ಹೊಸ ಓದು | 'ಪಾರ್ಟಿ' ಕೊಡಿಸಿದ ಪೀಠಾಧಿಪತಿ ಮತ್ತು 1978ರ ಚಿಕ್ಕಮಗಳೂರು ಉಪ ಚುನಾವಣೆ ಗಮ್ಮತ್ತು

ಮಂಡ್ಯ ಜಿಲ್ಲೆಯವರಾದ ಪಿ ರಾಮಯ್ಯ, 'ದಿ ಹಿಂದೂ' ದಿನಪತ್ರಿಕೆಗೆ ಸೇರಿದ್ದು ಟೆಲಿಪ್ರಿಂಟರ್ ಆಪರೇಟರ್ ಆಗಿ. ನಂತರದಲ್ಲಿ ಅದೇ ಪತ್ರಿಕೆಯ ಬೆಂಗಳೂರು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರ ಅಪೂರ್ವ ಅನುಭವಗಳ ಕಥನ 'ನಾನು ಹಿಂದೂ ರಾಮಯ್ಯ' ಕೃತಿ ಇತ್ತೀಚೆಗೆ ಬಿಡುಗಡೆ ಆಗಿದ್ದು, ಪುಸ್ತಕದಿಂದ ಆಯ್ದ ಎರಡು ಸ್ವಾರಸ್ಯಕರ ಅಧ್ಯಾಯ ಇಲ್ಲಿವೆ

ಆಗಲೇ ಮುಸ್ಸಂಜೆ ಸಮೀಪಿಸಿತ್ತು. ಪತ್ರಕರ್ತರಲ್ಲಿ ಕೆಲವರು, "ಇಲ್ಲೇ ಒಬ್ಬ ಸ್ವಾಮಿಗಳಿದ್ದಾರೆ, ವರ್ಣರಂಜಿತ ವ್ಯಕ್ತಿತ್ವ. ನಾವು ಯಾಕೆ ನೋಡಿ ಬರಬಾರದು? ಏನಾದರೂ ಸುದ್ದಿ ಸಿಗಬಹುದು," ಎಂದರು. ಆ ಸ್ವಾಮಿಗಳು ಕರ್ನಾಟಕ ಮಠದ ಪೀಠಾಧ್ಯಕ್ಷರು. ನಾವು ನಗರದ ಪ್ರತಿಷ್ಠಿತ  ಬಡಾವಣೆಯಲ್ಲಿದ್ದ ಬೆಂಗಳೂರು ಶಾಖೆಯ ಮಠದ ಆವರಣ ತಲುಪಿದಾಗ ಜಡಿಮಳೆ ಆರಂಭವಾಯಿತು. ಸ್ವಾಮಿಗಳನ್ನು ಕಂಡು ನಮ್ಮ ನಮನ ಸಲ್ಲಿಸಿ, ಬಂದ ಉದ್ದೇಶ ತಿಳಿಸಿದೆವು. ಸಣ್ಣ ಭಕ್ತ ಸಮೂಹದ ನಡುವೆ ಇದ್ದ ಸ್ವಾಮೀಜಿ, ಅಲ್ಲಿಯೇ ಪಕ್ಕದಲ್ಲಿದ್ದ ತಮ್ಮ ಕೊಠಡಿ ಕಡೆ ಕೈ ಮಾಡಿ, "ಅಲ್ಲಿ ಕೂತಿರಿ, ಭಕ್ತರನ್ನು ಕಳುಹಿಸಿ ಬರುತ್ತೇನೆ," ಎಂದರು.

ಸ್ವಾಮೀಜಿಯವರನ್ನು ಈ ಹಿಂದೆ ಭೇಟಿಯಾಗಿ, ಅವರ ಆತಿಥ್ಯದ ರುಚಿ ಕಂಡಿದ್ದ ಒಬ್ಬಿಬ್ಬರು ಪಾನಪ್ರಿಯ ಪತ್ರಕರ್ತರ ಮುಖದ ಮೇಲೆ ಮಂದಹಾಸ ಮೂಡಿತ್ತು. ಸುಮಾರು 45 ನಿಮಿಷ ಕಳೆದ ನಂತರ ಸ್ವಾಮೀಜಿ ಪ್ರತ್ಯಕ್ಷರಾದರು. ನಮ್ಮಗಳ ಪರಿಚಯ ಮಾಡಿಕೊಂಡು, ಅವರ ಧಾರ್ಮಿಕ ಕಾರ್ಯಗಳು ಮತ್ತು ಅವರ ಧರ್ಮಕ್ಷೇತ್ರದ ಬೆಳವಣಿಗೆಗಳನ್ನು ವಿವರಿಸುತ್ತ ಸುಮಾರು ಒಂದು ತಾಸು ಕಳೆಯಿತು. ನಮ್ಮ ಪತ್ರಕರ್ತ ಸ್ನೇಹಿತರು ನಿರಾಶರಾದಂತೆ ಹೊರಡಲು ಸಿದ್ಧರಾದರು. ಸ್ವಾಮೀಜಿ ಅವರು, "ಕಾಫೀ, ಟೀ, ಮತ್ತೇನಾದರೂ ತಿನಿಸು ಬೇಕೇ?" ಎಂದು ಎದ್ದು ನಿಂತರು. ಪಕ್ಕದಲ್ಲಿದ್ದ ಕಪಾಟಿನ ಕಡೆ ಕೈಚಾಚಿ ಬಾಗಿಲು ತೆರೆದರು. ನಮಗೆ ಸಖೇದಾಶ್ಚರ್ಯ. ಅದರಲ್ಲಿ  ಸಾಲಾಗಿ ಜೋಡಿಸಿದ್ದ ದೇಶೀ-ವಿದೇಶೀ ಕಂಪನಿಗಳ ಮದ್ಯದ ಬಾಟಲಿಗಳು ಕಣ್ಣಿಗೆ ರಾಚಿದವು.

