ನ್ಯಾಯಮೂರ್ತಿ ಕೆ ಚಂದ್ರು ಅವರ 'ನನ್ನ ದೂರು ಕೇಳಿ' ಪುಸ್ತಕದ ಆಯ್ದ ಭಾಗ | ಪೊದುಂಬು ಹುಡುಗಿಯರು

Justice K Chandhru

ಮಹಿಳಾ ಸಮಾನತೆ, ಸ್ವಾತಂತ್ರ್ಯ ಪ್ರತಿಪಾದಿಸುವ ನ್ಯಾಯ ವ್ಯವಸ್ಥೆ ನಮ್ಮದು. ಆದರೆ, ಅದಕ್ಕಾಗಿ ಮಹಿಳೆಯರು ನ್ಯಾಯಾಲಯದ ಮೊರೆಹೋದಾಗ, ಅವರು ಬಯಸಿದ ನ್ಯಾಯ ದೊರಕುತ್ತದೆಯೇ? ಈ ಸಂಗತಿಗಳನ್ನು ಒಳಗೊಂಡ, ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು ಅವರ 'Listen to My Case' ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ ಭಾರತಿದೇವಿ ಪಿ ಮತ್ತು ಸತೀಶ್ ಜಿ ಟಿ

ತಮ್ಮ ಸಾಧನೆಗಳಲ್ಲಿ ಅತಿ ಮಹತ್ವದ್ದು ಯಾವುದು ಎಂದು ಭಾರತದ ಮೊದಲ ಪ್ರಧಾನ ಮಂತ್ರಿಯಾದ ಪಂಡಿತ್ ಜವಹರಲಾಲ್ ನೆಹರು ಅವರನ್ನು ಕೇಳಿದಾಗ ಅವರು, ಮಹಿಳೆಯರಿಗೆ ಶಿಕ್ಷಣ ಎಂದು ಹೇಳಿದ್ದರು. ಮಹಿಳೆಯರು ಶಿಕ್ಷಿತರಾದಾಗ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ನಂಬಿದ ರಾಷ್ಟ್ರನಾಯಕರಲ್ಲಿ ಅವರೂ ಒಬ್ಬರು. ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಅನೇಕ ಮಹಿಳೆಯರನ್ನು ನೋಡುತ್ತಿದ್ದೇವೆ ಮತ್ತು ಮಹಿಳೆಯರು ಪುರುಷರಿಗಿಂತಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹೀಗಿರುವಾಗ, 2011ರಲ್ಲಿ ತಮಿಳುನಾಡಿನ ಮದುರೈ ಸಮೀಪದಲ್ಲಿರುವ ಪೊದುಂಬು
ಎನ್ನುವ ಹಳ್ಳಿಯ ಜನ, ಹೆಣ್ಣುಮಕ್ಕಳನ್ನು ಇನ್ನು ಮೇಲೆ ಶಾಲೆಗೆ ಕಳಿಸುವುದಿಲ್ಲ ಎಂದದ್ದು ಆಘಾತ ಹುಟ್ಟಿಸುವ ಸಂಗತಿಯಾಗಿತ್ತು. ಇದಕ್ಕೆ ಅವರು ನೀಡಿದ ಕಾರಣ ಇನ್ನೂ ಆಘಾತ ಉಂಟುಮಾಡುವಂಥದ್ದು. ಇದಕ್ಕೆ ಪೊದುಂಬು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಮೃಗೀಯ ವರ್ತನೆ ಕಾರಣವಾಗಿತ್ತು. ಆತ ಈ ಶಾಲೆಯಲ್ಲಿ ಮೂರು ವರ್ಷಗಳಿಂದ ತನ್ನ ರಕ್ಷಣೆಯಲ್ಲಿದ್ದ ನೂರಕ್ಕೂ ಹೆಚ್ಚು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಪುಟ್ಟ ಹುಡುಗಿಯರು ತಮಗಾದ ಭಯಾನಕ ಅನುಭವವನ್ನು ತಂದೆ-ತಾಯಂದಿರ ಬಳಿ ಹೇಳಲು ತೊಡಗಿದಾಗ ಇಡೀ ಹಳ್ಳಿಯೇ ನಡುಗಿಹೋಗಿತ್ತು. ಅವರು ಪ್ರತಿಭಟನೆಯನ್ನು ಆರಂಭಿಸಿದರು.

