಾತಿ ಪದ್ಧತಿ ವೈಜ್ಞಾನಿಕ' ಎಂದರೆ, ಮೊದಲು ನಕ್ಕುಬಿಡಿ

ನಾನು ಬಾಬಾಸಾಹೇಬರನ್ನು ಅವರು ನಾಗಪುರದ ಲಷ್ಕರಿ ಬಾಗ್‍ಗೆ 1952ರಲ್ಲಿ ಬಂದಾಗ ಮೊದಲ ಬಾರಿಗೆ ನೋಡಿದೆ. ಅವರ ಭಾಷಣವನ್ನು ಕೇಳಿದೆ, ಆದರೆ ಈಗ ನನಗದು ಸ್ಪಷ್ಟವಾಗಿ ನೆನಪಿಲ್ಲ. ಸಮಾಜ ಸುಧಾರಣೆಯ ಬಗ್ಗೆ  ಅವರಿಗಿದ್ದ ಅಚಲ ನಿರ್ಧಾರ ಮಾತ್ರ ನನ್ನ ಅನುಭವಕ್ಕೆ ಬಂತು. ಅಂದಿನಿಂದಲೇ ಅವರ ಕಾರ್ಯದಲ್ಲಿ ಭಾಗಿಯಾಗಲು ನಿರ್ಧರಿಸಿದೆ.

ಬಾಬಾ ಅವರು ನಾಗಪುರಕ್ಕೆ ಧರ್ಮಾಂತರದ ಕಾರ್ಯಕ್ರಮಕ್ಕೆಂದು ಅಕ್ಟೋಬರ್ 14, 1956ರಲ್ಲಿ ಬಂದಿದ್ದರು. ಧರ್ಮವನ್ನು ಬದಲಾಯಿಸಿಕೊಳ್ಳುವ ಮೊದಲು ಬಾಬಾ ಅವರು ತಮ್ಮ ಭಾಷಣದಲ್ಲಿ “ನಾವು ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಬೇಕು, ಹಿಂದೂಧರ್ಮದ ಶೋಷಣೆಯಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಬೇಕು, ಅದಕ್ಕಾಗಿ ಈ ಮತಾಂತರದ ಅಗತ್ಯವಿದೆ” ಎಂದು ಹೇಳಿದರು. ಬಾಬಾ ಅವರ ಈ ಮಾತುಗಳು ನನ್ನ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಟ್ಟಿವೆ. ಬಾಬಾ ಅವರು ತೀರಿಕೊಂಡ ಮೇಲೆ ವಿದರ್ಭ ಪ್ರದೇಶದ ಭಾರತೀಯ ಬೌದ್ಧ ಪರಿಷತ್ತಿನ (ಇಂಡಿಯನ್ ಬುದ್ಧಿಸ್ಟ್ ಕೌನ್ಸಿಲ್) ಅಧ್ಯಕ್ಷಳಾದೆ, ಅಲ್ಲಿಂದಲೇ ನನ್ನ ಕೆಲಸ ಆರಂಭವಾದದ್ದು.

ನನ್ನ ಸಾಮಾಜಿಕ ಚಟುವಟಿಕೆಗಳಿಗೆ ನನ್ನ ಗಂಡನ ಸಂಪೂರ್ಣ ಬೆಂಬಲ, ಪ್ರೋತ್ಸಾಹವಿದೆ. ನನಗೆ ಇಷ್ಟವಾದ್ದರಿಂದ ಸಂಘಟಿಸುವ ಕೆಲಸವನ್ನು ಆರಂಭಿಸಿದೆ, ಜೊತೆಗೆ ಬಾಬಾರವರ ಕೆಲಸಗಳ ಬಗ್ಗೆಯೂ ನಾನು ಕಲಿಯಬೇಕಿತ್ತು. ಬೌದ್ಧ ಪರಿಷತ್ತಿಗೆ ನಾನು ಕೆಲಸ ಮಾಡುವಾಗ ನನ್ನೊಂದಿಗೆ ತಾರಾಬಾಯಿ ಮೇಶ್ರಾಮ್, ದಮಯಂತಿಬಾಯಿ ಡೋಂಗ್ರೆ (ದೇಶಭ್ರತಾರ್), ಚಂದ್ರಿಕಪುರೆ, ಸುಧಾತಾಯಿ ರಾಮ್‍ಟೆಕೆ, ಗೀತಾಬಾಯಿ, ಸರೋದೆಬಾಯಿ ಮತ್ತು ಇತರರು ಇದ್ದರು. ಪರಿಷತ್ತಿನ ಸ್ಥಾಪನೆಯಾದಾಗ ಜೈಬಾಯಿ ಚೌಧರಿಯವರು ನನ್ನೊಂದಿಗೆ ಇದ್ದರು. ಮಹಿಳಾ ಮಂಡಲಗಳನ್ನು ಆರಂಭಿಸುವಾಗಲೂ ಅವರು ನನಗೆ ಸಹಾಯ ಮಾಡಿದರು, ಮಾರ್ಗದರ್ಶನ ಮಾಡಿದರು.