Image

ಕೆಲವು ಪಾನೀಯದ ಬಾಟಲಿಗಳನ್ನು ತೆಗೆದು ನಮ್ಮ ಮುಂದೆ ಇಟ್ಟು ತಾವೂ ಕುಳಿತುಕೊಂಡರು. ಜೊತೆಗೆ ಸ್ವಲ್ಪ ತಿನಿಸುಗಳನ್ನು ತರಿಸಿಟ್ಟರು. "ತೆಗೆದುಕೊಳ್ಳಿ..." ಎಂದು ಅಲ್ಲಿದ್ದವರನ್ನು ಆಹ್ವಾನಿಸಿ, ತಾವು ತಮ್ಮ ಪ್ರಿಯವಾದ ಪಾನೀಯದ ಬಾಟಲಿಗೆ ಕೈ ಹಾಕಿದರು. ಅವರ ಈ ಹವ್ಯಾಸ ನನಗೆ ಗರಬಡಿದಂತಾಯಿತು. ಯಾವ ಮುಜುಗರವೂ ಇಲ್ಲದೆ, ಸ್ವಾಮೀಜಿ ತಮಗೆ ಇಷ್ಟವಾದಷ್ಟು  ಮದ್ಯವನ್ನು ಸೇವಿಸುತ್ತ ಮಾತಿನ ಚಟಾಕಿ ಹಾರಿಸುತ್ತಿದ್ದರು. ಆ ಕ್ಷಣದಲ್ಲಿ ಸ್ವಾಮೀಜಿ ತಮ್ಮ ನಿಜಸ್ವರೂಪ ಏನೆಂದು ನಮಗೆಲ್ಲ ವೇದ್ಯವಾಗುವಂತೆ ನಕ್ಕು ನಲಿದರು. ಪಾನಗೋಷ್ಠಿ ಸುಮಾರು ಎರಡು ಗಂಟೆ ಕಾಲ ಮುಂದುವರಿಯಿತು. ಹೊರಬಂದಾಗ ರಸ್ತೆ ದೀಪಗಳು ಬೆಳಗುತ್ತಿದ್ದವು. ಮಳೆ ಬಂದು ನಿಂತ ನೀರಿನಲ್ಲಿ ಅವುಗಳ ಪ್ರತಿಬಿಂಬ ಹೊಳೆಯುತ್ತಿತ್ತು.

ಇದಾದ ಒಂದೆರಡು ತಿಂಗಳ ನಂತರ, ಆಕಸ್ಮಿಕವೋ ಎಂಬಂತೆ, ಬೆಳ್ಳಂಬೆಳಗ್ಗೆ ಅಂದಿನ ಕಾನೂನು ಮಂತ್ರಿಗಳ ಮನೆಯಲ್ಲಿ ಆ ಸ್ವಾಮೀಜಿಯನ್ನು ಭೇಟಿಯಾದೆ. ಸ್ವಾಮೀಜಿ ಕಾವಿಧಾರಿಯಾಗಿ, ಮೇಲೊಂದು ಶಾಲು ಹೊದ್ದುಕೊಂಡು ಮಂತ್ರಿಗಳ ಭೇಟಿಗಾಗಿ ಬಂದಿದ್ದರು. ನನ್ನನ್ನು ಗುರುತಿಸಿ ಮುಗುಳ್ನಕ್ಕರು. ಅವರ ಜೊತೆಯಲ್ಲಿ ಒಬ್ಬ ಸುಂದರ ಯುವತಿಯೂ ಇದ್ದಳು. ಸ್ವಾಮೀಜಿಯನ್ನು  ಹತ್ತಿರದಿಂದ ಕಂಡಿದ್ದ ಒಂದಿಬ್ಬರು, "ಇವರಾರು ಸ್ವಾಮೀಜಿ?" ಎಂದು ಪ್ರಶ್ನಿಸಿದರು. ಅವರು ಪ್ರಶ್ನಿಸಿದ  ಧಾಟಿ ಕುಚೋದ್ಯವೋ ಎನಿಸಿತು. ಆದರೆ, ಸ್ವಾಮಿಗಳು ಯಾವ ಮುಜುಗರವಿಲ್ಲದೆ, "ಶಿಷ್ಯೆ," ಎಂದು ನಗುತ್ತ ನುಡಿದರು. ಸ್ವಾಮೀಜಿಯ ಜೀವನಶೈಲಿ ಕಂಡಿದ್ದವರು ಮತ್ತು ಮಂತ್ರಿಗಳು ಚಕಿತಗೊಳ್ಳದೆ ಮಂದಹಾಸ ಬೀರಿದರು.

* * *

ಚುನಾವಣೆಯ ನಿಷ್ಪಕ್ಷಪಾತ ವಿಶ್ಲೇಷಣೆ

Image
ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣಾ ಪ್ರಚಾರ

1978ರ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉಪಚುನಾವಣೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಚುನಾವಣೆಯ ಕೇಂದ್ರಬಿಂದು ಆಗಿದ್ದವರು ಇಂದಿರಾ ಗಾಂಧಿ. ಅವರು ಲೋಕಸಭೆಗೆ  ಪ್ರವೇಶಿಸಲು ಅನುವು ಮಾಡಿಕೊಡಲು ಆ ಕ್ಷೇತ್ರದಿಂದ ಗೆದ್ದಿದ್ದ ಡಿ ಬಿ ಚಂದ್ರೇಗೌಡರು ತಮ್ಮ ಸ್ಥಾನ ತ್ಯಜಿಸಿದರು. ಪ್ರಧಾನಿ ಗದ್ದುಗೆಯಿಂದ ಇಳಿದಿದ್ದ ಇಂದಿರಾ ಗಾಂಧಿ ಅವರನ್ನು ಗೆಲ್ಲಿಸುವ ಹೊಣೆಗಾರಿಕೆ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಹೆಗಲಿಗೆ ಬಿತ್ತು. ಅಂದು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದ ಜನತಾ ಸರ್ಕಾರ ಕೇಂದ್ರದಲ್ಲಿ ವಿರಾಜಮಾನವಾಗಿತ್ತು. ಆ ಪಕ್ಷದ (ಜನತಾ) ಹುರಿಯಾಳಾಗಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು, ತಮ್ಮ ಹಿಂದಿನ ನಾಯಕಿ ಇಂದಿರಾ ಗಾಂಧಿ ಅವರ ಎದುರು ಸ್ಪರ್ಧಿಸಿದ್ದರು. ಕೇಂದ್ರದ ಜನತಾ ಸರಕಾರ, ರಾಜ್ಯದ ಕಾಂಗ್ರೆಸ್ (ಐ) ಸರಕಾರ ಮುಖಾಮುಖಿಯಾಗಿ ಶಕ್ತಿ ಪ್ರದರ್ಶನ ಮಾಡುವ ಸನ್ನಿವೇಶ ಏರ್ಪಟ್ಟಿತ್ತು.