ಈ ವಿಚಾರ ತಿಳಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ (ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಶನ್) ಅಧ್ಯಕ್ಷರಾದ ಬೃಂದಾ ಕಾರಟ್ ಅವರು ನೇರ ವಿಚಾರಣೆ ನಡೆಸಿ, ನಡೆದದ್ದು ಸತ್ಯವೆಂಬುದನ್ನು ಮನಗಂಡರು. ಜನವಾದಿ ಸಂಘಟನೆಯ ಮದುರೈ ಗ್ರಾಮಾಂತರ ಜಿಲ್ಲೆಯ ಕಾರ್ಯದರ್ಶಿ ಪೊನ್ನುತಾಯಿ ಮತ್ತು ದೌರ್ಜನ್ಯಕ್ಕೊಳಗಾದ ಮಕ್ಕಳ ಪೋಷಕರು ಸೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಆ ಮುಖ್ಯ ಶಿಕ್ಷಕರ ಸಂಬಂಧಿಕರೊಬ್ಬರು ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇತರ ಸಂಬಂಧಿಗಳು ಸಮೀಪದ ಶಾಲೆಗಳಲ್ಲಿ ಶಿಕ್ಷಕರಾಗಿದ್ದರು. ಇವರು ದೂರುದಾರರಿಗೆ ಬೆದರಿಕೆ ಹಾಕಿದರು ಮತ್ತು ನೊಂದ ವಿದ್ಯಾರ್ಥಿಗಳ ಮೇಲೆ ಹರಿಹಾಯ್ದರು. ಮದುರೈ ಮೂಲದ ವಕೀಲರಾದ ಯು ನಿರ್ಮಲಾ ರಾಣಿಯವರ ನೇತೃತ್ವದ ಸತ್ಯಶೋಧನಾ ಸಮಿತಿ, ನಂತರದಲ್ಲಿ ಹಳ್ಳಿಗೆ ಹೋಯಿತು. ದೌರ್ಜನ್ಯ ಅನುಭವಿಸಿದ್ದ ಕೆಲ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮುಗಿಸಿದ್ದರು. ಕೆಲವರದು ಮದುವೆ ಆಗಿತ್ತು. ಇನ್ನು ಕೆಲವರು ತಾವು ನಿಜ ಹೇಳಿದರೆ ತೊಂದರೆಯಾಗಬಹುದು ಎಂದು ಭಯಭೀತರಾಗಿದ್ದರು. ಸತ್ಯಶೋಧನಾ ಸಮಿತಿ ತನ್ನಿಂದಾದ ಪ್ರಯತ್ನ ಮಾಡಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ವಿಚಾರಣೆ ನಡೆಸಿತು. ಮುಖ್ಯ ಶಿಕ್ಷಕ ನಡೆಸಿದ ಭಯಾನಕ ಕೃತ್ಯಗಳನ್ನು ಮೊತ್ತಮೊದಲಿಗೆ ಬೆಳಕಿಗೆ ತಂದದ್ದು ಈ ಸತ್ಯಶೋಧನಾ ಸಮಿತಿಯ ವರದಿ. ಮಕ್ಕಳ ಮೇಲಾದ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಯನ್ನು ಇದು ಪಟ್ಟಿ ಮಾಡಿತು. ಅವನು ಹುಶಾರು ತಪ್ಪಿದ್ದ ಮಕ್ಕಳನ್ನು ಅವರು ಬೇಗ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತೇನೆಂದು ರೂಮಿನ ಬಳಿ ಬರಹೇಳಿ, ಎದೆಯ ಬಳಿ ಶಿಲುಬೆಯ ಗುರುತು ಮೂಡಿಸುವ ನೆಪದಲ್ಲಿ ಎದೆಯನ್ನು ಮುಟ್ಟುತ್ತಿದ್ದ. ಮಕ್ಕಳನ್ನು ಖಾಸಗಿಯಾಗಿ ಕರೆಸಿ ಅಪ್ಪಿಕೊಳ್ಳುತ್ತಿದ್ದ. ಏನನ್ನೋ ಹುಡುಕುವ ನೆಪದಲ್ಲಿ ಅವರ ಬಟ್ಟೆಯೊಳಕ್ಕೆ ಕೈ ಹಾಕುತ್ತಿದ್ದ. ಅಷ್ಟೇ ಅಲ್ಲದೆ, ಕೆಲವು ಮಕ್ಕಳ ಬಳಿ ಇವನು ತನ್ನ ಶಿಶ್ನವನ್ನು ಹಿಡಿದುಕೊಳ್ಳಲು ಹೇಳುತ್ತಿದ್ದ. ಸಣ್ಣ ಮಕ್ಕಳನ್ನು ತನ್ನ ಮಡಿಲ ಮೇಲೆ ಕುಳಿತುಕೊಳ್ಳುವಂತೆ ಹೇಳಿ, ಹೇಳಲಾಗದ ಬಗೆಯಲ್ಲಿ ವರ್ತಿಸುತ್ತಿದ್ದ. ಮಕ್ಕಳನ್ನು ನೆಲ ಗುಡಿಸುವಂತೆ ತಿಳಿಸಿ, ಅವರು ಬಗ್ಗಿದಾಗಿನ ಚಿತ್ರ ತೆಗೆಯುತ್ತಿದ್ದ. ಈ ಹೇಯ ಕೃತ್ಯಗಳನ್ನು ಪಟ್ಟಿ ಮಾಡಲೂ ಅಸಹ್ಯವೆನಿಸುತ್ತದೆ.