ಧರ್ಮಾಂತರದ ನಂತರ 1956ರಲ್ಲಿ ಬಾಬಾಸಾಹೇಬರು ತೀರಿಕೊಂಡರು. ಆಗ ನಾನು ನಮ್ಮ ಮುಖ್ಯೋಪಾಧ್ಯಾಯಿನಿಯನ್ನು 'ನಮ್ಮ ಬಾಬಾ ತೀರಿಕೊಂಡಿದ್ದಾರೆ ನಮಗೆ ರಜೆ ನೀಡಿ' ಎಂದು ಕೇಳಿದೆ. ಆಕೆ ಕ್ರೈಸ್ತಳು. ರಜೆ ನೀಡಲಿಲ್ಲ. 'ಅನುಮತಿಯಿಲ್ಲದೆ ನೀನು ಹೋದರೆ ನಾನು ನಿನ್ನ ಮೇಲೆ ಕ್ರಮ ಜರುಗಿಸುತ್ತೇನೆ' ಎಂದು ಹೇಳಿದರು. ದುಃಖದ ಬೆಟ್ಟವೇ ನಮ್ಮ ತಲೆಯ ಮೇಲೆ ಬಿದ್ದಂತೆನಿಸಿತು. ಕೆಲಸ ಕಳೆದುಕೊಂಡರೂ ಚಿಂತೆಯಿಲ್ಲ ಮುಂದೇನು ಮಾಡಬೇಕೆಂದು ನೋಡಿಕೊಳ್ಳೋಣ ಎಂದು ಹೇಳಿ ನಾವು ಮಹಿಳೆಯರೆಲ್ಲರೂ ನಮ್ಮ ನೆಚ್ಚಿನ ನಾಯಕನ ಕೊನೆಯ ದರ್ಶನ ಪಡೆದುಕೊಳ್ಳಲು ಬಾಂಬೆಗೆ ಹೋದೆವು. ದುಃಖಿತರಾಗಿ ರೋದಿಸುತ್ತಿದ್ದ ಅಷ್ಟು ದೊಡ್ಡ ಜನಸಾಗರವನ್ನು ನನ್ನ ಜೀವಮಾನದಲ್ಲೇ ನೋಡಿಲ್ಲ.

ಔರಂಗಬಾದಿನಲ್ಲಿದ್ದ ಮಹಾರ್ ಜನರು 1959ರಲ್ಲಿ ತಮ್ಮ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನಪ್ಪಿಕೊಂಡರು. ಇದರಿಂದ ಕುಪಿತರಾದ ಹಿಂದೂಗಳು ಹಳ್ಳಿಯಲ್ಲಿ ಅಲ್ಪಸಂಖ್ಯಾತರಾಗಿದ್ದ ದಲಿತರ ಮೇಲೆ ದಾಳಿ ಮಾಡಿದರು.