ಕಾಫಿನಾಡಿನ ಹೃದಯಭಾಗದ ಚಿಕ್ಕಮಗಳೂರು ಪಟ್ಟಣ ಚುನಾವಣೆಯ ಬಿರುಸಿನಲ್ಲಿ ತನ್ನ ಶಾಂತತೆಯನ್ನು ಕಳೆದುಕೊಂಡು ಜನಭರಿತವಾಗಿ ಚುನಾವಣೆಯ ಕಂಪನದಲ್ಲಿ ಸಿಲುಕಿಕೊಂಡಿತ್ತು. ಈ ಇಬ್ಬರು ಪ್ರಮುಖ ಅಭ್ಯರ್ಥಿಗಳಲ್ಲದೆ, ಇನ್ನೂ ಸುಮಾರು 35 ಉಮೇದುವಾರರು - ಅವರಲ್ಲಿ ಹೆಚ್ಚಿನವರು ಮೋಜಿಗಾಗಿಯಾದರೂ ಚುನಾವಣಾ ಕಣಕ್ಕೆ ಧುಮುಕಿದ್ದರು. ಜಾರ್ಜ್ ಫರ್ನಾಂಡಿಸ್ ಮತ್ತಿತರೆ ಕೇಂದ್ರ ಮಂತ್ರಿಗಳು ಮತ್ತು ದೇಶದ ಎಲ್ಲ ಭಾಗದ ಜನತಾ ಪಕ್ಷದ ಪ್ರಮುಖ ನಾಯಕರು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಉದ್ದಗಲಕ್ಕೂ ಹರಡಿಕೊಂಡು ಪ್ರಚಾರ ನಿರತರಾಗಿದ್ದರು. ಅವರಿಗೆ ಸರಿಸಾಟಿಯಂತೆ ದೇವರಾಜ್ ಅರಸು ಅವರ ಮಂತ್ರಿಮಂಡಲದ ಸದಸ್ಯರು, ಕಾಂಗ್ರೆಸ್ (ಐ) ನಾಯಕರು ಚಿಕ್ಕಮಗಳೂರಿನಲ್ಲಿ ಮೊಕ್ಕಾಂ ಹೂಡಿ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದರು.

Image
ದೇವರಾಜ ಅರಸು

ಯಾವ ಹೋಟೆಲ್‌ನಲ್ಲಿಯೂ ಸ್ಥಳಾವಕಾಶವಿರಲಿಲ್ಲ. ಕೊನೆಗೆ ಊಟ ಸಿಗದಂತಹ ಅನುಭವವೂ ಅನೇಕರಿಗೆ ಆಗಿತ್ತು. ನೂರಾರು ಪ್ರಚಾರ ಸಭೆಗಳು ಮತ್ತು ಅಲ್ಲಲ್ಲಿ ಬಿಗುವಿನ ವಾತಾವರಣ, ಅಭ್ಯ್ಯರ್ಥಿಗಳ ಗೆಲುವಿನ ಬಗ್ಗೆ ಜನರು ತಮ್ಮದೇ ವ್ಯಾಖ್ಯಾನ ಮಾಡುತ್ತಿದ್ದರು. ಜಾತಿ ಲೆಕ್ಕಾಚಾರ, ಕಾಫಿ ಎಸ್ಟೇಟುಗಳ ಕಾರ್ಮಿಕರ ಒಲವು ಯಾರ ಕಡೆಗಿದೆ ಎಂಬ ಸುಳಿವು ಹಾಗೂ ವಿವಿಧ ಭಾಗಗಳಲ್ಲಿ ಪಕ್ಷಗಳ ಪ್ರಭಾವಗಳ ವಿಚಾರಗಳು ಪ್ರಮುಖವಾಗಿ ಮುನ್ನೆಲೆಗೆ ಬಂದಿದ್ದವು. ಗೆಲ್ಲಲೇಬೇಕೆಂಬ ಅನಿವಾರ್ಯತೆಗೆ ಸಿಲುಕಿದ್ದ ಇಂದಿರಾ ಗಾಂಧಿ ಅವರು, ಚಿಕ್ಕಮಗಳೂರು ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿ, 20-30 ಜನರಿದ್ದ ಸಭೆಗಳನ್ನೂ ಉದ್ದೇಶಿಸಿ ಮಾತನಾಡಿದ್ದು ಮತ್ತು ಜನರು ಕರೆದ ಕಡೆ, ಸಣ್ಣ ದೇವಸ್ಥಾನವಾದರೂ ಸರಿ ಹೋಗಿದ್ದು ಇನ್ನೂ ಜನಮನದಲ್ಲಿ ಉಳಿದಿದೆ. ಎಷ್ಟೇ ಪ್ರಭಾವದ ವ್ಯಕ್ತಿತ್ವ ಉಳ್ಳವರಾದರೂ ಚುನಾವಣೆ ಮತ್ತು ಮತದಾರರ ಒಲವು ಅವರಿಗೆ ಪರೀಕ್ಷಾ ಕಾಲವಾಗುತ್ತದೆ, ಅವರು ಉದ್ವೇಗಕ್ಕೆ ಒಳಗಾಗುತ್ತಾರೆ ಎಂಬುದು ಅನಾವರಣವಾಗಿತ್ತು.