ದೌರ್ಜನ್ಯಕ್ಕೊಳಗಾದ ಒಬ್ಬ ಹುಡುಗಿಯ ತಂದೆ ವೀರಾಸ್ವಾಮಿ, ಮದರಾಸು ಉಚ್ಚ ನ್ಯಾಯಾಲಯದ ಮದುರೈ ಬೆಂಚಿನಲ್ಲಿ ಪ್ರಕರಣವನ್ನು ದಾಖಲಿಸಿದರು. ನಿರಂತರವಾಗಿ ನಡೆದುಕೊಂಡು ಬಂದಿರುವ ಈ ಲೈಂಗಿಕ ದೌರ್ಜನ್ಯದ ಬಗ್ಗೆ ವಿಚಾರಣೆ ನಡೆಸಲು ಮತ್ತು ತನ್ನ ಮಗಳಿಗೆ ಸೂಕ್ತ ಪರಿಹಾರ ನೀಡಲು ವಿಶೇಷ ವಿಚಾರಣಾ ಸಮಿತಿ ರಚಿಸಬೇಕೆಂದು ಇವರು ಕೇಳಿಕೊಂಡರು. ಈ ವಿಚಾರದಲ್ಲಿ ಜನವಾದಿ ಮಹಿಳಾ ಸಂಘಟನೆ ಕೂಡ ದಾವೆ ಹಾಕಿ ಕಕ್ಷಿದಾರನ ಪಾತ್ರ ವಹಿಸಿತು.

AV Eye Hospital ad

ಮೊದಲನೆಯ ಹೆಜ್ಜೆಯಾಗಿ ನ್ಯಾಯಾಲಯ, ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯ ಅಡಿಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಇದರಲ್ಲಿ ಒಳಗೊಳ್ಳಬೇಕು ಮತ್ತು ಈ ಕುರಿತು ವರದಿ ನೀಡಬೇಕು ಎಂದು ಆದೇಶಿಸಿತು. ಯು ನಿರ್ಮಲಾ ರಾಣಿ ನೇತೃತ್ವದ ಸತ್ಯಶೋಧನಾ ಸಮಿತಿ ನೀಡಿದ ವರದಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ವರದಿ ದೃಢೀಕರಿಸಿತು. ಈ ವಿಚಾರಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ವಿಚಾರಣೆ ನಡೆಸಿ ಸಲ್ಲಿಸಿದ ದಾಖಲೆಯನ್ನು ಪರಿಶೀಲಿಸಿದ ನ್ಯಾಯಾಲಯ, ಪೊಲೀಸರ ಕರ್ತವ್ಯಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.