ಅಕೋಲಾ ಜಿಲ್ಲೆಯ ಧಾಕ್ಲಿ ಗ್ರಾಮದಲ್ಲಿ ಗಾವ್ಳಿ ಸೋದರರ ಕಣ್ಣು ಗುಡ್ಡೆಗಳನ್ನು ಬಾಕುವಿನಲ್ಲಿ ಕೆತ್ತಿ ಹಾಕಿದ್ದು ಒಂದು ಉದಾಹರಣೆಯಷ್ಟೆ. ಈ ಘಟನೆಯ ಬಗ್ಗೆ ಕೇಳಿದಾಗ ನಾನು, ಜೈಬಾಯಿ ಚೌಧರಿ, ದ್ರೌಪದಿಬಾಯಿ ರಾಮ್‍ಟೆಕೆ, ದಾದಾಸಾಹೇಬ್ ಗಾಯಕ್ವಾಡ್, ಎನ್.ಶಿವರಾಜ್ ಮತ್ತಿತರರು ಆ ಸೋದರರನ್ನು ಕಾಣಲು ಹೋದೆವು. ನಮ್ಮೊಂದಿಗೆ ಬಂದಿದ್ದ ಕೆಲವರು ಬಾಬಾರವರನ್ನು ಕುರಿತ ಹಾಡುಗಳನ್ನು ಹಾಡುತ್ತಿದ್ದರು. ಅಲ್ಲಿಗೆ ತಲುಪಿದ ಮೇಲೆ ಅವರ ಕುಟುಂಬದವರನ್ನು ಸಂತೈಸಿದೆವು. ನಮಗೆ ಸಾಧ್ಯವಾದ ಸಹಕಾರವನ್ನೆಲ್ಲ ನೀಡಿದೆವು. ಅಲ್ಲೊಂದು ಸಭೆಯನ್ನು ಮಾಡಿದೆವು. ಆ ಸಭೆಯಲ್ಲಿ ದೌರ್ಜನ್ಯವನ್ನು ಖಂಡಿಸಿ ಭಾಷಣಗಳನ್ನು ಮಾಡಲಾಯಿತು.

ಆನಂತರ ನಾವು ಮಧ್ಯಪ್ರದೇಶದ ಸಿಂದೇವಾಹಿ ಭಂಡಾರ, ರಾಜ್‍ಪುರ್, ಖೈರಗಡ್ ಹಳ್ಳಿಗಳಲ್ಲಿ ಧಾರ್ಮಿಕ ಉಪದೇಶಗಳನ್ನು ನೀಡಲು ಹೋದೆವು. ಜನರು ಬಾಬಾರವರ ಬಗ್ಗೆ ನಂಬಿಕೆಯನ್ನಿಟ್ಟಿದ್ದರು, ಸಂಘಟನೆಯು ಬಲವಾಗಿತ್ತಲ್ಲದೆ ಜನರಲ್ಲಿ ಒಗ್ಗಟ್ಟಿತ್ತು.

ನಾಗಪುರ ಜಿಲ್ಲೆಯ ತಾಕ್ಲಿಯಲ್ಲಿ, ಗೋತಲ ತಾಕ್ಲಿ ಮಹಿಳಾ ಮಂಡಲ; ತೆಕೆಸಿಟೆಯ ರಮಾಬಾಯಿ ನಗರದಲ್ಲಿ ಪಂಚಶೀಲ್ ಮಹಿಳಾ ಮಂಡಲ; ಚಾಂದ್ ಜಿಲ್ಲೆಯ ಸಿಂದೇವಾಹಿಯಲ್ಲಿ ಸುಜಾತ ಮಹಿಳಾ ಮಂಡಲ, ಇಂದೋರದಲ್ಲಿ ಗೌತಮಿ ಮಹಿಳಾ ಮಂಡಲ ಮತ್ತು ಜಗದಳ್‍ಪುರ್ ಜಿಲ್ಲೆಯ ರಾಜ್‍ಪುರ್‍ದಲ್ಲಿ ಪ್ರದ್ನ್ಯಾ ಮಹಿಳಾ ಮಂಡಲವನ್ನು ನಾನು ಸ್ಥಾಪಿಸಿದೆ.

ಈ ಎಲ್ಲ ಪ್ರದೇಶಗಳಿಗೆ ನಾವು ಭಂತೆ ಸೂರೈಸಾಸೈ ಅವರೊಂದಿಗೆ 1962ರಲ್ಲಿ ಹೋಗಿದ್ದೆವು. ಹೋದಲ್ಲೆಲ್ಲ ಮಹಿಳಾ ಮಂಡಲವನ್ನು ಸ್ಥಾಪಿಸಿದೆವು. ಮಹಿಳೆಯರನ್ನು ಮತಾಂತರಕ್ಕೆ ಸಿದ್ಧಗೊಳಿಸಲು ಸಭೆಗಳನ್ನು ನಡೆಸಿದೆವು. ಸಭೆಗಳಲ್ಲಿ ಇಪ್ಪತ್ತೆರಡು ಪ್ರಮಾಣಗಳೆಂದರೆ ಯಾವುವು, ಬೌದ್ಧರ ಹಬ್ಬಗಳು ಯಾವುವು ಮತ್ತು ವರ್ಷಾವಾಸವೆಂದರೇನು ಎಂಬುದನ್ನು ಹೇಳುತ್ತಿದ್ದೆವು.