ಕಾಂಗ್ರೆಸ್ ನಾಯಕರೊಬ್ಬರ ಹಳ್ಳಿಯ ಮನೆಯಲ್ಲಿ ಇಂದಿರಾ ಗಾಂಧಿ ಅವರು ತಂಗಿದ್ದರು. ಅಲ್ಲಿಯೇ ಪತ್ರಕರ್ತರನ್ನು ಭೇಟಿ ಮಾಡಿದ್ದರು. ಕಾಫಿ ಎಸ್ಟೇಟಿನ ಮಾಲೀಕರು, ಅವರ ಪರಿವಾರ, ಅಲ್ಲಿನ ಕಾರ್ಮಿಕರು, ಮಧ್ಯಮ ವರ್ಗದ ಕಾಂಗ್ರೆಸ್ ಅಭಿಮಾನಿಗಳು ಮತ್ತು ಚಿಕ್ಕಮಗಳೂರು ಕ್ಷೇತ್ರದ ಭಾಗವಾದ ಕಾರ್ಕಳದ ಮತದಾರರು ಇಂದಿರಾ ಗಾಂಧಿ ಅವರ ಬೆಂಬಲದ ಸೆಲೆಯಂತೆ ಕಾಣುತ್ತಿತ್ತು. ಅದೇ ರೀತಿ, ಲಿಂಗಾಯತ ಜನಬಾಹುಳ್ಯದ ತಾಲೂಕುಗಳಾದ ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನ ಕೆಲವು ಭಾಗಗಳು ವೀರೇಂದ್ರ ಪಾಟೀಲರ ಗೆಲುವಿನ ಆಧಾರಸ್ತಂಭಗಳು ಎನ್ನುವ ಭಾವನೆ ಅಧಿಕವಾಗಿತ್ತು. ಚುನಾವಣೆ ಸಮೀಕ್ಷೆಗಳಲ್ಲಿ ಪತ್ರಿಕೆಗಳು ಯಾರ ಕಡೆಗಾದರೂ ವಾಲಿದಂತೆ ಕಂಡರೆ ಆಕ್ರೋಶ ವ್ಯಕ್ತವಾಗುತ್ತಿತ್ತು. ಎಲ್ಲರ ಗಮನ ಕೇಂದ್ರೀಕೃತವಾಗಿದ್ದುದು ಇವರಿಬ್ಬರ ಮೇಲೆ ಮಾತ್ರ. ಇದು ಇತರೆ ಅಭ್ಯರ್ಥಿಗಳನ್ನು ಕೆರಳಿಸಿದ್ದೂ ಉಂಟು. ಒಬ್ಬ ಉಮೇದುವಾರ ಪ್ರಚಾರವನ್ನು ಕುದುರೆ ಮೇಲೆ ಕುಳಿತು ಮಾಡುತ್ತಿದ್ದರು. ಅವರು ಗೋಡೇವಾಲರೆಂಬ ಅಭ್ಯರ್ಥಿಯಾಗಿದ್ದರು. ಆಗಾಗ ಪತ್ರಿಕೆಗಳಲ್ಲಿ ಇತರೆ ಅಭ್ಯ್ಯರ್ಥಿಗಳ ಹೆಸರುಗಳು ಪ್ರಸ್ತಾಪವಾದರೂ ಇದು ವಿರಳವಾಗಿತ್ತು.

Image
ಪ್ರಚಾರ ನಿರತ ವೀರೇಂದ್ರ ಪಾಟೀಲ್

ವೀರೇಂದ್ರ ಪಾಟೀಲರ ಪರ ಆ ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರುಗಳ ಅಹರ್ನಿಶಿ ಪ್ರಚಾರ ಅವರ ಗೆಲುವು ನಿಶ್ಚಿತ ಎನ್ನುವ ಭಾವನೆ ಮೂಡಿಸಿತ್ತು. ಒಂದೆರಡು ಪ್ರಮುಖ ಪತ್ರಿಕೆಗಳು ಪಾಟೀಲರ ಬೆಂಬಲಕ್ಕೆ ನಿಂತು, ಇಂದಿರಾ ಗಾಂಧಿ ಅವರ ಸೋಲು ನಿಶ್ಚಿತ ಎನ್ನುವ ರೀತಿ ವರದಿಗಳನ್ನು  ಪ್ರಕಟಿಸಿದ್ದು ದೇವರಾಜ ಅರಸು ಮತ್ತವರ ಕಾಂಗ್ರೆಸ್ (ಐ) ನಾಯಕರ ಕೋಪಕ್ಕೆ ಕಾರಣವಾಯಿತು. ಒಮ್ಮೆ ಬೆಳ್ಳಂಬೆಳಗ್ಗೆ ಅರಸು ಅವರು ಆಕ್ರೋಶಗೊಂಡು ಆ ಪತ್ರಿಕೆಗಳ ಪ್ರತಿಗಳನ್ನು ಸುಡುವಂತೆ ಕೂಗಾಡಿದರು. ನಾವು ಕೆಲವರು ಅಲ್ಲಿಯೇ ಇದ್ದೆವು. ಆ ನಂತರ ನಾನು ಅರಸು ಅವರಿಗೆ, "ಇಂತಹ ನಿಲುವು ಸರಿಯಲ್ಲ, ಒಮ್ಮೆ ಯೋಚಿಸಿ," ಎಂದು ತಿಳಿ ಹೇಳಿದೆವು. ಅರಸು ಅವರು ಕೊನೆಗೆ ಶಾಂತರಾಗಿ ತಮ್ಮ ಹೇಳಿಕೆ ವಾಪಸ್ ಪಡೆದರು.