ಮದುರೈ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ನ್ಯಾಯಾಲಯ ಖುದ್ದಾಗಿ ಹಾಜರಾಗಲು ಆದೇಶಿಸಿತು. ಅದರಂತೆಯೇ, ಪೊಲೀಸ್ ಅಧೀಕ್ಷಕರಾದ ಅಸ್ರಾ ಗರ್ಗ್ ನ್ಯಾಯಾಲಯದ ಮುಂದೆ ಹಾಜರಾದರು. ಈ ಮಧ್ಯೆ, ಶಿಕ್ಷಣ ಇಲಾಖೆಯು ಮುಖ್ಯ ಶಿಕ್ಷಕರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತು. ಪೊಲೀಸರು ಅವರನ್ನು ಬಂಧಿಸಿದರು. ಆದರೆ, ಜಾಮೀನು ನೀಡುವುದಕ್ಕೆ ಯಾರೂ ತೀವ್ರ ವಿರೋಧ ವ್ಯಕ್ತಪಡಿಸದ ಕಾರಣ ಇವರು ಹೊರಗೆ ಬಂದರು. ಇವರಿಗೆ ನೆರವಾದ ಸಂಬಂಧಿ ಮತ್ತು ಸ್ನೇಹಿತನನ್ನು ದೂರದ ಶಾಲೆಗಳಿಗೆ ವರ್ಗಾವಣೆ ಮಾಡಲಾಯಿತು.

ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳೇ ಬಹುಪಾಲು ದೌರ್ಜನ್ಯಕ್ಕೆ ಒಳಗಾಗಿರುವುದನ್ನು ನ್ಯಾಯಾಲಯ ಗುರುತಿಸಿತು. ಈ ಸಂಗತಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ, 1989ರ ಅಡಿಯಲ್ಲಿ ದಾಖಲಿಸಲು ಆದೇಶಿಸಿತು. ಜೊತೆಗೆ, ತನಿಖೆಗೆ ಸಹಾಯಕ ಅಧೀಕ್ಷಕ ಶ್ರೇಣಿಯ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಬೇಕು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲೇ ವಿಚಾರಣೆ ನಡೆಯಬೇಕು ಎಂದೂ ಹೇಳಿತು.

* * *

ನ್ಯಾಯಾಲಯ ಹೀಳಿದ್ದಿಷ್ಟು:

ಈ ಪ್ರಕರಣದಲ್ಲಿ ಈಗಾಗಲೇ ಗೊತ್ತಾಗಿರುವಂತೆ ಪರಿಶಿಷ್ಟ ಜಾತಿಗೆ ಸೇರಿದ ಹಲವು ಮಕ್ಕಳು ಶಾಲೆಯ ಮುಖ್ಯ ಶಿಕ್ಷಕರಿಂದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ನೀಡಿರುವ ದೂರು ಸಾಬೀತಾದರೆ, ಪ.ಜಾ ಮತ್ತು ಪ.ಪಂ ದೌರ್ಜನ್ಯ ತಡೆ ಕಾಯ್ದೆ 1989ರ ಪ್ರಕಾರ ಸೆಕ್ಷನ್ 3(1)(9) ಮತ್ತು (12)ರ ಅನ್ವಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಪೊಲೀಸ್ ಉಪ ಅಧೀಕ್ಷಕರ ಶ್ರೇಣಿಗಿಂತ ಕೆಳಗಿನ ಅಧಿಕಾರಿ ತನಿಖೆ ನಡೆಸುವಂತಿಲ್ಲ. ಹಾಗಾಗಿ, ಪ್ರಕರಣದಲ್ಲಿ ಪೊಲೀಸ್ ಉಪ ಅಧೀಕ್ಷಕರ ಶ್ರೇಣಿಗಿಂತ ಕೆಳಗಿರದ ಮಹಿಳಾ ಅಧಿಕಾರಿ ನೇಮಕ ಆಗಬೇಕು.

ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಅವರು ತಮ್ಮ ಹೇಳಿಕೆಯನ್ನು ದಾಖಲಿಸುವಾಗ ಭಯಭೀತರಾಗದಂತೆ ರಕ್ಷಣೆ ನೀಡಬೇಕು ಮತ್ತು ಅವರ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು.

ಹೆಣ್ಣುಮಕ್ಕಳಿಗೆ ಆಪ್ತಸಮಾಲೋಚನೆ ಒದಗಿಸಬೇಕು ಮತ್ತು ಪರಿಶಿಷ್ಟ ಜಾತಿಯವರಾಗಿರಲಿ - ಅಲ್ಲದೆ ಇರಲಿ, ದೌರ್ಜನ್ಯಕ್ಕೊಳಗಾದವರಿಗೆ ಜಿಲ್ಲಾಧಿಕಾರಿಯವರು ವಿಚಾರಣೆ ಮುಗಿಯುವವರೆಗೂ ಕಾಯದೆ, ತಲಾ 1,20,000 ರೂಪಾಯಿ ಮೊತ್ತವನ್ನು ಪರಿಹಾರವಾಗಿ ನೀಡಬೇಕು.

ಪ್ರಕರಣ ದಾಖಲಾಗುತ್ತಿದ್ದಂತೆ, ವಿಶೇಷ ನ್ಯಾಯಾಲಯ ಈ ಪ್ರಕರಣದ ಸ್ವರೂಪವನ್ನರಿತು, ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಹೆಣ್ಣುಮಕ್ಕಳ ಸಾಕ್ಷಿಯನ್ನು ದಾಖಲು ಮಾಡುವಾಗ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಶಿಕ್ಷಕರನ್ನು ದೂರದ ಶಾಲೆಗಳಿಗೆ ವರ್ಗಾವಣೆ ಮಾಡಬೇಕು ಮತ್ತು ಯಾವುದೇ ಸಂದರ್ಭದಲ್ಲೂ ಅವರು ಮತ್ತೆ ಪೊದುಂಬು ಶಾಲೆಗೆ ಮತ್ತೆ ಬರಬಾರದು.

(ಎಲ್ಲೆಡೆ ವ್ಯಾಪಕವಾಗಿರುವ ಮಕ್ಕಳ ಮೇಲಣ ದೌರ್ಜನ್ಯದ ಕುರಿತು ಮಾತನಾಡಿದ ನ್ಯಾಯಾಲಯ) ಇವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದಿತು.)

ಯು ನಿರ್ಮಲಾ ಅವರ ಸತ್ಯಶೋಧನಾ ಸಮಿತಿ ನೀಡಿದ ವರದಿ, ಮಕ್ಕಳ ಕಲ್ಯಾಣ ಸಮಿತಿಯ ವರದಿ ಮತ್ತು ವಿಚಾರಣಾ ಅಧಿಕಾರಿಯ ಎದುರು ಮಕ್ಕಳು ಮತ್ತು ಪೋಷಕರು ನೀಡಿರುವ ಹೇಳಿಕೆಗಳ ಆಧಾರದಲ್ಲಿ ಮದುರೈನ ಜಿಲ್ಲಾಧಿಕಾರಿಯು ತೊಂದರೆಗೊಳಗಾದ ಮಕ್ಕಳ ವಿವರಗಳನ್ನು ವರದಿ ಮಾಡಬೇಕು.

ಈ ಪುಸ್ತಕ ಓದಿದ್ದೀರಾ?: ಹೊಸ ಓದು | ರಮೇಶ್ ಅರೋಲಿ ಅವರ 'ಮಧುಬಾಲ' ಪುಸ್ತಕದ ಆಯ್ದ ಭಾಗ

ತೀರ್ಪಿನ ಬಳಿಕವೂ ವಿಚಾರಣೆ ಮುಂದುವರಿಯಿತು. ದೂರು ನೀಡಿದ 24 ಮಂದಿ ವಿದ್ಯಾರ್ಥಿನಿಯರಿಗೆ ಮೊದಲ ಹಂತದಲ್ಲಿ ಒಟ್ಟು 28.80 ಲಕ್ಷ ರೂಪಾಯಿ ಮೊತ್ತವನ್ನು ಪರಿಹಾರವಾಗಿ ಕೊಡಲಾಯಿತು. ಹೀಗಿದ್ದರೂ ಕೆಲವು ವಿದ್ಯಾರ್ಥಿನಿಯರು ತಾವು ಗುರುತಿಸಲ್ಪಟ್ಟರೆ ಕೆಟ್ಟ ಹೆಸರು ಬರುತ್ತದೆ ಎಂದು ಹೆದರಿ ದೂರು ಕೊಡಲು ಮುಂದೆ ಬರಲಿಲ್ಲ.