ಈಗ ನಾವು ಪ್ರತಿ ಪೂರ್ಣಿಮೆಯಂದು ವಿಹಾರದಲ್ಲಿ ಸೇರುತ್ತೇವೆ. ಒಟ್ಟಿಗೆ ಬೌದ್ಧರ ಪ್ರಾರ್ಥನೆಗಳನ್ನು ಮಾಡುತ್ತೇವೆ ಮತ್ತು ಜನರಿಗೆ ಊಟ ನೀಡುತ್ತೇವೆ. ಶಿಕ್ಷಿತ ಮಹಿಳೆಯರಲ್ಲಿ ಕೇವಲ ಶೇ.15ರಷ್ಟು ಮಹಿಳೆಯರು ಮಾತ್ರ ಬೌದ್ಧತತ್ವಗಳಿಗೆ ಅನುಸಾರವಾಗಿ ಬದುಕುತ್ತಿದ್ದಾರೆ. ಅನಕ್ಷರಸ್ಥ ಮಹಿಳೆಯರು ಶೇ.80ರಷ್ಟಿದ್ದಾರೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 10 | ಜಾತಿ ಎಂಬುದು ಮನುಷ್ಯನ ಚೈತನ್ಯವನ್ನು ಕಟ್ಟಿಹಾಕುವ ಕೆಡುಕು

ಎರಣಗಾಂವ್ ತೆಹಸಿಲ್‍ನಲ್ಲಿರುವ ಸಾವ್ನರ್ ಹಳ್ಳಿಯಲ್ಲಿ ನಡೆದ ಕೊಲೆಯ ಸುದ್ದಿ ನಮಗೆ ತಿಳಿದಾಗ ನಾವು ಅಲ್ಲಿಗೆ ಹೋಗಲು ತೀರ್ಮಾನಿಸಿದೆವು. ತಾರಾಬಾಯಿ ಮೇಶ್ರಾಮ್, ಸರೋಜ್ ಕಾಪರ್ಡೆ ಮತ್ತು ನಾಲ್ಕೈದು ಮಹಿಳೆಯರು ಜೊತೆಯಲ್ಲಿ ಬಂದರು. ಕೆಲವರಿಗೆ ಆರು ತಿಂಗಳ ಹಸುಳೆಗಳಿದ್ದರೆ, ಕೆಲವರು ಎರಡು ತಿಂಗಳ ಶಿಶುಗಳನ್ನೂ ಎತ್ತಿಕೊಂಡು ಬಂದಿದ್ದರು. ಅಮವಾಸ್ಯೆಯ ರಾತ್ರಿಯಲ್ಲಿ ನದಿಯನ್ನು ದಾಟಿಕೊಂಡು ಕೊಲೆಯಾದವರ ಕುಟುಂಬದವರನ್ನು ನೋಡಲು ಹೋದೆವು. ರಾತ್ರಿ ಇಡೀ ಅಲ್ಲೆ ಕಳೆದೆವು. ಅಲ್ಲಿ ನಮಗೆ ಕೊಲೆಯಾದವರು ರಾಮ್‍ದಾಸ್ ನಾರ್ನವರ್ ಎಂಬುದು ತಿಳಿಯಿತು.