ಅರಸು ಅವರು ಉಪ ಚುನಾವಣೆಯನ್ನು ತಮ್ಮ ವರ್ಚಸ್ಸಿನ ಪರೀಕ್ಷೆಯೆಂದೇ ತಿಳಿದಿದ್ದರು. ಒಮ್ಮೆ ಮಧ್ಯರಾತ್ರಿ ನಾನು ಕಾರ್ಕಳದಿಂದ ಹಿಂತಿರುಗುತ್ತಿದ್ದಾಗ, ಕಿರಿದಾದ ರಸ್ತೆಯಲ್ಲಿ ನಮ್ಮ ಕಾರು, ಅರಸು ಅವರಿದ್ದ ಕಾರು ಮುಖಾಮುಖಿಯಾದವು. ನಾನು ತಕ್ಷಣ ಕಾರಿನಿಂದ ಕೆಳಗಿಳಿದು ಅರಸು ಬಳಿಗೆ ತೆರಳಿ, "ಸಾರಿ... ಏನ್ ಸರ್ ಇಷ್ಟೊತ್ತಿನಲ್ಲಿ!" ಎಂದೆ. "ನಾನು ಗೆಲ್ಲಿಸುತ್ತೇನೆ ಎಂದು ಮಾತು ಕೊಟ್ಟು ಇಂದಿರಾ ಗಾಂಧಿ ಅವರನ್ನು ಕರೆದುಕೊಂಡು ಬಂದೆ. ಅದನ್ನು ಉಳಿಸಿಕೊಳ್ಳಲು ನಿದ್ರಾಹಾರ ಬಿಟ್ಟು ಕೆಲಸ ಮಾಡಬೇಕಾಗಿದೆ," ಎಂದರು. ಅವರ ಈ ಶ್ರಮಕ್ಕೆ ಇಂದಿರಾ ಗಾಂಧಿ ಅವರಿಂದ ಕೆಲ ತಿಂಗಳುಗಳ ನಂತರ ದೊರೆತ ಕೊಡುಗೆ ಅಧಿಕಾರದಿಂದ ನಿರ್ಗಮನ.

ಈ ಪುಸ್ತಕ ಓದಿದ್ದೀರಾ?: ಹೊಸ ಓದು | ರವಿಕುಮಾರ್ ನೀಹ ಅವರ 'ಅರಸು ಕುರನ್ಗರಾಯ' ಪುಸ್ತಕದ ಆಯ್ದ ಭಾಗ

ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರ ಚುನಾವಣಾ ವೆಚ್ಚವನ್ನು ಇತರರ ಸಹಾಯದಿಂದ ಭರಿಸಿದರು ಎನ್ನುವ ಮಾತು ರಾಜಕೀಯ ವಲಯದಲ್ಲಿ ವ್ಯಾಪಕವಾಗಿತ್ತು. ವೀರೇಂದ್ರ ಪಾಟೀಲರ ಪರವಾಗಿ ಕೇಂದ್ರ ಸರ್ಕಾರವೇ ಚಿಕ್ಕಮಗಳೂರಿನಲ್ಲಿ ತಳವೂರಿತ್ತು ಅನ್ನುವಂತೆ ಕೇಂದ್ರದ ಮಂತ್ರಿಗಳು, ನಾಯಕರು ಹಗಲಿರುಳು ದುಡಿದರು. ಅದರಲ್ಲೂ, ಜಾರ್ಜ್  ಫರ್ನಾಂಡಿಸ್ ಅವರು ಮುಂಚೂಣಿಯಲ್ಲಿ ಅಬ್ಬರದ ಪ್ರಚಾರ ಮಾಡಿದರೂ, ಕೊನೆಗೆ ವಿಜಯಮಾಲೆ ಇಂದಿರಾ ಗಾಂಧಿ ಅವರ ಕೊರಳಿಗೇರಿತು. ಇದು ಒಂದು ರೀತಿ, ಅರಸು ಅವರ ವೈಯಕ್ತಿಕ ವರ್ಚಸ್ಸಿನ ವಿಜಯ ಎಂದರೂ ತಪ್ಪಾಗಲಾರದು. ಹಾಗೆಯೇ, ಅರಸು ಅವರ ಸಹೋದ್ಯೋಗಿಗಳು ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಯಾವ ಭಾಗಗಳನ್ನು ವೀರೇಂದ್ರ ಪಾಟೀಲರ ಬೆಂಬಲಿಗರು ಮತಗಳ ಪೆಟ್ಟಿಗೆಯೆಂದು ನಂಬಿದ್ದರೋ, ಅಲ್ಲಿನ ಮತದಾರರು ಕೊನೆ ಗಳಿಗೆಯಲ್ಲಿ ತಮ್ಮ ಬೆಂಬಲವನ್ನು ಇಂದಿರಾ ಗಾಂಧಿ ಅವರ ಪರ ತೋರಿದರು. 'ಅಧಿಕ ಸಂಖ್ಯೆಯಲ್ಲಿ ಲಿಂಗಾಯತರು ಇದ್ದರೂ, ಈ ಮೂರು, ನಾಲ್ಕು ತಾಲೂಕುಗಳು ಕೊನೆ ಕ್ಷಣದಲ್ಲಿ  ಕಾಂಗ್ರೆಸ್ (ಐ) ಕಡೆ ವಾಲುವ ಸಂದೇಹವಿದೆ' ಎಂದು ನನ್ನ ವರದಿಗಳಲ್ಲಿ ಬರೆದಿದ್ದೆ. ಜನತಾದಳದ ಹಿರಿಯ ನಾಯಕರೊಬ್ಬರು ನನ್ನ ಸಂದೇಹ ಸರಿಯಲ್ಲ ಎಂದು ಟೀಕಿಸಿದ್ದರು. ಮತದಾನದ ಹಿಂದಿನ ದಿನ ನಾನು ಆಕಸ್ಮಿಕವಾಗಿ ಭೇಟಿಯಾದಾಗ ಅವರು, "ನಿಮ್ಮ ಊಹೆ ನಿಜ," ಎಂದು ಹೇಳಿದರು.