ಆಗ ನ್ಯಾಯಾಲಯ ಹೀಗೆ ಆದೇಶಿಸಿತು:

ದೂರು ಕೊಡಲು ಮುಂದೆ ಬರದಿರುವ ಇನ್ನೂ ಹಲವು ಮಕ್ಕಳಿರಬಹುದು. ಅಂತಹ ಸಂದರ್ಭದಲ್ಲಿ, ನೇರವಾಗಿ ಜಿಲ್ಲಾಧಿಕಾರಿಗೆ ಯಾವುದೇ ದೂರು ನೀಡಿದರೆ, ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪರಿಹಾರ ನೀಡುವುದಕ್ಕೆ ಅವುಗಳನ್ನೂ ಪರಿಗಣಿಸಬಹುದಾಗಿದೆ. ಮೇಲ್ನೋಟಕ್ಕೆ ನಿಜವೆಂದು ಕಾಣುವ ಪ್ರಕರಣಗಳಲ್ಲಿ ಪರಿಹಾರ ಕೊಡುವುದು ಮಾತ್ರವಲ್ಲ, ಅವುಗಳನ್ನು ವಿಚಾರಣಾಧಿಕಾರಿಯಿಂದ ಹೆಚ್ಚಿನ ವಿಚಾರಣೆಗೆ ಜಿಲ್ಲಾಧಿಕಾರಿ ಶಿಫಾರಸು
ಮಾಡಬೇಕು.

ತಡವಾಗಿ ಮಕ್ಕಳು ದೂರು ನೀಡಲು ಬಂದರೂ, ಪರಿಶೀಲನೆಯ ಬಳಿಕ ಅವರಿಗೆ ಪರಿಹಾರ ನೀಡಬೇಕು.

* * *

ಸರ್ಕಾರ ಒಟ್ಟು 66 ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು ಪರಿಹಾರವಾಗಿ ನೀಡಿತು. ತೀರ್ಪಿನ ನಂತರದಲ್ಲಿ ಪೊದುಂಬು ಸರ್ಕಾರಿ ಪ್ರೌಢಶಾಲೆ ಸಹಜ ಸ್ಥಿತಿಗೆ ಮರಳಿತು. ಅಲ್ಲಿಗೆ ಈಗ ಹುಡುಗಿಯರೂ ಓದಲು ಹೋಗುತ್ತಾರೆ. ನೆಹರೂ ಅವರ ಕನಸು ನನಸಾಗಬೇಕು.

ಮಾಹಿತಿಗಾಗಿ: ಎಂ ವೀರಾಸ್ವಾಮಿ ವರ್ಸಸ್ ಸ್ಟೇಟ್ ಆಫ್ ತಮಿಳುನಾಡು, 2012 (3) ಸಿಟಿಸಿ 641

ಪುಸ್ತಕ: ನನ್ನ ದೂರು ಕೇಳಿ | ಲೇಖಕರು: ನ್ಯಾ.ಕೆ ಚಂದ್ರು | ಕನ್ನಡಕ್ಕೆ: ಭಾರತಿದೇವಿ ಪಿ ಮತ್ತು ಸತೀಶ್ ಜಿ ಟಿ | ಬೆಲೆ: ₹ 120 | ಪ್ರಕಾಶನ: ಕ್ರಿಯಾ ಮಾಧ್ಯಮ | ಸಂಪರ್ಕ: +91 98451 72249

ನಿಮಗೆ ಏನು ಅನ್ನಿಸ್ತು?
5 ವೋಟ್
eedina app