ರಾಮಾದಾಸ್ ನಾರ್ನವರ್ ಅಂಬೇಡ್ಕರ್ ಚಳವಳಿಯ ಉತ್ಸಾಹಿ ಯುವ ಕಾರ್ಯಕರ್ತನಾಗಿದ್ದ. ಅವನಿಗೆ ಅಚ್ಚುಕಟ್ಟಾದ ಮನೆಯ ಜೊತೆಗೆ ವ್ಯವಸಾಯದಿಂದ ಉತ್ತಮ ಆದಾಯವೂ ಇತ್ತು. ಅವನ ಬಗ್ಗೆ ಕಣ್ಣಿಟ್ಟಿದ್ದ ಹದಿನೈದರಿಂದ ಇಪ್ಪತ್ತು ಜನ ಹಿಂದೂಗಳು ಸೇರಿಕೊಂಡು ಒಂದು ದಿವಸ  ಅಚಾನಕ್ಕಾಗಿ ಅವನ ಮೇಲೆ ಆಕ್ರಮಣ ಮಾಡಿದರು. ಮೊದಲು ಅವನ ಕೈ-ಕಾಲುಗಳನ್ನು ಕಟ್ಟಿಹಾಕಿ, ಕಣ್ಣುಗಳನ್ನು ಕಿತ್ತುಹಾಕಿ, ಕಿವಿ-ಮೂಗುಗಳನ್ನು ಕತ್ತರಿಸಿದರು. ಥಳಿಸಿದ್ದರಿಂದ ಹಾಗೂ ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತನಾದ. ಘಟನೆ ಜರುಗಿ ಎಂಟು ದಿನಗಳಾದ ಮೇಲೆ ಸುದ್ದಿ ತಿಳಿದ ನಾವು ಅಲ್ಲಿಗೆ ಹೋಗಿದ್ದೆವು. ಪೊಲೀಸರು ನಮ್ಮ ಮೇಲೆ ನಿಗಾ ಇಟ್ಟಿದ್ದರು. ಅಲ್ಲಿಗೆ ಹೋಗದಂತೆ ತಡೆಯಲು ಪ್ರಯತ್ನಿಸಿದರು. ಆದರೆ ನಾವು ಹೆದರಲಿಲ್ಲ. ಮನೆಯ ಹೊರಗಡೆ ಸಭೆಯನ್ನು ನಡೆಸದಂತೆ ತಡೆದರು. ಆನಂತರ ಪೋಲಾ ಹಬ್ಬದ2 ದಿವಸ ಸಭೆಯನ್ನು ನಡೆಸಿದೆವು.

ಐವತ್ತರಿಂದ ಅರವತ್ತರಷ್ಟು ಜನ ಸಭೆಯಲ್ಲಿ ಭಾಗವಹಿಸಿದರು. ಜನ ಭೀತರಾಗಿದ್ದರು. ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಆರ್.ಎಸ್.ಗವಯಿ ಮತ್ತು ಗಾನರ್ ಅವರು ಪ್ರಕರಣವನ್ನು ಬೆಳಕಿಗೆ ತಂದರು. ಆಕ್ರಮಣಕಾರರನ್ನು ಶಿಕ್ಷಿಸಲಾಯಿತು. ಆದರೆ ಸತ್ತವನನ್ನು ವಾಪಸ್ಸು ತರಲು ಯಾರಿಗೂ ಸಾಧ್ಯವಾಗಲಿಲ್ಲ.

ಭೂಹೀನರ ಸತ್ಯಾಗ್ರಹವು 1962ರಲ್ಲಿ ನಡೆದಾಗ ನನ್ನನ್ನು ಬಂಧಿಸಿ ನಾಗಪುರ ಸೆಂಟ್ರಲ್ ಜೈಲಿನಲ್ಲಿ ಹದಿನೈದು ದಿನಗಳ ಕಾಲ ಇರಿಸಿದರು. ನಮ್ಮನ್ನು ರಾಜಕೀಯ ಕೈದಿಗಳೆಂದು ಪರಿಗಣಿಸಿದರು. ಜೈಲಿನಲ್ಲಿ ನಮ್ಮನ್ನು ಬಹಳ ಕೆಟ್ಟದಾಗಿ ನೋಡಿಕೊಂಡರು. ಊಟವಂತೂ ಭಯಂಕರವಾಗಿತ್ತು.

ದಮಯಂತಿಬಾಯಿ ಡೋಂಗ್ರೆ, ತಾರಾಬಾಯಿ ಮೇಶ್ರಾಮ್, ಪ್ರಮಿಳಾ ಕಸ್ಬೆ, ಸುಭದ್ರಬಾಯಿ ಮೇಶ್ರಾಮ್, ಶಾಂತಾಬಾಯಿ ಸರೋದೆ ಮತ್ತು ಇನ್ನೂ ನೂರಾರು ಬೌದ್ಧ ಮಹಿಳೆಯರು ಇಂದೋರ ಸ್ಲಂನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಮಾಡಿದೆವು. ಈ ಮಹಿಳೆಯರೊಂದಿಗೆ ನಾನು, ಭೀಮಾಬಾಯಿ ಶೆಂದೆ, ಚಂದ್ರಕಾಂತ ದಹಿವಾಲೆ ಇದ್ದೆವು. ಎಂಟು ದಿನಗಳ ಕಾಲ ನಮ್ಮನ್ನು ಜೈಲಿನಲ್ಲಿಡಲಾಯಿತು. ಜೈಲಿನಲ್ಲಿ ಸರಿಯಾದ ಊಟವನ್ನು ನೀಡಲಿಲ್ಲ. ವಾರ್ಡನ್ ನಮ್ಮೊಂದಿಗೆ ಅಹಂಕಾರದಿಂದ ವರ್ತಿಸಿದರು. ನಮಗೆ ಕೊಡಬೇಕಾಗಿದ್ದ ಸೋಪು ಮತ್ತು ಕೂದಲೆಣ್ಣೆಯನ್ನೂ ನೀಡಲಿಲ್ಲ.