ಚಿಕ್ಕಮಗಳೂರು ಚುನಾವಣೆಗೆ ದೇಶ-ವಿದೇಶಗಳ ಪತ್ರಕರ್ತರ ದೊಡ್ಡ ದಂಡೇ ಬಂದಿತ್ತು. ಕೆಲ ಪತ್ರಿಕೆಗಳು ತಮ್ಮ ತಾತ್ಕಾಲಿಕ ಕಚೇರಿಗಳನ್ನು ತೆರೆದು ಟೆಲಿಪ್ರಿಂಟರ್‌ಗಳನ್ನು ಹಾಕಿಕೊಂಡಿದ್ದವು. ನನ್ನ ಪತ್ರಿಕೆಯಿಂದ ನಾನೊಬ್ಬನೇ ಬಂದಿದ್ದೆ. ನನ್ನ ಜೊತೆಗೆ ಅಲ್ಲಿಯ ವರದಿಗಾರರು ಸಹಾಯಕರಾಗಿದ್ದರು. ಅಲ್ಲಿನ ಹೋಟೆಲ್‌ನಲ್ಲಿ ಉಳಿದುಕೊಂಡು ಒಂದು ಟೆಲಿಫೋನನ್ನು ಆ ರೂಮಿಗೆ ಹಾಕಿಸಿಕೊಂಡೆ. ಅಲ್ಲಿನ ಟೆಲಿಫೋನ್ ವಿನಿಮಯ ಕೇಂದ್ರವನ್ನು ಸಂಪರ್ಕಿಸಿ, "ನನ್ನ ಕೆಲಸ ಮುಖ್ಯವಾದದ್ದು. ನಾನೊಬ್ಬನೇ ಬಂದಿದ್ದೇನೆ. ನಿಮ್ಮ ಸಹಕಾರ ಅತ್ಯಗತ್ಯ," ಎಂದು ನಿವೇದಿಸಿದೆ. ಅಲ್ಲಿನ ಸಿಬ್ಬಂದಿ, "ನೀವು ಕೇಳಿದ ತಕ್ಷಣ ನಿಮ್ಮ ಕಚೇರಿಗೆ ಸಂಪರ್ಕ ಏರ್ಪಡಿಸುತ್ತೇವೆ," ಎಂಬ ಆಶ್ವಾಸನೆ ಕೊಟ್ಟರು. ಅದರಂತೆ, ಫಲಿತಾಂಶ ಬಂದು ಚುನಾವಣೆ ಮುಗಿಯುವವರೆಗೆ ಅವರ ಆಶ್ವಾಸನೆಯಿಂದ ಹಿಂದೆ ಸರಿಯಲಿಲ್ಲ. ಇದು ನನಗೆ ನೈತಿಕ ಬಲ ನೀಡಿತ್ತು. ಹಾಗೆಯೇ, ಅಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪಾಂಡೆ ಅವರು, ಪೊಲೀಸ್ ವಿಶೇಷಾಧಿಕಾರಿ ರಾಮಲಿಂಗಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಸಾಂಗ್ಲಿಯಾನ ಅವರು, ನಮ್ಮ ವಿಶೇಷ ಪ್ರತಿನಿಧಿಗಳಂತೆ ಅಲ್ಲಿಯ ಬೆಳವಣಿಗೆ ಮತ್ತು ಘಟನೆಗಳ ನೈಜ ವರದಿಯನ್ನು ಕೊಡುತ್ತಿದ್ದರು. ಉದಾಹರಣೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ಉಂಟಾದ ಗಲಭೆ ಮತ್ತು ಅಲ್ಲಿ ನಡೆದ ಗೋಲಿಬಾರ್ ಕುರಿತ ವಿವರಗಳನ್ನು ನಾನು ಅವರಿಂದ ಚಿಕ್ಕಮಗಳೂರಿನಲ್ಲಿದ್ದು ಸಂಗ್ರಹಿಸಿದೆ. ಇದು ಪ್ರತ್ಯಕ್ಷ ವೀಕ್ಷಿಸಿ ವರದಿ ಮಾಡಿದಂತೆ ಇತ್ತು. ಅನೇಕ ಸಂದರ್ಭಗಳಲ್ಲಿ, "ನಮ್ಮ ವಿಶೇಷ ವರದಿಗಾರರು ನನಗೆ ಇಂದು ಏನೂ ಕೊಟ್ಟಿಲ್ಲ," ಎಂದು ತಮಾಷೆ ಮಾಡುತ್ತಿದ್ದೆ. ಇದು ಹೇಗೆ ಉನ್ನತ ಅಧಿಕಾರಿಗಳು ಪತ್ರಕರ್ತರಿಗೆ ಸಹಕರಿಸಬಹುದು ಮತ್ತು ತೊಂದರೆಗೆ ಸಿಲುಕದಂತೆ ನೈಜ ಚಿತ್ರಣವನ್ನು ಅವರಿಗೆ ಕೊಡಬಹುದು ಎನ್ನುವುದಕ್ಕೆ ನಿದರ್ಶನ. ಅವರ ಸಹಕಾರ ಇಂದಿಗೂ ನೆನಪಿನಲ್ಲಿ ಉಳಿದಿದೆ. ಚಿಕ್ಕಮಗಳೂರಿನಿಂದ ಹಿಂದಿರುಗುವಾಗ ಅವರಿಗೆ ನನ್ನ ವಂದನೆಗಳನ್ನು ಹೇಳುವುದನ್ನು ಮರೆಯಲಿಲ್ಲ.