ಸಂಯುಕ್ತ ಮಹಾರಾಷ್ಟ್ರಕ್ಕಾಗಿ ನಡೆದ ಹೋರಾಟದ ಸಂದರ್ಭದಲ್ಲಿ ನಾವು ದಾದಾಸಾಹೇಬ್ ಗಾಯಕ್ವಾಡ್ ಅವರೊಂದಿಗೆ ಮೆರವಣಿಗೆ ನಡೆಸಿದೆವು. ಸತ್ಯಾಗ್ರಹ, ಸಭೆ ಮತ್ತು ಪ್ರತಿಭಟನೆಗಳಲ್ಲಿ ನಾವು ಯಾವಾಗಲೂ ಪಾಲ್ಗೊಳ್ಳುತ್ತಿದ್ದೆವು.

ಮರಾಠ್‍ವಾಡ ವಿಶ್ವವಿದ್ಯಾಲಯದ ಮರುನಾಮಕರಣಕ್ಕಾಗಿ ಒತ್ತಾಯಿಸಿ ಜೋಗೆಂದರ್ ಕಾವಡೆಯವರೊಂದಿಗೆ 1977-78ರಲ್ಲಿ ನಾವು ಏಳೆಂಟು ಮಹಿಳೆಯರು ಭಂಡಾರಾದ ಜವಹರ್ ನಗರಕ್ಕೆ ಹೋಗಿದ್ದೆವು. ಪ್ರಕಾಶ್ ಅಂಬೇಡ್ಕರ್ ಅವರು 1980ರಲ್ಲಿ ನಾಗಪುರಕ್ಕೆ ಬಂದಿದ್ದರು. ಭಾರತೀಯ ಬೌದ್ಧ ಪರಿಷತ್‌ (ಇಂಡಿಯನ್ ಬುದ್ಧಿಸ್ಟ್ ಕೌನ್ಸಿಲ್) ಅಧ್ಯಕ್ಷರಾದ ಮೀರಾತಾಯಿ ಅಂಬೇಡ್ಕರ್ ಅವರು ಜೊತೆಯಲ್ಲಿ ಬಂದಿದ್ದರು. ಆ ಸಂದರ್ಭದಲ್ಲಿ ಮೀರಾತಾಯಿಯವರು ಅತ್ಯಂತ ಸ್ಪೂರ್ತಿದಾಯಕವಾದ, ಅರಿವು ಮೂಡಿಸುವಂತಹ ಭಾಷಣವನ್ನು ಮಾಡಿದರು.

ಈಗಲೂ ಸಹ ಎಲ್ಲೇ ಆಗಲಿ ಬೌದ್ಧ ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ನಾವು ಕೂಡಲೇ ಅಲ್ಲಿಗೆ ಹೋಗುತ್ತೇವೆ, ಹಿಂಸೆಗೆ ಒಳಗಾದವರಿಗೆ ಸಮಾಧಾನ ಮಾಡಿ ಧೈರ್ಯ ತುಂಬುತ್ತೇವೆ, ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡುತ್ತೇವೆ.

ಸತ್ಯಶೋಧಕ್ ಜಲ್ಸಾಗಳ ಕಾಲದಿಂದಲೂ ನಾನು ಚಳವಳಿಯಲ್ಲಿದ್ದೇನೆ. ಮುಂದೆ ನಾನು ಬಾಬಾರವರ ಚಳವಳಿಗೆ ನನ್ನ ಜೀವನವನ್ನು ಮುಡಿಪಾಗಿಟ್ಟೆ. ಮರಾಠವಾಡ ವಿಶ್ವವಿದ್ಯಾಲಯದ ಮರುನಾಮಕರಣದ ಹೋರಾಟದಲ್ಲಿ ರೂಪ್‍ಕಾಂತ್ ಬಾಯಿ ದಹಿವಾಲೆ, ವಿಮಲ ರಾಮ್‍ಟೆಕೆ ಹಾಗೂ ಇತರ ಮಹಿಳೆಯರೊಂದಿಗೆ ಪಾಲ್ಗೊಂಡಿದ್ದೆ.