Image

ನಾನು ಆ ಚುನಾವಣೆಯ ಗುಂಗಿನಲ್ಲಿ ಬೆಂಗಳೂರಿಗೆ ಹಿಂತಿರುಗಿ ಬಂದ ಸ್ವಲ್ಪ ಸಮಯದ ನಂತರ, ಹೈದರಾಬಾದಿನ ಒಂದು ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ನನ್ನನ್ನು ಸಂಪರ್ಕಿಸಿ, ನಾನು ಚುನಾವಣಾ ಸಮೀಕ್ಷೆ ಮಾಡಿದ ರೀತಿ ಮತ್ತು ಇಂದಿರಾ ಗಾಂಧಿ ಅವರ ಕಡೆಗೆ ವಾಲಬಹುದೇನೋ ಎನ್ನುವಂತೆ ಬರೆಯಲು ಕಾರಣವೇನು ಎಂದು ಪ್ರಶ್ನಿಸಿದರು. ಅದಕ್ಕೆ ನನ್ನ ಉತ್ತರ ಸರಳವಾಗಿತ್ತು: ಕಾಫಿ ತೋಟಗಳಲ್ಲಿನ ಕಾರ್ಮಿಕರ ಕಾಂಗ್ರೆಸ್ ಪರವಾದ ನಿಲುವು ಮತ್ತು ಅವರ ಜೊತೆ ಬೆರೆತಾಗ ನನಗೆ ಅರಿವಾಗಿದ್ದು, ಕಾಫಿ ತೋಟಗಳ ಮಾಲೀಕರು, ಮಧ್ಯಮ ವರ್ಗದ ಮತದಾರರು ಹೆಚ್ಚಾಗಿ ಪ್ರಭಾವೀ ಒಕ್ಕಲಿಗ ಜನಾಂಗಕ್ಕೆ ಸೇರಿದವರು. ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರುವುದು ಮತ್ತು ಕೊನೇ ಗಳಿಗೆಯಲ್ಲಿ ವೀರೇಂದ್ರ ಪಾಟೀರ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಮೂರ್ನಾಲ್ಕು ತಾಲೂಕುಗಳು ಇಂದಿರಾ ಗಾಂಧಿ ಅವರ ಕಡೆ ವಾಲುವ ಸಂದೇಹವೇ ನನ್ನ ಸಮೀಕ್ಷೆಯ ತಿರುಳು. ಇಂದಿರಾ ಗಾಂಧಿ ಅವರ ಗೆಲುವಿಗೆ ಇವೇ ಅಂಶಗಳು ಪ್ರಮುಖ ಕಾರಣವಾಗಬಹುದು ಎಂದು ನಂಬಿದ್ದೆ. ನಾನು ಚಿಕ್ಕಮಗಳೂರು ಲೋಕಸಭೆ  ಕ್ಷೇತ್ರದಲ್ಲಿದ್ದ ವಿಧಾನಸಭಾ ಕ್ಷೇತ್ರಗಳೆಲ್ಲವನ್ನೂ ಒಂದೊಂದೇ ಭಾಗವಾಗಿ ವಿಶ್ಲೇಷಿಸಿದ್ದೆ.

ಇಂದಿರಾ ಗಾಂಧಿ ಅವರಿಗೆ ಮುನ್ನಡೆಯಾಗುವಂಥ ಸೂಚನೆಗಳು ಕೆಲವು ಭಾಗಗಳಲ್ಲಿ ಕಂಡುಬರುತ್ತಿದೆ ಎಂದು ವರದಿ ಮಾಡಿದಾಗ, ನಮ್ಮ  ಪತ್ರಿಕೆಯಲ್ಲಿ ಕೂಡ ಕೆಲವರು ಲಘುವಾಗಿ ಮಾತನಾಡಿದ್ದರು ಎಂದು ಆಮೇಲೆ ನನಗೆ ತಿಳಿಯಿತು.

Image
ಎಸ್ ಎಂ ಕೃಷ್ಣ, ಕೆ ವಿ ಶಂಕರೇಗೌಡ

ಚುನಾವಣೆಗಳಲ್ಲಿ ಕೆಲವೊಮ್ಮೆ ಅನುಕಂಪದ ಅಲೆ ಪ್ರಬಲವಾದಾಗ ವ್ಯಕ್ತಿಯ ಸ್ಥಾನ, ಪ್ರಭಾವ, ಅವರ ಬೆಂಬಲಕ್ಕೆ ನಿಂತವರೆಲ್ಲರೂ ಗೌಣವಾಗಿ, ಅವರ ಪ್ರತಿಸ್ಪರ್ಧಿ ಗೆಲುವಿನ ನಗೆ ಬೀರುವ ಉದಾಹರಣೆಗಳು ನಮಗೆ ಸಾಕಷ್ಟು ದೊರೆಯುತ್ತವೆ. ಮಂಡ್ಯದಲ್ಲಿ ನಡೆದ ಲೋಕಸಭೆ ಚುನಾವಣೆ ನನ್ನ ಮನದಿಂದ ಇನ್ನೂ ಅಳಿದಿಲ್ಲ. ಆಗ ಕೇಂದ್ರದಲ್ಲಿ ಮಂತ್ರಿಯಾಗಿದ್ದ ಮತ್ತು ಜಿಲ್ಲೆಯಲ್ಲಿ ಒಬ್ಬ ಅತ್ಯಂತ ಗೌರವಾನ್ವಿತ ರಾಜಕಾರಣಿಯಾಗಿ ಜನಾನುರಾಗಿಯಾಗಿದ್ದ ಎಸ್ ಎಂ ಕೃಷ್ಣ ಅವರು ಒಂದು ಕಡೆ ಇದ್ದರು. ಅವರಷ್ಟೇ ಜನಾನುರಾಗಿ ಮತ್ತು ಮಂಡ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಕರ್ತರಲ್ಲಿ ಒಬ್ಬರಾದ, ವೃದ್ಧಾಪ್ಯದತ್ತ ಸಾಗಿದ್ದ ಕೆ ವಿ ಶಂಕರೇಗೌಡರು ಕೃಷ್ಣ ಅವರನ್ನು ಸೋಲಿಸುವ ಶಕ್ತಿ ಪ್ರದರ್ಶಿಸಲಾರರು ಎನ್ನುವಂತೆ ಅವರ ಅಸಂಖ್ಯಾತ ಬೆಂಬಲಿಗರು ಬಿಂಬಿಸಿದರು. ಹಣಬಲದಲ್ಲಿ ಮುಂದಿದ್ದರೂ ವಿಜಯಮಾಲೆ ಅನುಕಂಪದ ಅಲೆಯಲ್ಲಿ ತೇಲಿ ಶಂಕರೇಗೌಡರ ಕೊರಳು ಸೇರಿತು. ನಾನು ಆ ಚುನಾವಣೆ ಸಮೀಕ್ಷೆ ವರದಿ ಮಾಡಲು ಹೋದಾಗ ಕಂಡದ್ದು ಈ ಪ್ರಬಲ ಅನುಕಂಪ ಮತ್ತು ನನ್ನ ಅರಿವಿಗೆ ಬಂದದ್ದು ಮತದಾರನ ನಾಡಿಮಿಡಿತವಷ್ಟೇ. ಅದು ಶಂಕರೇಗೌಡರ ಕೊನೆಯ ಚುನಾವಣೆಯಾಗಿತ್ತು. ಅವರನ್ನು ಗೆಲ್ಲಿಸಿದರೆ ಇಳಿವಯಸ್ಸಿನಲ್ಲಿ ನಾವು ತೋರುವ ಗೌರವ ಎನ್ನುವ ಮನೋಭಾವ ವ್ಯಾಪಕವಾಗಿ ವ್ಯಕ್ತವಾಗಿತ್ತು. ಅದೆಲ್ಲವನ್ನೂ ನನ್ನ ವರದಿಯಲ್ಲಿ ಉಲ್ಲೇಖಿಸಿ, ಯಾವ-ಯಾವ ತಾಲೂಕುಗಳಲ್ಲಿ ಈ ಅನುಕಂಪದ ಅಲೆ ಪ್ರಬಲವಾಗಿದೆ, ಶಂಕರೇಗೌಡರಿಗೆ ಎಲ್ಲೆಲ್ಲಿ ಇದು ಸಹಾಯಕವಾಗಬಹುದು ಎಂದು ಬರೆದಿದ್ದೆ. ಎಸ್ ಎಂ ಕೃಷ್ಣ ಅವರ ಅಂದಿನ ಪತ್ರಿಕಾ ಕಾರ್ಯದರ್ಶಿ ನನ್ನನ್ನು ಸಂಪರ್ಕಿಸಿ, "ನಿಮ್ಮ ಅಭಿಪ್ರಾಯ ಸರಿಯಲ್ಲವೇನೋ..." ಅಂದಿದ್ದರು. ನಾನು "ನನ್ನ ವರದಿಯಲ್ಲಿ ಕಾಣಿಸಿರುವ ಭಾಗಗಳನ್ನು ನೋಡಿ ಬನ್ನಿ. ಒಟ್ಟಿನಲ್ಲಿ  ಫಲಿತಾಂಶ ಬರಲಿ," ಎಂದೆ. ಅಂತಿಮವಾಗಿ ಶಂಕರೇಗೌಡ ವಿಜಯಿಯಾಗಿದ್ದರು.

ಈ ಪುಸ್ತಕ ಓದಿದ್ದೀರಾ?: ಹೊಸ ಓದು | ಅಂಬೇಡ್ಕರ್ ಚಳವಳಿಯಲ್ಲಿದ್ದ ಮಹಿಳೆಯರ ಕುರಿತ 'ನಾವೂ ಇತಿಹಾಸ ಕಟ್ಟಿದೆವು' ಪುಸ್ತಕದ ಆಯ್ದ ಭಾಗ

ಇನ್ನು ಕೆಲ ಚುನಾವಣೆಗಳಲ್ಲಿ ಮತದಾರನ ಮುನಿಸು ಫಲಿತಾಂಶಕ್ಕೆ ತಿರುವು ನೀಡುತ್ತದೆ. ನಾನು ಕಂಡ ಕೆಲ ಚುನಾವಣೆಗಳಲ್ಲಿ ಹಾಲಿ ಶಾಸಕರು ತಮ್ಮ ಗೆಲುವು ನಿಸ್ಸಂಶಯ ಎಂದು ಬೀಗುತ್ತಿದ್ದ  ಸಂದರ್ಭಗಳಿದ್ದವು. ಆದರೆ, ಅವರ ಧೋರಣೆಗೆ ಬೇಸತ್ತಿದ್ದ ಕ್ಷೇತ್ರದ ಮತದಾರರು ಅವರನ್ನು  ಕೆಳಗಿಳಿಸುವ ಸಂಕಲ್ಪ ಮಾಡಿದರೆ, ಹಣಬಲವಾಗಲೀ ಅಥವಾ ಅವರ ವರ್ಚಸ್ಸಾಗಲೀ, ಕೆಲ ಸಮಯ ಅವರ ತೋಳ್ಬಲವಾಗಲೀ ಕೆಲಸ ಮಾಡುವುದಿಲ್ಲ. ಇನ್ನು, ಕೆಲ ಕ್ಷೇತ್ರಗಳಲ್ಲಿ ಶಾಸಕರು, ಸಂಸದರು ಜನಪರ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರೂ ಮತದಾರರ ಒಲವಿಲ್ಲದಿದ್ದರೆ  ಸೋಲುತ್ತಿದ್ದರು. ಇನ್ನು ಕೆಲವರು 25 ವರ್ಷಗಳ ಕಾಲ ಶಾಸಕರಾಗಿ ಪದೇಪದೆ ಆರಿಸಿ ಬಂದ ಮತ್ತು ಬರುತ್ತಿರುವ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಒಟ್ಟಿನಲ್ಲಿ ಚುನಾವಣೆ ಸಮೀಕ್ಷೆ ಪತ್ರಕರ್ತನಿಗೆ ಮರೆಯಲಾಗದ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ. ಆದರೆ, ತನ್ನ ವೃತ್ತಿನಿಷ್ಠೆಗೆ, ಪ್ರಾಮಾಣಿಕತೆಗೆ ಚುನಾವಣೆ ಸಮೀಕ್ಷೆಗಳು ಒರೆಗಲ್ಲು ಆಗುತ್ತವೆ ಎನ್ನುವುದನ್ನು ಪತ್ರಕರ್ತರು, ಪತ್ರಿಕೆಗಳು ಮರೆಯುವಂತಿಲ್ಲ.

ಪುಸ್ತಕ: ನಾನು ಹಿಂದೂ ರಾಮಯ್ಯ (ಅರವತ್ತು ವರ್ಷಗಳ ಅನುಭವ ಕಥನ) | ಲೇಖಕರು: ಪಿ ರಾಮಯ್ಯ | ಪ್ರಕಟಣೆ: ಅಭಿಮಾನಿ ಪಬ್ಲಿಕೇಷನ್ಸ್ ಲಿಮಿಟೆಡ್, ಬೆಂಗಳೂರು | ಪುಟಗಳು: 312 | ಬೆಲೆ: ₹350

ನಿಮಗೆ ಏನು ಅನ್ನಿಸ್ತು?
2 ವೋಟ್