ನಾನು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾಗ ನನ್ನ ಗಂಡನ ಬೆಂಬಲ ಮತ್ತು ಸಮುದಾಯದ ಪ್ರೋತ್ಸಾಹ ನನಗಿತ್ತು. ಸ್ವತಃ ನನಗೆ ಜ್ಞಾನ ದಾಹದ ಜೊತೆಗೆ ಬಾಬಾರವರ ಕಾರ್ಯಗಳು ಇಷ್ಟವಾಗುತ್ತಿತ್ತು. ಹಾಗಾಗಿ ನಾನು ಚಳವಳಿಯಲ್ಲಿ ಕೆಲಸ ಮಾಡಿದೆ. ನನ್ನ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರೂ ಸಹ ಚಳವಳಿಯಲ್ಲಿ ಕೆಲಸ ಮಾಡಬೇಕೆಂದು ನಾನು ಭಾವಿಸುತ್ತೇನೆ.

ಈ ಲೇಖನ ಓದಿದ್ದೀರಾ?: ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 6 | ಯಾವುದೇ ಒಂದು ವರ್ಗ ಮತ್ತೊಂದು ವರ್ಗವನ್ನು ಆಳಲು ಯೋಗ್ಯವಲ್ಲ

ಕೊನೆ ಟಿಪ್ಪಣಿಗಳು

1. ಸತ್ಯಶೋಧಕ ಎಂಬ ಪದವು ಹತ್ತೊಂಬತ್ತನೇ ಶತಮಾನದ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆಯವರಿಗೆ ಸಂಬಂಧಿಸಿದೆ. ಅವರು ಸಮಾಜದಲ್ಲಿದ್ದ ಬ್ರಾಹ್ಮಣ್ಯದ ದಬ್ಬಾಳಿಕೆಯನ್ನು ಕಟುವಾಗಿ ಟೀಕಿಸಿದರು. ಅವರು ತಮ್ಮ ಹೆಂಡತಿ ಸಾವಿತ್ರಿಬಾ ಅವರೊಂದಿಗೆ ಸೇರಿ ಪುಣೆಯಲ್ಲಿ ಕೆಳಜಾತಿಯ ಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ಸ್ಥಾಪಿಸಿದ ಮೊದಲಿಗರು.

2. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದ ಬಹು ಮುಖ್ಯ ಹಬ್ಬ. ಮುಂಗಾರು ಮಾಸದ ಶ್ರಾವಣದ ಮೊದಲ ದಿನ ಹಬ್ಬವನ್ನು ಆಚರಿಸಲಾಗುತ್ತದೆ. ಜಾನುವಾರುಗಳನ್ನು ವಿಶೇಷವಾಗಿ ಎತ್ತುಗಳನ್ನು ಅಂದು ವಿಶೇಷ ಆಹಾರ, ಹಾರ ಮತ್ತು ಬಣ್ಣಗಳಿಂದ ಗೌರವಿಸಲಾಗುತ್ತದೆ.

ಪುಸ್ತಕ: ನಾವೂ ಇತಿಹಾಸ ಕಟ್ಟಿದೆವು - ಅಂಬೇಡ್ಕರ್ ಚಳವಳಿಯಲ್ಲಿ ಮಹಿಳೆಯರು | ಮರಾಠಿ ಮೂಲ: ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್ | ಇಂಗ್ಲಿಷ್‌ಗೆ: ವಂದನಾ ಸೋನಾಲ್ಕರ್ | ಕನ್ನಡಕ್ಕೆ: ದು ಸರಸ್ವತಿ | ಪ್ರಕಟಣೆ: ಕವಿ ಪ್ರಕಾಶನ, ಕವಲಕ್ಕಿ | ಪುಟಗಳು: 438 | ಬೆಲೆ: ₹450 | ಸಂಪರ್ಕ ಸಂಖ್ಯೆ: 9480286844 (ಬಸವರಾಜ ಸೂಳಿಬಾವಿ)

ನಿಮಗೆ ಏನು ಅನ್ನಿಸ್ತು?
0 ವೋಟ್
eedina app